ವಿನೂತನ ಕಾರ್ಯಕ್ರಮಗಳಿಂದ ಕನ್ನಡಿಗರ ಮನಗೆದ್ದಿರುವ ಸ್ಟಾರ್ ಸುವರ್ಣ ವಾಹಿನಿ ಎರಡು ಹೊಸ ಧಾರವಾಹಿಗಳ ಮೂಲಕ ಮನರಂಜನೆಯ ರಸದೌತಣವನ್ನು ಉಣಬಡಿಸಲು ಸಿದ್ಧವಾಗಿದೆ.
ಇಂದಿನಿಂದ ಪ್ರತಿದಿನ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಸ್ಟಾರ್ ಸುವರ್ಣದ ಮೂಲಕ ‘ಜಾನಕಿ ರಾಘವ’ ನಿಮ್ಮ ಮನೆಗೆ ಬರಲಿದ್ದಾರೆ. ಕೇವಲ ಒಂದು ವಾರದ ಅಂತರದಲ್ಲಿ, ಅಂದರೆ ಡಿಸೆಂಬರ್ 11ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸಂಜೆ 6.30ಕ್ಕೆ ‘ಪುಟ್ಮಲ್ಲಿ’ ಕೂಡ ನಿಮ್ಮ ಮನೆಗೆ ಬರುತ್ತಿದ್ದಾಳೆ.
ಎರಡು ಕುಟುಂಬಗಳ ಕಲಹಕ್ಕೆ ಬೇರೆಯಾದ ಸೀತಾ ರಾಮರ ಮೂರ್ತಿಯನ್ನು ಒಂದು ಮಾಡಲು ಹೊರಟ ಜಾನಕಿ ಮತ್ತು ರಾಘವ ಕಥೆಯೇ ‘ಜಾನಕಿ ರಾಘವ’ ಧಾರವಾಹಿ.
ಪ್ರೀತಿ ಇಲ್ಲದ ಮೇಲೆ, ಜೋಗುಳ, ನಿನ್ನೊಲುಮೆಯಿಂದಲೇ, ಚಿಟ್ಟೆ ಹೆಜ್ಜೆ, ನಿಹಾರಿಕಾ ನಿರ್ದೇಶಕ ವಿನು ಬಳಂಜ ಜಾನಕಿ ರಾಘವ ನಿರ್ದೇಶನ ಮಾಡುತ್ತಿದ್ದಾರೆ. ನಿಖಿಲ್ ಹೋಮ್ ಸ್ಕ್ರೀನ್ ಮೂಲಕ ಲಿಂಗೇಗೌಡ ಮತ್ತು ಸುಭಾಷ್ ಗೌಡ ಈ ಧಾರವಾಹಿಯ ನಿರ್ಮಾಣ ಮಾಡುತ್ತಿದ್ದಾರೆ.
ಗುರುಕಿರಣ್ ಸಂಗೀತ ನೀಡಿದ್ದಾರೆ. ಅನುರಾಧ ಭಟ್ ಶೀರ್ಷಿಕೆ ಗೀತೆಯನ್ನು ಹಾಡಿದ್ದಾರೆ. ನವ ನಟ ಪವನ್ ಹಾಗೂ ನವ ನಟಿ ಜೀವಿತಾ ರಾಘವ ಮತ್ತು ಜಾನಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪದ್ಮಜಾ ರಾವ್, ಸುಂದರಶ್ರೀ, ರವಿಭಟ್, ಗುರು ಹೆಗ್ಗಡೆ, ಶರ್ಮಿತಾ ಗೌಡ ಮೊದಲಾದ ಕಲಾವಿದರ ದಂಡೇ ಇದೆ. ಸುಷ್ಮಾ ಮೂಡುಬಿದಿರೆಯವರ ಚಿತ್ರಕಥೆ ಇದ್ದು, ನವೀನ್ ಸಾಗರ್ ಸಂಭಾಷಣೆ ನೀಡಿದ್ದಾರೆ. ರವಿಕುಮಾರ್ ಗುಬ್ಬಿ ಛಾಯಾಗ್ರಹಣವಿದೆ.
ಇನ್ನು ಪುಟ್ಮಲ್ಲಿ ಧಾರವಾಹಿ ಮನೆ ಕೆಲಸದ ಅನಾಥ ಆಳೊಬ್ಬಳು ಆಕಸ್ಮಿಕವಾಗಿ ಮನೆಯ ಮುದ್ದಿನ ಮಗನನ್ನೇ ಮದುವೆಯಾಗುವ ಸಂದರ್ಭ ಬಂದೊದಿಗಿದಾಗ ಅವಳ ಬಾಳಲ್ಲಿ ಉಂಟಾಗುವ ಏರಿಳಿತಗಳ ಸುತ್ತ ಸಾಗುವ ಕಥೆಯಂತೆ.
ಸಂಜೀವ್ ತಗಡೂರು ನಿರ್ದೇಶನದ ಈ ಧಾರವಾಹಿಯನ್ನು ಶ್ರೀಧರ್ ಹೆಗ್ಗಡೆ ನಿರ್ಮಿಸುತ್ತಿದ್ದಾರೆ. ರಾಧರಮಣ ಖ್ಯಾತಿಯ ನಟಿ ರಕ್ಷ ನಾಯಕಿ, ಜಸ್ಟ್ ಮಾತ್ ಮಾತಲ್ಲಿ ಯಶ್ ಪಾತ್ರದಾರಿಯಾಗಿದ್ದ ಶರತ್ ಪುಟ್ಮಲ್ಲಿ ನಾಯಕ. ಇಲ್ಲಿ ಅವರು ಅಭಯ್ ಪಾತ್ರದಲ್ಲಿ ನಟಿಸಲಿದ್ದಾರೆ. ಹರೀಶ್ ಸಂಭಾಷಣೆ ನೀಡಿದ್ದಾರೆ. ನಾಗೇಂದ್ರ ಛಾಯಾಗ್ರಹಣದ ಹೊಣೆ ಹೊಣೆ ಹೊತ್ತಿದ್ದಾರೆ.