ಸುದ್ದಿ ಹಿಂದಿನ ಶಕ್ತಿ ಶೋಭಾ…

Date:

ಇವರು ತೆರೆಮರೆಯ ನಾಯಕಿ. ಮುದ್ರಣ ಮತ್ತು ದೃಶ್ಯಮಾಧ್ಯಮ ಎರಡರಲ್ಲೂ ಸಾಕಷ್ಟು ಅನುಭವವಿರುವ ಪತ್ರಕರ್ತೆ. ಹೆಸರು, ಶೋಭಾ ಎಂ.ಸಿ.

ಸುವರ್ಣ ನ್ಯೂಸ್ ನಲ್ಲಿ ಇನ್‍ಪುಟ್ ಹೆಡ್ ಆಗಿ ಸೇವೆ ಸಲ್ಲಿಸುತ್ತಿರುವ ಅನುಭವಿ ಪತ್ರಕರ್ತೆ. ಕೆಲಸದ ಮೇಲಿನ ಆಸಕ್ತಿ, ನಿಷ್ಠೆ, ಪ್ರಾಮಾಣಿಕತೆ, ಉತ್ಸಾಹ ಯುವ ಪತ್ರಕರ್ತರಿಗೆ ಸ್ಪೂರ್ತಿ. ತಾವು ಕೆಲಸ ಮಾಡಿ ಜೊತೆಗಾರರಿಂದ ಒಳ್ಳೆಯ ಕೆಲಸ ತೆಗೆಸುವುದರಲ್ಲಿ ಶೋಭಾ ಅವರು ನಂಬರ್ 1. ವರದಿ ಚೆನ್ನಾಗಿ ಮಾಡ್ದೇ ಇದ್ರೆ, ಸರಿಯಾಗಿ ಲೈವ್ ಕೊಡ್ದೇ ಇದ್ರೆ, ಬೇಕಾಬಿಟ್ಟಿ ಕೆಲಸ ಮಾಡಿದ್ರೆ ಮೇಡಂ ಅವ್ರತ್ರ ಬೈಸಿಕೊಳ್ಳೋದು ತಪ್ಪಲ್ಲ ಅಂತ ಕೈಕೆಳಗೆ ಕೆಲಸ ಮಾಡಿದ ಎಲ್ಲರಿಗೂ ಗೊತ್ತು. ಶೋಭಾ ಅವರು ಬೈಯುವುದು ಆ ಕ್ಷಣಕ್ಕೆ ಹಾಗೂ ಮಾಡಿದ ತಪ್ಪಿಗೆ ಮಾತ್ರ. ಸ್ವಲ್ಪ ಹೊತ್ತಿಗೆ ಅವರೇ ಹೆಗಲ ಮೇಲೆ ಕೈಹಾಕಿ, ಬೆನ್ನುತಟ್ಟಿ ಮಾತಾಡ್ತಾರೆ. ಕೆಲಸದ ವಿಚಾರದಲ್ಲಿ ಮಾತ್ರ ರಾಜಿಯ ಪ್ರಶ್ನೆಯೇ ಇಲ್ಲ.


ಕೆ.ಆರ್ ಪೇಟೆಯ ಅಕ್ಕಿಹೆಬ್ಬಾಳದಲ್ಲಿ ಹುಟ್ಟಿದ ಶೋಭಾ ಅವರು ಬೆಳೆದಿದ್ದು ಕೆ.ಆರ್.ಎಸ್‍ನಲ್ಲಿ. ತಂದೆ ಚನ್ನಬಸವಣ್ಣ ಪೊಲೀಸ್ ಇಲಾಖೆಯಲ್ಲಿದ್ದರು. ತಾಯಿ ಕಮಲಮ್ಮ, ಪತಿ ಕುಮಾರೇಶ್, ಮಕ್ಕಳು ಅಮಿತ್ ರೋಹನ್ ಮತ್ತು ಕರ್ಣ. ಕೆಆರ್‍ಎಸ್‍ನಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಮಂಡ್ಯಜಿಲ್ಲೆಯ ಮಳವಳ್ಳಿಯಲ್ಲಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು, ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಹಾಗೂ ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ ಶೋಭಾ.


ಕನ್ನಡಪ್ರಭ ದಿನಪತ್ರಿಕೆಯಲ್ಲಿ ಬರುತ್ತಿದ್ದ ‘ಕಾಲೇಜು ರಂಗ’ ಇವರ ಬರವಣಿಗೆಗೆ ಸಿಕ್ಕ ಮೊದಲ ಪ್ರಮುಖ ವೇದಿಕೆ. ಕಾಲೇಜುದಿನಗಳಲ್ಲಿ ಕಾಲೇಜುರಂಗಕ್ಕೆ ಬರೆಯುತ್ತಿರುವಾಗ ಪತ್ರಗಳ ಮೂಲಕ ಅನೇಕ ಜನ ಸ್ನೇಹಿತರನ್ನು ಸಂಪಾದಿಸಿಕೊಂಡರು. ಅಂದಿನ ಯುವಪತ್ರಕರ್ತರ ಒಡನಾಟ, ಸ್ನೇಹ ಬೆಳೆಯಿತು. ಬರವಣಿಗೆಯಲ್ಲಿ ಆಸಕ್ತಿಯಿದ್ದ ಇವರಿಗೆ ಪತ್ರಿಕೋದ್ಯಮದಲ್ಲಿ ಎಂಎ ಮಾಡಲು ಸೂಚಿಸಿದ್ದು ನಿರಂಜನ್ ವಾನಳ್ಳಿ ಅವರು.
ಸ್ನಾತಕೋತ್ತರ ಪದವಿಯಲ್ಲಿರುವಾಗ ‘ಉದಯವಾಣಿ’ ದಿನಪತ್ರಿಕೆಯಲ್ಲಿ ಇಂಟರ್ನಿಶಿಪ್ ಮಾಡಿದ್ರು. ಆಗ ಈಶ್ವರ್ ದೈತೋಟ ಅವರು ಉದಯವಾಣಿ ಸಂಪಾದಕರಾಗಿದ್ದರು. ಶೋಭಾ ಅವರ ಕೆಲಸವನ್ನು ಕಂಡ ದೈತೋಟ ಅವರು, ‘ನೀನು ಒಳ್ಳೆಯ ವರದಿಗಾರ್ತಿ ಆಗುತ್ತೀಯ… ಪಿಜಿ ಮುಗಿದ ಮೇಲೆ ಬಾ.. ಇಲ್ಲಿಯೇ ಕೆಲಸ ಮಾಡು’ ಎಂದಿದ್ದರು. ಶೋಭಾ ಅವರು ಪಿಜಿ ಮುಗಿಸಿ ವೃತ್ತಿ ಜೀವನಕ್ಕೆ ಕಾಲಿಡುವ ಮುನ್ನ ದೈತೋಟ ಅವರು ಆಗತಾನೆ ವಿಆರ್‍ಎಲ್ ಸಂಸ್ಥೆ ಹುಟ್ಟುಹಾಕಿದ್ದ ‘ವಿಜಯ ಕರ್ನಾಟಕ’ ದಿನಪತ್ರಿಕೆಯ ಸಂಪಾದಕರಾಗಿದ್ದರು. ಇದನ್ನು ತಿಳಿದ ಶೋಭಾ ಅವರು, ದೈತೋಟ ಅವರಿಗೆ ಪತ್ರವೊಂದನ್ನು ಬರೆಯುತ್ತಾರೆ, ‘ಸರ್ ನನಗೆ ಕೆಲಸ ಕೊಡುತ್ತೀನಿ ಅಂದಿದ್ರಿ. ನನ್ನೆಲ್ಲಾ ಸ್ನೇಹಿತರು ವಿಜಯ ಕರ್ನಾಟಕಕ್ಕೆ ಇಂಟರ್ ವ್ಯೂ ಬಂದು ಹೋಗಿದ್ದು ಗೊತ್ತಾಯ್ತು. ಆದ್ರೆ, ನನಗೆ ಇಂಟರ್ ವ್ಯೂ ಕರೆದಿದ್ದ ಬಗ್ಗೆ ಗೊತ್ತಿರ್ಲಿಲ್ಲ. ನಾನು ಅಟೆಂಡ್ ಮಾಡಿರ್ಲಿಲ್ಲ. ನನಗೆ ಕೆಲಸ ಕೊಡ್ತೀರ’? ಎಂದು ಪತ್ರದಲ್ಲಿ ತಿಳಿಸಿದ್ದರು.

ಪತ್ರವನ್ನು ಓದಿದ ಈಶ್ವರ ದೈತೋಟರವರು ಶೋಭಾ ಅವರಿಗೆ ಬೆಂಗಳೂರು ಕಚೇರಿಗೆ ಬರ ಹೇಳಿದ್ರು. ಅವರ ಆಹ್ವಾನದಂತೆ ಬೆಂಗಳೂರು ವಿಜಯ ಕರ್ನಾಟಕ ಕಚೇರಿಗೆ ಹೋದ ಶೋಭಾ ಅವರಿಗೆ ಸಪ್ರೈಸ್ ಕಾದಿತ್ತು…! ಅವರು ಹೋದೊಡನೆ ದೈತೋಟರು ಕೊಟ್ಟಿದ್ದು ‘ಅಪಾಯಿಂಟ್ಮೆಂಟ್ ಲೆಟರ್’ ಅನ್ನು…! ಅದು 1999 ಜುಲೈ 29.
ವಿಜಯ ಕರ್ನಾಟಕದಲ್ಲಿ ಮೂರು ವರ್ಷ ವರದಿಗಾರರಾಗಿ ಹಾಗೂ ಎರಡು ವರ್ಷ ಉಪಸಂಪಾದಕರಾಗಿ ಒಟ್ಟು 5 ವರ್ಷ ಕೆಲಸ ಮಾಡಿದ ಶೋಭಾ ಅವರ ಪಯಣ 2004ರಲ್ಲಿ ‘ಸೂರ್ಯೋದಯ’ ಪತ್ರಿಕೆಯತ್ತ ಸಾಗಿತು. ಅಲ್ಲಿ 1.5 ವರ್ಷ ಸೇವೆಸಲ್ಲಿಸಿದರು.
ಅದಾದ ಬಳಿಕ ವೃತ್ತಿಯ ಮತ್ತೊಂದು ಇನ್ನಿಂಗ್ಸ್ ಆರಂಭವಾಯ್ತು. ಅದೇ ಉದಯ ಟಿವಿ ಮೂಲಕ ವಿದ್ಯುನ್ಮಾನ ಮಾಧ್ಯಮ ಲೋಕದ ಪ್ರವೇಶ. ಉದಯ ಟಿವಿಯಲ್ಲಿ ಶೋಭಾ ಅವರಿಗೆ ಎಲಕ್ಟ್ರಾನಿಕ್ ಮಾಧ್ಯಮದ ಆಳ-ಅಗಲದ ಬಗ್ಗೆ ತಿಳಿಸಿಕೊಟ್ಟಿದ್ದು ಸಮೀವುಲ್ಲಾ ಅವರಂತೆ.


2006ರಿಂದ 2007ರವರಗೆ ಉದಯದಲ್ಲಿ ಕೆಲಸ ಮಾಡಿ ಬಳಿಕ 2008ರಲ್ಲಿ ಸುವರ್ಣ ಚಾನಲ್ ಸೇರಿದ್ರು. ನಡುವೆ 9 ತಿಂಗಳು ಸಮಯ ಚಾನಲ್‍ಗೆ ಹೋಗಿ ವಾಪಸ್ಸು ಸುವರ್ಣ ನ್ಯೂಸ್ ಗೆ ಸೇರಿದ್ರು. ಅಂದಿನಿಂದ ಇಂದಿನವರೆಗೂ ಸುವರ್ಣದಲ್ಲಿ ಮಾಧ್ಯಮ ಪಯಣ ಮುಂದುವರೆದಿದೆ. ಮೊದಲ 6 ತಿಂಗಳು ಬುಲೆಟಿನ್ ಪ್ರೊಡ್ಯುಸರ್ ಆಗಿದ್ದ ಶೋಭಾ ಅವರನ್ನು ಶಶಿಧರ್ ಭಟ್ ಅವರು ಇನ್‍ಪುಟ್ ಹೆಡ್ ಆಗಿ ಮಾಡಿದ್ರು. ಅಲ್ಲಿಂದ ಸತತ ಸುಮಾರು 9 ವರ್ಷಗಳ ಕಾಲ ಇನ್‍ಪುಟ್ ಹೆಡ್ ಆಗಿದ್ದಾರೆ. ಇಷ್ಟು ಸಮಯ ಇನ್‍ಪುಟ್ ಹೆಡ್ ಆಗಿರುವ ಪತ್ರಕರ್ತೆ ಇವರೊಬ್ಬರೇ ಇರಬೇಕು.


ರಿಪೋರ್ಟರ್‍ಗಳನ್ನು ರೆಡಿಮಾಡೋದು, ಅಸೈನ್ ಮಾಡೋದು, ಸುದ್ದಿ ತರಿಸೋದು ಇವರ ಜವಬ್ದಾರಿ. ಇಡೀ 30 ಜಿಲ್ಲೆಯ ಹೊಣೆ ಇವರದ್ದಾಗಿದೆ. 2012ರಲ್ಲಿ ವಕೀಲರು ಮತ್ತು ಪತ್ರಕರ್ತರ ನಡುವೆ ನಡೆದ ಗಲಾಟೆ ವೇಳೆಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆದಿತ್ತು. ಒಬಿ ವ್ಯಾನ್ ಸುಡುವುದು, ಕ್ಯಾಮೆರಾ ಪುಡಿಮಾಡೋದು ಮೊದಲಾದ ಕೆಲಸಗಳನ್ನು ಕಿಡಿಗೇಡಿಗಳು ಮಾಡ್ತಿದ್ರು. ಫೀಲ್ಡ್ ನಲ್ಲಿ ಪತ್ರಕರ್ತರಿಗೆ ತೊಂದರೆ ಆಗ್ತಿದೆ, ಯಾವ ರಿಪೋರ್ಟರ್, ಕ್ಯಾಮೆರಾಮನ್ ಅನ್ನು ಈಗ ಕಳುಹಿಸಿಕೊಡೋದು..? ಹೇಗೆ ಸುದ್ದಿ ತರಿಸೋದು ಎಂಬುದು ಶೋಭಾ ಅವರಿಗೆ ಚಾಲೆಂಜಿಂಗ್ ವಿಷಯವಾಗಿತ್ತು. 6 ತಿಂಗಳ ಗರ್ಭಿಣಿಯಾಗಿದ್ದ ಇವರು ಮಾನಸಿಕ ಒತ್ತಡ ಅನುಭವಿಸಬಾರದಿತ್ತು. ಇಂಥಾ ಟೈಮಲ್ಲೂ ವೃತ್ತಿಪರತೆ, ನಿಷ್ಠೆ ಮೆರೆದು ಕೆಲಸವೇ ದೇವರು ಅಂತ ಕಾರ್ಯೋನ್ಮುಖರಾದರು. ಇದು ನಿಜಕ್ಕೂ ಗ್ರೇಟ್ ಅಲ್ವೇನ್ರೀ.


ಕನ್ನಡ ಮಾಧ್ಯಮ ಜಗತ್ತು ಕಂಡಿರುವ ಅತಿಹೆಚ್ಚು ಶ್ರೇಷ್ಠ ನಿರೂಪಕರ ಕೈಕೆಳಗೆ ಕೆಲಸ ಮಾಡಿದ ಅನುಭವ ಶೋಭಾ ಅವರದ್ದು. ಈಶ್ವರ ದೈತೋಟ, ಮಹಾದೇವಪ್ಪ, ವಿಶ್ವೇಶ್ವರ ಭಟ್, ಶಶಿಧರ್ ಭಟ್, ಎಚ್.ಆರ್ ರಂಗನಾಥ್, ಅನಂತ ಚಿನಿವಾರ, ರವಿಹೆಗಡೆ ಮೊದಲಾದ ದಿಗ್ಗಜ ಸಂಪಾದಕರೊಂದಿಗೆ ಕೆಲಸ ಮಾಡಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ವಿಶ್ವೇಶ್ವರ ಭಟ್ ಅವರ ಕೈಕೆಳಗೆ ವಿಜಯ ಕರ್ನಾಟಕ ಮತ್ತು ಸುವರ್ಣ ಚಾನಲ್ ಎರಡಲ್ಲೂ, ರವಿ ಹೆಗಡೆ ಅವರ ಸಂಪಾದಕತ್ವದಲ್ಲಿ ಸುವರ್ಣದಲ್ಲಿ ಎರಡು ಬಾರಿ ಕೆಲಸ ಮಾಡೊದ ಅನುಭವ. ಜೊತೆಗೆ ಅತಿ ಕಿರಿಯ ಸಂಪಾದಕ ಅಜಿತ್ ಹನುಮಕ್ಕನವರ್ ಜತೆಯೂ ಕೆಲಸ ಮಾಡಿದ ಹೆಗ್ಗಳಿಕೆ ಶೋಭಾ ಅವರದ್ದು.


‘ಎಲ್ಲಾ ಸಂಪಾದಕರು, ಹಿರಿಯರು ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ದಾರೆ. ಪತ್ರಕರ್ತ ಜಯಪ್ರಕಾಶ್ ಶೆಟ್ಟಿಯವರು ನೀಡಿದ ಪ್ರೋತ್ಸಾಹ ತುಂಬಾ ದೊಡ್ಡದು. ಪ್ರಶಾಂತ್ ನಾತ್, ಮಹೇಶ್ ಅವರು ನೀಡಿದ ಪ್ರೋತ್ಸಾಹ ಕೂಡ ಮರೆಯಾಲಗಲ್ಲ’ ಎನ್ನುತ್ತಾರೆ ಶೋಭಾ.
ಮಾಧ್ಯಮ ಕ್ಷೇತ್ರಕ್ಕೆ ಸದ್ದಿಲ್ಲದೆ, ತೆರೆಮರೆಯಲ್ಲಿ ಸೇವೆಸಲ್ಲಿಸಿದ ಶೋಭಾ ಅವರಿಗೆ ಈ ಬಾರಿ ‘ಮಾಧ್ಯಮ ಅಕಾಡೆಮಿ’ ಪ್ರಶಸ್ತಿ ಲಭಿಸಿದೆ. ಅಭಿನಂದನೆಗಳು ಮೇಡಂ, ಶುಭವಾಗಲಿ…

-ಶಶಿಧರ್ ಎಸ್ ದೋಣಿಹಕ್ಲು

 

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...