ಕೆಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತ್ತು. ಎನ್ ಇ ಟಿ ಪಾಸ್ ಮಾಡಿಕೊಂಡಿದ್ದ ಇವರಿಗೆ ಪ್ರಾಧ್ಯಾಪಕರಾಗಿ ಪ್ರತಿಷ್ಠಿತ ಕಾಲೇಜಿನಲ್ಲಿ ಕೆಲಸ ಮಾಡುವ ಸದಾವಕಾಶವೂ ಇತ್ತು. ಆದರೆ, ಇವರ ಕನಸು ಕೆಎಎಸ್ ಅಧಿಕಾರಿ ಆಗುವುದಾಗಲಿ ಅಥವಾ ಉಪನ್ಯಾಸಕನಾಗುವುದಾಗಲಿ ಆಗಿರಲಿಲ್ಲ..! ಕಿರುತೆರೆ, ಹಿರಿತೆರೆ ಇವರ ಕನಸಿನ ರಂಗ. ಆದರೆ, ಅನಿರೀಕ್ಷಿತವಾಗಿ ಸುದ್ದಿಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಕಾಲಕಳೆದಂತೆ ಈ ಕ್ಷೇತ್ರ ಇವರನ್ನು ಬಿಗಿದಪ್ಪಿಕೊಂಡಿದೆ. ಕೆಲಸದ ಮೇಲಿನ ಶ್ರದ್ಧೆ, ಜ್ಞಾನ ಇವರನ್ನು ಮಾಧ್ಯಮ ಕ್ಷೇತ್ರದಲ್ಲಿ ಉನ್ನತಮಟ್ಟಕ್ಕೆ ಕರೆದೊಯ್ದಿದೆ. ಇಷ್ಟದ ಸಿನಿಲೋಕ, ಪ್ರೀತಿಯಿಂದ ಅಪ್ಪಿಕೊಂಡಿರುವ ಮಾಧ್ಯಮ ಪ್ರಪಂಚ ಎರಡನ್ನೂ ಒಟ್ಟೊಟ್ಟಿಗೆ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ ಜನಮೆಚ್ಚಿದ ಈ ನಿರೂಪಕ.
ಸಿನಿಮಾ ಮತ್ತು ನ್ಯೂಸ್ ಮೀಡಿಯಾ ಎಂದೊಡನೆ ಕಣ್ಣಮುಂದೆ ಬರುವ ವ್ಯಕ್ತಿ, ತಟ್ಟನೆ ನೆನಪಾಗುವ ಹೆಸರು ಗೌರೀಶ್ ಅಕ್ಕಿ. ಸಿಕ್ಕ ಕೆಲಸದಲ್ಲಿ ತೃಪ್ತಿಪಡೋದಲ್ಲ. ಆಸಕ್ತಿ ಇರುವ ಕ್ಷೇತ್ರದಲ್ಲಿ ಬದುಕುಕಟ್ಟಿಕೊಳ್ಳಬೇಕು. ಆಗ ನಮ್ಮ ಕನಸಿಗೆ ನ್ಯಾಯ ಒದಗಿಸಿದಂತೆ ಎಂದು 1998ರಲ್ಲಿ ಕೆಎಎಸ್ ಪಾಸ್ ಆಗಿದ್ದರೂ ಅಧಿಕಾರಿಯಾಗುವ ಮನಸ್ಸು ಮಾಡಲಿಲ್ಲ.
ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರೋ ಇವರು ಎನ್‍ಇಟಿ (ನ್ಯಾಷನಲ್ ಎಲಿಜಬಿಲಿಟಿ ಟೆಸ್ಟ್) ಕೂಡ ಪಾಸ್ ಮಾಡಿಕೊಂಡಿದ್ದಾರೆ. ಕೈತುಂಬಾ ಸಂಬಳ ಪಡ್ಕೊಂಡು ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುವ ಅವಕಾಶ ಕೂಡ ಇವರಿಗಿತ್ತು. ಆದರೆ, ಕನಸೇ ಬೇರೆಯದಿದೆಯಲ್ಲಾ…? ಹಾಗಾಗಿ ಅರಸಿಬಂದ ಉದ್ಯೋಗಗಳನ್ನು ಬೇಡವೆಂದು ಪ್ರೀತಿಯಿಂದ ತಿರಸ್ಕರಿಸಿ ಕನಸಿನ ಬೆನ್ನೇರಿ ಹೊರಟಿದ್ದಾರೆ.
ಗೌರೀಶ್ ಅಕ್ಕಿ ಕೊಪ್ಪಳ ಜಿಲ್ಲೆಯ ಯಲಬುರ್ಗಿ ತಾಲೂಕಿನ ಮುದೋಳದಲ್ಲಿ ಹುಟ್ಟಿದ್ದು. ತಂದೆ ಶರಣಪ್ಪ ಅಕ್ಕಿ, ತಾಯಿ ಶಿವಪುತ್ರಮ್ಮ ಅಕ್ಕಿ, ಪತ್ನಿ ಮಾಲತಿ ಭಟ್, ಮಗ ಆಸ್ಥೇಯ. ತಂದೆ ಬೀದರ್ ಶುಗರ್ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದರು. ಆದ್ದರಿಂದ ಬೀದರ್‍ನಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿದ್ರು ಗೌರೀಶ್ ಅಕ್ಕಿ. ನಂತರ ನಿಪ್ಪಾಣಿಯಲ್ಲಿ ಪದವಿ ಶಿಕ್ಷಣ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ಬೆಂಗಳೂರಿನ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಹಾಗೂ ಎಸ್. ನಿಜಲಿಂಗಪ್ಪ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ್ರು. ಆದರೆ, ಇದೇ ವೃತ್ತಿಯಲ್ಲಿ ಮುಂದುವರೆಯೋದು ಇವರಿಗೆ ಇಷ್ಟವಿರಲಿಲ್ಲ. ಆಸಕ್ತಿ ಕ್ಷೇತ್ರ ಸಿನಿಮಾ. ಆದರೆ, ತಕ್ಷಣ ಸಿನಿಜಗತ್ತಿಗೆ ಬರಲು ಸಾಧ್ಯವಾಗಲಿಲ್ಲ.
ಉದ್ಯೋಗ ಕ್ಷೇತ್ರದ ಬದಲಾವಣೆಗೆ ಕಾದಿದ್ದರು. ಈ ವೇಳೆ ಈ ಟಿವಿಯಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡಲು ಹೊಸಬರು ಬೇಕಾಗಿದ್ದಾರೆ ಎಂಬ ವಿಷಯ ಗೊತ್ತಾಯ್ತು. ಈ ಟಿವಿ ಕಚೇರಿ ಕಡೆಗೆ ಕೆಲಸ ಹುಡ್ಕೊಂಡು ಹೊರಟರು. ಎರಡು ದಿನಗಳ ಕಾಲ ಬೆಳಗ್ಗೆ ಹೋಗೋದು ಆಫೀಸ್ ನಲ್ಲಿ ಹೊರಗಡೆ ಕುಳಿತು ಬರೋದೇ ಆಗಿತ್ತು. ಮೂರನೇ ದಿನ ಇವರನ್ನು ಗಮನಿಸಿ ಅಲ್ಲಿ ಆಗ ಕೆಲಸ ಮಾಡುತ್ತಿದ್ದ ಪತ್ರಕರ್ತ ಜಯನಾಣಯ್ಯ ಅವರು ಈ ಟಿವಿ ಹೈದರಾಬಾದ್ ವಲಯದ ಮುಖ್ಯಸ್ಥರಾಗಿದ್ದ ವಿ.ವಿ ಶಿವಶಂಕರವರ ಬಳಿ ಕರೆದುಕೊಂಡು ಹೋದರು. ಇಂಟರ್ ವ್ಯೂ ಆಯ್ತು, ವಾಯ್ಸ್ ಚೆನ್ನಾಗಿದೆ ಅಂತ ವಾಯ್ಸ್ ವೋವರ್ ಕೊಡೋಕೆ ಹೇಳಿದ್ರು. ಹೀಗೆ ‘ಈ ಟಿವಿ’ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಅಕ್ಕಿಯವರ ಪಾದಾರ್ಪಣೆಯಾಯ್ತು. 2001ರಿಂದ 2006ರ ತನಕ ಈ ಟಿವಿ ಬಳಗದಲ್ಲಿದ್ದರು. ಇಲ್ಲಿ ವಾಯ್ಸ್ ವೋವರ್ ಮಾತ್ರವಲ್ಲದೆ ಬುಲೆಟಿನ್ ಪ್ರೊಡ್ಯುಸರ್ ಆಗಿ ನಂತರ ಆ್ಯಂಕರ್ ಆಗಿಯೂ ಸೇವೆಸಲ್ಲಿಸಿದ್ದರು. ಈ ಟಿವಿಯಲ್ಲಿ ಗೌರೀಶ್ ಅಕ್ಕಿ ಅವರು ನಡೆಸುತ್ತಿದ್ದ ‘ಸುದ್ದಿ ಬಿಂಬ’ ಕಾರ್ಯಕ್ರಮ ಜನಪ್ರಿಯವಾಗಿತ್ತು.
ಈ ಟಿವಿಯ ಅಂದಿನ ಮುಖ್ಯಸ್ಥರೊಬ್ಬರ ವರ್ತನೆಯಿಂದ ಬೇಸತ್ತು ಸಂಸ್ಥೆಯನ್ನು ತುಂಬಾ ಬೇಜಾರಿನಿಂದಲೇ ಬಿಟ್ಟು ಹೊರಬಂದರು. ನಂತರ ಟಿವಿ9ನಲ್ಲಿ ವೃತ್ತಿ ಬದುಕಿನ ಜರ್ನಿ ಆರಂಭವಾಯ್ತು. ಮಹೇಂದ್ರ ಮಿಶ್ರಾ ಅವರು ತುಂಬಾನೇ ಪ್ರೋತ್ಸಾಹ ನೀಡಿದ್ರು. 5 ವರ್ಷ (2006-2011) ಸೇವೆಸಲ್ಲಿಸಿದ್ರು. ‘ಸಖತ್ ಮಾತು’, ‘ಫ್ಲಾಶ್ ಬ್ಯಾಕ್’, ‘ಪ್ರೇಮ ಪಲ್ಲವಿ’ ಎಂಬ ಸೂಪರ್ ಹಿಟ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಹಿರಿಮೆ ಅಕ್ಕಿಯವರದ್ದು.
ನಂತರ ಸುವರ್ಣ ನ್ಯೂಸ್ ಕಡೆಗೆ ಅಕ್ಕಿಯವರ ಪಯಣ. ಇಲ್ಲಿ ಒಂದೆರಡು ವರ್ಷ ಕೆಲಸ ಮಾಡಿದ್ರು. ‘ಔಟ್ ಆಫ್ ಫೋಕಸ್’ ಅಕ್ಕಿ ಸುವರ್ಣದಲ್ಲಿ ನಡೆಸಿಕೊಡ್ತಿದ್ದ ಪ್ರಮುಖ ಕಾರ್ಯಕ್ರಮ. 2013ರಿಂದ 2016ರ ತನಕ ಮಾಧ್ಯಮ ಕ್ಷೇತ್ರದಿಂದ ತಾತ್ಕಾಲಿಕ ದೂರವಿದ್ದರು. ‘ಸಿನಿಮಾ ಮೈ ಡಾರ್ಲಿಂಗ್ ’ ಎಂದು ಸಿನಿಲೋಕಕ್ಕೆ ಧುಮುಕಿದರು. ಸಿನಿಮಾ ಮೈ ಡಾರ್ಲಿಂಗ್ ಅಕ್ಕಿ ನಿರ್ದೇಶನದ ಸಿನಿಮಾ.
ನಂತರ ಮತ್ತೆ ಸುದ್ದಿಮಾಧ್ಯಮಕ್ಕೆ ರೀ ಎಂಟ್ರಿ ಕೊಟ್ಟರು. 2016ರ ಜೂನ್‍ನಿಂದ 2017ರ ಜೂನ್ ತನಕ ‘ಸುದ್ದಿ ಟಿವಿ’ಯಲ್ಲಿದ್ದರು. ‘ಕಥಾನಾಯಕ’, ‘ಕುಶಲವೇ ಕ್ಷೇಮವೇ’ ಸುದ್ದಿಯಲ್ಲಿ ಅಕ್ಕಿಯವರು ನಡೆಸಿಕೊಡ್ತಿದ್ದ ಪಾಪ್ಯುಲರ್ ಪ್ರೋಗ್ರಾಂಗಳು. ಇದೀಗ ಕಸ್ತೂರಿ ಕುಟುಂಬದಲ್ಲಿ ಗೌರೀಶ್ ಅಕ್ಕಿಯವರಿದ್ದಾರೆ. ನವೆಂಬರ್ ತಿಂಗಳಲ್ಲಿ ಇವರು ನಡೆಸಿಕೊಟ್ಟ ‘ಮಾಸದ ಕನ್ನಡ’ ಎಂಬ ಕಾರ್ಯಕ್ರಮ ಚೆನ್ನಾಗಿ ಮೂಡಿಬಂದಿತ್ತು. ನಾಡು-ನುಡಿಗೆ ಸೇವೆಸಲ್ಲಿಸುತ್ತಿರುವ ಎಲೆಮರೆಯ ಕನ್ನಡ ಪ್ರೇಮಿಗಳನ್ನು, ಭಾಷಾಭಿಮಾನಿಗಳನ್ನು ಪರಿಚಯಿಸಿಕೊಟ್ಟ ಕಾರ್ಯಕ್ರಮವಿದು. ಕಸ್ತೂರಿಯಲ್ಲಿ ಸಂಜೆ 7 ಗಂಟೆ, 9 ಗಂಟೆ ಪ್ರೈಂ ನಲ್ಲಿ, ಪ್ರಮುಖ ಡಿಸ್ಕಷನ್ ಗಳಲ್ಲಿ ಅಕ್ಕಿ ಇರ್ತಾರೆ.
ಸಿನಿಮಾ ಇವರ ಆಸಕ್ತಿ ಕ್ಷೇತ್ರವಾಗಿರುವುದರಿಂದ ಹೆಚ್ಚಾಗಿ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಆದ್ದರಿಂದ ಎಷ್ಟೋ ಮಂದಿ ಗೌರೀಶ್ ಅಕ್ಕಿಯವರು ಸಿನಿಮಾ ಜರ್ನಲಿಸ್ಟ್ ಅಂತ ಅನ್ಕೊಂಡಿದ್ದಾರೆ. ಇದು ತಪ್ಪುಕಲ್ಪನೆ, ಗೌರೀಶ್ ಅಕ್ಕಿ ಸಾಮಾಜಿಕ, ರಾಜಕೀಯ ಕ್ಷೇತ್ರದ ಕಾರ್ಯಕ್ರಮಗಳನ್ನು ಡಿಸ್ಕಷನ್‍ಗಳನ್ನು ನಡೆಸಿಕೊಟ್ಟಿದ್ದಾರೆ, ಕೊಡುತ್ತಿದ್ದಾರೆ.
‘ಮಾಧ್ಯಮ ಅಕಾಡೆಮಿ ‘,‘ವಿದ್ಯುನ್ಮಾನ ಮಾಧ್ಯಮ ಪ್ರಶಸ್ತಿ’, ‘ಅಂಕ’ ಪ್ರಶಸ್ತಿ, ‘ಶ್ರೇಷ್ಠ ನಿರೂಪಕ’ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಸದ್ಯ ಪತ್ರಕರ್ತ ಹಾಗೂ ಸಿನಿಮಾ ನಿರ್ದೇಶಕ, ನಟನಾಗಿಯೂ ಬ್ಯುಸಿಯಾಗಿದ್ದಾರೆ. ಇವರ ನಿರ್ದೇಶನದ ಹೊಸ ಸಿನಿಮಾ ರೆಡಿಯಾಗ್ತಿದೆ. ನಾಯಕ ನಟನಾಗಿ ಅಭಿನಯಸಿರುವ ‘ಕೆಂಗುಲಾಬಿ’ ರಿಲೀಸ್ ಗೆ ಸಿದ್ಧವಾಗಿದೆ.
“ಮಾಧ್ಯಮ ಕ್ಷೇತ್ರಕ್ಕೆ ಕಾಲಿಡುವವರು ಕನಿಷ್ಠ ಒಂದು ಕ್ಷೇತ್ರದ ಬಗ್ಗೆಯಾದರೂ ತಿಳಿದುಕೊಂಡಿರಬೇಕು. ಪರಿಶ್ರಮ ಅಗತ್ಯ. ಓದುವ ಅಭ್ಯಾಸವಿಲ್ಲದವರು ಮಾಧ್ಯಮಕ್ಕೆ ಬರಬೇಡಿ. ಪತ್ರಕರ್ತರಾದವರು ಒಂದು ಪಕ್ಷ, ಸಿದ್ಧಾಂತಕ್ಕೆ ಜೋತು ಬಿದ್ದರೆ ಪೂರ್ವಗ್ರಹ ಪೀಡಿತರಾಗುತ್ತಾರೆ. ಆಗ ಒಂದು ವಿಷಯವನ್ನು ಮುಕ್ತವಾಗಿ ನೋಡಲು ಆಗುವುದಿಲ್ಲ’’ ಎಂದು ಹೇಳುತ್ತಾರೆ ಗೌರೀಶ್ ಅಕ್ಕಿ.
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
10 ನವೆಂಬರ್ 2017 : ಈಶ್ವರ್ ದೈತೋಟ
11 ನವೆಂಬರ್ 2017 : ಭಾವನ
12 ನವೆಂಬರ್ 2017 : ಜಯಶ್ರೀ ಶೇಖರ್
13 ನವೆಂಬರ್ 2017 : ಶೇಷಕೃಷ್ಣ
14 ನವೆಂಬರ್ 2017 : ಶ್ರೀಧರ್ ಶರ್ಮಾ
15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
16 ನವೆಂಬರ್ 2017 : ಅರವಿಂದ ಸೇತುರಾವ್
17 ನವೆಂಬರ್ 2017 : ಲಿಖಿತಶ್ರೀ
18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
19 ನವೆಂಬರ್ 2017 : ಅಪರ್ಣಾ
20 ನವೆಂಬರ್ 2017 : ಅಮರ್ ಪ್ರಸಾದ್
21 ನವೆಂಬರ್ 2017 : ಸೌಮ್ಯ ಮಳಲಿ
22 ನವೆಂಬರ್ 2017 : ಅರುಣ್ ಬಡಿಗೇರ್
23ನವೆಂಬರ್ 2017 : ರಾಘವ ಸೂರ್ಯ
24ನವೆಂಬರ್ 2017 : ಶ್ರೀಲಕ್ಷ್ಮಿ
25ನವೆಂಬರ್ 2017 : ಶಿಲ್ಪ ಕಿರಣ್
26ನವೆಂಬರ್ 2017 : ಸಮೀವುಲ್ಲಾ
27ನವೆಂಬರ್ 2017 : ರಮಾಕಾಂತ್ ಆರ್ಯನ್
28ನವೆಂಬರ್ 2017 : ಮಾಲ್ತೇಶ್
29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
30ನವೆಂಬರ್ 2017 : ಸುರೇಶ್ ಬಾಬು
01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
02 ಡಿಸೆಂಬರ್ 2017 : ಶಶಿಧರ್ ಭಟ್
03 ಡಿಸೆಂಬರ್ 2017 : ಚನ್ನವೀರ ಸಗರನಾಳ್
04 ಡಿಸೆಂಬರ್ 2017 : ಗೌರೀಶ್ ಅಕ್ಕಿ