ನೀವು ಯಾವುದೇ ಕ್ಷೇತ್ರವನ್ನು ತೆಗೆದುಕೊಳ್ಳಿ ಕನ್ನಡಿಗರೆಂದೂ ನಂಬರ್ 1…! ಆಡುಮುಟ್ಟದ ಸೊಪ್ಪಿಲ್ಲ ಕನ್ನಡಿಗರಿಗೆ ಪರಿಚಯವಿಲ್ಲದ ಕ್ಷೇತ್ರವಿಲ್ಲ ಅಂತ ಹೇಳ್ಬಹುದು…! ಒಬ್ಬರಲ್ಲ ಒಬ್ಬರು ಒಂದೊಂದು ಕ್ಷೇತ್ರದಲ್ಲಿ ಸದ್ದು ಮಾಡಿದ್ದಾರೆ, ಸುದ್ದಿಯಾಗಿದ್ದಾರೆ, ಹವಾ ಕ್ರಿಯೇಟ್ ಮಾಡಿದ್ದಾರೆ. ಎಷ್ಟೋ ಮಂದಿ ಸುದ್ದಿ ಆಗದೇ ಕೆಲಸದಲ್ಲಿ ನಿರತರಾಗಿದ್ದಾರೆ. ಇದು ಕನ್ನಡಿಗರ ತಾಕತ್ತು…!
ಇಷ್ಟೆಲ್ಲಾ ಬೇಕಿತ್ತಾ…? ಬೇಡ್ವಾ..? ಗೊತ್ತಿಲ್ಲ, ಬಟ್ ಈ ಸದ್ದು-ಸುದ್ದಿ ಅಂತ ಬಂದಾಗ ರಾಷ್ಟ್ರಮಟ್ಟದ ಸುದ್ದಿವಾಹಿನಿಯಲ್ಲಿ ಕೆಲಸ ಮಾಡಿದ ಅನುಭವವಿರೋ ಪತ್ರಕರ್ತೆಯೊಬ್ಬರ ಪರಿಚಯ ಮಾಡ್ಕೊಡ್ಲೇ ಬೇಕು ಅನಿಸುತ್ತೆ…! ಇವ್ರು ಮೀಡಿಯಾಕ್ಕೆ ಎಂಟ್ರಿ ಕೊಟ್ಟ ಆರಂಭದಲ್ಲೇ ನ್ಯಾಷನಲ್ ಮೀಡಿಯಾದಲ್ಲಿ ಅವಕಾಶ ಗಿಟ್ಟಿಸಿಕೊಂಡ ಹೆಮ್ಮೆಯ ಕನ್ನಡತಿ. ಆದ್ರೆ, ಅಲ್ಲಿಂದ ವಾಪಸ್ಸು ಕನ್ನಡ ಸುದ್ದಿವಾಹಿನಿ ಕಡೆಗೆ ಬಂದಿದ್ದಾರೆ…! ಯಾರಿವರು…?
ಪ್ರತಿಮಾ ಭಟ್, ಚಿರಪರಿಚಿತ ಪತ್ರಕರ್ತೆ, ಜನಮೆಚ್ಚಿದ ನಿರೂಪಕಿ. ಉತ್ತರ ಕನ್ನಡ ಜಿಲ್ಲೆ ಶಿರಸಿ ಇವ್ರ ಹುಟ್ಟೂರು. ಬೆಳೆದಿದ್ದೂ ಶಿರಸಿಯಲ್ಲೇ. ತಂದೆ ಜಿ.ಎಸ್ ಭಟ್, ತಾಯಿ ಸೀತಾ ಭಟ್. ಅಕ್ಕ ಪೂರ್ಣಿಮಾ ಭಟ್, ಬಾವ ಡಾ. ಮಣಿ, ಪತಿ ಪ್ರದೀಪ್, ಪುಟ್ಟ ಮಗ ಪ್ರವರ್ಧ. ಪ್ರತಿಮಾ ಅವರ ಸಾಧನೆಯ ಹಿಂದಿನ ಶಕ್ತಿ ಇವರ ಕುಟುಂಬ. ಆರಂಭದದಿನಗಳಲ್ಲಿ ಅಪ್ಪ, ಅಮ್ಮ, ಅಕ್ಕ, ಬಾವ ನೀಡಿದ ಪ್ರೋತ್ಸಾಹ, ಈಗ ಪತಿ ನೀಡುತ್ತಿರೋ ಸಹಕಾರ ಮತ್ತು ಪ್ರೋತ್ಸಾಹ ಇವರ ಯಶಸ್ಸಿಗೆ ಆಧಾರ.
ಇವರು ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ ಶಿಕ್ಷಣ ಮುಗಿಸಿದ್ದು ಶಿರಸಿಯಲ್ಲಿ. ಜಾಹಿರಾತು ಕ್ಷೇತ್ರದಲ್ಲಿ ಸಾಧನೆ ಮಾಡ್ಬೇಕು, ಜಾಹಿರಾತು ಕ್ರಿಯೇಟ್ ಮಾಡ್ಬೇಕು ಅನ್ನೋದು ಇವರ ಕನಸು ಮತ್ತು ಗುರಿಯಾಗಿತ್ತು. ಆದ್ದರಿಂದ ಬಿಕಾಂ ಪದವಿ ಮುಗಿದ ಮೇಲೆ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಗೆ ಸೇರಿದ್ರು. ವಿದ್ಯಾರ್ಥಿ ಜೀವನದಲ್ಲಿರುವಾಗಲೇ ಬಯಸದೇ ಬಂದ ಭಾಗ್ಯ ಎಂಬಂತೆ ‘ಜೀ-ಕನ್ನಡ’ ದಲ್ಲಿ ‘ಸ್ನೇಹ-ಸ್ನೇಹಿತರಿಗಾಗಿ’ ಎಂಬ ಕಾರ್ಯಕ್ರಮ ನಡೆಸಿಕೊಡೋ ಅವಕಾಶ ಇವರದ್ದಾಯಿತು. ಈ ಕಾರ್ಯಕ್ರಮದ ಸ್ಕ್ರಿಪ್ಟ್, ವಾಯ್ಸ್ ವೋವರ್, ಆ್ಯಂಕರಿಂಗ್ ಎಲ್ಲವೂ ಪ್ರತಿಮಾ ಅವರದ್ದು. ಈ ಕಾರ್ಯಕ್ರಮ ಕ್ಲಿಕ್ ಆಯ್ತು. ಜೊತೆಗೆ ಟೆಲಿವಿಷನ್ ಲೋಕದ ಪರಿಚಯ ಪ್ರತಿಮಾ ಅವರಿಗಾಯ್ತು.
ಆಗಿನ್ನೂ ಜಿ-ನ್ಯೂಸ್ ಲಾಂಚ್ ಆಗಿರ್ಲಿಲ್ಲ. ವಿಜಯ್ ಗ್ರೋವರ್ ಅವರು, ‘ನಿನ್ನ ಪಿಜಿ ಮುಗಿದ ಕೂಡ್ಲೇ ಇಲ್ಲಿಗೇ ಬಾ.. ನ್ಯೂಸ್ ಚಾನಲ್ ನಲ್ಲಿ ವರ್ಕ್ ಮಾಡು ಅಂತ ಆಫರ್ ಕೊಟ್ಟುಬಿಟ್ಟಿದ್ದರು. ಪಿಜಿ ಮುಗಿದ ಕೂಡಲೇ ಪ್ರತಿಮಾ ಭಟ್ ಜಿ-ನ್ಯೂಸ್‍ಗೆ ಸೇರಿದ್ರು.
ಹೀಗೆ 2007ರಲ್ಲಿ ಮೀಡಿಯಾ ಜರ್ನಿ ಆರಂಭಿಸಿದ್ರು. ಇಲ್ಲಿಂದ ಜಾಹಿರಾತು ಕ್ಷೇತ್ರಕ್ಕೆ ಹೋಗುವ ಯೋಚ್ನೆ ಬರಲಿಲ್ಲ. ಬಂದರೂ ಸುದ್ದಿ ಮಾಧ್ಯಮದ ಸೆಳೆತ, ಅಪ್ಪುಗೆಯಿಂದ ಬಿಡಿಸಿಕೊಳ್ಳಲು ಮನಸ್ಸು ಒಪ್ಪಲಿಲ್ಲ. ಹೆಚ್ಚು ಕಡಿಮೆ ಒಂದು ವರ್ಷ ಜಿ-ನ್ಯೂಸ್ ನಲ್ಲಿ ಕೆಲಸ ಮಾಡಿದ್ರು. ಅಷ್ಟರಲ್ಲಿ ರಾಷ್ಟ್ರೀಯ ವಾಹಿನಿ ನ್ಯೂಸ್-ಎಕ್ಸ್ ನಿಂದ ಅವಕಾಶ ಸಿಕ್ತು. ನ್ಯಾಷನಲ್ ಮೀಡಿಯಾ ಕಡೆಗೆ ಪ್ರತಿಮಾ ಅವರ ಪಯಣ ಸಾಗಿತು.
ಅಲ್ಲಿ ಸಂಬಳ, ಕೆಲಸ ಎಲ್ಲಾ ಇಷ್ಟವಾಗಿತ್ತು. ಅದಕ್ಕೆ ಹೊಂದಿಕೊಂಡಿದ್ದರು. ಆದ್ರೆ, ‘ನೀ ನನ್ನ ಜೊತೆಯೇ ಇದ್ರೆ ಚನ್ನ…! ಎಲ್ಲೋ ಹೋಗಿ ಕಳೆದು ಹೋಗಬೇಡ ಕನ್ನಡತಿ’ ಅಂತ ಕನ್ನಡ ಮಾಧ್ಯಮಕ್ಕೆ ಸ್ವಾಗತಿಸಿತು ಹೆಮ್ಮೆಯ ಕನ್ನಡ. ರಾಷ್ಟ್ರೀಯ ಮೀಡಿಯಾದಲ್ಲಿ ನಮ್ಮವರಿಗೆ, ನಮ್ಮ ಜನರು ಗುರುತಿಸೋ ತರ ಕೆಲಸ ಮಾಡೋಕೆ ಆಗಲ್ಲ ಎಂದು ‘ ಸಮಯ ಚಾನಲ್’ ಗೆ ಪಾದಾರ್ಪಣೆ ಮಾಡುವ ಮೂಲಕ ಕನ್ನಡ ಮಾಧ್ಯಮ ಲೋಕಕ್ಕೆ ಮರುಪ್ರವೇಶ ಮಾಡಿದ್ರು.
ಸಮಯ ಆಗಿನ್ನೂ ಲಾಂಚ್ ಆಗಿರ್ಲಿಲ್ಲ. ಅದಕ್ಕು ಮುನ್ನ ಆರೇಳು ತಿಂಗಳು ಕೆಲಸ ಮಾಡಿದ್ರು. ಅಷ್ಟರಲ್ಲಿ ಸುವರ್ಣ ನ್ಯೂಸ್ ನಿಂದ ಆಫರ್ ಬಂತು. ಅಲ್ಲಿ ಆಗ ಎಚ್.ಆರ್ ರಂಗನಾಥ್ ಮುಖ್ಯಸ್ಥರಾಗಿದ್ರು. ಪ್ರತಿಮಾ ಭಟ್ ಸುವರ್ಣ ಬಳಗ ಸೇರಿದ್ರು. 2009ರಿಂದ ಸತತ 8 ವರ್ಷಗಳ ಕಾಲ ಸುವರ್ಣದಲ್ಲಿಯೇ ಇದ್ದಾರೆ.
‘ಆರಂಭದ ದಿನಗಳಲ್ಲಿ ಎಚ್.ಆರ್ ರಂಗನಾಥ್ ಸರ್, ರಂಗನಾಥ್ ಭಾರಧ್ವಜ್ ಸರ್ ಅವಂತಹ ಅನುಭವಿ ಪತ್ರಕರ್ತರಿಂದ ಸಾಕಷ್ಟು ಕಲಿಯಲು ಸಾಧ್ಯವಾಯ್ತು. ಅವರ ಮಾರ್ಗದರ್ಶನ, ಸಲಹೆ, ಪ್ರೋತ್ಸಾಹಕ್ಕೆ ನಾನು ಚಿರಋಣಿ’ ಅಂತಾರೆ ಪ್ರತಿಮಾ.
ಸುವರ್ಣದಲ್ಲಿ ಜಯ ಪ್ರಕಾಶ್ ಶೆಟ್ಟಿ ಅವರೊಂದಿಗೆ ಪ್ರತಿಮಾ ಅವರು ನಡೆಸಿಕೊಡ್ತಿದ್ದ ‘ಬ್ರೇಕ್ ಫಾಸ್ಟ್ ನ್ಯೂಸ್’ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ವೀಕ್ಷಕರು ಪತ್ರ ಬರೆಯುತ್ತಿದ್ದರು…! ಅಲ್ಲಿ-ಇಲ್ಲಿ ಸಿಕ್ಕಾಗ, ನಮ್ಮ ಬ್ರೇಕ್ ಫಾಸ್ಟ್, ಮಾರ್ನಿಂಗ್ ಕಾಫಿ ನಿಮ್ಮ ನ್ಯೂಸ್ ಜೊತೆಗೇನೆ ಅಂತ ಜನ ಹೇಳ್ತಿದ್ರು. ಅಷ್ಟರಮಟ್ಟಿಗೆ ಇದು ಹಿಟ್ ಆಗಿತ್ತು. ಈ ವೇಳೆ ವಿಶ್ವೇಶ್ವರ ಭಟ್ ಅವರು ಸುವರ್ಣ ಸಂಪಾದಕಾಗಿದ್ದರು. ಈ ಸಮಯದಲ್ಲಿ ಹತ್ತಾರು ಒಳ್ಳೆಯ ಕಾರ್ಯಕ್ರಮಗಳನ್ನು ನಡೆಸಿಕೊಡೋ ಅವಕಾಶ ಪ್ರತಿಮಾ ಅವರಿಗೆ ಕಲ್ಪಿಸಿದರು. ಇದನ್ನು ಪ್ರತಿಮಾ ಸ್ಮರಿಸಿಕೊಳ್ತಾರೆ.
ಸುಧಾಮೂರ್ತಿ ಅವರಂತಹ ಗಣ್ಯರ, ಸಾಧಕರ ಇಂಟರ್ ವ್ಯೂ ಮಾಡಿದ್ದು ಸದಾ ನೆನಪಲ್ಲಿ ಉಳಿಯುತ್ತಂದ್ದು. ಆರು ಮಂದಿ ನಿರೂಪಕರು ನಡೆಸಿಕೊಡ್ತಿದ್ದ ಸ್ಟಾರ್ಸ್ ವಿತ್ ಸುವರ್ಣ ಗರ್ಲ್ಸ್ ನಲ್ಲಿ ಇವರೂ ಕೂಡ ಒಬ್ಬ ನಿರೂಪಕಿಯಾಗಿದ್ದರು. ಅನಂತ್ ನಾಗ್, ಕಮಲ ಹಾಸನ್, ಉಪೇಂದ್ರ, ಸುದೀಪ್ ಅವರಂತಹ ಅನೇಕ ನಟರನ್ನು ಸಂದರ್ಶಿಸುವ ಅವಕಾಶ ಸಿಕ್ಕಿತ್ತು.
ಬೇರೆ ಬೇರೆ ಊರುಗಳಿಗೆ ಭೇಟಿ ನೀಡಿ ಅಲ್ಲಿನ ಎಲೆಮರೆಯ ಸಾಧಕರನ್ನು ಪರಿಚಯಿಸೋ ಕಾರ್ಯಕ್ರಮ ‘ರಿಯಲ್ ಹೀರೋಸ್’, ನಿಗೂಢ, ವಿಸ್ಮಯಗಳ ಕುರಿತ ‘ಚಿದಂಬರ ರಹಸ್ಯ’, ದೇವಾಲಯಗಳನ್ನು ಪರಿಚಯ ಮಾಡಿಕೊಡೋ ‘ಗುಡಿಯ ನೋಡಿರಣ್ಣ’, ದೇಶಗಳನ್ನು ಪರಿಚಯಿಸೋ ‘ಅಲೆಮಾರಿ’ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಅನುಭವ, ಕೀರ್ತಿ ಪ್ರತಿಮಾ ಅವರದ್ದು.
‘ಅಲೆಮಾರಿ’ ಕಾರ್ಯಕ್ರಮದ ಬಗ್ಗೆ ನಿಮಗೆ ಒಂದು ಇಂಟ್ರೆಸ್ಟಿಂಗ್ ಘಟನೆಯನ್ನು ನಾನಿಲ್ಲಿ ಹೇಳ್ಲೇ ಬೇಕು. ಒಂದ್ಸಲ ಚೀನಾದ ಮಕಾವುಗೆ ಪ್ರತಿಮಾ ಮತ್ತು ಕ್ಯಾಮೆರಾಮನ್ ಒಬ್ಬರು ಹೋಗಿದ್ರು. ವೆನಿಷಿಯನ್ ಕಾರ್ಸಿವಲ್ ಎಂಬ ಹಬ್ಬದ ಬಗ್ಗೆ ಶೂಟಿಂಗ್ ಮಾಡ್ಕೊಂಡು ಬರಬೇಕಿತ್ತು. ಇವರ ಚೀನಾ ಪ್ರವಾಸದಲ್ಲಿ ಬೇರೆ ಬೇರೆ ದೇಶದವರೂ ಜೊತೆಗಿದ್ರು. ಎಲ್ಲರನ್ನೂ ದೇಶ ಸುತ್ತಿಸೋ ಜವಬ್ದಾರಿ ಹೊತ್ತಿದ್ದ ಮ್ಯಾನೇಜರ್ ಶಾಪಿಂಗ್ ಹೇಗಿರುತ್ತೆ ಎನ್ನುವ ಅನುಭವ ಸಿಗಲಿ ಅಂತ ಒಂದು ನಗರಕ್ಕೆ ಕರ್ಕೊಂಡು ಹೋದ್ರು. ತಮ್ಮ ವಾಹನ ನಿಲ್ಲಿಸಿದ ಜಾಗಕ್ಕೆ 20 ನಿಮಿಷದಲ್ಲಿ ವಾಪಸ್ಸಾಗಿರಬೇಕಿತ್ತು. ಪ್ರತಿಮಾ ಮತ್ತು ಕ್ಯಾಮೆರಮನ್ ಅಲ್ಲೂ ತಮ್ಮ ಜರ್ನಲಿಸ್ಟ್ ಬುದ್ಧಿಯನ್ನು ತೋರಿಸಿದ್ರು…!
ಶಾಪಿಂಗ್ ಜೊತೆ ಜೊತೆಗೆ ಶೂಟಿಂಗ್ ಮಾಡಿದ್ರು…! ಹಾಗಾಗಿ ವಾಹನ ಇದ್ದಲ್ಲಿಗೆ ಮರಳೋದು ಐದೇ ಐದು ನಿಮಿಷ ತಡವಾಯ್ತು…! ಅಷ್ಟರಲ್ಲಿ ಎಲ್ಲರೂ ಇವರನ್ನು ಬಿಟ್ಟು ಹೊರಟು ಹೋಗಿದ್ರು. ಎಲ್ಲಿಗೆ ಹೋಗ್ಬೇಕು? ಏನ್ ಮಾಡ್ಬೇಕು ಅನ್ನೋದೇ ದೊಡ್ಡ ಚಾಲೆಂಜ್. ಚೀನಾದಲ್ಲಿ ಇಂಗ್ಲಿಷ್ ಮಾತಾಡೋರು ಸಿಗೋದು ಕಷ್ಟ. ಅವರ ಭಾಷೆ ಇವ್ರಿಗೆ ಬರಬೇಕಲ್ಲಾ..? ಪುಣ್ಯಕ್ಕೆ ಮ್ಯಾನೇಜರ್ ಕಾಂಟೆಕ್ಟ್ ನಂಬರ್ ನೋಟ್ ಮಾಡಿಕೊಂಡಿದ್ರು. ಸರಿ, ಫೋನ್ ಮಾಡೋಕೆ ಇವರ ಮೊಬೈಲ್ ವರ್ಕ್ ಆಗ್ಬೇಕಲ್ಲಾ..? ಕಾಯಿನ್ ಬೂತ್ ಗೆ ಹೋಗಿ ಕಾಲ್ ಮಾಡಿದ್ರು, ಯಾವ ಕಾಯಿನ್ ವರ್ಕ್ ಆಗುತ್ತೆ ಅಂತ ತಿಳಿದುಕೊಳ್ಳೋದು ಕಷ್ಟವಾಗಿತ್ತು. ಇರೋ ಬರ ಕಾಯಿನ್ ಗಳನ್ನ ಹಾಕಿದ್ರು. ಕೊನೆಗೊಂದು ಕಾಯಿನ್ ಹಾಕಿದಾಗ ಕಾಲ್ ಕನೆಕ್ಟ್ ಆಯ್ತು…! ಅಬ್ಬಾ, ಮ್ಯಾನೇಜರ್ ಫೋನ್ ಗೆ ಸಿಕ್ರು. ಕೈ ಬಾಯಿ ಸನ್ನೆ ಮಾಡಿ, ಕ್ಯಾಬ್ ಹಿಡಿದು ಆ ಮ್ಯಾನೇಜರ್ ಇರೋ ಜಾಗ ತಲುಪಿದ್ರು…! ಇವರಿದ್ದ ಜಾಗದಿಂದ ಆ ಜಾಗಕ್ಕೆ ಕೇವಲ 5 ನಿಮಿಷದ ಜರ್ನಿ…! ಇದು ಇವರ ಲೈಫಲ್ಲಿ ಯಾವತ್ತಿಗೂ ಮರೆಯಲಾಗದ, ಐದೇ ಐದು ನಿಮಿಷದ ವ್ಯಾಲ್ಯು ತೋರಿಸಿದ ಘಟನೆ.
ಶಾಲಾ-ಕಾಲೇಜು ದಿನಗಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ತುಂಬಾ ಆಸಕ್ತಿ ಇತ್ತು. ಭರತನಾಟ್ಯವನ್ನು ಕಲ್ತಿದ್ದಾರೆ. ಚಿಕ್ಕಂದಿನಿಂದಲೂ ಓದುವುದು ಅಂದ್ರೆ ಇಷ್ಟ. ಕಾಲೇಜು ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಭಾರತದ ನಾನಾ ರಾಜ್ಯಗಳನ್ನು ಸುತ್ತುವ ಅವಕಾಶ ಸಿಕ್ಕಿತ್ತು. ಎಲ್ಲೋ ಒಂದು ಕಡೆ ಇವರು ಮಾಧ್ಯಮ ಕ್ಷೇತ್ರಕ್ಕೆ ಬರಲು ಸಿಕ್ಕ ದೊಡ್ಡ ವೇದಿಕೆ ಇವರ ಕಾಲೇಜು.
ರಿಪೋರ್ಟರ್ ಕಮ್ ಆ್ಯಂಕರ್ ಆಗಿ ವೃತ್ತಿ ಜೀವನ ಆರಂಭಿಸದವ್ರು. ಬರವಣಿ ಬಗ್ಗೆ ಆಸಕ್ತಿ. ಎಷ್ಟೋ ಕಾರ್ಯಕ್ರಮಗಳನ್ನು ಇವರೇ ಸ್ಕ್ರಿಪ್ಟ್ ಬರೆದು ಪ್ರೆಸೆಂಟ್ ಮಾಡ್ತಾರೆ. ಇದು ಇವರ ಪ್ಲಸ್ ಪಾಯಿಂಟ್. ನಾನಾ ಸಂಘ-ಸಂಸ್ಥೆಗಳು ‘ಮಹಿಳಾ ಸಾಧಕಿ’ ಪ್ರಶಸ್ತಿ ನೀಡಿ ಸನ್ಮಾನಿಸಿವೆ.
ಎಚ್.ಆರ್ ರಂಗನಾಥ್, ವಿಶ್ವೇಶ್ವರ ಭಟ್, ಅನಂತ ಚಿನಿವಾರ, ರವಿ ಹೆಗಡೆ, ವಿಜಯ ಗ್ರೋವರ್ ಅವರಂತಹ ಸಂಪಾದಕರ ಕೈ ಕೆಳಗೆ ಕೆಲಸ ಮಾಡಿದ ಇವರ 10 ವರ್ಷದ ವೃತ್ತಿ ಜೀವನದ ಅನುಭವ ಹಿರಿಯದು. ಮಾಧ್ಯಮ ಗ್ಲಾಮರ್ ಲೋಕವಲ್ಲ. ಕಲಿಯಲು ಆಸಕ್ತಿ ಇರೋರು, ಪರಿಶ್ರಮ ಪಡೋರು ಮಾಧ್ಯಮಕ್ಕೆ ಬರಬೇಕು. ನಿರೂಪಣೆ ಅಂತಲ್ಲಾ ಎಲ್ಲಾ ವಿಭಾಗದಲ್ಲೂ ಕೆಲಸ ಮಾಡಲು ರೆಡಿಯಾಗಿರಬೇಕು. ರಿಪೋರ್ಟರ್ ಆಗಿ ಕೆಲಸ ಮಾಡೋದು ಆ್ಯಂಕರಿಂಗ್ ಗೆ ತುಂಬಾ ಅನುಕೂಲ ಆಗುತ್ತೆ ಅನ್ನೋದು ಪ್ರತಿಮಾ ಭಟ್ ಅವರ ಅನುಭವದ ಮಾತುಗಳು.
ಪೊಲಿಟಿಕಲ್, ಸೋಶಿಯಲ್, ಸ್ಪೋರ್ಟ್, ಎಜುಕೇಶನ್, ವರ್ತಮಾನದ ಬೆಳವಣಿಗೆಗಳು ಹೀಗೆ ಯಾವುದೇ ವಿಷಯವಿರಲಿ ಎಷ್ಟು ಹೊತ್ತು ಬೇಕಾದ್ರು ಡಿಸ್ಕಷನ್ಸ್, ಪ್ರೋಗ್ರಾಂ ನಡೆಸಿಕೊಡ ಬಲ್ಲ ಕನ್ನಡದ ಹೆಮ್ಮೆಯ ನಿರೂಪಕಿ ಪ್ರತಿಮಾ ಮಾಧ್ಯಮ ಲೋಕದ ಅಪ್ರತಿಮ ಸಾಧಕಿಯಾಗಲಿ. ಸದ್ಯ ತಾಯಿತನದ ಸಂಭ್ರಮದಲ್ಲಿರುವ ಪ್ರತಿಮಾ ಸ್ವಲ್ಪ ಬ್ರೇಕ್ ತಗೊಂಡಿದ್ದಾರೆ. ಶೀರ್ಘದಲ್ಲೇ, ಹೊಸವರ್ಷದಲ್ಲಿ ಮತ್ತೆ ಸುವರ್ಣ ಮೂಲಕ ನಿಮ್ಮ ಮುಂದೆ ಬರಲಿದ್ದಾರೆ.
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
1) 10 ನವೆಂಬರ್ 2017 : ಈಶ್ವರ್ ದೈತೋಟ
2)11 ನವೆಂಬರ್ 2017 : ಭಾವನ
3)12 ನವೆಂಬರ್ 2017 : ಜಯಶ್ರೀ ಶೇಖರ್
4)13 ನವೆಂಬರ್ 2017 : ಶೇಷಕೃಷ್ಣ
5)14 ನವೆಂಬರ್ 2017 : ಶ್ರೀಧರ್ ಶರ್ಮಾ
6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
7)16 ನವೆಂಬರ್ 2017 : ಅರವಿಂದ ಸೇತುರಾವ್
8)17 ನವೆಂಬರ್ 2017 : ಲಿಖಿತಶ್ರೀ
9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
10)19 ನವೆಂಬರ್ 2017 : ಅಪರ್ಣಾ
11)20 ನವೆಂಬರ್ 2017 : ಅಮರ್ ಪ್ರಸಾದ್
12)21 ನವೆಂಬರ್ 2017 : ಸೌಮ್ಯ ಮಳಲಿ
13)22 ನವೆಂಬರ್ 2017 : ಅರುಣ್ ಬಡಿಗೇರ್
14)23ನವೆಂಬರ್ 2017 : ರಾಘವ ಸೂರ್ಯ
15)24ನವೆಂಬರ್ 2017 : ಶ್ರೀಲಕ್ಷ್ಮಿ
16)25ನವೆಂಬರ್ 2017 : ಶಿಲ್ಪ ಕಿರಣ್
17)26ನವೆಂಬರ್ 2017 : ಸಮೀವುಲ್ಲಾ
18)27ನವೆಂಬರ್ 2017 : ರಮಾಕಾಂತ್ ಆರ್ಯನ್
19)28ನವೆಂಬರ್ 2017 : ಮಾಲ್ತೇಶ್
20)29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
21)30ನವೆಂಬರ್ 2017 : ಸುರೇಶ್ ಬಾಬು
22)01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
23)02 ಡಿಸೆಂಬರ್ 2017 : ಶಶಿಧರ್ ಭಟ್
24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್
25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ
26)05 ಡಿಸೆಂಬರ್ 2017 : ಶ್ರುತಿ ಜೈನ್
27)06ಡಿಸೆಂಬರ್ 2017 : ಅವಿನಾಶ್ ಯುವನ್
28)07ಡಿಸೆಂಬರ್ 2017 : ಶಿಲ್ಪ ಕೆ.ಎನ್
29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ
30)09ಡಿಸೆಂಬರ್ 2017 : ಸಂದೀಪ್ ಕುಮಾರ್
31)10ಡಿಸೆಂಬರ್ 2017 : ಪ್ರತಿಮಾ ಭಟ್