ಸರಿ, ಟ್ರೋಲ್ ಪೇಜುಗಳನ್ನು ವಿರೋಧಿಸೋಣ…! ಸಿಕ್ಕಾಪಟ್ಟೆ ಕಿರಿಕ್ ಮಾಡ್ತಾ ಇದ್ದಾವೆ…! ನಾವು-ನೀವು, ಅವ್ರು-ಇವ್ರು ಎಲ್ರೂ ಅವುಗಳಿಗೆ ಆಹಾರ ಆಗ್ತಿದ್ದೀವಿ ಅಂತ ಸಿಟ್ಟಾಗೋಣ…! ಟ್ರೋಲ್ ಪೇಜ್ ಗಳು ಬ್ಯಾನ್ ಆಗ್ಬೇಕ್ ಅಂತ ಪ್ರತಿಭಟನೆಯನ್ನೂ ಮಾಡೋಣ! ಆದ್ರೆ, ಸೋಶಿಯಲ್ ಮೀಡಿಯಾ, ಈ ಟ್ರೋಲ್ ಪೇಜ್‍ಗಳು ಹುಟ್ಕೊಳ್ಳಕ್ಕಿಂತ ಮೊದಲಿಂದಲೂ ಈ ‘ವಿಡಂಬನೆ’, ಏನ್ ನಾವು ಇಂಗ್ಲಿಷ್ ನಲ್ಲಿ ಸಟಾಯರ್ ( satire) ಅಂತ ಕರೀತೀವೋ ಅದರ ಬಗ್ಗೆ ಏನ್ ಹೇಳ್ತೀರಿ…? ಇದು ಟ್ರೋಲ್ ಪೇಜ್‍ಗಳನ್ನು ವಿರೋಧಿಸ್ತಾ ಇರೋರಿಗೆ ನನ್ನ ಒಂದೇ ಒಂದ್ ಪ್ರಶ್ನೆ.
ಮಾಧ್ಯಮಕ್ಕು ಮತ್ತು ವಿಡಂಬನೆಗಳಿಗೂ ಎಲ್ಲಿಲ್ಲದ ನಂಟು. ಅಷ್ಟೇಅಲ್ಲ ನಮ್ಮ ನಿತ್ಯ ಜೀವನದ ಭಾಗ ಹೌದು. ಈ ಕಾಲಕ್ಕೆ ತಕ್ಕಂತೆ ಮಾಧ್ಯಮಗಳಲ್ಲಿ ಬದಲಾವಣೆ ಆಗ್ತಾ ಇದ್ದಂತೆ, ವಿಡಂಬನೆಯ ಪ್ರಕಾರಗಳಲ್ಲೂ ಬದಲಾವಣೆ ಆಗ್ತಿದೆ ಅನ್ನೋದು ನನ್ನ ಅಭಿಪ್ರಾಯ.
ಮುದ್ರಣ ಮಾಧ್ಯಮದಲ್ಲಿ ನೀವು ವಿಡಂಬನಾ ಬರಹಗಳನ್ನು ಓದಿ ಖುಷಿ ಪಟ್ಟಿದ್ದೀರಿ. ಬರಹಗಳಲ್ಲಿ ವಿಡಂಬನಾ ಬರಹಗಳಿಗೆ ಅಂದ್ರೆ ತಿಳಿಹಾಸ್ಯದೊಂದಿಗೆ ಒಂದೊಳ್ಳೆ ಮೆಸೇಜ್ ನೀಡೋ ಬರಹಗಳಿಗೆ ವಿಶೇಷ ಸ್ಥಾನವಿದೆ. ಈ ಬರಹಗಳನ್ನು ಬರೆಯೋದು ಸುಲಭವಲ್ಲ. ಅದು ನಿಮ್ಗೂ ಗೊತ್ತು. ಈ ಬರಹಗಳನ್ನು ಓದಿ ನೀವು ಖುಷಿ ಪಟ್ಟಿರ್ತೀರಿ ಅಲ್ವೇ…?
ನಗಿಸೋದು ಒಂದು ಕಲೆ. ಅದರಲ್ಲೂ ಮಾತಾಡಿ, ನಟಿಸಿ ನಗಿಸೋದಕ್ಕಿಂತ ಅಕ್ಷರಗಳಲ್ಲಿ ಆಟವಾಡಿ ನಗಿಸೋದು ಇದೆಯಲ್ಲಾ…? ಸುಲಭದ ಮಾತಲ್ಲ….ಮುದ್ರಣ ಮಾಧ್ಯಮಗಳಲ್ಲಿ ಕೆಲವರು ತಮ್ಮ ವಿಡಂಬನ ಬರಹಗಳ ಮೂಲಕ ನಗಿಸಿದ್ರೆ, ಮತ್ತೆ ಕೆಲವರು ಚಿತ್ರಗಳ ಮೂಲಕ ನಗಿಸಿ ಫೇಮಸ್ ಆಗಿದ್ದಾರೆ. ಎಲ್ಲರಿಗೂ ಗೊತ್ತಿರೋ,. ಎಲ್ಲರ ಪ್ರೀತಿಯ ವ್ಯಂಗ್ಯಚಿತ್ರಕಾರರಾದ ಆರ್.ಕೆ ಲಕ್ಷ್ಮಣ್ ಅವರನ್ನೇ ತಗೋಳಿ. ಕೇವಲ ಚಿತ್ರ (ವ್ಯಂಗ್ಯ ಚಿತ್ರ)ಗಳಲ್ಲಿ ನಮ್ಮನ್ನೆಲ್ಲಾ ರಂಜಿಸಿ ನಮ್ಮ ಮನಸ್ಸಿಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ.
ಹೀಗೆ ವ್ಯಂಗ್ಯಚಿತ್ರಕಾರರು, ವಿಡಂಬನಾ ಲೇಖನಗಳನ್ನು ಬರೆಯುವ ಬರಹಗಾರರು ಎಂಥೆಂಥಾ ದೊಡ್ಡ ದೊಡ್ಡ ರಾಜಕಾರಣಿಗಳನ್ನು , ಗಣ್ಯರನ್ನು, ಸೆಲಬ್ರಿಟಿಗಳನ್ನು ತಮ್ಮ ಬರಹ, ಚಿತ್ರಕ್ಕೆ ಆಹಾರವಾಗಿಸಿಕೊಂಡಿಲ್ಲ, ಕಾಲೆಳೆದಿಲ್ಲ ಹೇಳಿ…?
ಮುದ್ರಣ ಮಾಧ್ಯಮ ಆಯ್ತು. ಇನ್ನು ವಿದ್ಯುನ್ಮಾನ ಮಾಧ್ಯಮ (ಎಲಕ್ಟ್ರಾನಿಕ್ ಮೀಡಿಯಾ) (ಟೆಲಿವಿಷನ್) ಕಡೆಗೆ ಬರೋಣ. ಎಷ್ಟೆಲ್ಲಾ ವಿಡಂಬನಾ ಕಾರ್ಯಕ್ರಮಗಳಿಲ್ಲ? ಬರೀ ಸುದ್ದಿ ಕೊಟ್ರೆ ರಗಳೆ ಆಗುತ್ತೆ, ಬೋರ್ ಹೊಡಿಯುತ್ತೆ, ನಮ್ ವೀಕ್ಷಕರು ಖುಷಿ ಖುಷಿಯಿಂದ ನಮ್ ಚಾನಲ್ ನೋಡ್ಬೇಕು ಅಂತ ಸುದ್ದಿವಾಹಿನಿಗಳು ವಿಡಂಬನಾ ಕಾರ್ಯಕ್ರಮಗಳನ್ನು ಮಾಡ್ತಿವೆ. ಉದಾಹರಣೆಗೆ ಟಿವಿ9ನ ಜನಪ್ರಿಯ ಕಾರ್ಯಕ್ರಮ ‘ನೀವು ಹೇಳಿದ್ದು, ನಾವು ಕೇಳಿದ್ದು’, ಪಬ್ಲಿಕ್ ಟಿವಿಯ ‘ಗೋಪಿ ಮಂಚೂರಿ’, ಸುವರ್ಣ ಚಾನಲ್‍ನ ‘ತಲೆ ಹರಟೆ’ ಮುಂತಾದವು.
ಈಗ ಹೊಸದಾಗಿ ಹುಟ್ಕೊಂಡಿರೋದು ಸೋಶಿಯಲ್ ಮೀಡಿಯಾ. ಪ್ರಿಂಟ್ ಮೀಡಿಯಾ, ಎಲೆಕ್ಟ್ರಾನಿಕ್ ಮೀಡಿಯಾಕ್ಕಿಂತ ಹೆಚ್ಚಾಗಿ ಸದ್ದು ಮಾಡ್ತಿರೋದು, ಬೇಗ ಸುದ್ದಿ ತಲುಪಿಸ್ತಿರೋದು ಸೋಶಿಯಲ್ ಮೀಡಿಯಾ. ಎಲ್ಲವೂ ಬದಲಾಗ್ತಾ ಇದೆ…ನಾವು-ನೀವು ಬದಲಾಗಿದ್ದೀವಿ, ದಿನದಿಂದ ದಿನಕ್ಕೆ ನಮ್ಮಗಳಿಗೇ ಗೊತ್ತಿಲ್ಲದಂತೆ ನಾವು ಸಿಕ್ಕಾಪಟ್ಟೆ ಚೇಂಜ್ ಆಗ್ತಿದ್ದೀವಿ. ಮತ್ತೆ ಮೀಡಿಯಾ ವಿಷ್ಯವನ್ನ ಎತ್ಕೊಂಡ್ರೆ, ನಾವು ಪೇಪರ್ ಓದೋಕ್ಕಿಂತ, ಟಿವಿ ನೋಡೋಕ್ಕಿಂತ ಹೆಚ್ಚು ಹೊತ್ತು ಫೇಸ್ ಬುಕ್, ಟ್ವೀಟರ್, ವಾಟ್ಸಪ್ ಅಂತ ಸೋಶಿಯಲ್ ಮೀಡಿಯಾದಲ್ಲಿ ಕಳೆದೋಗ್ತಾ ಇದ್ದೀವಿ. ನ್ಯೂಸ್ ಪೇಪರ್, ಟೆಲಿವಿಷನ್ ಗಳು ಹೇಗೋ ಹಾಗೇ ಹೊಸ ಮೀಡಿಯಾ ಈ ಸಾಮಾಜಿಕ ಜಾಲತಾಣಗಳು. ಈ ಹೊಸ ಮಾಧ್ಯಮದಲ್ಲಿ ವಿಡಂಬನೆ/ ಸಟಾಯರ್ ಅನ್ನೋದು ಹೊಸ ರೂಪ ಪಡೆದಿದೆ. ಅದೇ ಟ್ರೋಲ್…!
ಫೇಸ್ ಬುಕ್, ವಾಟ್ಸಪ್, ಟ್ವೀಟರ್ ಹೀಗೆ ಎಲ್ಲಾ ಕಡೆಗಳಲ್ಲೋ ಟ್ರೋಲ್ ಗಳಿದ್ದೇ ಹವಾ. ಈ ಟ್ರೋಲ್ ಪೇಜಿನವರು ಸಿಕ್ ಸಿಕ್ಕಿದ್ದನ್ನು ಟ್ರೋಲ್ ಮಾಡಿ ಪೋಸ್ಟ್ ಮಾಡ್ತಿರ್ತಾರೆ. ಇದನ್ನು ನೋಡಿ ನಗದೇ ಇರೋರು ಯಾರು ಇಲ್ಲ. ಹೀಗಿರುವಾ ಈಗ ಇದ್ದಕ್ಕಿದ್ದಂತೆ ಇವುಗಳ ಮೇಲೆ ಆಕ್ರೋಶವೇಕೆ. ರಣಕಹಳೆ ಊದ್ತಿರೋದು ಯಾಕೆ…? ಎನ್ನೋದು ಅರ್ಥವಾಗ್ತಿಲ್ಲ.
ಟ್ರೋಲ್ ಪೇಜಿನವ್ರು ಸಿನಿಮಾ ನಟ-ನಟಿಯರನ್ನು ಬಳಸಿಕೊಂಡು ಟ್ರೋಲ್ ಮಾಡೋದನ್ನು ಈ ಮಟ್ಟಿಗೆ ಖಂಡಿಸೋದ್ರಲ್ಲಿ ಅರ್ಥವಿಲ್ಲ. ಸಿನಿಮಾ ಸ್ಟಾರ್ ಗಳ ಫೋಟೋಗಳನ್ನು ಬಳಸಿ, ಒಂದೆರಡು ಪದ ಗೀಚಿ ಟ್ರೋಲ್ ಮಾಡ್ತಾರೆ ಅಂದ ಮಾತ್ರಕ್ಕೆ ಆ ನಟರ ಮೇಲೆ ಪೇಜಿನವರಿಗೆ ಗೌರವವಿಲ್ಲ ಅಂತಲ್ಲ. ಸಿನಿಮಾದಲ್ಲಿ ಮನರಂಜನೆ ನೀಡುವ ನಟರು ಟ್ರೋಲ್ ಪೇಜ್ ಮೂಲಕವು ಮನರಂಜನೆ ನೀಡುತ್ತಾರೆ ಅಂದಾದರೆ ತಪ್ಪೇನು…? ಸಿನಿಮಾದಲ್ಲಿ ನಟರನ್ನು ನೋಡಿ ಇಷ್ಟಪಡೋ ಜನ, ಕಾಮಿಡಿ ನೋಡಿ ನಗುವ ಜನ ಟ್ರೋಲ್ ಪೇಜಿನಲ್ಲಿನ ಟ್ರೋಲ್ಗಳನ್ನು ನೋಡಿ ನಕ್ಕರೆ ಏನಾಗುತ್ತೆ…! ಪಾಸಿಟೀವ್ ಆಗಿ ತೆಗೆದುಕೊಳ್ಳಬಹುದಲ್ಲವೇ…?
ನಿಜ, ಒಪ್ಕೊಳ್ತೀನಿ. ಒಂದು ತಮಾಷೆ, ಹಾಸ್ಯಕ್ಕೂ ಮಿತಿ ಇರುತ್ತೆ. ಎಲ್ಲೆ ಮೀರಿ ವರ್ತಿಸಿದ್ರೆ ಪಾಠ ಕಲಿಸಬೇಕು. ಆದ್ರೆ ತಿಳಿಹಾಸ್ಯದ ಮೂಲಕ ಮನರಂಜನೆ ನೀಡುವ, ನಗಿಸುವ, ಸಾಮಾಜಿಕ ಕಳಕಳಿ ಮೆರೆಯುವ, ಒಂದೊಳ್ಳೆ ಸಂದೇಶ ನೀಡೋ ಪೇಜ್ ಗಳನ್ನೇಕೆ ವಿರೋಧಿಸಬೇಕು? ಅಶ್ಲೀಲವಾಗಿಲ್ಲ ಅಂತಾದ್ರೆ ಆಯ್ತಲ್ವೇ…? ಅದಕ್ಕೇಕೆ ಆಕಾಶವೇ ಕಳಚಿ ಬಿದ್ದಂತೆ ಟ್ರೋಲ್ ಪೇಜ್ ಗಳ ವಿರುದ್ಧ ಕಿಡಿ ಕಾಡ್ತಿರೋದು ಗೊತ್ತಿಲ್ಲ.
ಇವತ್ತು ಸಿನಿಮಾಗಳಿಗೆ ಹೆಚ್ಚು ಹೆಚ್ಚು ಪ್ರಚಾರ ಸಿಕ್ತಿರೋದು ಈ ಟ್ರೋಲ್ ಪೇಜ್ ಗಳಿಂದ. ಈ ಪೇಜ್ ಗಳಲ್ಲಿ ಸಿನಿಮಾ ಬಗ್ಗೆ ಮಾಡೋ ಒಂದೇ ಒಂದು ಟ್ರೋಲ್ ಲಕ್ಷಗಟ್ಟಲೆ ಜನರಿಗೆ ತಲುಪುತ್ತೆ. ದಿನಪತ್ರಿಕೆಯಲ್ಲಿ ಬರೆದ ಸಾವಿರ ಪದಗಳ ಒಂದು ಲೇಖನ, ಟಿವಿಯಲ್ಲಿ ಬೆಳಗ್ಗಿನಿಂದ ಸಂಜೆ ತನಕ ನಡೆಸೋ ಕಾರ್ಯಕ್ರಮಕ್ಕಿಂತ ವೇಗವಾಗಿ ಹಾಗೂ ಹೆಚ್ಚು ಜನಕ್ಕೆ ವಿಷ್ಯವನ್ನು ತಲುಪಿಸ್ತಿವೆ ಟ್ರೋಲ್ ಪೇಜ್‍ಗಳು. ನೆಗಿಟೀವ್ ಟ್ರೋಲ್ ಗಳೇ ಎಷ್ಟೋ ಜನರಿಗೆ ಪ್ಲಸ್ ಆಗಿದ ಉದಾಹರಣೆ ಕೂಡ ಇದೆ. ಒಂದು ಟ್ರೋಲ್ ಪೇಜ್ ನಲ್ಲಿ ನೀವು ಟ್ರೋಲ್ ಆದ್ರೆ ರಾತ್ರೋ ಬೆಳಗಾಗುವುದರಲ್ಲಿ ಫೇಮಸ್ ಆಗಲೂ ಬಹುದು.
ನಗಿಸೋದು, ವಿಡಂಬಡನೆ ಮೂಲಕ ರಂಜಿಸೋದು ಸುಲಭದ ಮಾತಲ್ಲ. ಹೊಸ ರೂಪದ ವಿಡಂಬನೆ ಟ್ರೋಲ್ ಗಳು. ಪ್ರಿಂಟ್ ಮೀಡಿಯಾದ ವಿಡಂಬನಾ ಬರಹಗಳು, ವ್ಯಂಗ್ಯಚಿತ್ರಗಳನ್ನು, ಟೆಲಿವಿಷನ್ ವಾಹಿನಿಗಳಲ್ಲಿ ಬರುವ ರಾಜಕೀಯ, ಸಾಮಾಜಿಕ ವಿಡಂಬನಾ ಕಾರ್ಯಕ್ರಮಗಳನ್ನು ಒಪ್ಪಿಕೊಂಡಿದ್ದೇವೆ. ಅದೇರೀತಿ ಸೋಶಿಯಲ್ ಮೀಡಿಯಾದ ಟ್ರೋಲ್ ಗಳು ಎಂಬ ವಿಡಂಬನಾ ರೂಪವನ್ನು ಕೂಡ ಒಪ್ಪಿಕೊಳ್ಳಲೇನು…?
ಹಾಸ್ಯ, ತಿಳಿಹಾಸ್ಯ ಓಕೆ. ಆದರೆ, ಕೆಲವು ಟ್ರೋಲ್ ಪೇಜುಗಳು ಕೆಲವೊಮ್ಮೆ ಅತಿರೇಕವೆನಿಸುವಂತೆ ಟ್ರೋಲ್ ಗಳನ್ನು ಮಾಡುತ್ತಿವೆ. ಇವುಗಳನ್ನು ಹೊರತು ಪಡಿಸಿ ಬಹುತೇಕ ಟ್ರೋಲ್ ಪೇಜ್ ಗಳು ಸೂಪರ್…! ಹಾಗಾಗಿ ಇವುಗಳನ್ನು ವಿರೋಧಿಸೋದು ಸರಿಯಲ್ಲ.
ಅಕಸ್ಮಾತ್ ಟ್ರೋಲ್ ಪೇಜ್ ಗಳನ್ನು ಹಠಕಟ್ಟಿ ವಿರೋಧಿಸುವುದೇ ಆದ್ರೆ ಎಲ್ಲಾ ರೀತಿಯ ಹಾಸ್ಯ, ವಿಡಂಬನೆ. ಅದು ಬರಹ ಆಗಿರಬಹುದು, ಚಿತ್ರ ಆಗಿರಬಹುದು…ಎಲ್ಲವನ್ನೂ, ಎಲ್ಲಾ ವಿಡಂಬನೆಗಳನ್ನೂ ವಿರೋಧಿಸ ಬೇಕಲ್ಲವೇ…? ಹಾಸ್ಯವನ್ನು ಹಾಸ್ಯದಿಂದಲೇ ನೋಡೋಣ. ನಗೋಣ, ಸಾಧ್ಯವಾದ್ರೆ ನಗಿಸೋಣ… ಸುಮ್ನೆ ಇವೆಲ್ಲಾ ವಿರೋಧ ಬೇಕಾ…?
-ಶಶಿಧರ್ ಎಸ್ ದೋಣಿಹಕ್ಲು