ಹಾಡಿನ ಜಾಡು ಹಿಡಿದು….
||ಸಂಗೀತಕ್ಕೆ ಮನಸೋಲದೇ ಇರೋರು ಇದ್ದಾರ? ಖಂಡಿತಾ ಇಲ್ಲ…! ಕೆಲವು ಸಿನಿಮಾ ಹಾಡುಗಳನ್ನಂತು ಪದೇ ಪದೇ ಗುನುಗುತ್ತಿರುತ್ತೇವೆ. ಕೆಲವೊಂದು ಹಾಡುಗಳಿಗೆ ಕೇಳುಗರಾದ ನಾವು-ನೀವು ನಮ್ಮದೇ ಆದ ಅರ್ಥ ಕಂಡುಕೊಂಡಿರುತ್ತೇವೆ. ಆದರೆ, ಎಷ್ಟೋ ಹಾಡುಗಳ ಬಗ್ಗೆ ನಾವು ಅಂದುಕೊಂಡಿರೋದೇ ಬೇರೆ, ರಚನೆಕಾರರು ಬರೆಯುವಾಗ ಕಲ್ಪಿಸಿಕೊಂಡಿರೋದೇ ಬೇರೆ ಆಗಿರುತ್ತೆ..!
ನಾವಿಲ್ಲಿ ಕೆಲವೊಂದು ಕನ್ನಡ ಹಾಡುಗಳ ಹುಟ್ಟಿನ ಮೂಲ ಮತ್ತು ರಚನೆಗಾರರು ಯಾವ ಅರ್ಥದಲ್ಲಿ ಬರೆದಿದ್ದಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ…||
ಭಾಗ-16
ಕಸ್ತೂರಿ ನಿವಾಸ
ಕನ್ನಡದ ಸಿನಿಲೋಕದ ಒಂದು ಸೂತ್ರವನ್ನೇ ತಲೆಕೆಳಗೆ ಮಾಡಿದ ಚಿತ್ರ ನಾವ್ಯಾರೂ ಎಂದಿಗೂ ಮರೆಯದ ಕಸ್ತೂರಿ ನಿವಾಸ. ಚಿತ್ರದ ಹೀರೋ, ಅಂಗೈ ಭೂಮಿಗೆ ತೋರಿಸುವಂತೆ ಬದುಕಿದ ಜೀವಿ. ಪಡೆಯುವುದಕ್ಕಿಂತ ಕೊಡುವುದನ್ನೇ ರೂಡಿಯಾಗಿಸಿಕೊಂಡಿದ್ದ ವಂಶ ಅವರದ್ದು. ಇಂಥ ಒಂದು ಅದ್ಭುತ ಚಿತ್ರದ ಕಥೆ ಯಾರಿಗ್ ತಾನೆ ಗೊತ್ತಿರಲ್ಲ. ಕೇಳಿದ ಎಲ್ಲವನ್ನು ದಾನ ಮಾಡುವ ಈತ, ಕೊನೆಗೆ ಗುಡಿಸಿಲಿನಲ್ಲಿ ಇರೋ ಪರಿಸ್ಥಿತಿಯೂ ಬರುತ್ತೆ.
ಯಾವಾಗಲೂ ಹ್ಯಾಪಿ ಎಂಡಿಂಗ್ ಕಥೆಯ ಸಿನ್ಮಾಗಳನ್ನ ನೋಡಿದ ನಮ್ ಜನಕ್ಕೆ ಟ್ರ್ಯಾಜಿಡಿ ಕಥೆಯನ್ನ ತೋರಿಸಿದವ್ರು ನಿರ್ದೇಶಕ ದೊರೆ ಭಗವಾನ್. ಆ್ಯಕ್ಚುಲಿ ಈ ಕಥೆಯನ್ನ ಜಿ ಬಾಲಸುಬ್ರಹ್ಮಣ್ಯಂ, ಅಂದಿನ ಪ್ರಸಿದ್ದ ನಟ ಶಿವಾಜಿ ಗಣೆಶನ್ ಅವ್ರಿಗೆ ಅಂತಲೇ ಬರೆದದ್ದು, ಆದ್ರೆ ಟ್ರ್ಯಾಜಿಡಿ ಎಂಡಿಂಗ್ ಇರೋ ಕಾರಣ ಅವ್ರು ಕಥೆಯನ್ನ ನಿರಾಕರಿಸಿದ್ರು. ಕಥೆ ಕೇಳಿದ ಚಿ. ಉದಯಶಂಕರ್ ತಕ್ಷಣ ದೊರೆ-ಭಗವಾನ್‍ರನ್ನ ಮೀಟ್ ಮಾಡಿ ನಿರ್ಮಾಣ ನಿರ್ದೇಶನ ನೀವ್ ಮಾಡಿ, ನಾನು ಡೈಲಾಗ್ಸ್ ಹಾಗೂ ಹಾಡುಗಳನ್ನ ಬರೆದುಕೊಡ್ತೀನಿ ಅಂದ್ರಂತೆ.
ಮೊದಲಿಗೆ ಬೇಡ ಅಂತ ನಿರಾಕರಿಸಿದ್ದ ಡಾ| ರಾಜ್ ತಮ್ಮ ವರದಪ್ಪ ಇಷ್ಟಪಟ್ಟಿದ್ದಕ್ಕಾಗಿ, ಶೂಟಿಂಗ್ ಶುರು ಮಾಡಿ ಜಮಾಯಿಸ್‍ಬಿಡೋಣಾ ಅಂದ್ರಂತೆ. ಕಂಪನಿಯ ಮ್ಯಾನೆಜರ್ ಮಗಳ ಜೊತೆ ಗುಡಿಸಿಲಿನಲ್ಲಿ ರಾಜ್ ಮಾತನಾಡುತ್ತಿರುವಾಗ, ಆಡುವಾಗ ಬರೋ ಹಾಡಿದು. ಮಗು ಆಟಕ್ಕೂ ನಾಯಕನ ಜೀವನಕ್ಕೂ ಹೊಂದಿಕೆಯಾಗುವಂಥ ಲಿರಿಕ್ ಬರೆದ್ರು ಚಿ.ಉದಯಶಂಕರ್… ಮಗು ಆಟವಾಡುವಾಗ ಕೈಲಿ ಗೊಂಬೆ ಬೇಕು, ಹೀಗಾಗಿ ತಂಜಾವೂರಿನ ಮಣ್ಣಿನ ಗೊಂಬೆಯನ್ನು ತರಿಸಿದ್ರು. ಯಾವಾಗಲೂ ನಗ್ತಾ ಇರೋ ಆ ಗೊಂಬೆ ಎಷ್ಟೇ ಬೀಳಿಸಿದ್ರೂ ಬೀಳದೇ ಮತ್ತೆ ಮತ್ತೆ ನಗು ತೋರಿಸ್ತಾ ಇತ್ತು. ಇದನ್ನ ನೋಡಿದ ಉದಯಶಂಕರ್. ಆಡಿಸಿನೋಡು ಹಾಡನ್ನ ಬರೆದೇ ಬಿಟ್ರು. ಸಾಹಿತ್ಯದಲ್ಲಿ ಮಗುವಿನ ಸಂಭ್ರಮವಿತ್ತು, ನಾಯಕನ ಸಂಕಟವಿತ್ತು. ಜೊತೆಗೆ ಒಂದು ಸಂದೇಶವೂ ಇತ್ತು. ಆಡಿಸಿದಾತನ ಕೈಚಳಕದಲ್ಲಿ ಎಲ್ಲ ಅಡಗಿದೆ ಅನ್ನೋ ಸಾಲಿನಲ್ಲಿ ನಾಯಕನ ಜೀವನದ ಕಥೆಯೂ ತಳಕು ಹಾಕಿಕೊಂಡಿತ್ತು. ಚಿತ್ರದಲ್ಲಿ ಎರೆಡು ಬಾರಿ ಈ ಹಾಡು ಬರುತ್ತೆ. ಮೊದಲ ಹಾಡನ್ನ ಪಿ.ಬಿ.ಶ್ರೀನಿವಾಸ್ ಹಾಡಿದ್ರೆ ಕೊನೆಗೆ ಬರೋ ಶೋಕಗೀತೆಯನ್ನ ಜಿ.ಕೆ ವೆಂಕಟೇಶ್ ಹಾಡಿದ್ದಾರೆ.
ಗೊಂಬೆಯ ಈ ಹಾಡು ಎಷ್ಟು ದಶಕಗಳು ಕಳೆದ್ರೂ ಮಾಸದೇ ಜೀವನದಕ್ಕೆ ಹತ್ತಿರವೆಂಬಂತೆ ಯಾವಾಗಲೂ ಆಡಿಸುತ್ತಾ, ಬೀಳಿಸುತ್ತ, ನಗುತ್ತಲೇ ಇರೋದ್ರಲ್ಲಿ ಅನುಮಾನವೇ ಇಲ್ಲ.