ಹಬೀಬ್ ‘ರಂಗಾಂತರ’…!? ಪಕ್ಷಾಂತರ, ಗಂಡಾಂತರ ಕೇಳಿದ್ವೀವಿ. ಇದೆನಪ್ಪಾ ರಂಗಾಂತರ…? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು…! ಬಾಲ್ಯದಿಂದಲೂ ರಂಗಭೂಮಿ ಬಗ್ಗೆ ಆಸಕ್ತಿಯಿದ್ದ ರಂಗಕಲಾವಿದ, ನಿರ್ದೇಶಕ ರಂಗಮಾಧ್ಯಮದಿಂದ ಮುಖ್ಯವಾಹಿನಿ ಮಾಧ್ಯಮಗಳಿಗೆ ಬಂದ ನೈಜ ಕಥೆಯೇ ‘ರಂಗಾಂತರ’…! ಇದರ ನಾಯಕ ಅನುಭವಿ ಪತ್ರಕರ್ತ ಹಾಗೂ ನಿರೂಪಕ ಹಬೀಬ್ ದಂಡಿ…!
ಚಿತ್ರದುರ್ಗದ ಬರಮಸಾಗರದ ಶಿಕ್ಷಕ ದಂಪತಿ ಅಮೀರ್ ಸಾಬ್ ಮತ್ತು ಜುಬೇದಾ ಅವರ 6 ಜನ ಮಕ್ಕಳಲ್ಲಿ 5ನೆಯ ಸುಪುತ್ರ ಹಬೀಬ್ ದಂಡಿ. ಇವರ ಪತ್ನಿ ತಾಜಿರ ಭಾನು. ಹಸೀಬ್ ಮತ್ತು ತಸೀಬ್ ಮಕ್ಕಳು. ಅಪ್ಪ-ಅಮ್ಮ ಇಬ್ಬರೂ ಶಿಕ್ಷಕರಾಗಿದ್ದರಿಂದ ಇವರಲ್ಲಿನ ಭಾಷಾಭಿಮಾನ, ಸಾಹಿತ್ಯಾಭಿರುಚಿ ಹಬೀಬ್ ಅವರಿಗೂ ರಕ್ತಗತವಾಗಿ ಬಂದಿದೆ. ಬಾಲ್ಯದಿಂದಲೂ ಕಥೆ, ಕವನ, ನಾಟಕ ಎಂದರೆ ಇವರಿಗೆ ಇಷ್ಟ. ಚಿಕ್ಕವಯಸ್ಸಲ್ಲೇ ಕಥೆ, ಕವನಗಳನ್ನು ಬರೆದಿದ್ದಾರೆ. ಇವರ ಅನೇಕ ಕವನ, ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಮಾತೃಭಾಷೆ ಉರ್ದುವಾದರೂ ನಾಡನುಡಿ ಕನ್ನಡದ ಮೇಲೆ ಅಭಿಮಾನ, ಮೋಹ… ಪ್ರೀತಿ, ಗೌರವ…ಕನ್ನಡ ಭಾಷೆಯ ಮೇಲೆ ಒಳ್ಳೆಯ ಹಿಡಿತವನ್ನು ಸಾಧಿಸಿದ್ದಾರೆ. ಈ ಭಾಷಾ ಪ್ರೌಢಿಮೆ ಮಾಧ್ಯಮ ಕ್ಷೇತ್ರದಲ್ಲಿ ಕೈ ಹಿಡಿದು ಬೆಳೆಸಿದೆ.
ಬರಮಸಾಗರದಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣವನ್ನು, ಚಿತ್ರದುರ್ಗದ ಮಹಾರಾಜ ಮದಕರಿ ನಾಯಕ ಕಾಲೇಜಿನಲ್ಲಿ ಪಿಯುಸಿ ಹಾಗೂ ಬಿಎ ಪದವಿಯನ್ನು, ಮೈಸೂರು ಯೂನಿವರ್ಸಿಟಿಯಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು, ಪತ್ರಿಕೋದ್ಯಮದಲ್ಲಿ ಡಿಪ್ಲೋಮ ಪದವಿ ಹಾಗೂ ಬಿಇಡಿಯನ್ನು ಮಾಡಿದ್ದಾರೆ. ಜೊತೆಗೆ ಒಂದಿಷ್ಟು ಟೆಕ್ನಿಕಲ್ ಕೋರ್ಸ್‍ಗಳನ್ನು ಸಹ ಮಾಡಿಕೊಂಡಿದ್ದಾರೆ.
ಮೊದಲೇ ಹೇಳಿದಂತೆ ಚಿಕ್ಕಂದಿನಿಂದಲೂ ನಾಟಕದ ಕಡೆ ಆಸಕ್ತಿಯಿದ್ದ ಹಬೀಬ್ ಅವರಿಗೆ ರಂಗಭೂಮಿಯಲ್ಲಿಯೇ ಬೆಳೆಯಬೇಕು ಎಂಬ ಆಸೆಯಿತ್ತು. ಆದರೆ, ಬರುಬರುತ್ತ ಸಮಾಜದಲ್ಲಿನ ಅಸಮಾನತೆ, ಸ್ವಾತಂತ್ರ್ಯ ಪೂರ್ವದ ಸಮಸ್ಯೆಗಳು ಸ್ವಾತಂತ್ರ್ಯ ಭಾರತದಲ್ಲಿಯೂ ಇವೆ ಎಂಬುದನ್ನು ಮನಗಂಡರು. ಮಾಧ್ಯಮ ಬಡವರ, ದನಿ ಇಲ್ಲದವರ ದನಿ ಆಗಲು ಇರುವ ಪ್ರಮುಖ ವೇದಿಕೆ ಎಂದುಕೊಂಡು ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ್ರು. ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಯು.ಆರ್ ಅನಂತಮೂರ್ತಿ, ನಂಜುಂಡಸ್ವಾಮಿ ಅವರ ಬರಹಗಳು, ಸಮಾಜವಾದಿ ಚಿಂತನೆಗಳು, ವಿಚಾರಧಾರೆಗಳೇ ಹಬೀಬ್ ಅವರು ಮಾಧ್ಯಮಕ್ಕೆ ಬರಲು ಪ್ರೇರಣೆ.
ಕಾಲೇಜು ದಿನಗಳಲ್ಲಿ ಸ್ಥಳಿಯ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡುವ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಹಬೀಬ್, ಸ್ನಾತಕೋತ್ತರ ಪದವಿ, ಜರ್ನಲಿಸಂ ಡಿಪ್ಲೋಮ ಪದವಿ ಪಡೆದ ಬಳಿಕ ಪಿ. ಲಂಕೇಶ್ ಅವರ ಲಂಕೇಶ್ ಪತ್ರಿಕೆಗೆ ವರದಿಗಾರರಾಗಿ ಸೇರಿದ್ರು. 2004ರಿಂದ 2007ರವರೆಗೆ ಲಂಕೇಶ್ ಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದರು. ಈ ವೇಳೆಯಲ್ಲಿ ಅನೇಕ ಸಾಹಿತ್ಯ ವಿಮರ್ಶೆ, ಪುಸ್ತಕ ವಿಮರ್ಶೆಗಳನ್ನು ಮಾಡಿದ್ದರು. ಇವರ ವಿಮರ್ಶೆಯನ್ನು ಮೆಚ್ಚಿ ನಾಗತಿಹಳ್ಳಿ ಚಂದ್ರಶೇಖರ್ ಅವರು ಬೆನ್ನುತಟ್ಟಿದ್ದೂ ಉಂಟು. ಇಲ್ಲಿನ 3 ವರ್ಷದ ಅನುಭವದಲ್ಲಿ ರಾಜಕೀಯ ವರದಿಗಾರಿಕೆಯ ಆಳ-ಅಗಲಗಳನ್ನು ಅರಿತರು.
ಎಲ್ಲಕ್ಕಿಂತ ಮುಖ್ಯವಾಗಿ ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಕಂಬಾರ, ಚಂದ್ರಶೇಖರ ಪಾಟೀಲ, ಗಿರೀಶ್ ಕರ್ನಾಡ್ ಅವರುಗಳ ಸಂದರ್ಶನವನ್ನು ಮಾಡುವ, ಹತ್ತಿರದಿಂದ ಅರ್ಥಮಾಡಿಕೊಳ್ಳುವ ಅವಕಾಶ ಸಿಕ್ಕಿತು. ನಟಿ ಧಾಮಿನಿ ವಯಸ್ಕರ ಸಿನಿಮಾದಲ್ಲಿ ನಟಿಸಿದ ಬಗ್ಗೆ ಬರೆದ ಮುಖಪುಟ ವರದಿ ವಿವಾದವನ್ನು ಸೃಷ್ಠಿಸಿತ್ತು. ಧಾಮಿನಿ ಗೊತ್ತಿಲ್ಲದೇ ಮಾಡಿದ ತಪ್ಪನ್ನು ತಿದ್ದಿಕೊಳ್ಳುತ್ತೇನೆಂದು ಮಾಧ್ಯಮಗಳಲ್ಲಿ ಹೇಳಿಕೆಯನ್ನು ನೀಡಿ, ರಾಜ್ಯದ ಜನತೆಯ ಕ್ಷಮೆಯಾಚಿಸಿದ್ದರು.
ಸುದೀಪ್ ಅಭಿನಯದ ಮೈ ಆಟೋಗ್ರಾಫ್ ಹಾಗೂ ದರ್ಶನ್ ಅಭಿನಯದ ಸುಂಟರಗಾಳಿ ಸಿನಿಮಾ ಒಟ್ಟಿಗೆ ರಿಲೀಸ್ ಆಗಿತ್ತು. ಆಗ ಪ್ರೇಕ್ಷಕ ದೊರೆ ಸುದೀಪ್ ಕೈ ಹಿಡಿದ್ದರು. ದರ್ಶನ್ ಸಿನಿಮಾ ಸೋತಿತ್ತು. ಈ ಸಂದರ್ಭದಲ್ಲಿ ಹಬೀಬ್ ಅವರ ಲೇಖನ ‘ಎದ್ದ ಸುದೀಪ್ ಬಿದ್ದ ದರ್ಶನ್’ ಎಂಬ ಶೀರ್ಷಿಕೆಯಲ್ಲಿ ಕವರ್ ಪೇಜ್ ಲೇಖನ ಬರೆದಿದ್ದರು. ಇದು ಸಾಕಷ್ಟು ತಲ್ಲಣ ಉಂಟು ಮಾಡಿತ್ತು. ಈ ಬರಹದ ನಂತರ ದರ್ಶನ್ ಎಲ್ಲಿ ಕಂಡರೂ ಹಬೀಬ್ ಅವರನ್ನು ದುರುಗುಟ್ಟಿ ನೋಡುತ್ತಿದ್ದರಂತೆ. ಆದರೆ, ಸುದೀಪ್ ಮಾತ್ರ ತಮ್ಮ ಆತ್ಮೀಯ ಮಿತ್ರನಂತೆ ಬಾಂದವ್ಯ ಹೊಂದಿದ್ದರಂತೆ.
ಹಿರಿಯ ನಿರ್ದೇಶಕ ದಿ. ಸಿದ್ದಲಿಂಗಯ್ಯನವರ ಅಗಲಿಕೆಗೂ ಮುನ್ನ ಎರಡು ದಿನ ಅವರೊಂದಿಗೆ ಸಂದರ್ಶನಕ್ಕಾಗಿ ಕಳೆದಿದ್ದು ಹಬೀಬ್ ಅವರಿಗೆ ಮರೆಯಲಾಗದ ಕ್ಷಣ. 3 ವರ್ಷದ ನಂತರ 2007ರಲ್ಲಿ ‘ಸುವರ್ಣ ವಾಹಿನಿ’ ಮೂಲಕ ಮುದ್ರಣ ಮಾಧ್ಯಮದಿಂದ ದೃಶ್ಯಮಾಧ್ಯಮಕ್ಕೆ ಕಾಲಿಟ್ಟರು. ಇಲ್ಲಿ ಅನಂತ ಚಿನಿವಾರ, ಶಶಿಧರ್ ಭಟ್ ಅವರಂತಹ ಅನುಭವಿ ಪತ್ರಕರ್ತರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ್ರು.ಸಾಂಸ್ಕೃತಿಕ, ಅಪರಾಧ, ರಾಜಕೀಯ ಸೇರಿದಂತೆ ಎಲ್ಲಾ ರೀತಿಯ ವರದಿಗಾರಿಕೆ ಮಾಡಿದ್ರು.
ಮಾಮೂಲಿ ಸುದ್ದಿಗಳಿಗಿಂತ ವಿಭಿನ್ನವಾಗಿ ಸುದ್ದಿ ಮಾಡಬೇಕು. ಸುದ್ದಿ ಮಾನವೀಯ ಮೌಲ್ಯಗಳ ಪ್ರತಿಬಿಂಬವಾಗಿರಬೇಕು ಎಂಬುದು ಹಬೀಬ್ ಅವರ ನಿಲುವು.
2009ರಲ್ಲಿ ಬೆಂಗಳೂರು ಯೂನಿವರ್ಸಿಟಿ ಎದುರು ಮಗುವೊಂದನ್ನು ಯಾರೋ ಎಸೆದು ಹೋಗಿದ್ದರು. ಇರುವೆಗಳು ಆ ಹಸುಗೂಸನ್ನು ಕಚ್ಚಿಕೊಂಡಿದ್ದವು. ಯಾರೋ ಪುಣ್ಯಾತ್ಮರೊಬ್ಬರು ಅದನ್ನು ಎತ್ಕೊಂಡು ಹೋಗಿ ಸಾಕಿದ್ರು. ಈ ಸುದ್ದಿಯನ್ನು ಹಬೀಬ್ ಅವರು ಮಾಡಿದ್ರು. ಸುವರ್ಣ ಚಾನಲ್ ನಲ್ಲಿ ಮಧ್ಯಾಹ್ನ ಸುದ್ದಿ ಪ್ರಸಾರವಾಯಿತು. ಕೆಲವೇ ಗಂಟೆಗಳಲ್ಲಿ, ರಾತ್ರಿ ಸುಮಾರು 9ಗಂಟೆ ಹೊತ್ತಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸುದ್ದಿಗೆ ಸ್ಪಂದಿಸಿದ್ದರು…! ಮಗುವಿಗೆ 1 ಲಕ್ಷ ರೂ ಸಹಾಯಧನ ಘೋಷಿಸಿದ್ರು. ಇರುವೆಗಳು ಕಚ್ಚಿದ್ದರಿಂದ ಆ ಮಗುವಿನ ಕಣ್ಣಗಳಿಗೆ ತೊಂದರೆಯಾಗಿತ್ತು. ನಾರಾಯಣ ನೇತ್ರಾಲಯದವರು ಉಚಿತ ಚಿಕಿತ್ಸೆ ನೀಡಿದರು. ಅನೇಕ ದಾನಿಗಳು ಮಗುವಿನ ಭವಿಷ್ಯಕ್ಕೆಕ್ಕಾಗಿ ಕೈಜೋಡಿಸಿದ್ರು. ಇಂದು ಈ ಮಗು ಬಸವೇಶ್ವರ ನಗರದ ಶಾಲೆಯೊಂದರಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದೆ. ಈ ಸುದ್ದಿ ತಮಗೆ ಅತ್ಯಂತ ನೆಮ್ಮದಿ, ತೃಪ್ತಿಯನ್ನು ತಂದಿಕೊಟ್ಟಿತು ಎಂದು ಹೇಳುತ್ತಾರೆ ಹಬೀಬ್.
ವರದಿಗಾರಿಕೆ ಜೊತೆಗೆ ಸುವರ್ಣದಲ್ಲಿ ನಿರೂಪಕರಾಗಿಯೂ ಪರದೆ ಅಲಂಕರಿಸಿ ಸೈ ಎನಿಸಿಕೊಂಡರು. ಯುವಕರನ್ನು ಸೆಳೆಯುವ ‘ಯುವ ಡಾಟ್ ಕಾಮ್’ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಇಂದಿಗೂ ಸುವರ್ಣದಲ್ಲಿ ಬರುತ್ತಿರುವ ‘ಎಫ್‍ಐಆರ್’ ಅನ್ನು ಮೊದಲು ಆರಂಭಿಸಿದ್ದು ಇವರೇ. ಆರಂಭದ ಸುಮಾರು 10 ಎಪಿಸೋಡ್‍ಗಳನ್ನು ನಡೆಸಿಕೊಟ್ಟಿದ್ದರು.
ಚಿತ್ರದುರ್ಗದಲ್ಲಿ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಅಲ್ಲಿನ ಅವ್ಯವಸ್ಥೆಗಳ ಕುರಿತು ಸುದ್ದಿ ಮಾಡಿದ್ದರು. ಅಷ್ಟೇಅಲ್ಲದೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಕರುಣಕರ ರೆಡ್ಡಿ ಅವರನ್ನು ನೇರ ಪ್ರಶ್ನೆಗಳ ಮೂಲಕ ತರಾಟೆಗೆ ತೆಗೆದುಕೊಂಡಿದ್ದರು…! ಇವರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕರುಣಕರ ರೆಡ್ಡಿ ಸಂದರ್ಶನವನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದರು..! ಅಂದಿನ ಸುವರ್ಣ ಮುಖ್ಯಸ್ಥರಾಗಿದ್ದ ಶಶಿಧರ್ ಭಟ್ ಅವರು ಹಬೀಬ್ ಅವರ ನೇರ ನುಡಿ, ವರದಿಗಾರಿಕೆ, ಸಂದರ್ಶನದ ತಾಕತ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಬಿಜೆಪಿ-ಜೆಡಿಸ್ ಸಂಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ಪ್ರತಿಕ್ರಿಯೆ ಪಡೆಯಲು ಹೋದಾಗ ಬಾಯಿಗೆ ಬಂದು ಬೈದು ಕಳುಹಿಸದ್ದರಂತೆ. ಅಷ್ಟಾದರೂ ಅವರ ಪ್ರತಿಕ್ರಿಯೆ ತೆಗೆದುಕೊಂಡು ಹೋಗಲೇ ಬೇಕು ಎಂದು ಹಠ ಹಿಡಿದು ಅವರ ಮನೆ ಹೊರಗೆ ನಿಂತಿದ್ದಾಗ ಸ್ವಲ್ಪ ಸಮಯದ ನಂತರ ದೇವೇಗೌಡರೇ ಕರೆದು ಸುಮಾರು 1 ಗಂಟೆ ಇಂಟರ್ ವ್ಯೂ ಕೊಟ್ಟಿದ್ದರಂತೆ. ಇದು ಎಂದೂ ಮರೆಯಲಾಗದ ಅನುಭವ ಎನ್ನುವುದು ಹಬೀಬ್ ಮನದಾಳದ ಮಾತು.
2009ರ ಕೊನೆಯಲ್ಲಿ ಮನೆಯಲ್ಲಿ-ಕಚೇರಿಯಲ್ಲಿ ಎಲ್ಲಿಯೂ ಹೇಳದೆ ಏಕಾಂಗಿಯಾಗಿ ಬೈಕ್ ನಲ್ಲಿ ಪ್ರವಾಸ ಕೈಗೊಂಡಿದ್ದ ಹಬೀಬ್ ಕರ್ನಾಟಕ, ಕೇರಳ, ಮಹಾರಾಷ್ಟ್ರದ ರಾಜ್ಯಗಳನ್ನು ಸುತ್ತಿ ಅಲ್ಲಿನ ಗ್ರಾಮೀಣ ಸ್ಥಿತಿ-ಗತಿಗಳು, ಪರಿಸರದ ಅನುಭವ ಪಡೆದಿದ್ದರು. ಇವರು ಎಲ್ಲೋಗಿದ್ದಾರೆ ಎನ್ನೋದು ಗೊತ್ತಿಲ್ಲದೆ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರವಾಸದ ನಂತರ ಸುವರ್ಣಕ್ಕೆ ರಾಜೀನಾಮೆ ನೀಡಿ ಹೊರಬಂದರು.
ಸುವರ್ಣದಲ್ಲಿ 3ವರ್ಷ ಕೆಲಸ ಮಾಡಿ 2010ರಲ್ಲಿ ಸಮಯ ಸುದ್ದಿವಾಹಿನಿಯತ್ತ ಹಬೀಬ್ ಪಯಣ ಬೆಳೆಸಿದ್ರು. 2012ರಲ್ಲಿ ಕೆ.ಎಂ ಮಂಜುನಾಥ್ ಅವರು ಸಮಯ ಎಡಿಟರ್ ಆಗಿ ಬಂದ್ರು. ಇವರು ಹಬೀಬ್ ಅವರಿಗೆ ಒಳ್ಳೆಯ ಅವಕಾಶಗಳನ್ನು ಕಲ್ಪಿಸಿದ್ರು. ವರ್ತಮಾನದ ಬೆಳವಣಿಗೆಗಳು, ರಾಜಕೀಯ ಡಿಸ್ಕಷನ್ಸ್ ಗಳನ್ನು ಹಬೀಬ್ ಮಾಡಿದ್ರು. 2013ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇವರು ನಡೆಸಿಕೊಟ್ಟ ‘ ದಿ ಲೀಡರ್-ಕ್ಷೇತ್ರದರ್ಶನ’ ಜನಪ್ರಿಯತೆ ಪಡೆದಿತ್ತು. ಇದಲ್ಲದೆ ‘ಏಟು-ಎದುರೇಟ್’ ಸೇರಿದಂತೆ ನಾನಾ ಕಾರ್ಯಕ್ರಮಗಳು, ಡಿಸ್ಕಷನ್ಸ್ ಗಳನ್ನು ನಡೆಸಿದ್ದರು. ‘ಡೇ ವಿತ್ ಲೀಡರ್’ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಕಳೆದ ಕ್ಷಣ ಇವರಿಗೆ ಮರೆಲು ಸಾಧ್ಯವೇ ಇಲ್ಲ.
ಬಿ.ಎಸ್ ಯಡಿಯೂರಪ್ಪ ಸರ್ಕಾರದ ಸಂದರ್ಭದಲ್ಲಿ ನಡೆದ ರಾಜಕೀಯ ಏರಿಳಿತಗಳ ಸಂದರ್ಭದಲ್ಲಿ ರಾಜಕೀಯ ವರದಿಗಾರಿಕೆಯ ಬೆಟ್ಟದಷ್ಟು ಅನುಭವ ಸಿಕ್ಕಿತು ಎನ್ನುತ್ತಾರೆ ಹಬೀಬ್. 2011ರಲ್ಲಿ ಸಿದ್ದರಾಮಯ್ಯ ನವತು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ ಸಂದರ್ಭದಲ್ಲಿ ಇವರಿಗಾದ ವರದಿಗಾರಿಕೆ ಅನುಭವ ಕೂಡ ಹಿರಿಯದು.
ನಂತರ ಹಬೀಬ್ 2014ರಲ್ಲಿ ಜನಶ್ರೀವಾಹಿನಿ ಸೇರಿದ್ರು. ಆ ವೇಳೆಯಲ್ಲಿ ರವಿಬೆಳಗೆರೆ ಜನಶ್ರೀಯ ಸಂಪಾದಕರಾಗಿದ್ದರು. ಅವರ ಅಂದಿನ ಪ್ರೀತಿಯ ಶಿಷ್ಯ, ಇಂದಿನ ಶತ್ರುವೂ ಆಗಿರುವ ಸುನೀಲ್ ಹೆಗ್ಗರವಳ್ಳಿ ಅವರು ಸಹ ಅಲ್ಲಿದ್ದರು.
ಜನಶ್ರೀಯಲ್ಲಿಯೂ ನಾನಾ ಕಾರ್ಯಕ್ರಮಗಳನ್ನು, ಡಿಸ್ಕಷನ್‍ಗಳನ್ನು ನಡೆಸಿಕೊಟ್ಟಿದ್ದಾರೆ. ಜೊತೆಗೆ ಇದೇ ವಾಹಿನಿಯಲ್ಲಿ ವೃತ್ತಿ ಜರ್ನಿ ಮುಂದುವರೆಸಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್ ಅನಂತಮೂರ್ತಿ ಅವರು ಸಾವನ್ನಪ್ಪಿದಾಗ ಕೆಲವರು ಸಂಭ್ರಮಾಚರಣೆ ಮಾಡಿದ್ರು. ಇದು ಹಬೀಬ್ ಅವರಿಗೆ ಅತ್ಯಂತ ನೋವು ಕೊಟ್ಟ ಘಟನೆ. ಅನಂತಮೂರ್ತಿ ಅವರ ಬರಹಗಳನ್ನು ಓದಿಕೊಂಡು ಬೆಳೆದಿದ್ದ ಅವರಿಗೆ ಅವರ ಸಾವಿನ ಸುದ್ದಿಯನ್ನು ಓದಲು ಕಷ್ಟವಾಗಿತ್ತು. ಸಾವಿನ ಸಂಭ್ರಮಾಚರಣೆ ಮಾಡುತ್ತಿದ್ದಾರೆ ಎಂಬ ಸುದ್ದಿಯನ್ನು ವಾಚಿಸುವಾಗಲಂತೂ ಹೃದಯ ತುಂಬಾ ಭಾರವಾಗಿತ್ತಂತೆ.
ಜನಶ್ರೀಯಲ್ಲಿ ಡಿಐಜಿ ರೂಪ ಅವರ ಇಂಟರ್ ವ್ಯೂ ಮಾಡಿದ್ದು ಹಬೀಬ್ ಅವರಿಗೆ ಸ್ಮರಣೀಯ. ಡಿ. ಸುನೀಲ್ ಕುಮಾರ್ ಅವರು ಪೊಲೀಸ್ ಕಮಿಷನರ್ ಆಗುವ ಮುನ್ನ ಹಬೀಬ್ ಇಂಟರ್ ವ್ಯೂ ನಡೆಸಿದ್ದರು. ಈ ಸಂದರ್ಭದಲ್ಲಿ ಕಮಿಷನರ್ ಆಗುವ ಬಗ್ಗೆ ಹಬೀಬ್ ಕೇಳಿದ್ರು. ಈ ಸಂದರ್ಶನ ನಡೆದ ಸುಮಾರು ಎರಡು ತಿಂಗಳ ನಂತರ ಸುನೀಲ್ ಕುಮಾರ್ ಕಮಿಷನರ್ ಆದ್ರು. ಎಲ್ಲರೂ ಸುನೀಲ್ ಅವರಿಗೆ ಕರೆಮಾಡಿ ವಿಶ್ ಮಾಡಿದ್ರೆ, ಸುನೀಲ್ ಹಬೀಬ್ ಅವರಿಗೆ ಕರೆಮಾಡಿ ಸಂತಸ ಹಂಚಿಕೊಂಡಿದ್ದರು.
ಹಬೀಬ್ ಅವರೇ ಹೇಳುವಂತೆ, ಬದುಕನ್ನು ನೋಡ್ತಿದ್ದ ಇವರಿಗೆ ಬದುಕು ಅರ್ಥೈಸಿದ್ದು ಪ್ರಾದ್ಯಾಪಕ ಡಾ. ಬಿ ಬಸವರಾಜ್ ಅವರಂತೆ. ಪದವಿ ವ್ಯಾಸಂಗದ ಸಂದರ್ಭದಲ್ಲಿ ಸಾಕಷ್ಟು ಪ್ರೋತ್ಸಾಹ ನೀಡಿದ್ದರಂತೆ.
‘ಮುಂಗಾರು ಮಳೆ’ ಸಿನಿಮಾ ರಿಲೀಸ್ ಆದಾಗ ನಾಯಕ ನಟಿ ಪೂಜಾಗಾಂಧಿ ಅವರ ಮೊದಲ ಸಂದರ್ಶನ ಮಾಡಿದ್ದು ಇದೇ ಹಬೀಬ್ ಅವರು. ‘ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಹಲವಾರು ಬಾರಿ ಸಂದರ್ಶಿಸಿದ್ದೇನೆ. ತುಂಬಾ ಫ್ರೆಂಡ್ಲಿ ನೇಚರ್ ಅವರದ್ದು’ ಎಂದು ಹೇಳುತ್ತಾರೆ.
ಕೇವಲ ಸಿನಿಮಾ ನಟ-ನಟಿಯರನ್ನು ಸಂದರ್ಶಿಸಿದ್ದು ಮಾತ್ರವಲ್ಲದೆ. ‘ಮರು ಜನ್ಮ’, ‘ನಾಗವಲ್ಲಿ’, ‘ಅಭಿಮನ್ಯು’, ‘ತಾರೆ’ ಸಿನಿಮಾಗಳಲ್ಲಿ , ‘ಮಾಂಗಲ್ಯ’, ‘ಮೌನರಾಗ’ ಸೇರಿದಂತೆ ಹತ್ತಾರು ಧಾರವಾಹಿಗಳಲ್ಲಿ ಹಬೀಬ್ ನಟಿಸಿದ್ದಾರೆ. ಕಾಲೇಜು ದಿನಗಳಲ್ಲಿ ಎನ್‍ಎಸ್‍ಎಸ್ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದರು. ನಾಟಕಗಳಲ್ಲಿ ರಾಜ್ಯಮಟ್ಟದಲ್ಲಿ ಬಹುಮಾನ ಪಡೆದಿದ್ದರು. ಬೆಂಗಳೂರಿಗೆ ಬಂದ ಮೇಲೆ ಎ.ಎಸ್ ಮೂರ್ತಿಯವರ ನಾಟಕ ಸಂಸ್ಥೆಯಲ್ಲಿ ನಾಟಕ ತರಗತಿಗೆ ಸೇರಿದ್ರು. ಪ್ರಕಾಶ್ ಬೆಳವಾಡಿ, ಕೃಷ್ಣಮೂರ್ತಿ ಕವತ್ಕರ್, ಸಿ. ಬಸವಲಿಂಗಯ್ಯ ಅವರ ನಿರ್ದೇಶನದ ನಾಟಕಗಳಲ್ಲಿ ನಟನೆಯನ್ನು ಮಾಡಿದ್ದಾರೆ. ಸ್ವತಃ ಸಾಕಷ್ಟು ನಾಟಕಗಳನ್ನು ನಿರ್ದೇಶಿಸಿದ್ದಾರೆ.
ರವೀಂದ್ರ ಕಲಾಕ್ಷೇತ್ರ ಮತ್ತು ರಂಗಶಂಕರ ಬೆಂಗಳೂರಲ್ಲಿ ಹಬೀಬ್ ಅವರಿಗೆ ತುಂಬಾ ಖುಷಿ ಕೊಡೋ ಜಾಗ. ತಾಯಿಯನ್ನು ಹಜ್ ಯಾತ್ರೆಗೆ ಕರೆದುಕೊಂಡು ಹೋಗಿದ್ದು ತುಂಬಾ ಖುಷಿಕೊಟ್ಟಿದೆ ಹಾಗೂ ಸಾರ್ಥಕವೆನಿಸಿದೆಯಂತೆ.
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
1) 10 ನವೆಂಬರ್ 2017 : ಈಶ್ವರ್ ದೈತೋಟ
2)11 ನವೆಂಬರ್ 2017 : ಭಾವನ
3)12 ನವೆಂಬರ್ 2017 : ಜಯಶ್ರೀ ಶೇಖರ್
4)13 ನವೆಂಬರ್ 2017 : ಶೇಷಕೃಷ್ಣ
5)14 ನವೆಂಬರ್ 2017 : ಶ್ರೀಧರ್ ಶರ್ಮಾ
6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
7)16 ನವೆಂಬರ್ 2017 : ಅರವಿಂದ ಸೇತುರಾವ್
8)17 ನವೆಂಬರ್ 2017 : ಲಿಖಿತಶ್ರೀ
9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
10)19 ನವೆಂಬರ್ 2017 : ಅಪರ್ಣಾ
11)20 ನವೆಂಬರ್ 2017 : ಅಮರ್ ಪ್ರಸಾದ್
12)21 ನವೆಂಬರ್ 2017 : ಸೌಮ್ಯ ಮಳಲಿ
13)22 ನವೆಂಬರ್ 2017 : ಅರುಣ್ ಬಡಿಗೇರ್
14)23ನವೆಂಬರ್ 2017 : ರಾಘವ ಸೂರ್ಯ
15)24ನವೆಂಬರ್ 2017 : ಶ್ರೀಲಕ್ಷ್ಮಿ
16)25ನವೆಂಬರ್ 2017 : ಶಿಲ್ಪ ಕಿರಣ್
17)26ನವೆಂಬರ್ 2017 : ಸಮೀವುಲ್ಲಾ
18)27ನವೆಂಬರ್ 2017 : ರಮಾಕಾಂತ್ ಆರ್ಯನ್
19)28ನವೆಂಬರ್ 2017 : ಮಾಲ್ತೇಶ್
20)29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
21)30ನವೆಂಬರ್ 2017 : ಸುರೇಶ್ ಬಾಬು
22)01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
23)02 ಡಿಸೆಂಬರ್ 2017 : ಶಶಿಧರ್ ಭಟ್
24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್
25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ
26)05 ಡಿಸೆಂಬರ್ 2017 : ಶ್ರುತಿ ಜೈನ್
27)06ಡಿಸೆಂಬರ್ 2017 : ಅವಿನಾಶ್ ಯುವನ್
28)07ಡಿಸೆಂಬರ್ 2017 : ಶಿಲ್ಪ ಕೆ.ಎನ್
29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ
30)09ಡಿಸೆಂಬರ್ 2017 : ಸಂದೀಪ್ ಕುಮಾರ್
31)10ಡಿಸೆಂಬರ್ 2017 : ಪ್ರತಿಮಾ ಭಟ್
32)11ಡಿಸೆಂಬರ್ 2017 : ಹರೀಶ್ ಪುತ್ರನ್
33)12ಡಿಸೆಂಬರ್ 2017 : ನಿಶಾ ಶೆಟ್ಟಿ
34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ
35)14ಡಿಸೆಂಬರ್ 2017 : ಹಬೀಬ್ ದಂಡಿ