ಬಿಜೆಪಿ ಕಾಂಗ್ರೆಸ್ ಮುಕ್ತ ಮಾಡುವ ಕನಸೋ, ಅಧಿಕಾರದ ಮಹತ್ವಾಕಾಂಕ್ಷೆಯೋ.. ಏನಾದರೂ ಇರಲಿ. ರಣತಂತ್ರದಲ್ಲಿ ಮಹದಾಯಿ ವಿವಾದ ಬಗೆಹರಿದರೇ ಅದಕ್ಕಿಂತ ದೊಡ್ಡ ಸಂಗತಿ ರಾಜ್ಯದ ಉತ್ತರ ಭಾಗದ ಜನರಿಗೆ ಮತ್ತೊಂದಿಲ್ಲ. ಎರಡ್ಮೂರು ದಶಕಗಳಿಂದ ಕೈಕಾಲು ಹಿಡಿದರೂ ಬಗ್ಗದ ಗೋವಾ ಸರ್ಕಾರ, ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಸಿದ ಕೂಡಲೇ ಸಂಪೂರ್ಣ ವಿವಾದವನ್ನು ಬಗೆಹರಿಸುತ್ತೆ ಎನ್ನುವುದೇ ತಮಾಷೆಯಾಗಿತ್ತು. ಮನೋಹರ್ ಪಾರಿಕ್ಕರ್ ಬಿಜೆಪಿಯ ರಣತಂತ್ರಕ್ಕೆ ಬಲವಂತವಾಗಿಯಾದರೂ ಹೂಂಗುಟ್ಟುತ್ತಿದ್ದರೇನೋ..? ಆದರೆ ಗೋವಾ ಬಿಜೆಪಿ ಸರ್ಕಾರ ರಚನೆಗೆ ಬೆಂಬಲ ನೀಡಿರುವ ಸೇವ್ ಗೋವಾ ಫ್ರಂಟ್ ಪಕ್ಷ ಬಲವಾಗಿ ವಿರೋಧ ವ್ಯಕ್ತಪಡಿಸಿತ್ತು.
ಜಲಸಂಪನ್ಮೂಲ ಸಚಿವ ವಿನೋಧ್ ಪಲೈಂಕರ್, ಪ್ರತಿಪಕ್ಷ ಕಾಂಗ್ರೆಸ್ ಮನೋಹರ್ ಪಾರಿಕ್ಕರ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಪರಿಣಾಮ ಮನೋಹರ್ ಪಾರಿಕ್ಕರ್, ನಾಲೆ ನಿರ್ಮಾಣಕ್ಕೆ ಸಮ್ಮತಿಯಿಲ್ಲ, ಮಾನವೀಯತೆಯ ಆಧಾರದಲ್ಲಿ ನೀರು ಬಿಡುತ್ತೇವೆ ಎಂದಿದ್ದೇವೆಯೇ ಹೊರತು, ಎಷ್ಟು ನೀರು ಬಿಡುತ್ತೇವೆ ಎಂದು ಹೇಳಿಲ್ಲ ಎಂದು ನುಣುಚಿಕೊಂಡಿದ್ದಾರೆ. ಈ ವಿಚಾರದಲ್ಲಿ ಅಮಿತ್ ಶಾ ಕೂಡ ಸದ್ದು ಮಾಡದೇ ಸುದ್ದಿಯಾಗದೇ ದೂರಸರಿದರು. ಏಕೆಂದರೇ, ಅಮಿತ್ ಶಾ ಪಟ್ಟು ಹಿಡಿದು, ಮನೋಹರ್ ಪಾರಿಕರ್ ವಿಧಿಯಿಲ್ಲದೇ ಸಮ್ಮತಿಸಿದರೇ ಗೋವಾದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಉರುಳುವ ಸಾಧ್ತೆ ಹೆಚ್ಚಿದೆ. ಯಾವುದೇ ರಾಜ್ಯವಿರಲಿ, ಮೊದಲು ಅವರ ಯೋಗಕ್ಷೇಮವನ್ನಷ್ಟೇ ಹೆಚ್ಚು ಪ್ರೋತ್ಸಾಹಸುತ್ತದೆ.
ಹಾಗೆಯೇ ಮಹದಾಯಿ ವಿವಾದ ಬಗೆಹರಿಸಲು ಅಮಿತ್ ಶಾ, ಯಡಿಯೂರಪ್ಪನವರಿಗೆ ಹಕ್ಕುಗಳಿಲ್ಲ ಎಂಬ ವಿಚಾರವೂ ಇಲ್ಲಿ ಗಮನಾರ್ಹ. ಏಕೆಂದರೇ, ಮಹದಾಯಿ ವಿಚಾರದಲ್ಲಿ ಶಾಶ್ವತ, ತಾತ್ಕಾಲಿಕ, ಮಾನವೀಯತೆಯ ಆಧಾರದಂತಹ ಚರ್ಚೆಗಳು, ಒಪ್ಪಂದಗಳು ನಡೆಯಬೇಕಿರುವುದು ಎರಡು ರಾಜ್ಯದ ಮುಖ್ಯಮಂತ್ರಿಗಳ ನಡುವೆ. ಸಿದ್ರಾಮಯ್ಯ ಹಾಗೂ ಮನೋಹರ್ ಪಾರಿಕ್ಕರ್ ಏನಾದರೂ ಒಪ್ಪಂದಕ್ಕೆ ಬಂದ ನಂತರ ಅದನ್ನು ಜನರ ಮುಂದಿಡುವ ಹಕ್ಕಿರುವುದು ಇಲ್ಲಿನ ಆಡಳಿತರೂಡ ಪಕ್ಷದ ಮುಖ್ಯಮಂತ್ರಿ ಹಾಗೂ ಗೋವಾ ಮುಖ್ಯಮಂತ್ರಿಗೆ ಮಾತ್ರ. ವಿವಾದ ನ್ಯಾಯಾಧಿಕರಣದ ಮುಂದಿರುವುದರಿಂದ ಗೋವಾ ಮುಖ್ಯಮಂತ್ರಿ ನ್ಯಾಯಾಧಿಕರಣಕ್ಕೆ ಅಫಿಡವಿಟ್ ಸಲ್ಲಿಸಬೇಕು. ಇದನ್ನು ಹೊರತುಪಡಿಸಿದರೇ ಪ್ರಧಾನಿ ಮಧ್ಯಸ್ಥಿಕೆಯಲ್ಲಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರ ನಡುವೆ ಮಾತುಕತೆಯಾಗಬೇಕು. ಅಮಿತ್ ಶಾ ನೇತೃತ್ವದಲ್ಲಿ ಯಡಿಯೂರಪ್ಪ, ಪಾರಿಕ್ಕರ್ ಮಧ್ಯೆ ನಡೆಯುವ ಸಂಧಾನ ಮಾತುಕತೆಗೆ ಯಾವುದೇ ಸಂವಿಧಾನದ ಮಾನ್ಯತೆಯಿಲ್ಲ. ಅರ್ಥವೂ ಇಲ್ಲ.
ಆದರೆ ಗುಜರಾತ್ ಚುನಾವಣೆಯ ನಂತರ ಅಮಿತ್ ಶಾ, ಮನೋಹರ್ ಪಾರಿಕ್ಕರ್, ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯುತ್ತದೆ. ಯಡಿಯೂರಪ್ಪ ಹುಬ್ಬಳ್ಳಿ ಪರಿವರ್ತನಾ ರ್ಯಾಲಿಯಲ್ಲಿ ರಾಜ್ಯದ ಜನತೆಗೆ ಸಿಹಿ ಸುದ್ದಿ ಕೊಡುವುದಾಗಿ ಹೇಳಿಕೊಂಡರು. ಬಿಜೆಪಿಯ ಅನೇಕ ನಾಯಕರು ಧ್ವನಿಗೂಡಿಸಿದರು. ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಗೋವಾದ ಸಮ್ಮಿಶ್ರ ಸರ್ಕಾರದ ನಾಯಕರು ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಮನೋಹರ್ ಪಾರಿಕ್ಕರ್ ಅವರನ್ನು ತರಾಟೆಗೆ ತೆಗೆದುಕೊಂಡವು. ಹೀಗಾಗಿ ಮಾತುಕತೆಯ ಸಮಯದಲ್ಲಿ ಬಿಜೆಪಿಯ ಅಧಿಕಾರ ದಾಹವನ್ನು ತಣಿಸುವ ಭರವಸೆ ನೀಡಿದ್ದ ಮನೋಹರ್ ಪಾರಿಕ್ಕರ್, ಕರ್ನಾಟಕದಲ್ಲಿ ಇನ್ನೇನು ಅಧಿಕಾರ ಹಿಡಿಯಬೇಕಿದೆ. ಅದಕ್ಕಾಗಿ ಇರುವ ಸರ್ಕಾರವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರಬಾರದು ಎಂದು, ಮಾನವೀಯತೆಯ ಆಧಾರದಲ್ಲಿ ಮಾತುಕತೆ ನಡೆಸುತ್ತೇವೆ ಎಂದು ಪತ್ರ ಬರೆದು ಸುಮ್ಮನಾದರು.
ಕುಡಿಯುವ ನೀರಿನ ಬಳಕೆಗಾಗಷ್ಟೇ ಮಹದಾಯಿ ನದಿ ನೀರನ್ನು ನೀಡಲು ನಮ್ಮ ಅಭ್ಯಂತರವಿಲ್ಲ. ಆದರೆ, ಕಳಸಾ-ಬಂಡೂರಿ ನಾಲೆ ನಿರ್ಮಾಣಕ್ಕೆ ವಿರೋಧವಿದೆ. ಕುಡಿಯುವ ನೀರಿನ ಪೂರೈಕೆಗೆ ಇಷ್ಟೊಂದು ದೊಡ್ಡ ಪ್ರಮಾಣದ ಕಾಲುವೆ ಅಗತ್ಯವಿಲ್ಲ. ಎಷ್ಟು ಪ್ರಮಾಣದಲ್ಲಿ ಹಾಗೂ ಯಾವ ರೀತಿ ಕುಡಿಯುವ ನೀರನ್ನು ಪೂರೈಸಬಹುದು ಎಂಬ ಬಗ್ಗೆ ಮಾತುಕತೆ ನಡೆಯಬೇಕು. ಮಹದಾಯಿ ನದಿ ನೀರಿನ ಹೋರಾಟವನ್ನು ನಾನು ಅತ್ಯಂತ ಜವಾಬ್ದಾರಿಯಿಂದಲೇ ಮುಂದುವರಿಸಿಕೊಂಡು ಹೋಗುತ್ತೇನೆ. ಬಾಯಾರಿಕೆಯಿಂದ ಯಾರಾದರೂ ಬಂದರೆ ನಮ್ಮ ಬಳಿಯಿರುವ ನೀರಿನ ಬಾಟಲಿಯಲ್ಲಿ ಗುಟುಕು ನೀರನ್ನು ಕುಡಿಯಲು ಕೊಡುತ್ತೇವೆ. ಇದರಿಂದಾಗಿ ನಾನು ಮಾತುಕತೆಗೆ ಸಿದ್ಧ ಎಂದಷ್ಟೇ ಪತ್ರ ಬರೆದಿದ್ದೇನೆ. ಹೊರತಾಗಿ ಎಷ್ಟು ನೀರು ಬಿಡುತ್ತೇವೆ, ಏನು ಕೊಡುತ್ತೇವೆ ಎಂದು ಯಾವ ಭರವಸೆಯನ್ನೂ ಕರ್ನಾಟಕಕ್ಕೆ ನೀಡಿಲ್ಲ ಎಂಬುದು ಮನೋಹರ್ ಪಾರಿಕ್ಕರ್ ಬರೆದಿರುವ ಪತ್ರದ ಒಟ್ಟಾರೆ ಅಂಶವಾಗಿದೆ.
ಮಹದಾಯಿ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜನರ ಕಿವಿಗೆ ಹೂ ಮುಡಿಸುವ ಕೆಲಸ ಮಾಡುತ್ತಿದ್ದಾರೆ. ಮಹದಾಯಿ ಮಾತುಕತೆ 1989ರಿಂದಲೂ ನಡೆಯುತ್ತಲೇ ಇವೆ. ಈಗಿನ ಸ್ಥಿತಿಯಲ್ಲಿ ಮಾತುಕತೆ ಮುಂದುವರಿಸುವ ಅವಶ್ಯಕತೆಯೇ ಇಲ್ಲ. ಜನರ ಸಮಸ್ಯೆಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕಿದೆ. ಗೋವಾ, ಕರ್ನಾಟಕ ಮುಖ್ಯಮಂತ್ರಿಗಳಾಗಲಿ, ಯಾವುದೇ ಪಕ್ಷದ ನಾಯಕರ ಒಪ್ಪಿಗೆಯೂ ಇದಕ್ಕೆ ಬೇಕಿಲ್ಲ. ಒಪ್ಪಿಗೆ ಕೊಡಬೇಕಿರುವುದು ಕೇಂದ್ರ ಜಲ ಸಂಪನ್ಮೂಲ ಇಲಾಖೆ. ಪ್ರಧಾನಿ ಜಲ ಸಂಪನ್ಮೂಲ ಇಲಾಖೆಗೆ ನಿರ್ದೇಶನ ನೀಡಿ ರಾಜ್ಯಕ್ಕೆ 7.56 ಟಿಎಂ.ಸಿ ನೀರು ಹರಿಸುವ ಕುರಿತು ಆದೇಶ ಹೊರಡಿಸುವಂತೆ ಸೂಚಿಸಬೇಕಿದೆ. ಕೇಂದ್ರಕ್ಕೆ ನಿಜವಾದ ಜವಾಬ್ದಾರಿ ಇದ್ದರೆ, ರೈತರ ಬಗ್ಗೆ ಬದ್ಧತೆ ಇದ್ದರೆ ಆ ಕೆಲಸ ಮಾಡಬೇಕು. ಗೋವಾ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಾಕ್ಷಣ ನೀರು ಸಿಗುತ್ತದೆ ಎಂದು ಹೇಳಿದರೆ ಅದಕ್ಕಿಂತ ಮೂರ್ಖತನ ಇನ್ನೊಂದಿಲ್ಲ ಎಂದು ಎಚ್‍ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಅಲ್ಲಿಗೆ ಬಿಜೆಪಿ ಪರಿವರ್ತನಾ ಯಾತ್ರೆಯ ರ್ಯಾಲಿಯಲ್ಲಿ ರಾಜ್ಯದ ಜನತೆಯ ಮಹದಾಯಿ ಮಹದಾಸೆ ಈಡೇರಬಹುದೆನ್ನುವ ನಿರೀಕ್ಷೆ ಹುಸಿಯಾಗಿದೆ. ಆದರೆ, ಜಟ್ಟಿ ಜಾರಿದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಮುಂಬರುವ ಚುನಾವಣೆಯಲ್ಲಿ ಗೆದ್ದು ತಾವು ಮುಖ್ಯಮಂತ್ರಿಯಾದರೆ, ಈ ಭಾಗದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಒಂದು ಲಕ್ಷ ಕೋಟಿ ರೂಪಾಯಿ ಒದಗಿಸುತ್ತೇನೆ. ಇದನ್ನು ರಕ್ತದಲ್ಲಿ ಬರೆದುಕೊಡಲು ಸಿದ್ಧ ಎಂದು ಬಡಬಡಾಯಿಸಿದ್ದಾರೆ. ಆಸೆ ತೋರಿಸಿ ಸಮಾಧಾನಪಡಿಸುವ ಯಡಿಯೂರಪ್ಪನವರ ರಕ್ತದ ಕಥೆಯನ್ನು ಒಪ್ಪದ ರೈತರು ಹುಬ್ಬಳ್ಳಿ, ಧಾರವಾಡ ಜಿಲ್ಲೆಯ ವಿವಿಧೆಡೆ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ನವಲಗುಂದ, ನರಗುಂದದಲ್ಲಿ ಪ್ರತಿಭಟನೆ ವಿಕೋಪಕ್ಕೆ ಹೋಗಿದೆ. ತಣ್ಣಗಿದ್ದ ರೈತರನ್ನು, ಬಿಜೆಪಿ ವಿನಾಕಾರಣ ಕೆರಳಿಸಿದಂತಾಗಿದೆ. ಹೋರಾಟ ನಿಲ್ಲುವ ಯಾವುದೇ ಲಕ್ಷಣಗಳಿಲ್ಲ. ನೀರು ಬಿಡಿಸಲು ಹೋಗಿ ನೀರು ಕುಡಿದಂತಾಗಿದೆ ಬಿಜೆಪಿ ನಾಯಕರ ಪರಿಸ್ಥಿತಿ. ಕಾಂಗ್ರೆಸ್‍ಗೆ ಪ್ರಯತ್ನವಿಲ್ಲದೇ ಬಿಜೆಪಿಯನ್ನು ಟೀಕಿಸಲು ಪ್ರಬಲ ಅಸ್ತ್ರ ಸಿಕ್ಕಂತಾಗಿದೆ.
ಕರ್ನಾಟಕದಲ್ಲಿ ಕಳಸಾ ಬಂಡೂರಿ ಯೋಜನೆ ಕಾರ್ಯರೂಪಕ್ಕೆ ಬರಬೇಕು, ಉತ್ತರ ಕರ್ನಾಟಕದ ನೀರಿನ ಹಾಹಾಕಾರ ನೀಗಬೇಕೆಂಬ ಅವಶ್ಯ ಉದ್ದೇಶಗಳಿವೆ. ಆದರೆ ಗೋವಾ ರಾಜ್ಯಕ್ಕೆ ಏನೂ ಲುಕ್ಸಾನು ಇಲ್ಲವಾಗಿದ್ದರೇ ನ್ಯಾಯಾಧಿಕರಣ ಕರ್ನಾಟಕಕ್ಕೆ ನೀರಿನ ದ್ರೋಹ ಮಾಡುತ್ತಿರಲಿಲ್ಲ. ಕಾವೇರಿ ವಿಚಾರದಲ್ಲಿ ಜಯಲಲಲಿತಾ ಖ್ಯಾತೆ ತೆಗೆಯುವುದರಲ್ಲಿ ನಿಜಕ್ಕೂ ಮೋಸವಿದೆ. ಆದರೆ ಕಳಸಾ ಬಂಡೂರಿ ವಿಚಾರದಲ್ಲಿ ಗೋವಾ ತಗಾದೆಗೂ ಅರ್ಥವಿದೆ. ನಾಳೆಯ ಬಗ್ಗೆ ಚಿಂತಿಸದೇ ಇವತ್ತು ಅವನತಿಯಾಗುವುದು ಬೇಡ ಎಂದು ಗೋವಾ ನಿರ್ಧರಿಸಿದರೇ ಮಾತ್ರ ಕರ್ನಾಟಕಕ್ಕೆ ಕಳಸಾ ಬಂಡೂರಿ ಪ್ರಯೋಜನ ಸಿಗಲು ಸಾಧ್ಯ. ಅದರ ವಿರೋದಕ್ಕೂ, ನ್ಯಾಯಧಿಕರಣದ ತೀರ್ಪಿನಲ್ಲಿರುವ ಅಂಶಗಳಿಗೂ ಸಾಮ್ಯತೆಯಿದೆ. ಹಾಗಂತ ಕರ್ನಾಟಕಕ್ಕೂ ನೀರು ಕೇಳುವ ಬಲವಾದ ಅಂಶಗಳಿಲ್ಲವೆಂದೇನಲ್ಲ.
ಮಲಪ್ರಭಾ ಕಣಿವೆಯಲ್ಲಿ ಉಂಟಾಗಿರುವ ನೀರಿನ ಕೊರತೆಯನ್ನು ಮಹದಾಯಿ ಮೂಲಕ ನೀಗಿಸಲು ಕರ್ನಾಟಕ ನಡೆಸಿದ ಕಾನೂನು ಹೋರಾಟಕ್ಕೆ ತ್ರಿಸದಸ್ಯ ನ್ಯಾಯಾಧಿಕರಣದಲ್ಲಿ ಸೋಲಾಗಿದೆ. ಕರ್ನಾಟಕದ ಅರ್ಜಿಯನ್ನು ನ್ಯಾಯಾಧಿಕರಣ ತಿರಸ್ಕರಿಸಿದೆ. ಮಹದಾಯಿ ನದಿಯಿಂದ ಏಳು ಟಿಎಂಸಿ ನೀರನ್ನು ಏತ ನೀರಾವರಿ ಮೂಲಕ ಮಲಪ್ರಭಾಕ್ಕೆ ಹರಿಸಬೇಕೆಂಬ ಕರ್ನಾಟಕದ ಮಧ್ಯಂತರ ಅರ್ಜಿಯನ್ನು ನ್ಯಾ.ಜೆ.ಎಂ. ಪಾಂಚಾಲ್ ನೇತೃತ್ವದ ತ್ರಿಸದಸ್ಯ ನ್ಯಾಯಾಧಿಕರಣ ವಜಾಗೊಳಿಸಿತ್ತು.
ತ್ರಿಸದಸ್ಯ ನ್ಯಾಯಾಧಿಕರಣ ಕಳಸಾ ಬಂಡೂರಿ ಯೋಜನೆಯನ್ನು ಶತಾಯಗತಾಯ ಅನುಷ್ಠಾನಕ್ಕೆ ತರಲಾಗುವುದಿಲ್ಲ ಎಂಬುದಕ್ಕೆ ಏಳು ಪ್ರಮುಖಾಂಶಗಳನ್ನು ತೀರ್ಪಿನಲ್ಲಿ ಉಲ್ಲೇಖಿಸಿವೆ. ನ್ಯಾಯಾಧಿಕರಣದ ಪ್ರಕಾರ ಕರ್ನಾಟಕಕ್ಕೆ ಕಳಸಾ ಬಂಡೂರಿಯ ನೀರು ಒದಗಿಸಲು ಸಾಧ್ಯವಿಲ್ಲ. ಆ ಯೋಜನೆಯೇ ಅವೈಜ್ಞಾನಿಕವೆಂದಿದೆ. ಇತ್ತ ಕರ್ನಾಟಕಕ್ಕೆ ಸುಪ್ರಿಂ ಕೋರ್ಟ್ ಕದ ತಟ್ಟಿದರೂ ಅಲ್ಲೂ ಕರ್ನಾಟಕ ಪರ ತೀರ್ಪು ಬಂದಿಲ್ಲ. ಮೇಲ್ಮನವಿ ಸಲ್ಲಿಸಿದ್ದರೂ ತೀರ್ಪು ವರವಾಗುವ ಭರವಸೆಯಿಲ್ಲ. ಈ ಹಿಂದೆ ಕೋರ್ಟ್ ಕುಡಿಯುವ ನೀರಿನ ವಿಚಾರದಲ್ಲಿ ಎರಡು ರಾಜ್ಯಗಳು ಕುಂತು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದಿರುವುದಷ್ಟೇ ಕರ್ನಾಟಕದ ಅಂತಿಮ ನಿರೀಕ್ಷೆ. ಈ ಹಿಂದೆ ಅಂತಾರಾಜ್ಯ ನೀರಿನ ಸಮಸ್ಯೆ ಭುಗಿಲೆದ್ದಾಗ ಅಂದಿನ ಪ್ರಧಾನಿ ಇಂದಿರಾ ಗಾಂದಿ ಮಧ್ಯಪ್ರವೇಶಿಸಿ ವಿವಾದ ಬಗೆಹರಿಸಿದ್ದರು. ಆ ಸಾಧ್ಯತೆ ಮೋದಿಗಿದೆಯಾದರೂ ಎರಡು ರಾಜ್ಯಗಳ ನಡುವೆ ಅವರು ಮಧ್ಯಪ್ರವೇಶಿಸುವ ಲಕ್ಷಣಗಳೇ ಇಲ್ಲ.
ಇನ್ನು ಕರ್ನಾಟಕಕ್ಕೆ ನ್ಯಾಯಾಧಿಕರಣ ಅನ್ಯಾಯ ಮಾಡಿದೆ ಎಂದು ಹಲುಬುತ್ತಿರುವವರಿಗೆ ಇದೇ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ರಾಜಕೀಯ ಅಜೆಂಡಾಗಳು ಅರ್ಥವಾಗಬೇಕಿದೆ. ಇತ್ತ ರಾಜ್ಯದ ಸಮಸ್ಯೆಗಳನ್ನು ವೈದ್ಯ ನಾರಿಮನ್ ವಾದ ಮಾಡಿದರೇ, ಅತ್ತ ಗೋವಾದ ಪರವಾಗಿ ಬ್ಯಾಟಿಂಗ್‍ಗೆ ಇಳಿದಿರುವುದು ಈ ಹಿಂದೆ ಅಡ್ವೋಕೇಟ್ ಜನರಲ್ ಆಗಿದ್ದ ಆತ್ಮರಾಮ್ ನಾಡಕರ್ಣಿ. ಅವರೀಗ ಭಾರತ ಅಡೀಷನಲ್ ಸಾಲಿಸಿಟರ್ ಜನರಲ್ ಆಗಿದ್ದಾರೆ. ಸೆಂಟ್ರಲ್ ಕ್ಯಾಬಿನೆಟ್ ಕಮಿಟಿ ಇವರನ್ನು ಸಾಲಿಸಿಟರ್ ಜನರಲ್ ಆಗಿ ನೇಮಿಸಿದೆ. ಇವರ ಕೆಲಸ ಲೀಗಲ್ ವಿಚಾರಗಳನ್ನು ಕೇಂದ್ರ ಸರ್ಕಾರಕ್ಕೆ ಅಡ್ವೈಸ್ ಮಾಡುವುದಾಗಿದೆ. ಕೇಂದ್ರ ಸರ್ಕಾರಕ್ಕೆ ಕಾನೂನು ಪಾಠ ಹೇಳಿಕೊಡುವ ಆತ್ಮರಾಂ ನಾಡಕರ್ಣೀ, ಗೋವಾ ಪರವಾಗಿ ಮಹದಾಯಿ ವಿವಾದದಲ್ಲಿ ವಾದ ಮಂಡಿಸುತ್ತಾರೆಂದ್ರೇ, ನಮ್ಮ ರಾಜ್ಯಕ್ಕೆ ನ್ಯಾಯ ಸಿಗಲು ಸಾಧ್ಯಾನಾ..!? ಮೋದಿ ರಾಜ್ಯದ ಪರವಾಗಿ ನಿಂತು ಸಮಸ್ಯೆ ಬಗೆಹರಿಸುತ್ತಾರೆ ಎಂದು ನಿರೀಕ್ಷಿಸುವುದು ತಮಾಷೆ ಎನಿಸುವುದಿಲ್ಲವೇ..!?
ಇನ್ನು ಈ ಹಿಂದೆ ತೀರ್ಪು ಕೊಟ್ಟಿದ್ದ ತ್ರೀಸದಸ್ಯ ನ್ಯಾಯಾಧಿಕರಣ ತನ್ನ ತೀರ್ಪಿನಲ್ಲಿ ಪ್ರಮುಖ ಏಳು ಅಂಶಗಳನ್ನು ಉಲ್ಲೇಖಿಸಿತ್ತು. ಬೃಹತ್ ಪ್ರಮಾಣದ ಶಾಶ್ವತ ಕಾಮಗಾರಿಗಳು ಮತ್ತು ನದಿಗೆ ಅಡ್ಡವಾಗಿ ಅಣೆಕಟ್ಟನ್ನು ನಿರ್ಮಾಣ ಮಾಡದೆ ನದಿಯಿಂದ 7 ಟಿಎಂಸಿ ನೀರನ್ನು ತೆಗೆಯಲು ಸಾಧ್ಯವಿಲ್ಲ. ಅಣೆಕಟ್ಟುಗಳನ್ನು ತಾತ್ಕಾಲಿಕ ಕಾಮಗಾರಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅಲ್ಲದೆ, ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣ ಮಾಡಿದರೆ ಅಲ್ಲಿ ಸಹಜವಾಗಿಯೇ ನೀರು ಸಂಗ್ರಹಗೊಳ್ಳುತ್ತದೆ. ಮಹದಾಯಿ ಮತ್ತು ಮಲಪ್ರಭಾ ನದಿಗಳ ನಡುವಿನ ಅಂತರ ಹೆಚ್ಚಿರುವುದರಿಂದ, ನೀರನ್ನು ಒಂದೆಡೆಯಿಂದ ಮತ್ತೊಂದೆಡೆ ತಿರುಗಿಸಲು ಶಾಶ್ವತ ಕಾಮಗಾರಿ ಅನಿವಾರ್ಯ. ಹೀಗಾಗಿ ಶಾಶ್ವತ ಕಾಮಗಾರಿ ಬೇಕಾಗಿಲ್ಲ ಎಂಬ ಕರ್ನಾಟಕದ ವಾದ ಒಪ್ಪುವುದು ಕಷ್ಟ ಎನ್ನುವುದು ನ್ಯಾಯಾಧಿಕರಣದ ತೀರ್ಪಿನ ಮೊದಲ ಅಂಶ.
1974ರ ಪರಿಸರ ಮಾಲಿನ್ಯ ತಡೆ ಮತ್ತು ನಿಯಂತ್ರಣ ಅಂದರೇ ದ ವಾಟರ್ ಆಕ್ಟ್ 1974 ಹಾಗೂ 1986ರ ಪರಿಸರ ರಕ್ಷಣಾ ಕಾಯ್ದೆ, ವನ್ಯಜೀವಿ ಸಂರಕ್ಷಣೆ ಮತ್ತು ಜೀವ ವೈವಿಧ್ಯಗಳ ರಕ್ಷಣಾ ಕಾಯ್ದೆಗಳ ಪ್ರಕಾರ, ಇಂತಹ ಯೋಜನೆಗಳಿಗೆ ಕೇಂದ್ರ ಸರ್ಕಾರ ಅಥವಾ ಯೋಜನಾ ಆಯೋಗ ಸೇರಿದಂತೆ ಹಸಿರು ನ್ಯಾಯಾಧಿಕರಣದ ಅನುಮತಿ ಬೇಕು. ಆದರೆ ಕರ್ನಾಟಕ ಇಂಥ ಯಾವುದೇ ಅನುಮತಿಗಳನ್ನು ಪಡೆದುಕೊಂಡಿಲ್ಲ. ಇದು ಎರಡನೇ ಅಂಶ.
ಹೆಚ್ಚುವರಿ ನೀರು ನಿರರ್ಥಕವಾಗಿ ಸಮುದ್ರ ಸೇರುತ್ತಿದೆ ಎಂಬ ಕರ್ನಾಟದ ವಾದವನ್ನು ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ವೈಜ್ಞಾನಿಕವಾಗಿ ಸಮುದ್ರದ ನೀರು ಕ್ರಮೇಣವಾಗಿ ಆವಿಯಾಗುತ್ತಲೇ ಇರುತ್ತದೆ. ಗಾಳಿಯಲ್ಲಿನ ತೇವಾಂಶದಿಂದಾಗಿ ಮೋಡಗಳು ಉತ್ಪತ್ತಿಯಾಗಿ ನಂತರ ಮಳೆ ಬರುತ್ತದೆ. ಭೂಮಿ, ನದಿ ಮತ್ತು ಸಮುದ್ರದ ನಡುವಿನ ನೀರಿನ ಸಂಚಾರಕ್ಕೆ ಜಲಚಕ್ರ ಎನ್ನುತ್ತೇವೆ. ಈ ನೀರಿನ ಸಂಚಾರದಿಂದಲೇ ಭೂಮಿಯಲ್ಲಿರುವ ಎಲ್ಲಾ ಜೀವ ಸಂಕುಲಗಳಿಗೆ ಶುದ್ಧ ನೀರು ಸಿಗುತ್ತಿದೆ. ಕೆಲವೇ ಕೆಲವು ನದಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ನದಿಗಳ ನೀರು ಕೊನೆಗೆ ಸಮುದ್ರವನ್ನು ಸೇರುತ್ತವೆ. ಸಮುದ್ರಕ್ಕೆ ಸೇರುವ ಮುನ್ನ ಕಣಿವೆ ರಾಜ್ಯಗಳು ತಮ್ಮ ಅಗತ್ಯಕ್ಕೆ ನೀರನ್ನು ಬಳಸಿಕೊಳ್ಳುವುದು ಸಹಜ. ಅದರೆ ಕರ್ನಾಟಕ ಮಂಡಿಸಿದಂತೆ 7 ಏಳು ಟಿಎಂಸಿ ಏತ ನೀರಾವರಿಗೆ ಸಮ್ಮತಿ ನೀಡಿದಲ್ಲಿ ಮಹದಾಯಿ ಕಣಿವೆ ವ್ಯಾಪ್ತಿಯ ಪರಿಸರದ ಮೇಲೆ ಅಗಾಧ ಪರಿಣಾಮ ಬೀರಲಿದೆ ಮತ್ತು ನೈಸರ್ಗಿಕ ಅಸಮತೋಲನಕ್ಕೆ ನಾವೇ ಅವಕಾಶ ನೀಡಿದಂತಾಗುತ್ತದೆ. ಇದು ತೀರ್ಪಿ ಮೂರನೇ ಅಂಶ.
ಆದರೆ ಕರ್ನಾಟಕ ನೀರನ್ನು ತೆಗೆಯಲು ಗುರುತಿಸಿರುವ ಮಹದಾಯಿಯ ಉದ್ದೇಶಿತ ಮೂರು ಕಣಿವೆ ಪ್ರದೇಶಗಳಲ್ಲಿ ಹೆಚ್ಚುವರಿ ನೀರಿನ ಲಭ್ಯತೆ ಇದೆ ಎಂಬುದು ಸಾಬೀತಾಗಿಲ್ಲ. ಒಂದು ವೇಳೆ ನೀರು ಹೆಚ್ಚಿದೆ ಎಂದಾಗಿದ್ದರೆ ನೀರು ಸಮುದ್ರಕ್ಕೆ ಸೇರಿ ವ್ಯರ್ಥವಾಗುತ್ತಿದೆ ಎಂಬ ವಾದಕ್ಕೆ ಪ್ರಸ್ತುತತೆ ಇರುತ್ತಿತ್ತು. ಆದರೆ ಹೆಚ್ಚುವರಿ ನೀರಿಲ್ಲ ಎಂದ ಮೇಲೆ ಸಮುದ್ರಕ್ಕೆ ಹರಿವ ನೀರನ್ನು ತಡೆಯುವುದು ಹೇಗೆ?. ಏಳು ಟಿಎಂಸಿ ನೀರು ಎತ್ತುವುದರಿಂದ ನೀರು ಎತ್ತಲು ಗುರುತಿಸಲಾಗಿರುವ ಮಹದಾಯಿ ಕಣಿವೆಯ ಮೂರು ಪ್ರದೇಶಗಳ ಕೆಳಭಾಗದ ಮೇಲೆ ಅದು ಯಾವ ರೀತಿಯ ಪರಿಣಾಮಗಳನ್ನು ಬೀರಲಿದೆ ಎಂಬುದನ್ನು ಕರ್ನಾಟಕ ಈ ನ್ಯಾಯಾಧಿಕರಣಕ್ಕೆ ವಿವರಿಸಿಲ್ಲ. ಹೀಗಾಗಿ ತೀರ್ಪಿನ ಮೂರನೇ ಅಂಶ ಪ್ರಶ್ನಾರ್ಹವಾಗಿದೆ. ಇನ್ನು ಮಹದಾಯಿ ನೀರು ವ್ಯರ್ಥವಾಗಿ ನದಿ ಸೇರುತ್ತಿದೆ ಎಂದು ಒತ್ತಿ ಹೇಳುತ್ತಿರುವ ಕರ್ನಾಟಕ ಮೊದಲು `ನದಿಗಳ ಶಾರೀರಿಕ ವಿಜ್ಞಾನ’ವನ್ನು ಅರಿತುಕೊಳ್ಳಬೇಕೆಂಬುದು ತೀರ್ಪಿನ ನಾಲ್ಕನೇ ಅಂಶವಾಗಿದೆ.
ನ್ಯಾಯಾಧಿಕರಣ ತೀರ್ಪಿನ ಎಳು ಅಂಶಗಳ ಪೈಕಿ ನಾಲ್ಕು ಅಂಶಗಳಲ್ಲಿ ಕರ್ನಾಟಕದ ಶಾಶ್ವತ ಕಾಮಗಾರಿ ಬೇಕಿಲ್ಲವೆಂಬ ವಾದವೇ ಅರ್ಥಹೀನ, ಹಸಿರು ನ್ಯಾಯಾಧಿಕರಣದ ಅನುಮತಿ ಪಡೆಯದೇ ಯೋಜನೆಯ ಉದ್ದೇಶ ಹೊಂದಿರುವ ರಿವಾಜುಗಳು, ಜಲಚಕ್ರದ ಅರಿವಿರದ ದಡ್ಡತನ, ನದಿಗಳ ಶಾರೀರಿಕ ವಿಜ್ಞಾನದ ಬಗ್ಗೆ ಅರಿವಿಲ್ಲದ ನಡೆಯನ್ನು ಎತ್ತಿಹಿಡಿದಿದೆ. ಇದಕ್ಕೆ ವಿರುದ್ಧವಾದ ಅಸ್ತ್ರ ಪ್ರಯೋಗಿಸಲು ಇಲ್ಲಿ ವಕೀಲ ನಾರಿಮನ್ ವಿಫಲರಾದರು ಎನ್ನುವುದಕ್ಕಿಂತ ಆತ್ಮರಾಂ ನಾಡಕರ್ಣಿಯ ಇಷಾರೆಗೆ ಎಲ್ಲವೂ ನಡೆದಿದೆ ಎನ್ನಬಹುದೇ..?
2015ರಲ್ಲಿ ಸಲ್ಲಿಸಲಾಗಿದ್ದ ಮಧ್ಯಂತರ ಅರ್ಜಿಯಲ್ಲಿ ಮಲಪ್ರಭಾ ಕಣಿವೆ ಜನರ ಕುಡಿಯುವ ಮತ್ತು ನೀರಾವರಿ ಉದ್ದೇಶಗಳಿಗೆ 7 ಟಿಎಂಸಿ ನೀರನ್ನು ಬಳಸಿಕೊಳ್ಳಲಾಗುವುದು ಎಂದು ದಾಖಲಿಸಲಾಗಿತ್ತು. ಆದರೆ, ಆನಂತರ ಸಲ್ಲಿಸಲಾದ ಪರಿಷ್ಕೃತ ಅರ್ಜಿಯಲ್ಲಿ ಈ ಪ್ರಮುಖ ಅಂಶಗಳನ್ನು ದಾಖಲಿಸದಿರುವುದು ಏಕೆ ಎಂಬುದು ತಿಳಿಯುತ್ತಿಲ್ಲ. 7 ಟಿಎಂಸಿ ನೀರನ್ನು ಎತ್ತುವುದು ಕಲ್ಪಿಸಿದಷ್ಟು ಸುಲಭವಲ್ಲ. ಇದಕ್ಕೆ ಬೃಹತ್ ಗಾತ್ರದ ಕಾಮಗಾರಿ, ಅತಿ ಭಾರದ ಪಂಪ್‍ಸೆಟ್‍ಗಳು, ಭಾರಿ ಸುತ್ತಳತೆಯ ಮತ್ತು ಉದ್ದದ ಪೈಪ್‍ಲೈನ್‍ಗಳು ಬೇಕು. ಆದರೆ ಏತ ನೀರಾವರಿ ಯೋಜನೆ ಬಗ್ಗೆ ಹೇಳುವ ಕರ್ನಾಟಕ ನೀರಾವರಿ ನಿಗಮದ ವರದಿಯಲ್ಲಿ ಕಾಮಗಾರಿಗಳ ಬಗ್ಗೆ ಯಾವುದೇ ನಿಖರ ಮಾಹಿತಿ ನೀಡಿಲ್ಲ ಎಂದು ತನ್ನ ಐದನೇ ಅಂಶದಲ್ಲಿ ಹೇಳಿತ್ತು ನ್ಯಾಯಾಧಿಕರಣ.
ತನ್ನ ತೀರ್ಪಿನ ಆರನೇ ಅಂಶದಲ್ಲಿ, ಕೃಷ್ಣಾ ಜಲವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಮತ್ತು ಕಣಿವೆ ರಾಜ್ಯಗಳ ಒಪ್ಪಿಗೆ ಇಲ್ಲದೆ ರಾಜ್ಯಗಳು ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ. ಹೀಗಾಗಿ, ಅಗತ್ಯ ಪರಿಸರ ಸಮ್ಮತಿ, ಯೋಜನಾ ಆಯೋಗದ ಅನುಮತಿ ಸೇರಿದಂತೆ ವಿವಿಧ ಕಾಯ್ದೆಗಳಲ್ಲಿ ಹೇಳಲಾಗಿರುವ ಅಂಶಗಳನ್ನು ಪಾಲಿಸುವ ಮುನ್ನವೇ ನ್ಯಾಯಾಧಿಕರಣ 7 ಟಿಎಂಸಿ ನೀರನ್ನು ಎತ್ತಲು ಕರ್ನಾಟಕಕ್ಕೆ ಅವಕಾಶ ನೀಡುವುದು ಅಸಾಧ್ಯವೆಂದಿದೆ.
ನಿರ್ದಿಷ್ಟ ತಿಂಗಳಲ್ಲಿ ನೀರಿನ ಕೊರತೆ ಉಂಟಾದರಷ್ಟೇ ಮಹದಾಯಿಯಿಂದ ನೀರನ್ನು ಎತ್ತಲಾಗುವುದು ಎಂದು ಕರ್ನಾಟಕ ಹೇಳಿದೆ. ಆದರೆ ನೀರಿನ ಕೊರತೆ, ಒಳ ಹರಿವಿನ ಪ್ರಮಾಣದ ಕುರಿತ ಮಾಹಿತಿ ತಿಂಗಳ ಕೊನೆಯಲ್ಲಿ ಗೊತ್ತಾಗುವುದೇ ವಿನಃ ಆರಂಭದಲ್ಲಲ್ಲ. ಹೀಗಾಗಿ ಕರ್ನಾಟಕದ ಪ್ರಸ್ತಾವಿತ ಯೋಜನೆ ಅನುಷ್ಠಾನ ಯೋಗ್ಯವಾಗಿದೆ ಎಂದು ನಮಗನಿಸುತ್ತಿಲ್ಲ. ಕರ್ನಾಟಕ ಪರಿಷ್ಕೃತ ಅರ್ಜಿಯಲ್ಲಿ ಮಂಡಿಸಲಾದ ಕೆಲ ಅಂಶಗಳು ಗಂಭೀರವಾಗಿದ್ದರೂ, ಜಲವಿವಾದ ಪ್ರಕರಣ ವಿಚಾರಣೆಯ ಮಧ್ಯಭಾಗದಲ್ಲಿ ಕರ್ನಾಟಕದ ಬೇಡಿಕೆಗಳನ್ನು ಪುರಸ್ಕರಿಸುವುದು ನಮಗೆ ಸರಿ ಕಾಣುವುದಿಲ್ಲ. ಕೇವಲ ಒಂದು ರಾಜ್ಯಕ್ಕೆ ಅನುಕೂಲ ಮಾಡಿಕೊಟ್ಟ ಸಂದೇಶ ರವಾನಿಸುವುದು ಸಮರ್ಥನೀಯವೂ ಅಲ್ಲ ಎಂದು ನ್ಯಾಯಾಧಿಕರಣ ತನ್ನ ತೀರ್ಪಿ ಎಳನೇ ಅಂಶದಲ್ಲಿ ಸ್ಪಷ್ಟವಾಗಿ ಹೇಳಿದೆ.
ವಾಸ್ತವ ಹೀಗಿರುವಾಗ ಕರ್ನಾಟಕದಲ್ಲಿ ಅಧಿಕಾರ ಪಡೆಯಲು ಮಹದಾಯಿಯನ್ನು ಅಸ್ತ್ರ ಮಾಡಿಕೊಳ್ಳಲು ಹೊರಟ ಬಿಜೆಪಿ ಚಾಣಾಕ್ಷನಿಗೆ, ಮುಖ್ಯಮಂತ್ರಿ ಅಭ್ಯರ್ಥಿಯ ಕಾನೂನು ಪಾಂಡಿತ್ಯಕ್ಕೆ ಏನ್ ಹೇಳೋಣ…? ನಾಳೆ ಪ್ರಧಾನಿ ಮೋದಿ ಮಧ್ಯಪ್ರವೇಶಿಸಿದರೂ, ಉತ್ತರ ಕರ್ನಾಟಕದ ದಾಹ ನೀಗುವ ಮಾನವೀಯತೆಯ ಅಂಶವನ್ನಷ್ಟೇ ಕೇಂದ್ರಿಕರಿಸಬಹುದು. ಕಳಸಾ ಬಂಡೂರಿ ನಾಲೆ ನಿರ್ಮಾಣಕ್ಕೆ ಗೋವಾ ಒಪ್ಪುವ ಸಾಧ್ಯತೆಯೇ ಇಲ್ಲ.
ಸದ್ಯಕ್ಕೆ ರಾಜ್ಯದಲ್ಲಿ ಮತ್ತೆ ಪ್ರತಿಭಟನೆ ನಡೆಯುತ್ತಿದೆ. ಕಳಸಾ ಬಂಡೂರಿ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ, ಹೋರಾಟಗಳು ಹೊಸತಲ್ಲ. ಆದರೆ ಯಥಾಪ್ರಕಾರ ಗೋವೆಯ ಕೈ ಮೇಲಾಗುತ್ತಿದೆ. ಆತ್ಮರಾಂ ನಾಡಕರ್ಣಿಯಂತವರ ಪ್ರಭಾವದ ಮುಂದೆ ನಮ್ಮ ರೈತರ ಕೂಗು ಕ್ಷೀಣವೆನಿಸಿದೆ. ಮುಂದಿನ ದಿನಗಳಲ್ಲಾದರೂ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಬರುತ್ತಾ..!? ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದ ನೀರಿನ ದಾಹ ತಣಿಯುತ್ತಾ..? ಕಾದುನೋಡಬೇಕಿದೆ.