ಕೋತಿಯೊಂದನ್ನು ಮರಕ್ಕೆ ನೇತುಹಾಕಿ ಅಮಾನುಷವಾಗಿ ಹೊಡೆದು ಕೊಲೆಗೈದಿದ್ದ ಆರೋಪಿಗೆ ನ್ಯಾಯಾಲಯ ಎರಡನೇ ಬಾರಿ ಜಾಮೀನು ನೀಡಲು ನಿರಾಕರಿಸಿದೆ.
ಮಂಗನನ್ನು ಕೊಂದ ಮುಂಬೈನ ಪವನ್ ಬಂಗಾರ್ ಆರೋಪಿ. ಸ್ಥಳಿಯ ನ್ಯಾಯಾಲಯ ಈತನ ಜಾಮೀನು ಅರ್ಜಿ ತಿರಸ್ಕರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಡಿಸೆಂಬರ್ 16ರಂದು ರಿಸೋದ್ ತೆಹ್ಸಿಲ್ ನ ಗ್ರಾಮ್‍ಕುರ ಗ್ರಾಮದಲ್ಲಿ ಪವನ್ ಬಂಗಾರ್ (23) ಮತ್ತು ಈತನ ಜೊತೆಯಲ್ಲಿಬ್ಬರು ಅಪ್ರಾಪ್ತರು ಸೇರಿ ಸುಖಾಸುಮ್ಮನೆ ಕೋತಿಯೊಂದನ್ನು ದೊಣ್ಣೆಯಿಂದ ಹೊಡೆದು, ತಲೆಕೆಳಗಾಗಿ ಮರಕ್ಕೆ ನೇತುಹಾಕಿ ಚಿತ್ರಹಿಂಸೆ ನೀಡಿ ಕೊಂದಿದ್ದರು…!
ಅದು ಒದ್ದಾಡಿ ಪ್ರಾಣಬಿಟ್ಟಿತ್ತು. ಸತ್ತಮೇಲೂ ಸುಮ್ಮನಾಗದ ನೀಚಮನಸ್ಥಿತಿಯ ಈ ಆರೋಪಿಗಳು ಚಪ್ಪಲಿಯಿಂದ ಅದಕ್ಕೆ ಒಡೆದಿದ್ದಾರೆ. ನೆಲಕ್ಕೆ ಹಾಕಿ ದೊಣ್ಣೆಯಿಂದ 80 ಬಾರಿ ಥಳಿದಿದ್ದಾರೆ…!
ಬಳಿಕ ಈ ವೀಡಿಯೋವನ್ನು ವಾಟ್ಸಪ್ ನಲ್ಲಿ ಹರಿಬಿಟ್ಟು ವಿಕೃತಿಯ ಪರಮಾವಧಿ ಮೆರೆದಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 9ರಡಿ ದೂರು ದಾಖಲಿಸಿ, ಸ್ಥಳಿಯ ಕೋರ್ಟ್‍ಗೆ ಹಾಜರುಪಡಿಸಿದ್ದರು.
ಈ ಮೊದಲು ಆರೋಪಿಯ ಜಾಮೀನು ಅರ್ಜಿಯನ್ನು ಕೋರ್ಟ್ ನಿರಾಕರಿಸಿತ್ತು. ಮತ್ತೆ ಇಂದು 2ನೇ ಬಾರಿಗೆ ಪುನಃ ಆತನ ಜಾಮೀನು ಅರ್ಜಿ ತಿರಸ್ಕರಿಸಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪ್ರಾಣಿ ಹಿಂಸೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಬಾರಿ ಜಾಮೀನು ನಿರಾಕರಣೆ ಆಗಿರುವುದು ಮತ್ತು 5 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿರೋದು ನಮ್ಮಲ್ಲಿ ಇದೇ ಮೊದಲು.