ಬಿಗ್3 ಖ್ಯಾತಿಯ ಶೆಟ್ರು ಅಂದ್ರೆ ಎಲ್ರಿಗೂ ಇಷ್ಟ…! ಯಾಕ್ ಗೊತ್ತಾ…?

Date:

ಗಂಡೆದೆ ಅಂದ್ರೆ ಇದು, ಪತ್ರಕರ್ತ ಅಂದ್ರೆ ಹಿಂಗಿರಬೇಕು…! ಯಾವನಿಗೂ ಕ್ಯಾರೇ ಎನ್ನದೆ ತರಾಟೆಗೆ ತೆಗೆದುಕೊಳ್ಳುವ ಇಂತವರು ಪ್ರತಿ ಚಾನಲ್ ಗಳಲ್ಲೂ ಇರಬೇಕು ಅಂತ ಮಾತಾಡಿಕೊಳ್ತಾರೆ ‘ಜನ ಅಸಾಮಾನ್ಯರು’…!

ಆದ್ರೆ, ಇವರನ್ನು ನೋಡ್ತಿದ್ದಂತೆ ಭ್ರಷ್ಟರೆದೆಯಲ್ಲಿ ನಡುಕ ಶುರುವಾಗಿ ಬಿಡುತ್ತೆ…! ಇವರೇ ಕನ್ನಡ ಪತ್ರಿಕೋದ್ಯಮ ಕಂಡಿರುವ ಅಪರೂಪದ ವ್ಯಕ್ತಿ, ಪತ್ರಕರ್ತ, ಕಂಚಿನ ಕಂಠದ ನಿರೂಪಕ ಜಯಪ್ರಕಾಶ್ ಶೆಟ್ಟಿ.

ಟಿವಿ ಪರದೆಯಲ್ಲಿ ಅಥವಾ ದೂರದಿಂದ ಇವರನ್ನು ನೋಡಿದವರಿಗೆ ಇವರೇನು ಅಂತ ಅರ್ಥವಾಗೋದು ಕಷ್ಟ. ಒಂದೇ ಒಂದು ಸಲ ಭೇಟಿಯಾದವರು ಸಿಕ್ಕಾಪಟ್ಟೆ ಗಾಂಚಲಿ ಇದೆ ಅಂತ ಅನ್ಕೊಂಡಿದ್ದಾರೆ, ಅನ್ಕೊಂಡ್ರು ಅಚ್ಚರಿಯಲ್ಲ…! ಆದ್ರೆ, ಇವರೇನು ಅಂತ ಅರ್ಥವಾಗೋದು ಜೊತೆಗಿದ್ದವರಿಗೆ ಮಾತ್ರ…!


ಜಯಪ್ರಕಾಶ್ ಶೆಟ್ಟಿ ಅವರು ತುಂಬಾ ಫ್ರೆಂಡ್ಲಿ ನೇಚರ್ ಇರೋ ವ್ಯಕ್ತಿ. ಬೇರೆಯವರಿಗೆ ಸಹಾಯ ಮಾಡೋದ್ರಲ್ಲಿ ಖುಷಿ ಪಡೋ ಸಹೃದಯಿ. ಹೊಸಬರಿಗೆ ಪ್ರೋತ್ಸಾಹ ನೀಡಿ ಬೆಳೆಸುವ ನಿಸ್ವಾರ್ಥಿ. ಯುವ ಪತ್ರಕರ್ತರ ಯಶಸ್ಸಿಗೆ ಬೆನ್ನೆಲುಬು…! ಈ ಶೆಟ್ರು ಅಂದ್ರೆ ಇಲ್ರಿಗೂ ಇಷ್ಟ…


ರಾಜಕೀಯ, ಸಿನಿಮಾ, ಪ್ರಚಲಿತ ವಿದ್ಯಮಾನಗಳು, ಜ್ಯೋತಿಷ್ಯ ಸೇರಿದಂತೆ ಯಾವುದೇ ಕ್ಷೇತ್ರವನ್ನು ತೆಗೆದುಕೊಳ್ಳಿ… ಅವುಗಳ ಬಗ್ಗೆ ಎಷ್ಟು ಹೊತ್ತು ಬೇಕಾದ್ರು ನಿರರ್ಗಳವಾಗಿ ಮಾತಾಡಬಲ್ಲ ತಾಕತ್ತು ಜೆಪಿ ಅವರದ್ದು.

ಇವರು ಮಾತಾಡೋ ಶೈಲಿ, ನಡೆಸಿಕೊಡೊ ಸಂವಾದ, ಚರ್ಚೆ, ಸಂದರ್ಶನಗಳನ್ನು ನೋಡಿದ್ರೆ ವೃತ್ತಿ ಬದುಕಿನ ಆರಂಭದ ದಿನಗಳಿಂದಲೂ ಪತ್ರಿಕೋದ್ಯಮದಲ್ಲಿದ್ದವರು ಎಂದು ಅನಿಸುತ್ತೆ…! ಆದ್ರೆ, ಜಯಪ್ರಕಾಶ್ ಶೆಟ್ಟಿ ಅವರು ಮಾಧ್ಯಮಕ್ಕೆ ಬಂದಿದ್ದು ‘ಮಧ್ಯಂತರ’ದಲ್ಲಿ..!


ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳ ಜೆಪಿ ಅವರ ಹುಟ್ಟೂರು. ತಂದೆ ಶ್ರೀನಿವಾಸ ಶೆಟ್ಟಿ ಮೂಲತಃ ಮಂಗಳೂರಿನವರು. ತಾಯಿ, ದೇವಕಿ ಶೆಟ್ಟಿ ವಿಠ್ಠಲದವರು. 12 ಜನ ಮಕ್ಕಳಲ್ಲಿ ಜಯಪ್ರಕಾಶ್ ಶೆಟ್ಟಿ ಅವ್ರು ಕೊನೆಯವರು. (ವಿಠ್ಠಲ್, ಪುಷ್ಪಲತಾ, ಲಕ್ಷಣಿ, ಚಂದ್ರಪ್ರಭ, ಚಂದ್ರಶೇಖರ್, ರಾಜರಾಮ್, ಸುಜಾತ, ಶಶಿ, ವೀಣಾ, ಮಣಿ, ವಿನುತ, ಜಯಪ್ರಕಾಶ್ ಶೆಟ್ಟಿ)


ಮುಳಿಂಜ, ಉಪ್ಪಾಳ, ಬೆಂಗಳೂರು, ಮಂಗಳೂರಲ್ಲಿ ಶೆಟ್ರು ವ್ಯಾಸಂಗ ಮಾಡ್ತಾರೆ. ಎಸ್‍ಎಸ್‍ಎಲ್‍ಸಿ ವರೆಗೂ ಫಸ್ಟ್ ಕ್ಲಾಸ್ ಸ್ಟೂಡೆಂಟ್ ಆಗಿದ್ದ ಇವರು ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆಮಾಡಿಕೊಂಡ್ರು. ಇಂಗ್ಲಿಷ್ ಕಷ್ಟವಾಯ್ತು. ಹಾಗಾಗಿ ಪ್ರಥಮ ಪಿಯುಸಿ ಫೇಲ್ ಆಗಿ ಒಂದ್ಸಲ ಡಿಸ್ಕಂಟಿನ್ಯೂ ಕೂಡ ಆಗಿತ್ತು.


ಶಾಲಾ-ಕಾಲೇಜು ದಿನಗಳಲ್ಲಿಯೇ ರಂಗಭೂಮಿ ಬಗ್ಗೆ ಇವರಿಗೆ ಆಸಕ್ತಿ. ‘ರಚನಾ ಉಪ್ಪಳ ಸಾಂಸ್ಕ್ರಿತಿಕ ಕಲಾಸಂಸ್ಥೆ’ ಮೂಲಕ ರಂಗಭೂಮಿ ಪ್ರವೇಶಿಸಿದ್ದ ಶೆಟ್ಟರು ಆ ದಿನಗಳಲ್ಲಿಯೇ ಸಾಕಷ್ಟು ಕನ್ನಡ ಮತ್ತು ತುಳು ನಾಟಕಗಳಿಗೆ ಬಣ್ಣ ಹಚ್ಚಿ ಭೇಷ್ ಅನಿಸಿಕೊಂಡಿದ್ದರು. ಜೊತೆಗೆ ಅದ್ಭುತ ಮಿಮಿಕ್ರಿ ಆರ್ಟಿಸ್ಟ್ ಕೂಡ ಹೌದು. ನಿಮ್ಮನ್ನು ನೋಡಿದ ಕ್ಷಣ ಬೇಕಾದ್ರು ನಿಮ್ಮನ್ನು ಅನುಕರಿಸುತ್ತಾರೆ.


ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಮಂಗಳೂರಿನಲ್ಲಿ ಮೆಡಿಕಲ್ ರೆಪ್ ಆಗಿ ಶೆಟ್ಟರ ವೃತ್ತಿ ಜೀವನ ಆರಂಭವಾಯ್ತು. 2 ವರ್ಷಗಳ ಕಾಲ ಕೆಲಸ ಮಾಡಿದ ಇವರಿಗೆ ಇದ್ಯಾಕೋ ಸರಿ ಕಾಣಿಸಲಿಲ್ಲ. ಅಣ್ಣನ ಜೊತೆ ಹೈದರಾಬಾದ್ ಗೆ ಹೋದ್ರು. ಅಲ್ಲಿ ಸಿ ಅಂಡ್ ಎಫ್ ಏಜೆಂಟ್ ಆಗಿ ಕೆಲಸಕ್ಕೆ ಸೇರಿದ್ರು.


ಅಲ್ಲೊಂದು ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಈ-ಟಿವಿಗೆ ನಿರೂಪಕರು ಬೇಕಾಗಿದ್ದಾರೆ ಎಂಬ ಪೋಸ್ಟರ್ ಅಂಟಿಸಿದ್ದರು. ಇದನ್ನು ಗಮನಿಸಿದ ಸಿ ಅಂಡ್ ಎಫ್ ನ ಸೀನಿಯರ್ ಏಜೆಂಟ್ ನಾಗವೇಣಿ ಅವರು, ‘ಶೆಟ್ರೆ ನಿಮಗೆ ಆ್ಯಂಕರಿಂಗ್ ನಲ್ಲಿ ಆಸಕ್ತಿ ಉಂಟಲ್ಲ…? ಒಂದ್ಸಲ ಪ್ರಯತ್ನ ಮಾಡಿ ಎಂದ್ರು’. ಸರಿ, ಅಂತ ಜೆಪಿ ಅವರು ಇಂಟರ್ ವ್ಯೂ ಅಟೆಂಡ್ ಮಾಡಿ 2000ನೇ ಇಸವಿ ಆಗಸ್ಟ್ 2ರಂದು ‘ಈ-ಟಿವಿ’ಯ ನ್ಯೂಸ್ ರೀಡರ್ ಆಗಿ ಮಾಧ್ಯಮ ಕ್ಷೇತ್ರಕ್ಕೆ ಬಂದ್ರು.


ರಂಗ ಚಟುವಟಿಕೆ, ಕಲಾ ಸಂಘದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರಿಂದ ಕನ್ನಡ ಭಾಷೆಯ ಮೇಲೆ ಹಿಡಿತ ಸಿಕ್ಕಿತ್ತು. ಒಂದೆರಡು ವರ್ಷ ಬೆಂಗಳೂರಲ್ಲಿ ವಿದ್ಯಾಭ್ಯಾಸ ಮಾಡಿದ್ದರಿಂದ ಬೆಂಗಳೂರು ಕನ್ನಡ, ಹುಬ್ಬಳ್ಳಿಯಲ್ಲಿ ಒಂದೆರಡು ವರ್ಷ ಇದ್ದಿದ್ದರಿಂದ ಅಲ್ಲಿನ ಕನ್ನಡ ಕೂಡ ಇವರಿಗೆ ಹಿಡಿಸಿತ್ತು. ಹಾಗಾಗಿ ಆರಂಭದಲ್ಲೇ ಮಾಧ್ಯಮಲ್ಲಿ ನ್ಯೂಸ್ ರೀಡರ್ ಆಗಿ ಗೆಲ್ಲಲು ಸಾಧ್ಯವಾಯ್ತು.

ನ್ಯೂಸ್ ಓದೋದು ಅಂದ್ರೆ ಅರ್ಧಗಂಟೆ ಕೆಲಸ. ದಿನಕ್ಕೆ ಏನಿಲ್ಲ ಅಂದ್ರು 200-500 ರೂ ಕೊಡ್ತಾರೆ ಅಂತ ಈ-ಟಿವಿಗೆ ಸೇರಿದ್ದ ಶೆಟ್ರಿಗೆ ಆಮೇಲೆ ಗೊತ್ತಾಯ್ತು ಫುಲ್ ಟೈಮ್ ಇಲ್ಲೇ ಕೆಲ್ಸ ಮಾಡ್ಬೇಕು ಅಂತ. ಸರಿ, ಇನ್ನೇನು ಮಾಡೋಕಾಗುತ್ತೆ ಅಂತ ಮುಂದುವರೆದ್ರು.


2007ರಲ್ಲಿ ‘ಸರ್ಕಾರ್’ ಎಂಬ ಪೊಲಿಟಿಕಲ್ ಸಟಾಯರ್ (ರಾಜಕೀಯ ವಿಡಂಬನೆ) ಕಾರ್ಯಕ್ರಮ ನಡೆಸಿಕೊಡೋ ಬಗ್ಗೆ ಅಂದಿನ ಮುಖ್ಯಸ್ಥರಾಗಿದ್ದ ಜಿ.ಎನ್ ಮೋಹನ್ ಅವರತ್ರ ಚರ್ಚಿಸಿದ್ರು. ಆ ಕಾನ್ಸೆಪ್ಟ್ ಮೆಚ್ಚಿದ ಮೋಹನ್ ಅವರು ಕಾರ್ಯಕ್ರಮ ನಡೆಸುವಂತೆ ಹೇಳಿದ್ರು.

ಇದು ಕನ್ನಡ ದೃಶ್ಯಮಾಧ್ಯಮ ಕ್ಷೇತ್ರದ ಮೊದಲ ಪೊಲಿಟಿಕಲ್ ಸಟಾಯರ್…! ಇದಕ್ಕೆ ಸನ್ನಿವೇಶ ಮತ್ತು ಹಾಡುಗಳನ್ನು ಸೆಲೆಕ್ಟ್ ಮಾಡಿಕೊಡ್ತಿದ್ದುದು ಜೆಪಿ ಅವರೇ. ಇದು ಅಂದು ಮನೆಮಾತಾಗಿತ್ತು. ದೇವೇಗೌಡ್ರು, ಬಂಗಾರಪ್ಪ, ಪಿಜಿಆರ್ ಸಿಂದ್ಯ, ಎಚ್.ಡಿ ಕುಮಾರ ಸ್ವಾಮಿ ಈ ಕಾರ್ಯಕ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದರು…! ರಾಜಕಾರಣಿಗಳನ್ನು ಹೇಗೆ ವ್ಯಂಗ ಮಾಡ್ತಿದ್ದಾರೆ ಅಂತ ವಿಧಾನಸಭೆ ಮತ್ತು ಲೋಕಸಭೆಯಲ್ಲೂ ಇದು ಸದ್ದು ಮಾಡಿತ್ತು…!


ಈ-ಟಿವಿ ನಂತರ 2008ರಲ್ಲಿ ಶಶಿಧರ್ ಭಟ್ ಅವರು ಸುವರ್ಣದಲ್ಲಿ ಕೆಲಸ ಮಾಡಲು ಜೆಪಿ ಅವರಿಗೆ ಅವಕಾಶ ಮಾಡಿಕೊಟ್ರು. 2009ರಲ್ಲಿ ಎಚ್.ಆರ್ ರಂಗನಾಥ್ ಅವರು ಸುವರ್ಣ ಚುಕ್ಕಾಣಿ ಹಿಡಿದಾಗ ಜಯಪ್ರಕಾಶ್ ಅವರನ್ನು ರಾಜಕೀಯ ವರದಿಗಾರರನ್ನಾಗಿ ಮಾಡಿದ್ರು.

1 ತಿಂಗಳ ನಂತರ ಬದಲಾದ ರಾಜಕೀಯ ವಿದ್ಯಮಾನಗಳಿಂದ ದೆಹಲಿಗೆ ಕಳುಹಿಸಿಕೊಟ್ರು. ಅಲ್ಲಿ ಬಿ.ಎಸ್ ಯಡಿಯೂರಪ್ಪ ಅವರನ್ನು ಇಂಟರ್ ವ್ಯೂ ಮಾಡಿ ಅವರನ್ನು ಅಳಿಸಿದ್ದರು…! ಜೆಪಿ ಅವರ ಸಂದರ್ಶನದ ವೇಳೆ ಯುಡಿಯೂರಪ್ಪ ಅವರು ಅತ್ತಿದ್ದನ್ನು ಕ್ಯಾಮೆರಾ ಮನ್ ಹೇಮಂತ್ ಅವರು ಸೊಗಸಾಗಿ ಸೆರೆಹಿಡಿದ್ದರು.


ಈ ಸಂರ್ದಶನ ಪ್ರಸಾರವಾಗುತ್ತಿದ್ದಂತೆ ಸುವರ್ಣ ಟಿಆರ್‍ಪಿ ವಾಯುವೇಗದಲ್ಲಿ ಏರಿತು…! ಮೊಟ್ಟಮೊದಲಬಾರಿಗೆ ಸುವರ್ಣಕ್ಕೆ 100+ ಟಿಆರ್‍ಪಿಯನ್ನು ತಂದುಕೊಟ್ಟ ಸಂದರ್ಶನವಿದು. ದೇಶ ವಿದೇಶದ ಚಾನಲ್‍ಗಳಲ್ಲಿ ಪ್ರಸಾರವಾಗಿದ್ದು ಹಾಗೂ ದೇಶದ ಎಲ್ಲಾ ಪತ್ರಿಕೆಗಳಲ್ಲಿ ಇದು ಪ್ರಕಟವಾಗಿದ್ದು ವಿಶೇಷ…!


ಬಳಿಕ ಪೊಲಿಟಿಕಲ್ ಬ್ಯೂರೋ ಚೀಫ್ ಆಗಿ ಒಂದಿಷ್ಟು ದಿನ ಕೆಲಸ ಮಾಡಿದ ಜೆಪಿ ಅವರು ಸ್ವಲ್ಪ ಬದಲಾವಣೆ ಬೇಕೆಂದು ಸಿನಿಮಾ ಬ್ಯೂರೋ ಕೇಳಿಕೊಂಡ್ರು. ಅಂದಿನ ಪ್ರಧಾನ ಸಂಪಾದಕ ಅನಂತ ಚಿನಿವಾರ್ ಅವರು ಜೆಪಿ ಅವರನ್ನು ಸಿನಿಮಾ ಬ್ಯೂರೋ ಮುಖ್ಯಸ್ಥರನ್ನಾಗಿ ಕೂರಿಸಿದ್ರು. ಅಶೋಕ್, ಸಂದೀಪ್, ಜೆವೂರ್, ಸ್ವಾತಿ ಪತ್ರೆ, ಅಜಯ್ ಅವರನ್ನೊಳಗೊಂಡ ಸಿನಿಮಾ ಟೀಂ ವಿಭಿನ್ನ ಪ್ರಯೋಗಗಳ ಮೂಲಕ ಜನರನ್ನು ಸೆಳೆಯಿತು.


ಸಿನಿಮಾ ಸೆಂಚುರಿ ಮತ್ತು ಬಂಗಾರದ ಚಿತ್ರಗಳು ಎಂಬ ಎರಡೇ ಎರಡು ಕಾರ್ಯಕ್ರಮಗಳಿಂದು ಒಳ್ಳೆಯ ಟಿಆರ್‍ಪಿ ತಂದುಕೊಡುವಲ್ಲಿ ಶೆಟ್ರ ನೇತೃತ್ವದ ಟೀಂ ಗೆದ್ದಿತು. ಒಟ್ಟು 42 ಟಿಆರ್‍ಪಿಗಳಲ್ಲಿ 9 ಟಿಆರ್‍ಪಿ ಈ ಎರಡು ಕಾರ್ಯಕ್ರಮಗಳದ್ದೇ ಆಗಿತ್ತು…! ಸಿನಿಮಾ ಕಾರ್ಯಕ್ರಮಗಳ ಟಿಆರ್‍ಪಿಯಲ್ಲಿ ಅಂದು ಟಿವಿ9 ನದ್ದು 6 ಮಾತ್ರ…! ಟಿವಿ9 ಸಿನಿಮಾ ಕಾರ್ಯಕ್ರಮಗಳನ್ನು ಹಿಂದಿಕ್ಕಿ ಸುವರ್ಣ ಯಶಸ್ಸು ಪಡೆದಿತ್ತು.


ಪ್ರತಿಮಾ ಭಟ್ ಅವರೊಡನೆ ಜಯಪ್ರಕಾಶ್ ಶೆಟ್ಟಿ ಅವರು ನಡೆಸಿಕೊಡುತ್ತಿದ್ದ ಬ್ರೇಕ್ ಫಾಸ್ಟ್ ನ್ಯೂಸ್- ಶೆಟ್ರು-ಭಟ್ರು ಅತ್ಯಂತ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿತ್ತು.


ಟೀಕೆಗಳೊಡನೆ ಜೆಪಿ ಅವರನ್ನು ಗುರುತಿಸಿದ ಸುವರ್ಣದ ಕಾರ್ಯಕ್ರಮ ‘ಕಟ್ಟೆಚ್ಚರ’. ಇದು ಜನಪ್ರಿಯತೆ ಪಡೆತ್ತು. ಆದ್ರೆ, ಕೆಲವರು ಜೆಪಿ ಅವರ ಮ್ಯಾನರಿಸಂ, ಡ್ರೆಸ್‍ಕೋಡ್ ಬಗ್ಗೆ ಟೀಕೆ ಮಾಡ್ತಿದ್ರು…! ಮುಂದಿನ ದಿನಗಳಲ್ಲಿ ಕ್ರೈಂ ಪ್ರೋಗ್ರಾಂಗಳಿಗೇ ‘ಜೆಪಿ ಟ್ರೆಂಡ್’ ಅನ್ನೇ ಫಾಲೋ ಮಾಡೋಕೆ ಶುರುಮಾಡಿ ಬ್ರಾಂಡ್ ಮಾಡಿದ್ದು ಈಗ ಇತಿಹಾಸ…!

ಬ್ರೇಕ್ ಫಾಸ್ಟ್ ನ್ಯೂಸ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಟೈಲೀಶ್ ಡ್ರೆಸ್ ಗಳನ್ನು ಹಾಕಲು ಶುರುಮಾಡಿದ್ರು. ನ್ಯೂಸ್ ರೀಡರ್ ಗಳು ಬ್ಲೇಸರ್ರೇ ಹಾಕಬೇಕೆಂಬ ಸಂಸ್ಕøತಿಯನ್ನು ಮುರಿದವರು ಇವರೇ.


ಜೆಪಿ ವೇಸ್ ಕೋಟ್ ಧರಿಸಿದ್ರು… ಇದನ್ನೇ ಈಗ ಬಹುತೇಕ ಎಲ್ಲಾ ನ್ಯೂಸ್ ರೀಡರ್ ಗಳು ಫಾಲೋ ಮಾಡ್ತಿದ್ದಾರೆ. 2013ರಲ್ಲಿ ಸಮಯ ಸೇರಿದ ಶೆಟ್ರಿಗೆ ವಿಜಯ ಟಾಟ ಅವರು ಸಂಪೂರ್ಣ ಸ್ವಾತಂತ್ರ್ಯ ನೀಡಿ ವಿಭಿನ್ನ ಪ್ರಯೋಗಗಳಿಗೆ ಸಪೋರ್ಟ್ ಮಾಡಿದ್ರು. ಬಿಗ್ 3 ಬಹುದೊಡ್ಡ ಯಶಸ್ವಿ ಕಾರ್ಯಕ್ರಮವಾಯ್ತು. ಭ್ರಷ್ಟ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಚಳಿಜ್ವರ ಶುರುವಾಗಿತ್ತು…! ಸ್ವತಃ ಜೆಪಿ ಅವರಿಗೂ ಇದು ಅತ್ಯಂತ ಹೆಚ್ಚು ಖುಷಿಕೊಟ್ಟ ಕಾರ್ಯಕ್ರಮ.


ಬಿಗ್3 ಅಲ್ಲದೆ ‘ಬಿಗ್ ಡಿಬೇಟ್’, ‘ಸಮಯ ಸಕಾಲ’, ‘ಸಾಲಮನ್ನಾ’ ದಂತಹ ಸೂಪರ್ ಹಿಟ್ ಕಾರ್ಯಕ್ರಮಗಳ ರೂವಾರಿ ಜೆಪಿ ಅವರು…!
ಇತ್ತೀಚೆಗೆ ಸುವರ್ಣಕ್ಕೆ ವಾಪಸ್ಸಾಗಿರುವ ಜೆಪಿ ಅವರ ಜನಪರ ಕಾಳಜಿ ಎಂದಿನಂತೆ ಮುಂದುವರೆದಿದೆ. ಇಲ್ಲಿ ಪ್ರಚಲಿತ ವಿದ್ಯಮಾನಗಳ ಸಂಪಾದಕರಾಗಿದ್ದಾರೆ.


ಇತ್ತೀಚೆಗಷ್ಟೇ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಬಳಸುತ್ತಿರುವ ಧ್ವನಿವರ್ಧಕದ ವಿಚಾರವಾಗಿ ಕೋಮುಗಲಭೆ ಉಂಟಾಗುವ ಸಾಧ್ಯತೆ ಇತ್ತು. ಧ್ವನಿವರ್ಧಕ ಬಳಕೆ ವಿರೋಧಿಸಿ ದೂರು ನೀಡಿದ್ದ ಕ್ರೈಸ್ತ ಸಮುದಾಯದ ವ್ಯಕ್ತಿಯ ಮನವೊಲಿಸಿ, ಹಿಂದೂ ಮುಂಖಡರೊಡನೆ ರಾಜಿಮಾಡಿಸಿ ದೂರು ಹಿಂಪಡೆಯುವಂತೆ ಮಾಡಿ ಸಮಾಜದ ಸ್ವಾಸ್ಥ್ಯವನ್ನು ಜೆಪಿ ಕಾಪಾಡಿದ್ದರು.


ವಿಜಯಪುರದ ದಾನಮ್ಮಳ ರೇಪ್ ಅಂಡ್ ಮರ್ಡರ್ ಆದಾಗ ಸಿಎಂ ಸಿದ್ದರಾಮಯ್ಯ ಅವರು ವಿಜಯಪುರದಲ್ಲಿ ಇದ್ದರೂ ಕುಟುಂಬದವರಿಗೆ ಸಾಂತ್ವಾನ ಹೇಳುವ ಕೆಲಸವನ್ನಾಗಲಿ, ಪ್ರತಿಭಟನಾ ಸ್ಥಳಕ್ಕೆ ಹೋಗುವ ಮನಸ್ಸನ್ನಾಗಲಿ ಮಾಡಿರ್ಲಿಲ್ಲ. ಪ್ರಕರಣದ ವಿರುದ್ಧ ಗಟ್ಟಿಯಾಗಿ ದನಿ ಎತ್ತಿ, ಸುದ್ದಿಯನ್ನು ಬಹಳ ಜೋರಾಗಿ ಎತ್ತಿಕೊಂಡಿದ್ರಿಂದ ಮುಖ್ಯಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಜೊತೆಗೆ ಪಕ್ಷಾತೀತವಾಗಿ ಪ್ರಕರಣದ ವಿರುದ್ಧ ಪ್ರತಿಭಟಿಸಲು ಸುವರ್ಣ ನ್ಯೂಸ್ ಮೂಲಕ ಜೆಪಿ ದನಿಯಾಗಿದ್ರು.

‘ಟೈಗರ್ ಜಿಂದಾ ಹೈ’- ರವಿಬೆಳಗೆರೆ ಅವರ ಸಂದರ್ಶನ ಸೂಪರ್…! (ನಿನ್ನೆ ಸಂಜೆ 7 ಗಂಟೆಗೆ (2017 ಡಿಸೆಂಬರ್ 28) ಒಂದು ಭಾಗ ಪ್ರಸಾರವಾಗಿತ್ತು. ಇಂದು (2017 ಡಿಸೆಂಬರ್ 29) 2ನೇ ಮತ್ತು ಕೊನೆಯ ಭಾಗ ಪ್ರಸಾರವಾಗಲಿದೆ)ಈ ಸಂದರ್ಶನದಲ್ಲಿ ಮೊಟ್ಟಮೊದಲ ಬಾರಿಗೆ ಬೆಳಗೆರೆ ಅವರಿಗೆ ತಂದೆಯ ಬಗ್ಗೆ ಕೇಳಿದ್ದಾರೆ ಜೆಪಿ.

ಕೆಲವು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಅವರಿಗೆ ಎರಡನೇ ಹೆಂಡ್ತಿ ರಾಧಿಕ ಕುಮಾರ ಸ್ವಾಮಿ ಅವರ ಬಗ್ಗೆ ಕೇಳಿದ್ರು. ಇದು ಸದ್ದು ಮಾಡಿತ್ತು, ಟ್ರೋಲ್ ಕೂಡ ಆಗಿತ್ತು.


ಎಸ್‍ಎಸ್‍ಎಲ್‍ಸಿಯಲ್ಲಿ ಎಲ್ಲಾ ಸಬ್ಜೆಕ್ಟ್ ಗಳಲ್ಲೂ ಒಳ್ಳೆಯ ಮಾಕ್ರ್ಸ್ ಪಡೀತಿದ್ದ ಜೆಪಿ ಹಿಂದಿಯಲ್ಲಿ ತುಂಬಾ ವೀಕ್ ಇದ್ದರು. ಫೈನಲ್ ಎಕ್ಸಾಮ್ ನಲ್ಲಿ ಹಿಂದಿಯಲ್ಲಿ ಫೇಲ್ ಆಗ್ತಾರೆ ಅಂತ ಶಿಕ್ಷಕರೇ ಡಿಸೈಡ್ ಮಾಡಿದ್ರು…! ಅಕ್ಕ ವೀಣಾ ಅವರಿಂದ ಒಂದೇ ಒಂದು ತಿಂಗಳಲ್ಲಿ ಹಿಂದಿ ಕಲಿತು ಒಳ್ಳೆಯ ಅಂಕಗಳನ್ನು ಪಡೆದಿದ್ದರು.


ಹಿಂದಿ ಸಿನಿಮಾಗಳನ್ನು ನೋಡಿದ್ರೆ ಹಿಂದಿ ಬರುತ್ತೆ ಅಂತ ಹೆಚ್ಚು ಹೆಚ್ಚು ಹಿಂದಿ ಸಿನಿಮಾಗಳನ್ನು ನೋಡ್ತಾ ಇದ್ದರು. ಹೆಚ್ಚಾಗಿ ಅಮಿತಾ ಬಚ್ಚನ್ ಅವರ ಸಿನಿಮಾಗಳನ್ನು ನೋಡಿರೋ ಶೆಟ್ಟರು ಇಂದು ಅಮಿತಾ ಬಚ್ಚನ್ ಬಗ್ಗೆ ಗೂಗಲ್, ವಿಕಿಪೀಡಿಯಾದಲ್ಲಿ ಇರೋದಕ್ಕಿಂತ ಹೆಚ್ಚಿನ ವಿಷಯ ತಿಳಿದುಕೊಂಡಿದ್ದಾರೆ…!


ಜಗತ್ತಿನಲ್ಲಿ ಯಾರ ಬಗ್ಗೆ ಯಾರು ಏನೇ ಹೇಳಿದ್ರು ಜೆಪಿ ಅವರು ನಂಬಲ್ಲ..! ಅದು ಅವರ ಅನುಭವಕ್ಕೆ ಬಂದಾಗ ಮಾತ್ರ ನಂಬೋದು. ಕೆಲವೊಮ್ಮೆ ಬೇರೆ ಅವರ ಖುಷಿಗಾಗಿ ನಂಬಿದ್ದುಂಟಷೇ…! ಮುಚ್ಚು ಮರೆಯಿಲ್ಲದೆ ನೇರ ನೇರ ಮಾತಾಡೋ ವ್ಯಕ್ತಿ.


‘ತನ್ನಿಂದ ಕೆಲವರಿಗೆ ಬೇಜಾರಿಗಿದೆ ಅಂತ ಗೊತ್ತು…ಅವುಗಳನ್ನು ಸರಿಪಡಿಸೋ ಕೆಲಸ ನಾನೇ ಮಾಡ್ತಿದ್ದೀನಿ’ ಅಂತಾರೆ ಜೆಪಿ…! ಇದು ಇವರ ದೊಡ್ಡ ಗುಣಕ್ಕೆ ಹಿಡಿದ ಕನ್ನಡಿ.…


ಮಾಧ್ಯಮ ಲೋಕದ ದಿಗ್ಗಜರಾದ ವಿಶ್ವೇಶ್ವರ ಭಟ್, ಶಶಿಧರ್ ಭಟ್, ಎಚ್.ಆರ್ ರಂಗನಾಥ್, ರವಿ ಬೆಳಗೆರೆ, ಜೋಗಿ ಅವರ ಬಗ್ಗೆ ಇವರಿಗೆ ಅಪಾರ ಗೌರವ.


‘ವಿಶ್ವೇಶ್ವರ ಭಟ್ ಅವರು ಎಜರ್ನಿ ಬೂಸ್ಟ್, ಅವರ ಬರಹ ವ್ಯಕ್ತಿತ್ವ ಎರಡೂ ಇಷ್ಟವಾಗುತ್ತೆ. ಮುದ್ರಣ ಮಾಧ್ಯಮದ ಯಾವೊಬ್ಬ ಪತ್ರಕರ್ತನೂ ದೃಶ್ಯಮಾಧ್ಯಮದ ಬಗ್ಗೆ ಯೋಚನೆ ಮಾಡದ ಟೈಮಲ್ಲಿ ಕಾವೇರಿ ಚಾನಲ್ ಆರಂಭಿಸಿದ್ದ ಶಶಿಧರ್ ಭಟ್ ಇದೇ ಕಾರಣಕ್ಕೆ ಇಷ್ಟವಾಗ್ತಾರೆ. ಪಬ್ಲಿಕ್ ಟಿವಿ ಎಚ್.ಆರ್ ರಂಗನಾಥ್ ಸರ್ ಅವರನ್ನು ನೋಡಿದಾಗ ನಾನು ಇವರಷ್ಟು ಜ್ಞಾನ ಸಂಪಾದಿಸೋದು ಯಾವಾಗ ಅಂತ ಅನಿಸುತ್ತೆ…! ಇದು ನನ್ನಿಂದ ಸಾಧ್ಯವೇ ಇಲ್ಲ ಅಂತ.. ಬೇರೆ ಯೋಚ್ನೆ ಮಾಡ್ತೀನಿ. ರವಿಬೆಳಗೆರೆ ಅವರಲ್ಲಿ ಜೀವನ ಪ್ರೀತಿ, ಕುತೂಹಲ ನಿಜಕ್ಕೂ ತನನ್ನು ಬೆಚ್ಚಿ ಬೀಳಿಸಿದೆ…! ಇವರೆಲ್ಲರೂ ಇಷ್ಟವಾಗ್ತಾರೆ, ಆದ್ರೆ ನಾನು ಜೋಗಿ ಸರ್ ಅವರಂತೆ ಬದುಕಲು ಇಷ್ಟಪಡ್ತೀನಿ’ ಎನ್ನುತ್ತಾರೆ ಶೆಟ್ರು.


‘ತಂದೆ ಅಗರ್ಭ ಶ್ರೀಮಂತರಾಗಿದ್ದರು. ತಾಯಿ ಕೂಡ ಶ್ರೀಮಂತ ಕುಟುಂಬದಿಂದ ಬಂದವರು. ನಾನಾ ಕಾರಣಗಳಿಂದ ತಂದೆ ಶ್ರೀಮಂತಿಕೆಯಿಂದ ಶೂನ್ಯಕ್ಕೆ ಬಂದರು…! ಆ ಟೈಮಲ್ಲಿ ಅಂಜದೆ, ತಾಯಿ ನಮ್ಮನ್ನು ಬೆಳೆಸಿದ್ದು ನಿಜಕ್ಕೂ ಗ್ರೇಟ್. ಜೊತೆಗೆ ಇವತ್ತಿನ ನಮ್ಮ ಯಶಸ್ಸಿನಲ್ಲಿ ಅಕ್ಕಂದಿರ ಶ್ರಮ ದೊಡ್ಡದು’ ಎಂದು ಸ್ಮರಿಸುತ್ತಾರೆ.


ಜೆಪಿ ಅವರ ಸಾಧನೆಯ ಹಿಂದಿನ ಮತ್ತೊರ್ವ ಪ್ರಮುಖ ಶಕ್ತಿ ಅಂದ್ರೆ ಅವರ ಧರ್ಮಪತ್ನಿ ರಕ್ಷಾ. ತನ್ನ ಬೆಸ್ಟ್ ಕ್ರಿಟಿಕ್ ರಕ್ಷಾ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವ ಜೆಪಿ ಅವರು, ಮಗ ಅದ್ವಿಕ್ ತನ್ನ ದೊಡ್ಡ ಆಸ್ತಿ, ಅವನೇ ತನ್ನ ಸರ್ವಸ್ವ ಎಂದು ಹೇಳುತ್ತಾರೆ.


2014ರ ಲೋಕಸಭಾ ಚುನಾವಣೆ ಫಲಿತಾಂಶದ ದಿನ ಅಪಘಾತದಲ್ಲಿ ಅಕ್ಕ ಮಣಿ ಅವರು ತೀರಿಕೊಂಡಿದ್ದರು…! ಇತ್ತ ಎಲೆಕ್ಷನ್ ರಿಸೆಲ್ಟ್ ಬಂದಿದೆ. ಅತ್ತ ಮನೆಯಲ್ಲಿ ಅಕ್ಕನ ಅಕಾಲಿಕ ಮರಣದ ಸೂತಕ…! ಅವತ್ತು ಆಫೀಸ್ ಗೆ ಹೋಗಲು ಸಾಧ್ಯವಾಗಿರಲಿಲ್ಲ. ಇದು ಜೆಪಿ ಅವರ ಜೀವನದ ದುಃಖದ ದಿನ.


ಕೆಲವರಿಂದ ನೋವಾಗಿದೆ, ಅವಮಾನ ಆಗಿದೆ ಅಂತ ಬೇಸರಿಸಿಕೊಳ್ಳಬಾರದು. ಒಂದೆರಡು ವರ್ಷಗಳಲ್ಲೇ ಅದನ್ನು ಹೊರಹಾಕಬಾರದು. 5-6 ವರ್ಷ ಕಾಯಬೇಕು. ನಮ್ಮನ್ನು ನಾವು ಸುಧಾರಿಸಿಕೊಳ್ಳಲು ಸಿಕ್ಕ ಅಪೂರ್ವ ಅವಕಾಶ ಅಂತ ತಿಳಿಯಬೇಕು ಎನ್ನುವ ಜೆಪಿ ಅವರು ಯಾವತ್ತೂ ನೆಗಿಟೀವ್ ಯೋಚನೆ ಮಾಡಲ್ಲ…! ಎಲ್ಲದರಲ್ಲೂ, ಎಲ್ಲಾ ಸಂದರ್ಭ, ವಿಷಯದಲ್ಲೂ ಪಾಸಿಟೀವ್ ಥಿಂಕಿಂಗ್.


ಫ್ಯಾಮಿಲಿ ಜೊತೆ ಕಳೆಯೋದು ಇವರಿಗೆ ಖುಷಿಕೊಡುವ ಕ್ಷಣ. ಸಾಫ್ಟ್ ವೇರ್ ಗಂಡ ಸಿನಿಮಾ ಹಾಗೂ ಸುವರ್ಣದಲ್ಲಿ ಪ್ರಸಾರವಾಗ್ತಿದ್ದ ‘ನಿರ್ಭಯ’ ಧಾರವಾಹಿಗಳಲ್ಲಿ ನಟಿಸಿದ್ದಾರೆ. ಚಿತ್ರನಿರ್ಮಾಣ ಮಾಡುವ ಕನಸಿದೆ…!


ಸಮಯದಲ್ಲಿ ಬರ್ತಿದ್ದ ಬಿಗ್ 3 ಮಾದರಿಯಲ್ಲಿ ಸುವರ್ಣದಲ್ಲೊಂದು ಪ್ರೋಗ್ರಾಂ ಮಾಡಲು ಕಾನ್ಸೆಪ್ಟ್ ರೆಡಿ ಇದೆ. ಟೈಟಲ್ ಹುಡುಕಾಟ ನಡೆಯುತ್ತಿದೆ.

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

31)10ಡಿಸೆಂಬರ್ 2017 : ಪ್ರತಿಮಾ ಭಟ್

32)11ಡಿಸೆಂಬರ್ 2017 :  ಹರೀಶ್ ಪುತ್ರನ್

33)12ಡಿಸೆಂಬರ್ 2017 : ನಿಶಾ ಶೆಟ್ಟಿ

34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ

35)14ಡಿಸೆಂಬರ್ 2017 :  ಹಬೀಬ್ ದಂಡಿ

36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್

37)16ಡಿಸೆಂಬರ್ 2017 :  ಜ್ಯೋತಿ ಇರ್ವತ್ತೂರು

38)17ಡಿಸೆಂಬರ್ 2017 :  ಶಿಲ್ಪ ಐಯ್ಯರ್ 

39)18ಡಿಸೆಂಬರ್ 2017 :  ನಾಝಿಯಾ ಕೌಸರ್

40) 19ಡಿಸೆಂಬರ್ 2017 :  ಶ್ರುತಿಗೌಡ

41) 20ಡಿಸೆಂಬರ್ 2017 :  ಎಂ.ಆರ್ ಶಿವಪ್ರಸಾದ್

42) 21ಡಿಸೆಂಬರ್ 2017 :  ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)

43) 22ಡಿಸೆಂಬರ್ 2017 :  ಶರ್ಮಿತಾ ಶೆಟ್ಟಿ

44) 23ಡಿಸೆಂಬರ್ 2017 :  ಕಾವ್ಯ

45) 24ಡಿಸೆಂಬರ್ 2017 :  ಹರ್ಷವರ್ಧನ್ ಬ್ಯಾಡನೂರು

46) 25ಡಿಸೆಂಬರ್ 2017 : ಸುಧನ್ವ ಖರೆ

47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ

48) 27ಡಿಸೆಂಬರ್ 2017 :ವಾಣಿ ಕೌಶಿಕ್

49) 28ಡಿಸೆಂಬರ್ 2017 : ಸುಗುಣ

50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ

 

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...