“ಹೊಸ ಬೆರಗು”
ಹೊಸತು ಹೊಸತು ದಿನದಿನವೂ..
ಮಡಿಲ ಖುಷಿಯು ಬಾನೆತ್ತರಕೆ
ಏರಿದಾಗ ಅದುವೇ ನನಸು..!
ಆಸೆಯ ಗೋಪುರಕೆ ಗೋರಿಯಾ
ಭಾಷೆಯು ತಾಕಿದಾಗ
ಮತ್ತದೇ ಮುನಿಸು..!!
ತಲೆಯ ಬಿಲದೊಳಗೆ
ಹೇಳಲಾಗದ ಬಿರುಕು ಮೂಡಿಹುದು.
ಮುರುಕು ಮನೆಯ ತಿರುಕನೊಬ್ಬ ತಲೆತಿರುಗಿ ಮರುಗುತಿಹನು..!
ಭೂಕುಬೇರರ ಕಾಲೊಳಗೆ
ಸಕ್ಕರೆಯು ಅಡಗಿ ಸಾವಿನಾ
ಇರುವೆಯು ಶೂಲದಿಂದ ಇರಿಯುತಿಹುದು..!!
ಸೊಬಗ ಕಂಡವನು
ಮೊಗದ ನಗುವ ಮರೆತ..
ಕೊರಗ ಕೊರಳಲ್ಲೇ ತೊಟ್ಟವನ
ತಟ್ಟೆಯ ಒಳಗಿತ್ತು ಹಸಿವಿನಾ ಹೊಟ್ಟೆ..!
ಅಲ್ಲೊಮ್ಮೆ ಹೊರಳಿತು- ಇಲ್ಲೊಮ್ಮೆ
ಕೆರಳಿತು.. ಮರಳಿ ಮಣ್ಣೆಡೆಗೆ ಸಾಗುವ
ಭಯವೇಕೋ ಮರುಕಳಿಸಿಹುದು..!!
ವರುಷ ವರುಷವೂ ಹರುಷದಿ ಹುರುಪಿನಿಂದಲಿ ಅರೆಹೊಟ್ಟೆ-ಸಿರಿಹೊಟ್ಟೆ ಬಾಚಿತಬ್ಬಿಹುದು..!
ಆದರೇಕೋ, ಕಾವ್ಯದತ್ತನ
ಮನಃಶಾಸ್ತ್ರದಲಿ ನರನೆದೆಯಲಿ
ನಡುಕ ನಿಲ್ಲದೇಕೋ
ಮನ ಮತ್ತೆ ಮರುಗುತಿಹುದು
ಏನೀ ವೈಪರೀತ್ಯ ನಾಕಾಣೆ-ನಾಕಾಣೆ..!!
?ದತ್ತರಾಜ್ ಪಡುಕೋಣೆ?