ಇದನ್ನು ಬರೆಯಬೇಕೋ…? ಬೇಡವೋ…? ಅಂತ ಸಿಕ್ಕಾಪಟ್ಟೆ ಯೋಚಿಸಿ, ಆಮೇಲೆ ಬರೀತಿದ್ದೀನಿ. ಇದು ಹೆಣದ ಮೇಲೆ ತುಪ್ಪ ಸವರಿ ತಿನ್ನೋರಿಗಾಗಿ ಅಲ್ಲ…! ಮನುಷ್ಯತ್ವ, ಮಾನವೀಯತೆಯಿಂದ ಬದುಕುವವರಿಗಾಗಿ ಮಾತ್ರ…!
ದೇಶ ಕಾಯೋ ಸೈನಿಕರಾಗಿ ವೈರಿಗಳ ವಿರುದ್ಧ ಸೆಣೆಸುತ್ತಾ ವೀರ ಮರಣವನ್ನಪ್ಪೋಣ…! ನಾಡು-ನುಡಿಗಾಗಿ ಹೋರಾಡೋಣ…! ದೇಶಕ್ಕಾಗಿ ಪ್ರಾಣವನ್ನು ಅರ್ಪಿಸೋಣ… ಉಸಿರು ನಿಂತ ಮೇಲೂ ನಮ್ಮ ಹೆಸರು ಚಿರವಾಗಿರುತ್ತೆ. ಆದ್ರೆ, ಕೆಲಸಕ್ಕೆ ಬಾರದ ಅಪ್ರಯೋಜಕರನ್ನು ನಾಯಕರನ್ನಾಗಿ ಮಾಡಲು ಹೋರಾಟ, ಕಿರುಚಾಟ, ಹಾರಾಟ ಅಂತ ಅಮೂಲ್ಯ ಸಮಯವನ್ನು, ಜೀವವನ್ನು ಕಳೆದುಕೊಳ್ಳೋದೇಕೆ…? ಒಮ್ಮೆ ಯೋಚಿಸಿ…
ಮೂಡಿಗೆರೆಯ ವಿದ್ಯಾರ್ಥಿನಿ ಧನ್ಯಶ್ರೀ ಸಾವು ತುಂಬಾ ಕಾಡ್ತಿದೆ. ಧರ್ಮ, ಜಾತಿ, ಪಂಥ, ಪಕ್ಷ ಬೇಧ ಮರೆತು ಅವಳ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಬೇಕಿದೆ. ಅವಳ ಸಾವನ್ನು ಸಂಭ್ರಮಿಸಿ, ಆರೋಪಿಗಳ ಪರ ಮಾತಾಡೋರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಬರುವ ನಾಳೆಗಳಲ್ಲಿ ನಮ್ಮ ಎಷ್ಟೋ ಮಂದಿ ಹೆಣ್ಮಕ್ಕಳಿಗೆ ಧನ್ಯಶ್ರೀಯ ಪರಿಸ್ಥಿತಿಯೇ ಬರಬಹುದು…?
ನಿಮಗೆ ಗೊತ್ತು, ಧನ್ಯಶ್ರೀ ಸಾವಿಗೆ ಮೊದಲ ಕಾರಣ ವೈರಲ್ ಆದ ವಾಟ್ಸಪ್ ಸಂದೇಶ. ವ್ಯಕ್ತಿಯೊಬ್ಬ ಧನ್ಯಶ್ರೀ ಜೊತೆ ತುಳು ಭಾಷೆಯಲ್ಲಿ ವಾಟ್ಸಪ್ ನಲ್ಲಿ ನಡೆಸಿದ ಸಂಭಾಷಣೆಯು ಆತನ ವಿಕೃತ ಮನಸ್ಸಿನ ಸೂಚಕವಾಗಿದೆ. ಅವನಿಗೆ ಅವನ ಮನಸ್ಥಿತಿಯ ಜನರೇ ಬೆಂಬಲ…! ಇವರುಗಳ ಧರ್ಮದ ಹುಚ್ಚು ಇವತ್ತು ಧನ್ಯಶ್ರೀ ಕುಟುಂಬವನ್ನು ಕತ್ತಲಲಲ್ಲಿ ಬಂಧಿಸಿದೆ. ಅವರು ಈ ಜನ್ಮದಲ್ಲಿ ಧನ್ಯಶ್ರೀ ಅಗಲುವಿಕೆಯ ನೋವಿನಿಂದ ಹೊರಬರಲು ಸಾಧ್ಯವೇ ಇಲ್ಲ.
ಧರ್ಮದ ಹೆಸರಲ್ಲಿ ಹಿಂದೂ-ಮುಸ್ಲೀಂರ ಸಂಬಂಧವನ್ನು ಹಾಳುಮಾಡಿ, ವಿಷಬೀಜ ಬಿತ್ತಿ ಸಾವಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರೋರು ಮನುಷ್ಯ ರೂಪದಲ್ಲಿರೋ ರಾಕ್ಷಸರೇ…! ಅವರಿಗೆ ಕುಡಿಯಲು ಟೀ, ಕಾಫಿ, ಜೂಸ್, ಹಾಲು, ಹಾಲ್ಕೋಹಾಲ್ ಕೂಡ ಬೇಡ…ಬೇಕಾಗಿರೋದು ಬಿಸಿರಕ್ತ…!
ಇಲ್ಲಿ ಪಕ್ಷ, ಪಂಥದ ಪರ ಮಾತಾಡ್ತಿಲ್ಲ ಒಂದರ್ಥದಲ್ಲಿ ಪಂಥ, ಪಕ್ಷ ಕಟ್ಕೊಂಡು ತಮ್ಮ ಸಿದ್ಧಾಂತವೇ ಸರಿ ಅಂತ ಬಾಯಿ ಬಡ್ಕೊಳ್ತಿರೋ ಎಲ್ರಿಗೂ ಇದು ಅನ್ವಯ. ಆಹಾ… ಹೆಣದ ಮೇಲೆ ತುಪ್ಪ ಸವರಿಕೊಂಡು ತಿನ್ನೋದು ಅಂದ್ರೆ ಎಷ್ಟ್ ಇಷ್ಟ ಅಲ್ವಾ…?
ಧನ್ಯಶ್ರೀ ಮುಸ್ಲೀಂ ಹುಡುಗನನ್ನು ಪ್ರೀತಿಸ್ತಿದ್ಲೋ ಇಲ್ಲವೋ ಗೊತ್ತಿಲ್ಲ….? ಆದ್ರೆ ‘ಇಷ್ಟ’…`ಪಾಪಾ’ ಎಂದು ಹೇಳಿದ್ದಕ್ಕೇ ಹೆಣವಾದಳು…! ಧನ್ಯಶ್ರೀ ಹೇಳಿದ್ದರಲ್ಲಿ ತಪ್ಪೇನಿದೆ…? ಏನ್ ಜಾತಿ ಅಂತ ಸಾಯ್ತೀರಿ, ನಾವೆಲ್ಲಾ ಭಾರತೀಯರು ಆಯ್ತಾ…? ಎಂಬ ಧನ್ಯಶ್ರೀ ಮಾತಿನಲ್ಲಿ ತಪ್ಪೇನುಂಟು…?
ವಾಟ್ಸಪ್ ಸಂಭಾಷಣೆ ವೇಳೆ ಧನ್ಯಶ್ರೀ ‘ಮುಸ್ಲೀಮರು ಪಾಪಾ ಅಂದಿದ್ದಕ್ಕೆ ಪ್ರಶ್ನಾತೀತ ವ್ಯಕ್ತಿ ಮಹಾಶಯ ಹೇಳಿದ್ದೇನು ಗೊತ್ತೇ…? ‘ನೀನು ಅವರಿಗೆ ಹುಟ್ಟಿರೋದು’ ಅಂತ…!ಸಂಸ್ಕೃತಿ ಅಂದ್ರೆ ಇದು ಅಲ್ವಾ…? ಒಬ್ಬ ಹೆಣ್ಣು ಮಗಳ ಜೊತೆ ಮಾತಾಡೋ ಮಾತೇನ್ರೀ ಇದು…?! ಈ ಆಸಾಮಿ ಪ್ರಕಾರ ಒಬ್ಬರನ್ನು ಒಳ್ಳೆಯವರು ಎನ್ನಲು ಅವರಿಗೇ ಹುಟ್ಟಿರಬೇಕೇ…? ಅದು ಸಂಘಟನೆಗೂ ಅನ್ವಯ ಆಗಲ್ವೇ…? ಗೊತ್ತಿಲ್ಲ…ಆ ವ್ಯಕ್ತಿಯಷ್ಟು ‘ಸಂಸ್ಕೃತಿ’ ಜ್ಞಾನ ನನಗಿಲ್ಲ.
ಮಾತು ಮುಂದುವರೆಸಿದ ಆ ಧರ್ಮಾಂಧ ಧನ್ಯಶ್ರೀಗೆ ನೀನು ಅವರನ್ನೇ ಕಟ್ಕೊಂಡು ಓಡಿ ಹೋಗು ಅಂತ ಬೇರೆ ಹೇಳಿದ್ದ. ಅದಕ್ಕಾಕೆ ಸಂಭಾಷಣೆಗೆ ಕೊನೆ ಹಾಡೋ ಉದ್ದೇಶದಿಂದಿರಬೇಕು ‘ಆಂ ಆಯ್ತು’ ಅಂದಿದ್ದಾಳೆ. ಅವಳ ಮಾತಿನಿಂದ ಉರ್ಕೊಂಡವ ಅವಳಿಗೆ ಹೇಳಿಯೇ ಇಬ್ಬರ ನಡುವಿನ ಸಂಭಾಷಣೆಯ ಸ್ಕ್ರೀನ್ ಶಾಟ್ ಅನ್ನು ಮೂಡಿಗೆರೆಯ ಭಜರಂಗದಳಕ್ಕೆ ಕಳುಹಿಸಿದ್ದಾನೆ…! (ಅವನೇ ಹೇಳಿರುವಂತೆ) . ಇದು ವೈರಲ್ ಆಗಿದೆ…ತನ್ನ ಹೆಸರಿಗೆ, ತನ್ನ ಕುಟುಂಬಕ್ಕೆ ಇದರಿಂದ ಕಳಂಕ ಎಂದು ನೊಂದ ಧನ್ಯಶ್ರೀ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಒಂದು ವೇಳೆ ಆಕೆ ಸಾವಿಗೆ ಶರಣಾಗದೇ ಇದ್ದಿದ್ದರೆ, ಮುಸ್ಲೀಂ ಹುಡುಗನ ಜೊತೆ ಓಡಿ ಹೋಗ್ತಿದ್ಲು ಅಂತ ಅವಳನ್ನು ಚಿತ್ರಹಿಂಸೆ ನೀಡಿ ಕೊಲ್ಲುತ್ತಿದ್ದರೇನೋ…? ಆ ಭಯವೂ ಆಕೆಯಲ್ಲಿದ್ದಿರಬಹುದು…! ಆದರೆ, ಇಂದು ಯಾವುದನ್ನು ಹೇಳಲು, ಕೇಳಲು ಧನ್ಯಶ್ರೀ ನಮ್ಮೊಂದಿಗಿಲ್ಲವಲ್ಲ…?
ಬದುಕು ಅವರಿಷ್ಟ, ಯಾರನ್ನೂ ಹೇಳಿ ಕೇಳಿ ನಾವು-ನೀವು ಹುಟ್ಟಿಲ್ಲ. ನಮ್ಮಿಷ್ಟದ ಬದುಕು ನಮ್ಮದು. ಪ್ರೀತ್ಸೋದು ತಪ್ಪಿಲ್ಲ. ಅದು ತಪ್ಪು, ವಯಸ್ಸಲ್ಲದ ವಯಸ್ಸಲ್ಲಿ ಪ್ರೀತಿಸಿ ಬದುಕು ಹಾಳು ಮಾಡಿಕೊಳ್ಳಬಾರದೆಂಬ ಕಳಕಳಿ, ಪ್ರೀತಿ ಇದ್ದರೆ ಬುದ್ಧಿಮಾತು ಹೇಳಿ ಸರಿದಾರಿಗೆ ತರೋ ಕೆಲಸ ಮಾಡಬೇಕು. ಅದನ್ನು ಬಿಟ್ಟು ಜೀವವನ್ನೇ ಕಳೆದುಕೊಳ್ಳುವಂತೆ ಮಾಡೋದ್ರಲ್ಲಿ ಅರ್ಥವಿಲ್ಲ.
ಇನ್ನೊಂದು ಪ್ರಶ್ನೆ ಹಿಂದೂ, ಮುಸ್ಲೀಂ, ಕ್ರೈಸ್ತರು ಸ್ನೇಹ ಸಂಬಂಧವನ್ನು ಬೆಳಸಲೇ ಬಾರದೇ…? ಹಿಂದೂಗಳಿಗೆ ಹುಟ್ಟಿದವರು ಹಿಂದೂಗಳ ಸ್ನೇಹವನ್ನು, ಮುಸ್ಲೀಂರಿಗೆ ಹುಟ್ಟಿದೋರು ಮುಸ್ಲೀಂರ ಸ್ನೇಹವನ್ನು ಮಾತ್ರ ಬೆಳೆಸಬೇಕೆ…?
ಹೌದು, ಬೇರೆಂದು ಧರ್ಮದ ವಿಚಾರಗಳಲ್ಲಿ ಒಬ್ಬರು ಇನ್ನೊಬ್ಬರು ‘ಮಧ್ಯಪ್ರವೇಶ’ ಮಾಡಬಾರದು ಅಂತ ಹೇಳುವ ಧರ್ಮ`ಅ’ಜ್ಞಾನಿಗಳಿಗೆ ಇನ್ನೊಂದು ಕುಟುಂಬದ ವಿಷಯದಲ್ಲಿ ಸುಖಾಸುಮ್ಮನೆ ಹಸ್ತಕ್ಷೇಪ ಮಾಡಬಾರದು ಅಂತ ಅಪ್ಪ-ಅಮ್ಮ ಹೇಳಿಕೊಟ್ಟಿಲ್ವಾ…?
ಇನ್ನೊಂದು ಕುಟುಂಬ ಕಷ್ಟದಲ್ಲಿದೆ ಅಂದ್ರೆ ಸಹಾಯ ಮಾಡೋಣ. ಅವರ ಜೊತೆ ನಾವು ಖುಷಿ ಖುಷಿಯಿಂದ ಕಾಲಕಳೆಯೋಣ. ಆದರೆ, ನೆಮ್ಮದಿಯಿಂದ ಬದುಕುತ್ತಿದ್ದ ಕುಟುಂಬಕ್ಕೆ ಸೂತಕ ತರುವ ಸೂತ್ರಧಾರರಾಗೋದ್ರಿಂದ ಏನ್ ಲಾಭ ಇದೆ…? ಧನ್ಯಶ್ರೀ ಬಗ್ಗೆ ಅವರ ಅಪ್ಪ-ಅಮ್ಮ ತಲೆಕೆಡಿಸಿಕೊಳ್ತಿದ್ರು, ಅವಳನ್ನು 20 ವರ್ಷ ಸಾಕಿದವರಿಗೆ ಯಾರಿಗೆ ಕೊಟ್ಟು ಮದುವೆ ಮಾಡಬೇಕು ಎಂದು ಗೊತ್ತಿರಲಿಲ್ಲವೇ…? ಅದನ್ನು ನೀವು-ನಾವು ಹೇಳ್ಬೇಕೆ ಸ್ವಾಮಿ…!?
ಮಂಗಳೂರಲ್ಲಿ ದೀಪಕ್ ಹತ್ಯೆಯಾಯ್ತು, ಬೆನ್ನಲ್ಲೇ ಬಶೀರ್…ಹೀಗೆ ಧರ್ಮದ ಹೆಸರಲ್ಲಿ ಹೆಣಗಳು ಬೀಳುತ್ತಿವೆ. ಹೆಣದ ಮೇಲೆ ರಾಜಕೀಯ ಮಾಡ್ತಿದ್ದಾರೆ. ರಾಜಕಾರಣಿಗಳನ್ನು, ಇನ್ಯಾರನ್ನೋ ದೊಡ್ಡ ನಾಯಕರನ್ನಾಗಿಸಲು ಭವ್ಯ ಭಾರತವನ್ನು ಕಟ್ಟಬೇಕಾದ ಯುವಶಕ್ತಿ, ಯುವನಾಯಕರು ಗುಲಾಮರಾಗುತ್ತಿದ್ದೇವೆ. ಇದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ಸಾವಿನ ದುಃಖ ಸಾವಾದ ಮನೆಯವರಿಗೆ ಮಾತ್ರ ಗೊತ್ತು.
ಇರುವೊಂದೇ ಜೀವನ… ಇರೋ ಅಷ್ಟು ದಿನ ಎಲ್ರೂ ಒಂದಾಗಿ ಬಾಳೋಣ. ಈ ಲೋಕ ಬಿಟ್ಟು ಹೋಗುವಾಗ ನಾವು ತೆಗೆದುಕೊಂಡು ಹೋಗುವುದಾದರೂ ಏನಿದೆ. ಧರ್ಮ, ಜಾತಿಯನ್ನೂ ಸಹ ತೆಗೆದುಕೊಂಡು ಹೋಗಲ್ಲ. ಸತ್ತ ಮೇಲೆ ನಾನೂ ಶವ, ನೀವೂ ಶವ, ಹಿಂದೂನೂ ಶವ, ಮುಸಲ್ಮಾನೂ ಶವ…ಸತ್ತಾಗ ನಮ್ಮನ್ನು ಕರೆಯೋದು ಹೆಣ ಅಂತನೇ…!
ನಾನು ಧರ್ಮ ವಿರೋಧಿ ಅಲ್ಲವೇ ಅಲ್ಲ. ನಾನೊಬ್ಬ ಹಿಂದೂ… ಮುಸ್ಲೀಂರು, ಕ್ರೈಸ್ತರು ಸೇರಿದಂತೆ ಎಲ್ಲಾ ಧರ್ಮೀಯರು, ಜಾತಿಯವರು ನನ್ನ ಸನ್ಮಿತ್ರರೇ. ನನ್ನ ಧರ್ಮವನ್ನು ಪಾಲಿಸುತ್ತೀನಿ, ಪ್ರೀತಿಸ್ತೀನಿ, ಗೌರವಿಸ್ತೀನಿ, ಆರಾಧಿಸ್ತೀನಿ. ಪರ ಧರ್ಮವನ್ನು ಸಹ ಪ್ರೀತಿಸ್ತೀನಿ, ಗೌರವಿಸ್ತೀನಿ. ದಯವಿಟ್ಟು ಶಾಂತಿ ಕಾಪಡಣ, ಪ್ರೀತಿಯಿಂದ ಬದುಕೋಣ.
-ಶಶಿಧರ್ ಎಸ್ ದೋಣಿಹಕ್ಲು