ದಶಕದ ಬಳಿಕ ಒಂದಾದ್ರು ಹಾಸನದ ಅಣ್ಣ-ತಂಗಿ…!

Date:

ಅಣ್ಣ ಎಂದರೆ ಅವಳ ಪಾಲಿಗೆ ಜೀವ. ಅವನಿಗೂ ಅಷ್ಟೇ ತಂಗಿ ಎಂದರೆ ಎಲ್ಲಕ್ಕಿಂತ ಹೆಚ್ಚು…! ಅವಳೇ ಸರ್ವಸ್ವ. ಅಣ್ಣ ತಂಗಿಯರ ಸಂಬಂಧವೇ ಹಾಗೆ. ರಾಶಿ ರಾಶಿ ಪ್ರೀತಿ, ತುಸು ಹೊಟ್ಟೆ ಕಿಚ್ಚು ಹೊಡೆದಾಟ ಎಲ್ಲ ಇದ್ದದ್ದೆ. ಅದನ್ನೆಲ್ಲ ಮೀರಿದ ಬಾಂಧವ್ಯವೇ ಅಣ್ಣ ತಂಗಿಯರ ಸಂಬಂಧ. ಎಲ್ಲರ ಚಿಕ್ಕಂದಿನ ನೆನಪಿನಂಗಳದಲ್ಲಿ ತಂಗಿಯೊ ಅಣ್ಣನೋ ಜೊತೆಗಾರರಾಗಿರುತ್ತಾರೆ. ಕಾಡಿಸಿ ಪೀಡಿಸಿ ಕಿಚಾಯಿಸಿ ಹತ್ತಾರು ತಂಟೆ ತಕರಾರುಗಳನ್ನು ತೆಗೆದು ಗೋಳು ಹೊಯ್ದುಕೊಂಡಿರುತ್ತಾರೆ. ಅಂತಹ ಬಾಲ್ಯ ಎಲ್ಲರಿಗು ಸಿಕ್ಕಿದ್ದಿದ್ದರೆ ಎಷ್ಟು ಚೆನ್ನ ಅಲ್ವಾ.. ಇಂದಿನ ಆಧುನಿಕ ಬದುಕಿನ ಓಟದಲ್ಲಿ ಕೆಲವರಿಗೆ ತಂದೆ ತಾಯಿ ಅಣ್ಣ ತಂಗಿ ಎಲ್ಲರೂ ಇದ್ದೂ ಕೂಡ ಅವರ ಪ್ರೀತಿಯಿಂದ ವಂಚಿತರಾಗಿರುತ್ತಾರೆ. ಆದರೆ ಬಾಲ್ಯದಲ್ಲೆ ತಂದೆ ತಾಯಿಗಳನ್ನು ಕಳೆದುಕೊಂಡು ಅಣ್ಣ ತಂಗಿಯರು ಒಬ್ಬರಿಂದೊಬ್ಬರು ದೂರಾಗಿ ತಬ್ಬಲಿಯಾದ ಜೀವಗಳ ನೋವು ಊಹಿಸಿಕೊಳ್ಳಲು ಸಾಧ್ಯವಿಲ್ಲ.


ಬಾಲ್ಯದಲ್ಲೇ ತಂದೆ ತಾಯಿಗಳನ್ನು ಕಳೆದುಕೊಂಡು ಸಂಬಂಧಿಕರಿಗೂ ಬೇಡವಾಗಿ ಪರಿಸ್ಥಿತಿಯ ಹೊಡೆತಕ್ಕೆ ಸಿಲುಕಿ ದಿಕ್ಕಾಪಾಲಾಗಿದ್ದ ಅಣ್ಣ ತಂಗಿ ಮತ್ತೆ ಒಂದಾದ ಘಟನೆ ಹಾಸನದಲ್ಲಿ ನಡೆದಿದೆ. ಹೊಳೆ ನರಸೀಪುರದ ಮಳಲಿ ಗ್ರಾಮದ ಮಂಜುನಾಥ ಮತ್ತು ಭಾಗ್ಯ ಚಿಕ್ಕಂದಿನಿಂದಲೇ ಒಬ್ಬರಿಂದೊಬ್ಬರು ದೂರಾಗಿ ಪರಸ್ಪರ ಸಂಪರ್ಕವೇ ಇಲ್ಲದೇ ಹತ್ತಾರು ವರ್ಷಗಳನ್ನು ಕಳೆದಿದ್ದಾರೆ. ಗತಿಸಿದ ಆ ಹತ್ತಾರು ವರ್ಷದಲ್ಲಿ ಅವರು ಪಟ್ಟ ಪಾಡು ಸಂಕಟ ಹೇಳತೀರದು. ತಂದೆ ತಾಯಿ ಕಳೆದುಕೊಂಡ ಅನಾಥವಾದ ಮಂಜುನಾಥ ಮತ್ತು ಭಾಗ್ಯ ಕೆಲದಿನ ಚಿಕ್ಕಮ್ಮನ ಆಶ್ರಯದಲ್ಲಿದ್ದರು. ಕೊನೆಗೆ ಈ ಇಬ್ಬರು ಚಿಕ್ಕಮ್ಮನಿಗೂ ಭಾರವಾಗಿ, ಆಕೆ ಅವರನ್ನು 12-13 ವರ್ಷಗಳ ಹಿಂದೆಯೇ ದೇವಸ್ಥಾನದ ಬಳಿ ಬಿಟ್ಟು ಹೋಗಿದ್ದಳು. ಆಗಿನ್ನು ಮಂಜುನಾಥ ಮತ್ತು ಭಾಗ್ಯ ಹೆಸರು ಹೇಳಲೂ ಬಾರದ ಮುಗ್ಧ ಕಂದಮ್ಮಗಳು.

ದೇವಸ್ಥಾನದ ಪ್ರಸಾದ ತಿಂದು ಹೇಗೊ ಎರಡು ದಿನ ಕಳೆದ ಅವರಿಗೆ ಮೂರನೇ ದಿನ ದೇವರ ಪ್ರಸಾದವೂ ಸಿಗಲಿಲ್ಲ. ಹೊಟ್ಟೆ ಹಸಿವಿನಿಂದ ಅಳುತ್ತಿದ್ದ ಮಕ್ಕಳನ್ನು ಗ್ರಾಮದ ಶಿಕ್ಷಕ ಗೌಡೇಗೌಡ ತಮ್ಮ ಮನೆಗೆ ಕರೆದುಕೊಂಡು ಹೋಗಿ ಆಶ್ರಯ ನೀಡಿದ್ದಾರೆ. ಎರಡೇ ದಿನಗಳಲ್ಲಿ ಶಿಕ್ಷಕರ ಕುಟುಂಬಕ್ಕೂ ಈ ಮಕ್ಕಳು ಹೊರೆಯಾಗಿದ್ದಾರೆ. ಎರಡು ಮಕ್ಕಳನ್ನು ಸಾಕುವುದು ಕಷ್ಟವೆಂದು ತಿಳಿದ ಗೌಡೇಗೌಡ ಮಂಜುನಾಥನನ್ನು ತಮ್ಮ ಬಳಿಯೆ ಇರಿಸಿಕೊಂಡು ಭಾಗ್ಯಳನ್ನು ಯಾರಾದರೂ ನೋಡಿಕೊಳ್ಳಲು ಸಿದ್ಧರಾದರೆ ಅವರ ಜೊತೆ ಕಳುಹಿಸಿ ಕೊಡೋದಿಕ್ಕೆ ಸಿದ್ಧರಾಗ್ತಾರೆ. ಈ ಸಂಗತಿಯನ್ನು ತಿಳಿದ ಗ್ರಾಮದ ಮಹಿಳೆಯೊಬ್ಬಳು ಹೆಣ್ಣು ಮಗಳನ್ನು ತನ್ನ ಜೊತೆ ಕರೆದುಕೊಂಡು ಹೋಗ್ತಾಳೆ. ಆದರೆ ಆ ಮಹಿಳೆ ಪುಟಾಣಿ ಹುಡುಗಿ ಭಾಗ್ಯಳನ್ನು ಒಂದೇ ತಿಂಗಳಲ್ಲಿ ಸಕಲೇಶಪುರದ ಕಾಫಿತೋಟದ ಮಾಲಿಕರೊಬ್ಬರಿಗೆ ಮಾರಿಬಿಡ್ತಾಳೆ. ನಿನ್ನ ತಂಗಿ ಕಳೆದು ಹೋದಳು ಅಂತ ಮಂಜುನಾಥನಿಗೆ ಸುಳ್ಳು ಹೇಳ್ತಾಳೆ.


ಅಣ್ಣ-ತಂಗಿ ಹೀಗೆ ದೂರವಾದವರು ದಶಕಗಳ ಕಾಲ ಸಂಪರ್ಕವನ್ನೇ ಕಡಿದುಕೊಂಡರು. ತನ್ನ ಒಡ ಹುಟ್ಟಿದ ತಂಗಿ ಎಲ್ಲೋ ಇದ್ದಾಳೆ ಎಂದು ಅಣ್ಣ ಕನವರಿಸಿದರೆ, ತಂಗಿ ದೂರಾದ ಅಣ್ಣನ ನೆನಪಿನಲ್ಲೇ ಕಾಲ ಕಳೆದಿದ್ದಳು.
ಶಿಕ್ಷಕ ದೊಡ್ಡಿ ಗೌಡರ ಮನೆ ಸೇರಿದ ಮಂಜುನಾಥ ಮನೆಯ ಮುದ್ದಿನ ಮಗನಾಗಿ ಬೆಳೆದ. ಶಿಕ್ಷಕ ಕುಟುಂಬದ ಪ್ರೀತಿಯಲ್ಲಿ ತಂಗಿಯ ಅಗಲಿಕೆಯ ನೋವನ್ನು ಸಾಧ್ಯವಾದಷ್ಟು ಮರೆತ. ಅವನು ಈಗ ಎಸ್.ಎಸ್.ಎಲ್.ಸಿ. ವ್ಯಾಸಂಗ ಮಾಡುತ್ತಿದ್ದಾನೆ. ಆದರೆ ಅತ್ತ ಭಾಗ್ಯ ಮಾತ್ರ ಶ್ರೀಮಂತರ ಮನೆ ಸೇರಿ ಜೀತದಾಳುವಿನಂತೆ ಹತ್ತು ವರ್ಷವನ್ನು ಕಳೆದಿದ್ದಾಳೆ. ಚಿಕ್ಕ ವಯಸ್ಸಿನಲ್ಲೆ ಪಡಬಾರದ ಕಷ್ಟವನ್ನು ಪಟ್ಟು ಶಿಕ್ಷಣದಿಂದಲೂ ವಂಚಿತಳಾಗಿದ್ದಾಳೆ. ಕೊನೆಗೊಮ್ಮೆ ಮನೆಯವರ ಕಿರುಕುಳ ತಾಳಲಾರದೇ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ಈಗ ಹದಿನೈದು ದಿನಗಳ ಹಿಂದೆ ಯಾವುದೊ ಒಂದು ಬಸ್ಸು ಹತ್ತಿ ಸಕಲೇಶಪುರದ ಮನೆಯಿಂದ ದೂರಾಗಿದ್ದಾಳೆ. ಎಲ್ಲಿ ಎತ್ತ ಯಾವ ಊರಿಗೆ ಹೋಗಬೇಕೆಂದು ಗೊತ್ತಿರದ ಭಾಗ್ಯಳನ್ನು ಕಂಡಕ್ಟರ್ ಅಲ್ಲಿಯೇ ಇಳಿಸಿ ಹೋಗಿದ್ದ. ಅಲ್ಲೆ ಸಮೀಪದಲ್ಲಿದ್ದ ಮನೆಯೊಂದರ ಜಗುಲಿ ಮೇಲೆ ಕುಳಿತು ಹಸಿವಿನಿಂದ ನರಳುತ್ತಿದ್ದ ಅವಳನ್ನು ನೋಡಿ ಮನೆಯವರು ಏನು ಎತ್ತ ಎಂದು ವಿಚಾರಿಸಿದ್ದಾರೆ. ಅವಳ ಕಷ್ಟವನ್ನು ಕೇಳಿ ತಮ್ಮ ಸಂಬಂಧಿಕರ ಮೂಲಕ ಮಕ್ಕಳ ರಕ್ಷಣಾ ಸಮಿತಿಗೆ ಮಾಹಿತಿ ನೀಡಿದ್ದಾರೆ.


ಮಕ್ಕಳ ರಕ್ಷಣಾ ಸಮಿತಿಯ ಅಧಿಕಾರಿಗಳಾದ ರಶ್ಮಿ ಹಾಗು ಆಪ್ತ ಸಮಾಲೋಚಕಿ ದೀಪಾ, ಭಾಗ್ಯಳನ್ನು ರಕ್ಷಿಸಿ ಹಾಸನದ ಬಾಲಮಂದಿರಕ್ಕೆ ಕರೆತಂದರು. ಭಾಗ್ಯಳ ಕುರಿತು ತನಿಖೆ ನಡೆಸಿ ಅವಳ ಸಂಬಂಧಿಕರ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಭಾಗ್ಯಳ ನೆನಪಿನ ಕೆದರಿ ದೇವಸ್ಥಾನ, ಊರವರನ್ನು ಪತ್ತೆ ಮಾಡಿದ್ದಾರೆ. ಕೊನೆಗೆ ಅವರೆಲ್ಲರನ್ನು ವಿಚಾರಿಸಿ ಸಮಿತಿ ಅವಳ ಅಣ್ಣನನ್ನು ಹುಡುಕಿದೆ. ಆದರೆ ಅಣ್ಣ ಮಂಜುನಾಥನನ್ನು ಸಲಹಿದ ಗೌಡೇ ಗೌಡರು ನಿಧನರಾಗಿದ್ದರು. ಈಗ ಭಾಗ್ಯ ಮತ್ತು ಮಂಜುನಾಥ ಇಬ್ಬರನ್ನು ಬಾಲ ಮಂದಿರಕ್ಕೆ ಕರೆತರಲಾಗಿದೆ. ದಶಕಗಳ ನಂತರ ಮತ್ತೆ ಒಟ್ಟಿಗೆ ಸೇರಿದ ಅಣ್ಣ-ತಂಗಿಯರ ಸಂತಸಕ್ಕೆ ಪಾರವೇ ಇಲ್ಲವಾಗಿದೆ. ಇಬ್ಬರೂ ಒಟ್ಟಿಗೆ ಸೇರಿರುವ ಕ್ಷಣಕ್ಕೆ ಸಾಕ್ಷಿಯಾದ ಬಾಲಮಂದಿರದ ತುಂಬೆಲ್ಲಾ ಹರ್ಷದ ಹೊನಲು ಹರಿಯುತ್ತಿದೆ.


ಆದರೆ ಚಿಕ್ಕಂದಿನಿಂದಲು ಅಕ್ಕರೆಯಿಂದ ಸಾಕಿ ಬೆಳೆಸಿದ ಮನೆಮಗನನ್ನು ಬಿಟ್ಟುಕೊಡಲು ಗೌಡೇಗೌಡರ ಕುಟುಂಬ ತಯ್ಯಾರಿಲ್ಲ. ಮಂಜುನಾಥನಿಗೆ ನಮ್ಮ ಬಿಟ್ಟರೆ ಬೇರೆ ನೆಲೆಯಿಲ್ಲ. ನಮಗೂ ಅವನನ್ನು ಬಿಟ್ಟಿರಲು ಸಾಧ್ಯವಿಲ್ಲವೆಂದು ಗೌಡೆಗೌಡರ ಪತ್ನಿ ದು:ಖಿಸುತ್ತಿದ್ದಾರೆ. ಆದರೆ ಮಂಜುನಾಥ ಮಾತ್ರ ತಂಗಿಯನ್ನು ಬಿಟ್ಟಿರಲಾರೆ ಎಂದು ಹಠ ಮಾಡುತ್ತಿದ್ದಾನೆ. ಎಷ್ಟೇ ಕಷ್ಟವಾದರೂ ತಾನೇ ದುಡಿದು ತಂಗಿಯನ್ನು ಸಲಹುತ್ತೇನೆ ಎಂದು ಮಂಜುನಾಥ ನಿರ್ಧರಿಸಿದ್ದಾನೆ. ಆದರೆ 15 ರ ಹುಡುಗ 13ರ ತಂಗಿಯನ್ನು ನೋಡಿಕೊಳ್ಳುವುದು ಅಷ್ಟು ಸುಲಭವಲ್ಲ. ಮುಂದೇನು ಎಂದು ಮಕ್ಕಳ ಕಲ್ಯಾಣ ಸಮಿತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಧರಿಸಬೇಕಿದೆ.
ಬಾಲ್ಯದಲ್ಲೇ ಪರಸ್ಪರರಿಂದ ದೂರಾಗಿ ನೋವನುಭವಿಸಿದ ಜೀವಗಳು ಈಗಷ್ಟೆ ಒಂದಾಗಿವೆ. ಆದರೆ ಅವರ ಪ್ರೀತಿಯ ಕ್ಷಣಗಳು ಎಷ್ಟು ದಿನ ಎಂಬುದು ಮಕ್ಕಳ ಕಲ್ಯಾಣ ಸಮಿತಿಯ ನಿರ್ಧಾರದ ಮೇಲೆ ನಿಂತಿದೆ. ಮತ್ತೆ ಪರಿಸ್ಥಿತಿ ಅಣ್ಣತಂಗಿಯರನ್ನು ದೂರಮಾಡದಿರಲಿ. ಮಂಜುನಾಥ ಮತ್ತು ಭಾಗ್ಯ ಜೀವನವಿಡಿ ಜೊತೆಗಿರಲಿ…

-ರಾಜೇಶ್ ಹೆಬ್ಬಾರ್

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...