ಹೆಡ್ ಲೈನ್ ನೋಡಿಯೇ ನಿಮ್ಗೆ ಗೊತ್ತಾಗಿದೆ…?! ನಾಳೆ ಜೊಹಾನ್ಸ್ ಬರ್ಗ್‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಮೊದಲ ಎರಡೂ ಪಂದ್ಯಗಳನ್ನು ಸೋತು ಈಗಾಗಲೇ ಸರಣಿ ಕಳೆದುಕೊಂಡಿರೋ ಕ್ರಿಕೆಟ್ ಸಾಮ್ರಾಟ್ ವಿರಾಟ್ ಪಡೆಗಿದು ಪ್ರತಿಷ್ಠೆಯ ಪಂದ್ಯ.
ಟೀಂ ಇಂಡಿಯಾದ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ಅವರನ್ನು ಸುಖಾಸುಮ್ಮನೆ ಎರಡು ಟೆಸ್ಟ್ ಪಂದ್ಯಗಳಲ್ಲಿ ಹೊರಗಿಟ್ಟ ಪರಿಣಾಮ ತಕ್ಕ ಬಹುಮಾನವೇ ಸಿಕ್ಕಿದೆ. ರಹಾನೆ ಸಂದರ್ಭಕ್ಕೆ ತಕ್ಕಂತೆ ಬ್ಯಾಟ್ ಬೀಸಬಲ್ಲ ಕ್ಲಾಸಿಕಲ್ ಬ್ಯಾಟ್ಸ್ ಮನ್. ಒಳ್ಳೆಯ ಫಾರ್ಮ್ ನಲ್ಲಿಯೂ ಇದ್ದಾರೆ. ಆದ್ರೆ, ತವರು ನೆಲದಲ್ಲಿ ಅಬ್ಬರಿಸಿ ವಿದೇಶಿ ನೆಲಗಳಲ್ಲಿ ಮಂಕಾಗುವ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರಿಗೆ ಮಣೆಹಾಕಿದ್ದು ಸರಿಯಲ್ಲ.
ವಿದೇಶಿ ಪಿಚ್ ಗಳಿಗೆ ಹೊಂದಿಕೊಂಡು ಸಮಯೋಚಿತ ಆಟವಾಡೋ ರಹಾನೆ ಈಗ ಮುಖ್ಯವೆನಿಸುತ್ತಾರೆ. ಉತ್ತಮ ಲಯದಲ್ಲಿದ್ದರೂ ರಹಾನೆ ಅವರಿಗೆ ಅವಕಾಶ ನೀಡದಿರುವುದು ನಿಜಕ್ಕೂ ಸಹ್ಯವಲ್ಲ. ರೋಹಿತ್ ಶರ್ಮಾ ಅವರ ಸಾಮರ್ಥ್ಯದ ಬಗ್ಗೆ ಚಕಾರವಿಲ್ಲ, ಆದ್ರೆ ಅವರು ವಿದೇಶಿ ಪಿಚ್ ಗಳಲ್ಲಿ ಅದರಲ್ಲೂ ಟೆಸ್ಟ್ ಪಂದ್ಯಗಳಿಗೆ ಸೂಕ್ತವಲ್ಲ ಎಂದೆನಿಸುತ್ತದೆ.
ಮೊದಲ ಪಂದ್ಯದಲ್ಲಿ ಸೋತು ಸುಣ್ಣಾದ ಮೇಲಾದರೂ ಕೋಚ್ ರವಿಶಾಸ್ತ್ರಿ ಹಾಗೂ ಕ್ಯಾಪ್ಟನ್ ಕೊಹ್ಲಿ ಯೋಚಿಸ ಬೇಕಿತ್ತು. ಎರಡನೇ ಪಂದ್ಯದಲ್ಲಾದ್ರು ರಹಾನೆಗೆ ಅವಕಾಶ ಕೊಡಬೇಕಿತ್ತು. ರಹಾನೆ ಇದ್ದಿದ್ದರೆ ಸರಣಿ ಜೀವಂತವಾಗಿರುತ್ತಿತ್ತೇನೋ.
ಹೇಳಿ ಕೇಳಿ ರಹಾನೆ ಟೆಸ್ಟ್ ತಂಡದ ಉಪನಾಯಕ…! ಅಕಸ್ಮಾತ್ ಉಪನಾಯಕ ಗಾಯಾಳು ಆಗಿದ್ದರೆ ಹೊರ ಕೂರಿಸುವುದು ಸಹಜ ಹಾಗೂ ಅನಿವಾರ್ಯ. ಆದ್ರೆ, ಯಾವುದೇ ಕಾರಣ ಇಲ್ಲದೆ ಹೊರಗಿಟ್ಟಿದ್ದಾರೆ. ಅಲ್ಲಿಗೆ ಉಪನಾಯಕನ ಪಟ್ಟಕ್ಕೂ ಮರ್ಯಾದೆ ಇಲ್ಲ…! ಟೀಂ ಇಂಡಿಯಾದಲ್ಲಿ ಉಪನಾಯಕನ ಕೆಲಸ ಬೆಂಚ್ ಕಾಯ್ಸೋದ್…!
ಎಲ್ಲೋ ಒಂದ್ ಕಡೆ ಕೋಚ್ ಮತ್ತು ನಾಯಕನಿಗೆ ಆತ್ಮೀಯವಾಗಿರೋರಿಗೆ ಹೆಚ್ಚು ಹೆಚ್ಚು ಅವಕಾಶ ಕಲ್ಪಿಸಿ ಅರ್ಹರನ್ನು ಕಡೆಗಾಣಿಸಲಾಗುತ್ತಿದೆ ಎಂದೆನಿಸುತ್ತೆ.
ಅದೇನೇ ಇರಲಿ ನಾಳೆ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ. ರಹಾನೆಗೆ ಅವಕಾಶ ಸಿಗುವ ಸಾಧ್ಯತೆ ಇದ್ದು, ರಹಾನೆ ಅವರು ಮತ್ತೊಮ್ಮೆ ತಮ್ಮ ತಾಕತ್ತು ಏನೆಂದು ತೋರಿಸಿಕೊಡಬೇಕಿದೆ.