ದಕ್ಷಿಣ ಆಫ್ರಿಕಾ ನೆಲದಲ್ಲಿ ಕ್ರಿಕೆಟ್ ಸಾಮ್ರಾಟ್ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಭರ್ಜರಿ ಆಟವಾಡುತ್ತಿದೆ.
ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲೆರಡು ಪಂದ್ಯಗಳನ್ನು ಸೋತು ಸರಣಿ ಕಳೆದುಕೊಂಡಿದ್ದ ಭಾರತ 3ನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಮೊದಲ ಗೆಲುವಿನ ಸಿಹಿ ಸವಿದಿತ್ತು.
ಆ ಗೆಲುವಿನೊಂದಿಗೆ ಏಕದಿನ ಸರಣಿ ಆಡಿದ ವಿರಾಟ್ ಪಡೆ 5-1ರಿಂದ ಸರಣಿ ತನ್ನದಾಗಿಸಿಕೊಂಡು ಇತಿಹಾಸ ನಿರ್ಮಿಸಿತ್ತು.
ಇದೀಗ ಮೂರು ಪಂದ್ಯಗಳ ಟಿ20ಸರಣಿಯಲ್ಲಿ ಮೊದಲ ಪಂದ್ಯವನ್ನು ಗೆದ್ದಿರುವ ಟೀಂ ಇಂಡಿಯಾ ಇಂದು ಸೆಂಚೂರಿಯನ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ದ. ಆಫ್ರಿಕಾ ವನ್ನು ಮಣಿಸಿ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.
ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೇವಲ 18ರನ್ ಗಳಿಸಿದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ 2000 ರನ್ ಪೂರೈಸಿದ ಮೊದಲ ಭಾರತೀಯ ಬ್ಯಾಟ್ಸಮನ್ ಎನಿಸಿಕೊಳ್ಳಲ್ಲಿದ್ದಾರೆ. ವಿರಾಟ್ ಇನ್ನು 152 ರನ್ ಗಳಿಸಿದರೆ ನ್ಯೂಜಿಲೆಂಡ್ ನ ಬ್ರೆಂಡಮ್ ಮೆಕಲ್ಲಮ್ (2140) ದಾಖಲೆ ಮುರಿದು ಟಿ20ಯಲ್ಲಿ ಅತ್ಯಧಿಕ ರನ್ ಗಳಿಸಿದ 2ನೇ ಬ್ಯಾಟ್ಸ್ ಮನ್ ಎಂಬ ಖ್ಯಾತಿಗೆ ಪಾತ್ರರಾಗುತ್ತಾರೆ. 2250 ರನ್ ಗಳಿಸಿರುವ ನ್ಯೂಜಿಲೆಂಡ್ ನ ಮಾರ್ಟಿನ್ ಗುಪ್ಟಿಲ್ ಮೊದಲ ಸ್ಥಾನದಲ್ಲಿದ್ದಾರೆ.
ಒಟ್ಟಾರೆ ಈ ದಿನ ಪಂದ್ಯ ಒಂದೆಡೆ ಭಾರತ ಸರಣಿ ಜಯಕ್ಕೆ ಹಾಗೂ ವಿರಾಟ್ ದಾಖಲೆಯೊಂದಕ್ಕೆ ಸಾಕ್ಷಿಯಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 9.30ಕ್ಕೆ ಪಂದ್ಯ ಆರಂಭವಾಗಲಿದೆ. ಮಳೆ ಅಡ್ಡಿಪಡಿಸೋ ಸಾಧ್ಯತೆ ಸಹ ಇದೆ.