ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಗೆದ್ದಿದೆ…ನಿರ್ದೇಶಕ ದುನಿಯಾ ಸೂರಿ ಮತ್ತೊಂದು ವಿಭಿನ್ನ ಪ್ರಯತ್ನದಲ್ಲಿ ದೊಡ್ಡಮಟ್ಟಿನ ಯಶಸ್ಸು ಕಂಡಿದ್ದಾರೆ.
ಸ್ಕೀನ್ ಪ್ಲೇ ಬಗ್ಗೆ ಮಾತಾಡಂಗೇ ಇಲ್ಲ…! ಅಷ್ಟೊಂದು ಸಖತ್ ಆಗಿದೆ…! ಆರಂಭದಲ್ಲಿ ಏನಾಗ್ತಿದೆ ಏನಾಗ್ತಿದೆ ಅಂತ ಯೋಚನೆ ಮಾಡ್ಬೇಕು. ಹೋಗ್ತಾ ಹೋಗ್ತಾ ಓಹೋ ಇದು ಹಿಂಗೆ ಅಂತ ಅರ್ಥ ಆಗುತ್ತೆ. ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ ಕೊನೆಯವರೆಗೂ ಕುತೂಹಲದಿಂದ ಸಿನಿರಸಿಕ ಸಿನಿಮಾವನ್ನು ಎಂಜಾಯ್ ಮಾಡ್ತಾನೆ. ಬೋರ್ ಹೊಡೆಸೋ ಪ್ರಶ್ನೆಯೇ ಇಲ್ಲ…!
ಶಿವಣ್ಣ ಅವರ ನಟನೆ, ಈ ವಯಸ್ಸಲ್ಲೂ ಅವರ ಡ್ಯಾನ್ಸ್ ಅದ್ಭುತ, ಅತ್ಯಾದ್ಭುತ, ಅತ್ಯಾಕರ್ಷಕ , ಅಮೋಘ…!
ಇವೆಲ್ಲ ಗೊತ್ತಿರೋದೇ? ನಾವೂ ಕೂಡ ಸಿನಿಮಾ ನೋಡಿದ್ದೀವಿ..ಈಗೇನ್ ರಿವಿವ್ಯೂ ಬರೀತಿದ್ದೀ ಅಂತ ಬೈಕೋ ಬೇಡಿ…ಇದು ರಿವ್ಯೂ ಅಲ್ಲ..ಟಗರು ಪಾರ್ಟ್ 2 ಬಗ್ಗೆ ಬರೆಯುವ ಮೊದಲು ಹಾಕಿದ ಪೀಠಿಕೆ.
ಹೌದು, ಟಗರು ಸಿನಿಮಾ ಸಖತ್ ಸದ್ದು ಮಾಡ್ತಿದೆ. ಖಳನಟನಾಗಿ ನಟಿಸಿದ ಧನಂಜಯ್ ಗೆ ನಿರೀಕ್ಷೆಗೆ ಮೀರಿದ ಬ್ರೇಕ್ ಸಿಕ್ಕಿದೆ. ಧನಂಜಯ್ ಡಾಲಿಯಾಗಿ ಮನೆಮಾತಾಗಿದ್ದಾರೆ. ಪ್ರತಿಯೊಂದು ಪಾತ್ರವೂ ,ಪಾತ್ರಧಾರಿಗಳೂ ತಮ್ಮದೇ ಶೇಡ್ ನಲ್ಲಿ ಮಿಂಚಿದ್ದಾರೆ. ಈ ನಡುವೆ ಟಗರು ಭಾಗ2 ಬರಲಿದೆಯೇ…? ಎಂಬ ಮಾತು ಕೇಳಿಬರುತ್ತಿದೆ.
ಅದಕ್ಕೆ ಕಾರಣ ಸಿನಿಮಾದ ಕ್ಲೈ ಮ್ಯಾಕ್ಸ್…!
ಯಸ್, ಟಗರು ಸಿನಿಮಾ ನೋಡಿದವರಿಗೆ ಇದು ಚೆನ್ನಾಗಿ ಗೊತ್ತಿದೆ. ಪುನರ್ವಸು (ಮಾನ್ವಿತ) ಮನೆಯಿಂದ ಆಚೆ ಹೋಗುವಾಗ ಎಸಿಪಿ ಶಿವು (ಶಿವರಾಜ್ ಕುಮಾರ್) ‘ಹುಷಾರು’ ಎಂದು ಹೇಳಿಕಳುಹಿಸಿತ್ತಾರೆ. ಪೊಲೀಸರಿದ್ದರೂ ಮನೆಯಿಂದ ಹೊರಗೆ ಹೋಗುವಾಗ ಹುಷಾರು ಅಂತ ಹೇಳಿಕಳುಹಿಸಬೇಕೆ ಎಂಬ ಜನಸಾಮಾನ್ಯ ನೊಂದ ಜೀವವೊಂದರ ಮಾತು ಶಿವುಗೆ ಆಗ ಕಾಡುತ್ತೆ...ವ್ಯವಸ್ಥೆಯನ್ನೂ ಇನ್ನೂ ಸ್ವಚ್ಛ ಮಾಡಬೇಕು ಎಂಬ ಕನಸಿರುವ ಅಧಿಕಾರಿ ಶಿವು ಮತ್ತೆ ಹೇಗೆಲ್ಲಾ ದುಷ್ಟರ ವಿರುದ್ಧ ಟೊಂಕಕಟ್ಟಿ ನಿಲ್ತಾರೆ ಎನ್ನೋದಕ್ಕೆ ‘ಟಗರು2’ ನೋಡಬೇಕೆ…? ಕೊನೆಯಲ್ಲಿ ತೋರಿಸಿದ ನಾಯಕ ಮತ್ತು ಖಳನಾಯಕನ ನಡುವಿನ ಸಂಭಾಷಣೆ, ಸನ್ನಿವೇಶ ಕೂಡ ಟಗರು ಭಾಗ 2 ಬರಲಿದೆ ಎಂದು ಹೇಳುವಂತಿದೆ ಎನ್ನೋದು ಸಿನಿಮಾ ನೋಡಿದ ಕೆಲವರ ಅಭಿಪ್ರಾಯ.ಈ ಬಗ್ಗೆ ಸಿನಿಮಾ ತಂಡ ಏನನ್ನೂ ಹೇಳಿಲ್ಲ…
ಟಗರು ನಿರ್ದೇಶಕ ಸೂರಿ ಆ್ಯಕ್ಷನ್ ಕಟ್ ಹೇಳಿದ 2015ರಲ್ಲಿ ತೆರೆಕಂಡ ‘ಕೆಂಡಸಂಪಿಗೆ’ ಯ ಮುಂದುವರೆದ ಭಾಗವಾಗಿ ‘ಕಾಗೆಬಂಗಾರ’ ಸಿನಿಮಾ ಬರಲಿರೋದು ನಿಮಗೆ ಗೊತ್ತೇ ಇದೆ. ಈಗ ಟಗರು2 ಕೂಡ ಬರಲಿದೆ ಎಂದು ಹೇಳಲಾಗುತ್ತಿದೆ