ಯುಗಾದಿ ಹಬ್ಬ ಬಂತು …ಹೊಸ ವರ್ಷದ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ವರ್ಷ ಭವಿಷ್ಯ ತಿಳಿಯಲು ನೀವೆಲ್ಲಾ ಉತ್ಸುಕರಾಗಿದ್ದೀರ? ಈ ಯುಗಾದಿಯಿಂದ ಯಾವ ರಾಶಿಯ ಭವಿಷ್ಯ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.
ಮೇಷ : ಮೇಷ ರಾಶಿಯವರಿಗೆ ಈ ವರ್ಷ ಮಿಶ್ರಫಲವಿದೆ. ವರ್ಷದ ಆರಂಭದಿಂದ ಅಕ್ಟೋಬರ್ ವರೆಗೆ ಗುರು ಶುಭದಾಯಕನಾಗಿರುತ್ತಾನೆ. ಇದರಿಂದ ಆರೋಗ್ಯ ಸುಧಾರಣೆ, ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ಬಂಧು ಮಿತ್ರರ ಸಹಾಯ ಸಿಗಲಿದೆ. ಬಳಿಕ
ಶನಿ ಅಶುಭದಾಯಕವಾಗಿರುವುದರಿಂದ ಕೆಲಸ ಕಾರ್ಯಗಳಲ್ಲಿ ಅಡಡತಡೆಗಳು ಬರುತ್ತವೆ. ಕುಟುಂಬದಲ್ಲಿ ಅನಾರೋಗ್ಯ, ಮನಸ್ಸಿನ ನೆಮ್ಮದಿ ಹಾಳಾಗುವುದು, ನಷ್ಟ ಮೊದಲಾದ ಸಮಸ್ಯೆಗಳು ಸಂಭವಿಸುತ್ತವೆ.
ವೃಷಭ : ಈ ವರ್ಷ ವೃಷಭರಾಶಿಯವರಿಗೆ ಅಶುಭ ಫಲಗಳೇ ಹೆಚ್ಚು. ಕುಟುಂಬದಲ್ಲಿ ತೊಂದರೆ, ಬಂಧುಮಿತ್ರರಲ್ಲಿ ವಿರೋಧ, ವೃಥಾ ತಿರುಗಾಟ , ಸರ್ಕಾರಿ ವ್ಯವಹಾರಗಳಲ್ಲಿ ವಿಘ್ನ, ಹಣಕಾಸಿನ ಅಡಚಣೆ ಮೊದಲಾದ ಸಮಸ್ಯೆಗಳಿದ್ದರೂ ಕೆಲವೊಂದು ಶುಭಫಲಗಳನ್ನು ನಿರೀಕ್ಷಿಸಬಹುದು.
ಮಿಥುನ : ಈ ರಾಶಿಯವರೂ ಸಹ ಹೆಚ್ಚು ಶುಭಫಲಗಳನ್ನು ನಿರೀಕ್ಷಿಸಲಾಗುವುದಿಲ್ಲ. ಆರಂಭದಲ್ಲಿ ಸನ್ಮಾನ , ಕುಟುಂಬದಲ್ಲಿ ಹಿತಕರ ವಾತಾವರಣ, ಸಜ್ಜನರ ಸಹವಾಸದಂತಹ ಶುಭಫಲಗಳಿದ್ದರೂ ಆನಂತರ, ಧನಹಾನಿ, ಅನಾರೋಗ್ಯ, ಮನೋವ್ಯಥೆ ಮೊದಲಾದ ಅಶುಭಫಲಗಳು ಕಂಡು ಬರುತ್ತವೆ.
ಕರ್ಕಟಕ : ವರ್ಷದ ಆರಂಭದಲ್ಲಿ ತಿರುಗಾಟ, ಸ್ಥಳ ಬದಲಾವಣೆ, ವ್ಯಾಪಾರದಲ್ಲಿ ಸಾಧಾರಣ ಲಾಭ, ನೆಮ್ಮದಿ ಇಲ್ಲದಿರುವಿಕೆ ಮೊದಲಾದ ಅಶುಭ ಫಲಗಳಿವೆ. ವರ್ಷದ ಉತ್ತರಾರ್ಧದಿಂದ ಧನಲಾಭ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ ಮತ್ತಿತರ ಶುಭಫಲಗಳಿವೆ.
ಸಿಂಹ : ಕಾರ್ಯಗಳಲ್ಲಿ ಅಡಚಣೆ, ಸಾಧಾರಣ ಲಾಭ, ಕಲಹ, ಮನೋವ್ಯಥೆ, ಅನಗತ್ಯ ತಿರುಗಾಟ, ಸೇವಕರಿಂದ ಧನಹಾನಿ, ಆರೋಗ್ಯ ವ್ಯತ್ಯಯದಂತಹ ಅಶುಭಫಲಗಳೇ ಹೆಚ್ಚು.
ಕನ್ಯಾ : ವರ್ಷಾದಿಯಲ್ಲಿ ಆರೋಗ್ಯ ಸುಧಾರಣೆ, ವಸ್ತ್ರಾಭರಣ ಪ್ರಾಪ್ತಿ, ಧನಲಾಭ ಮೊದಲಾದ ಶುಭಫಲಗಳಿವೆ. ವರ್ಷಾರ್ಧದ ನಂತರ ಅನಾರೋಗ್ಯ, ಕಾರ್ಯ ವಿಘ್ನ, ಮನಸ್ಸಿನ ನೆಮ್ಮದಿ ಹಾಳು ಮೊದಲಾದ ದುಷ್ಪಲಗಳಿವೆ.
ತುಲಾ : ವ್ಯಾಪಾರ , ವ್ಯವಹಾರಗಳಲ್ಲಿ ಜಯ, ಧನಲಾಭ, ಉದ್ಯೋಗದಲ್ಲಿ ಪ್ರಗತಿ ಮೊದಲಾದ ಶುಭಫಲಗಳಿವೆ.
ವೃಶ್ಚಿಕ : ಅಧಿಕ ತಿರುಗಾಟ, ಸ್ಥಳ ಬದಲಾವಣೆ, ಧನವ್ಯಯ, ವಂಚನೆಗೊಳಗಾಗುವಿಕೆಯಂತಹ ತೊಂದರೆಗಳೇ ಹೆಚ್ಚು.
ಧನು : ವರ್ಷದ ಮಧ್ಯಭಾಗದವರೆಗೆ ಕಾರ್ಯಾನುಕೂಲ, ವಿವಹಾದಿ ಮಂಗಳಕಾರ್ಯಗಳು, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ಮತ್ತಿತರ ಶುಭಫಲಗಳುಂಟು, ನಂತರ ಕೆಲಸ ಕಾರ್ಯಗಳಲ್ಲಿ ಅಡಚಣೆ, ಮನೋವ್ಯಥೆ ಮೊದಲಾದ ಅಶುಭ ಫಲಗಳೇ ಹೆಚ್ಚು.
ಮಕರ : ವರ್ಷದ ಆರಂಭದಲ್ಲಿ ಮನಸ್ಸಿಗೆ ನಾನಾ ರೀತಿಯ ಚಿಂತೆ, ಕಾರ್ಯಸಾಧನೆಗೆ ತಿರುಗಾಟ, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ , ಮಿತ್ರ ವಿರೋಧ ಮೊದಲಾದ ಫಲಗಳಿವೆ. ವರ್ಷದ ಉತ್ತರಾರ್ಧದಲ್ಲಿ ನೆಮ್ಮದಿ, ಮಂಗಳ ಕಾರ್ಯಾನುಕೂಲ, ಬಂಧು ಮಿತ್ರರ ಸಹಾಯ, ಗೌರವ ಪ್ರಾಪ್ತಿ ಮೊದಲಾದ ಶುಭಫಲಗಳಿವೆ.
ಕುಂಭ : ಪುಣ್ಯಕ್ಷೇತ್ರ ದರ್ಶನ, ಕೃಷಿಯಲ್ಲಿ ಉತ್ತಮ ಫಲ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಸ್ಥಿರಾಸ್ಥಿ ಪ್ರಾಪ್ತಿ, ಶುಭಕಾರ್ಯ ನಡೆಯುವಿಕೆ ಮೊದಲಾದವು ವರ್ಷಾಧಿಯಲ್ಲಿವೆ. ವರ್ಷದ ಉತ್ತರಾರ್ಧದಲ್ಲಿ ತಿರುಗಾಟ, ಅಧಿಕ ಧನವ್ಯಯ, ಬಂಧುವಿರೋಧ ಮನಸ್ಸಿಗೆ ಚಿಂತೆ ಮೊದಲಾದ ಫಲಗಳಿವೆ.
ಮೀನ : ಕಾರ್ಯ ಸಾಧನೆಗೆ ಅಧಿಕಶ್ರಮ ಬೇಕು, ದುಷ್ಟರ ಸಹವಾಸ, ಮನಸ್ಸಿಗೆ ಚಿಂತೆ ಮೊದಲಾದ ಅಶುಭ ಫಲಗಳು ವರ್ಷದ ಆರಂಭದಲ್ಲಿದ್ದು, ಉತ್ತರಾರ್ಧದಲ್ಲಿ ಶುಭಫಲಗಳನ್ನು ನಿರೀಕ್ಷಿಸ ಬಹುದು.