ನಿಮ್ಮ ನಾಲಗೆಯಲ್ಲಿ ಸಂಸ್ಕಾರವಿದೆಯೇ?

Date:

ಇದು ತಾಂತ್ರಿಕ ಯುಗ. ಕೈಯಲ್ಲೊಂದು ಸ್ಮಾರ್ಟ್‍ಫೋನ್ ಹಿಡಿದು, ಅನ್‍ಲಿಮಿಟೆಡ್ ಡೇಟಾ ನೀಡುವ ಇಂಟರ್ನೆಟ್ ಪ್ಯಾಕ್ ಹಾಕಿಸಿಕೊಂಡು ಫೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಂಗಳಲ್ಲಿ ಫೋಟೋ, ಸ್ಟೇಟಸ್ ಹಾಕುತ್ತಾ ಕೂತರೆ ನಮಗೆ ನಾವೇ ಹೀರೋಗಳು. ಬರುವ ಲೈಕ್ಸ್, ಕಾಮೆಂಟುಗಳನ್ನು ನೋಡುತ್ತಾ, ಅವುಗಳಿಗೆ ಉತ್ತರಿಸುತ್ತಾ ಕುಳಿತರೆ ಇಹದ ಪರಿವೆಯೇ ಇರುವುದಿಲ್ಲ. ದಿನಕಳೆದಂತೆ ಫೇಸ್ಬುಕ್ ಉಪಯೋಗಿಸುವವರು ಜಾಸ್ತಿಯಾಗುತ್ತಿದ್ದು, ಬಳಕೆದಾರರ ಸಂಖ್ಯೆ ಹೆಚ್ಚಿದಂತೆ ಸಾಮಾಜಿಕ ಜಾಲತಾಣಗಳೊಳಗೆ ಜಗಳ, ಕೂಗಾಟಗಳೂ ಹೆಚ್ಚುತ್ತಿವೆ. ಧರ್ಮ, ಪಂಥ, ಪಕ್ಷ, ದೇಶ, ಭಾಷೆ ಹೀಗೆ ಯಾವುದನ್ನೂ ಬಿಡದೆ ಎಲ್ಲಾ ವಿಚಾರಗಳಿಗೂ ಕಿತ್ತಾಡುವುದು ಸಾಮಾನ್ಯವಾಗಿದೆ. ಬರೀ ಸೈದ್ಧಾಂತಿಕ, ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಚರ್ಚಿಸಿವುದಾದರೆ ಸಹಿಸಬಹುದಿತ್ತು, ಆದರಿಲ್ಲಿ ವೈಯುಕ್ತಿಕ ನಿಂದನೆಗಳೇ ಹೆಚ್ಚುತ್ತಿದ್ದು ಸಭ್ಯತೆಯ ರೇಖೆ ಅಳಿಸಿ ಹೋಗಿದೆ. ನಮಗೇ ಅರಿವಿಲ್ಲದಂತೆ ಅನಾವಶ್ಯಕ ವಿಚಾರಗಳಿಗೆ ತಲೆಹಾಕುವಂತೆ ಪ್ರಚೋದಿಸುವ ಸಾಮಾಜಿಕ ಜಾಲತಾಣಗಳು ಸಮಾಜದ ಸ್ವಾಸ್ಥ್ಯವನ್ನು ಕದಡುವುದರ ಜೊತೆಗೆ ನಮ್ಮ ವ್ಯಕ್ತಿತ್ವಕ್ಕೇ ಧಕ್ಕೆ ತರುವ ಸಾಧ್ಯತೆಯೂ ಅಧಿಕ. ಆದ್ದರಿಂದ ಇವುಗಳಿಂದ ಕಲಿಯಬೇಕಾಗಿದ್ದು ಎಷ್ಟಿದೆಯೋ, ಕಲಿಯಬಾರದ್ದೂ ಅಷ್ಟೇ ಇದೆ. ಈ ವಿಚಾರವಾಗಿ ಇಂದಿನ ಕಿರುಜಗಲಿ ಅಂಕಣದಲ್ಲೊಂದು ಕಿರುನೋಟ.


ಪ್ರತಿಯೊಬ್ಬ ವ್ಯಕ್ತಿಯ ನಡೆ, ನುಡಿ ಆತನ ವ್ಯಕ್ತಿತ್ವದ ಕೈಗನ್ನಡಿ. ನಾವು ಹೇಗೆ ಮಾತನಾಡುತ್ತೇವೆ, ಎಂತಹ ಪದಗಳನ್ನು ಉಪಯೋಗಿಸುತ್ತೇವೆ, ತೀರಾ ಒತ್ತಡದ ಸಂದರ್ಭದಲ್ಲೂ ಹೇಗೆ ನಡೆದುಕೊಳ್ಳುತ್ತೇವೆ ಎಂಬುದರ ಮೆಲೆ ನಮ್ಮ ಕುರಿತು ಅಭಿಪ್ರಾಯ ರೂಪುಗೊಳ್ಳುವುದು ಸಹಜ. ನೀವು ಫೇಸ್ಬುಕ್ಕಿನಲ್ಲಿ ಸಕ್ರಿಯವಾಗಿದ್ದರೆ ಇಂತಹ ವಿಚಾರಗಳನ್ನು ಖಂಡಿತಾ ಗಮನಿಸಿರುತ್ತೀರಿ. ಅಲ್ಲಿರುವ ಒಂದಷ್ಟು ಜನರು ಉಪಯೋಗಿಸುವ ಭಾಷೆಯಂತೂ ಅವರ ದೇವರಿಗೇ ಪ್ರೀತಿ. ದೃಶ್ಯ ಮಾಧ್ಯಮಗಳ ಫೇಸ್ಬುಕ್ ಪೇಜಿನಲ್ಲಿ ಬಿತ್ತರವಾಗುವ ರಾಜಕೀಯ, ಧರ್ಮ ಅಥವಾ ಪಂಥದ ಕುರಿತಾದ ಚರ್ಚೆಗಳ ನೇರಪ್ರಸಾರಗಳತ್ತ ಕಣ್ಣು ಹಾಯಿಸಿದರಂತೂ ಹತ್ತರಲ್ಲಿ ಎಂಟು ಕಮೆಂಟುಗಳಾದರೂ ಅಸಭ್ಯ, ಅಸಂಬದ್ಧ ಆಗಿರುವುದನ್ನು ಗಮನಿಸಬಹುದು. ನಟರು, ರಾಜಕೀಯ ನಾಯಕರು ಅಥವಾ ಸೋ ಕಾಲ್ಡ್ ಸೆಲೆಬ್ರಿಟಿಸ್‍ಗಳನ್ನು ವಿರೋಧಿಸಿದರೆ ಅವರ ಅಭಿಮಾನಿಗಳು ನೀಡುವ ಪ್ರತ್ಯುತ್ತರಗಳು, ಟ್ರೋಲ್ ಪೇಜ್‍ಗಳಲ್ಲಿ ಹಾಕುವ ಪೋಸ್ಟ್ ಮತ್ತು ಕಮೆಂಟ್‍ಗಳು, ಹೀಗೇ ಎಲ್ಲದರಲ್ಲೂ ಹೆಚ್ಚಾಗಿ ಅಶ್ಲೀಲ ಪದಗಳೇ ಬಂಡವಾಳವಾಗಿವೆ. ಕೆಲವು ಸನ್ನಿವೇಶಗಳಲ್ಲಿ ಅತ್ಯುತ್ತಮ ಬರಹಗಾರರೆನಿಸಿಕೊಂಡವರೂ ಸಹ ತಾಳ್ಮೆಗೆಟ್ಟು ಸಭ್ಯತೆಯ ಗಡಿ ದಾಟುತ್ತಾರೆ ಅದು ಆಕ್ಷೇಪಾರ್ಹವಾದರೂ ಕೂಡ ಅವರ ಸಿಟ್ಟಿಗೊಂದು ಬಲವಾದ ಕಾರಣವಾದರೂ ಇರುತ್ತದೆ. ಆದರೆ ಒಂದಷ್ಟು ಜನರು ಮಾತ್ರ ಯಾವ ಗೊತ್ತು, ಗುರಿ, ಉದ್ದೇಶಗಳೂ ಇಲ್ಲದೆ ಸಿಕ್ಕ ಸಿಕ್ಕಲ್ಲೆಲ್ಲಾ ತೀರಾ ಕೊಳಕು ಪದಗಳನ್ನು ಗೀಚುವುದನ್ನೇ ಕಾಯಕವನ್ನಾಗಿಸಿಕೊಂಡಿರುತ್ತಾರೆ. ನಮ್ಮ ನಿಲುವು, ಸಿದ್ಧಾಂತಗಳನ್ನು ಸಮರ್ಥಿಸಿಕೊಳ್ಳುವುದಾದರೆ ಅದನ್ನು ಸಭ್ಯ ರೀತಿಯಲ್ಲಿ ಎದುರಿನವರಿಗೆ ತಲುಪಿಸಬೇಕೇ ವಿನಃ ಒಮ್ಮೆಲೇ ಅವರ ಮೇಲೆ ಮುಗಿಬಿದ್ದು ನಿಂದಿಸಲು ಶುರುಮಾಡುವುದಲ್ಲ. ಹಾಗೆ ಮಾಡಿದಲ್ಲಿ ಬೆತ್ತಲಾಗುವುದು ನಮ್ಮ ವ್ಯಕ್ತಿತ್ವವೇ ಹೊರತು ಅವರದ್ದಲ್ಲ. ಯಾರನ್ನೋ ವಿರೋಧಿಸುವ ಅಥವಾ ಸಮರ್ಥಿಸಿಕೊಳ್ಳುವ ಭರದಲ್ಲಿ ಕಳಪೆ ಭಾಷೆಯನ್ನು ಉಪಯೋಗಿಸಿದರೆ ತಗ್ಗುವುದು ನಮ್ಮ ಘನತೆಯೇ ಹೊರತು ಅವರದ್ದಲ್ಲ.
ನನಗೆ ಈ ಸಿದ್ಧಾಂತ, ಮಣ್ಣು ಮಸಿ ಏನೂ ಗೊತ್ತಿಲ್ಲ ಗುರೂ ಸುಮ್ನೆ ಟೈಂ ಪಾಸ್‍ಗೆ ಫೇಸ್ಬುಕ್ ಉಪಯೋಗಿಸ್ತೀನಿ ಎನ್ನುವ ಪೈಕಿಯವರೂ ಒಂದಷ್ಟು ಜನರಿರುತ್ತಾರೆ. ಅವರು ಯಾವುದೇ ರೀತಿಯ ಗಂಭೀರ ವಿಚಾರಗಳಿಗೆ ತಲೆ ಹಾಕುವುದಿಲ್ಲ. ಆದರೆ ತಲೆಹರಟೆಯ ನೆಪದಲ್ಲಿ ಕೆಲವೊಮ್ಮೆ ಶುದ್ಧ ಪೋಲಿಗಳಾಗಿಬಿಡುತ್ತಾರೆ, ತಮ್ಮ ಸ್ನೇಹಿತನನ್ನು ಯಾವುದೋ ಪೋಸ್ಟ್‍ಗೆ ಟ್ಯಾಗ್ ಮಾಡುವುದೋ ಅಥವಾ ಕಾಲೆಳೆಯುವುದೋ ಮಾಡಲು ಹೋಗಿ ಅವರು ವೈಯುಕ್ತಿಕವಾಗಿ ಉಪಯೋಗಿಸುವ ಶಬ್ದ ಭಂಡಾರವನ್ನು ಫೇಸ್ಬುಕ್ಕಿನಲ್ಲಿ ಹರಿಬಿಡುತ್ತಾರೆ, ಅವರ ಮಟ್ಟಿಗೆ ಅದು ಕಾಮನ್. ಆದರೆ ನೋಡುವವರ ಕಣ್ಣಲ್ಲಿ ಮಾತ್ರ ಅಪಾಪೋಲಿಗಳಾಗಿಬಿಡುತ್ತಾರೆ. ಅಂತಹವರೂ ಸಹ ಸಹ ತಮ್ಮದೇ ಆಪ್ತ ಸ್ನೇಹಿತರಿಗಾದರೂ ಕೂಡ ಸಾರ್ವಜನಿಕವಾಗಿ ಹಾಕುವ ಕಮೆಂಟ್ ಮೇಲೆ ಹಿಡಿತವಿಟ್ಟುಕೊಳ್ಳುವುದು ಅವಶ್ಯಕ.


ಖಾಸಗಿಯಾಗಿ ನಮ್ಮ ಸ್ನೇಹಿತರೊಡನೆ ಹರಟುವುದಕ್ಕೂ, ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಸಾರ್ವಜನಿಕವಾಗಿ ನಾವು ಉಪಯೋಗಿಸುವ ಭಾಷೆ, ನಮ್ಮ ಭಾವ ಭಂಗಿಗಳು ಇತರರಿಗೆ ಮುಜುಗರ ಉಂಟುಮಾಡುವಂತಾದರೆ ನಾವೆಷ್ಟೇ ವಿದ್ಯಾವಂತರಾದರೂ ಹಾಳೂರ ಹದ್ದಿಗಿಂತಲೂ ಕಡೆಯಾಗುತ್ತೇವೆ. ನಮ್ಮ ಅಭಿಪ್ರಾಯ, ವಿಚಾರ ಮಂಡನೆ, ವ್ಯಂಗ್ಯ, ಹಾಸ್ಯಪ್ರಜ್ಞೆ ಎಲ್ಲವನ್ನೂ ಸಭ್ಯತೆಯ ರೇಖೆಯೊಳಗಿದ್ದುಕೊಂಡೇ ಪರಿಣಾಮಕಾರಿಯಾಗಿ ಮತ್ತೊಬ್ಬರಿಗೆ ತಲುಪಿಸಬಹುದು. ಅಸಭ್ಯ, ಅಶ್ಲೀಲ ಪದಗಳೇನಿದ್ದರೂ ಆ ಕ್ಷಣದ ಕೋಪ, ಹತಾಶೆಗಳನ್ನು ನೀಗಿಸುತ್ತವಷ್ಟೇ, ಆದರೆ ನಂತರದಲ್ಲಿ ನಮ್ಮ ವ್ಯಕ್ತಿತ್ವಕ್ಕೆ ಶಾಶ್ವತ ಕಪ್ಪು ಚುಕ್ಕೆಯನ್ನಿಡುತ್ತವೆ. ವಿಚಾರವಂತನಾದವನು ಬೈಗುಳಗಳಲ್ಲೂ ಸೃಜನಾತ್ಮಕತೆಯನ್ನು ಹುಡುಕಿ, ಅಶ್ಲೀಲತೆಯನ್ನು ದೂರವಿಟ್ಟೇ ಬಯ್ಯುತ್ತಾನಂತೆ. ಅದರಲ್ಲೂ ಸಾರ್ವಜನಿಕವಾಗಿ ಮಾತನಾಡುವಾಗ/ಬರೆಯುವಾಗ ಭಾಷೆಯ ಮೇಲೆ ಹಿಡಿತವಿರಲೇಬೇಕು, ತಪ್ಪಿದರೆ ನಮಗೆ ಮಾತ್ರವಲ್ಲದೇ ನಮ್ಮನ್ನು ಬಾಲ್ಯದಿಂದಲೂ ತಿದ್ದಿ, ತೀಡಿ ಬೆಳೆಸುವ ತಂದೆ – ತಾಯಿ, ಶಿಕ್ಷಕರು, ಹಿರಿಯರಿಗೂ ಅದು ಶೇಮ್ ಶೇಮ್!!


ಇದನ್ನೆಲ್ಲಾ ತಿಳಿ ಹೇಳೋಕೆ ಹೋದರೆ “ಅಯ್ಯೋ! ನಿನ್ ಕೆಲ್ಸ ನೋಡ್ಕೋ ಹೋಗಯ್ಯಾ, ನಾ ಮಾತಾಡದೇ ಹಿಂಗೆ ಅದೇನ್ ಮಾಡ್ಕೋತೀಯೋ ಮಾಡ್ಕೋ ಹೋಗ್” ಅಂತ ನಿಮಗೆ ಡೈಲಾಗ್ ಎಸೆದ್ರೂ ಎಸೆಯಬಹುದು ಕೆಲ ಪುಣ್ಯಾತ್ಮರು. ಆದರೆ ನಮ್ಮ ಮಿತಿಯನ್ನು ನಾವು ಮರೆತಾಗ, ಬೇರೆಯವರು ನಿಮ್ಮ ನಾಲಗೆಯಲ್ಲಿ ಸಂಸ್ಕಾರವಿದೆಯೇ ಎಂದು ಕೇಳಿದರೆ ತಪ್ಪೇನಿಲ್ಲ ಎಂಬುದನ್ನಾದರೂ ನೆನಪಿನಲ್ಲಿಟ್ಟುಕೊಳ್ಳಬೇಕು.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...