ಶತಕಗಳ ಶತಕ ದಾಖಲೆ ಬರೆದಿರುವ ಸಚಿನ್ ತೆಂಡೂಲ್ಕರ್ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ದಾಖಲೆಯನ್ನು ಮುರಿಯುವುದನ್ನು ಎದುರು ನೋಡ್ತಿದ್ದಾರೆ.
ನಿನ್ನೆಯಷ್ಟೇ ತಮ್ಮ45ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಟೀಂ ಇಂಡಿಯಾದ ನಾಯಕ ವಿರಾಟ್ ಬರೆಯುವ ವಿಶೇಷ ದಾಖಲೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿರೋದನ್ನು ತಿಳಿಸಿದ್ದಾರೆ.
ಸಚಿನ್ 200ಟೆಸ್ಟ್ ಪಂದ್ಯಗಳಿಂದ 51ಶತಕ ಹಾಗೂ 463 ಏಕದಿನ ಪಂದ್ಯಗಳಿಂದ 49 ಶತಕ ಬಾರಿಸಿದ್ದಾರೆ.ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಿಂದ ಒಟ್ಟಾರೆ ಸಚಿನ್ ಬಾರಿಸಿರುವ ಶತಕಗಳ ಸಂಖ್ಯೆ 100.
ಸಚಿನ್ ದಾಖಲೆಯನ್ನು ಮುರಿಯುವುದು ಅಷ್ಟು ಸುಲಭವಲ್ಲ ಎಂದು ಹೇಳುತ್ತಿರುವಾಗಲೇ ಉದಯಿಸಿದ್ದು ರನ್ ಮಷಿನ್ ವಿರಾಟ್ ಕೊಹ್ಲಿ.
ವಿರಾಟ್ ಟೀಂ ಇಂಡಿಯಾಕ್ಕೆ ಎಂಟ್ರಿ ಕೊಟ್ಟ ಆರಂಭದ ದಿನಗಳಲ್ಲಿ ಭರವಸೆ ಮೂಡಿಸಿದ ಆಟಗಾರ. ನಿರೀಕ್ಷೆಗೂ ಮೀರಿ ಟೀಂ ಇಂಡಿಯಾದ ಆಧಾರ ಸ್ತಂಭವಾಗಿ ಬಳಿಕ ಕ್ಯಾಪ್ಟನ್ ಆದ ಸ್ಟಾರ್ ಕ್ರಿಕೆಟಿಗ.
ಸಚಿನ್ ದಾಖಲೆಗಳನ್ನು ಮುರಿದರೇ ಇವರೇ ಮುರಿಯಬೇಕು ಎಂಬ ಮಾತುಗಳು ಕೇಳಿಬರುತ್ತಿದ್ದವು ನಿನ್ನೆ ಮೊನ್ನೆಯವರೆಗೆ. ಆದರೆ ಇಂದು ಆ ಮಾತುಗಳು ಸತ್ಯವಾಗುವ ಕಾಲ ಹತ್ತಿರವಾಗಿದೆ. ವಿರಾಟ್ ಸಚಿನ್ ದಾಖಲೆಗಳನ್ನು ಅಳಿಸುತ್ತಿದ್ದಾರೆ.
208 ಏಕದಿನ ಪಂದ್ಯಗಳಿಂದ ಈಗಾಗಲೇ 35 ಶತಕ ಬಾರಿಸಿದ್ದಾರೆ. ಏಕದಿನದಲ್ಲಿ ಶತಕಗಳ ಅರ್ಧ ಶತಕ ಬಾರಿಸಲು ಕೊಹ್ಲಿಗೆ ಬೇಕಿರೋದು ಇನ್ನು 15 ಶತಕ. ಸಚಿನ್ ತೆಂಡೂಲ್ಕರ್ ವಿರಾಟ್ ಬಾರಿಸುವ 50ನೇ ಶತಕ ಸಂಭ್ರಮಿಸಲು ಸ್ಪೆಷಲ್ ಪ್ಲಾನ್ ಮಾಡಿಕೊಂಡಿದ್ದಾರೆ.
ಹೌದು, ವಿರಾಟ್ 50ನೇ ಏಕದಿನ ಶತಕ ಬಾರಿಸುವಾಗ ವೈಯುಕ್ತಿಕವಾಗಿ ಅಲ್ಲಿಯೇ ಇದ್ದು ಸಂಭ್ರಮದಲ್ಲಿ ಪಾಲ್ಗೊಳ್ಳಲು ಸಚಿನ್ ಪ್ಲಾನ್ ಮಾಡಿಕೊಂಡಿದ್ದಾರೆ.