ಜುಲೈ 27 ರಂದು ಚಂದ್ರಗ್ರಹಣ ಸಂಭವಿಸಲಿದೆ.27ರ ರಾತ್ರಿ 11.55ರಿಂದ 28ರ ಮಧ್ಯರಾತ್ರಿ 3.50ರ ವರೆಗೆ ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದ್ದು, ಇದು ಯಾವ ರಾಶಿಯ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದರ ಮಾಹಿತಿ ಇಲ್ಲಿದೆ .
ಮೇಷ: ಈ ರಾಶಿಯವರಿಗೆ ಚಂದ್ರಗ್ರಹಣವು ಶುಭ ಸಮಾಚಾರಗಳನ್ನು ಹೊತ್ತು ತರಲಿದೆ.
ಅನೇಕ ದಿನದಿಂದ ಕಾಡ್ತಿದ್ದ ದುಃಖ ದೂರಾಗಿ ಸುಖ ನೆಲೆಸುತ್ತದೆ. ಕೊರಗು ಮರೆಯಾಗಿ ನೆಮ್ಮದೆ ಮನೆಮಾಡುತ್ತದೆ.
ವೃಷಭ: ಈ ಗ್ರಹಣವು ವೃಷಭ ರಾಶಿಯವರಿಗೆ ಶುಭವೂ ಅಲ್ಲ, ಅಶುಭವೂ ಅಲ್ಲ. ಇದು ಮಿಶ್ರಫಲ ನೀಡುತ್ತದೆ. ಸಂಬಂಧಪಡದ ವಿಷಯಗಳಿಗೆ ತಲೆಹಾಕಬೇಡಿ. ಸುಮ್ಮನೇ ಏನೇನೋ ಮಾತಾಡದೇ ಇರಿ. ನಿಮ್ಮ ಪಾಡಿಗೆ ನೀವಿದ್ದರೆ ಸಂಭವನೀಯ ಅವಮಾನ ತಪ್ಪಿಸಿಕೊಳ್ಳಬಹುದು.
ಮಿಥುನ: ಈ ಬಾರಿಯ ಚಂದ್ರಗ್ರಹಣವು ಮಿಥುನ ರಾಶಿಯವರಿಗೆ ಅಶುಭ ಫಲಗಳೇ ಹೆಚ್ಚಾಗಿವೆ.
ಉದ್ಯೋಗ, ಕುಟುಂಬ, ವೃತ್ತಿ- ವ್ಯಾಪಾರದಲ್ಲಿ ಕಷ್ಟಗಳೇ ಗೋಚರಿಸುತ್ತಿವೆ. ಮೇಲಿಂದ ಮೇಲೆ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನೀವು ಅಂದುಕೊಂಡಂತೆ ಯಾವುದೂ ನಡೆಯುವುದಿಲ್ಲ .
ಕರ್ಕಾಟಕ: ಈ ಗ್ರಹಣವು ಕರ್ಕಾಟಕ ರಾಶಿಯವರಿಗೆ ಮಿಶ್ರಫಲ ನೀಡಲಿದೆ.
ಸ್ತ್ರೀ ಸಂಬಂಧಿ ವಿಚಾರದಲ್ಲಿ ಕರ್ಕಾಟಕ ರಾಶಿಯ ಪುರುಷರು ಹೆಚ್ಚು ಎಚ್ಚರವಾಗಿರಬೇಕು. ಇನ್ನು ಈ ರಾಶಿಯ ಸ್ತ್ರೀಯರಿಗೆ ಗುಪ್ತ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಸಮಸ್ಯೆ ಹೆಚ್ಚುತ್ತದೆ.
ಸಿಂಹ: ಈ ಚಂದ್ರಗ್ರಹಣವು ಸಿಂಹ ರಾಶಿಯವರಿಗೆ ಶುಭಫಲ ನೀಡಲಿದೆ. ಒಳ್ಳೆಯ ವಿಚಾರಗಳನ್ನು ಕೇಳುವಿರಿದ್ದೀರಿ. ಒಳ್ಳೆಯದೇ ಆಗಲಿದೆ.
ಕನ್ಯಾ: ಮನಸ್ಸಿಗೆ ಅನಗತ್ಯ ಚಿಂತೆ ಕಾಡುತ್ತದೆ. ಸುಖಾಸುಮ್ಮನೆ ಬೇಡ ವಿಚಾರಗಳು ತಲೆ ತಿನ್ನುತ್ತವೆ. ಮಾನಸಿಕ ಹಿಂಸೆ ಅನುಭವಿಸ್ತೀರಿ.
ತುಲಾ: ಬೇಡದ ವಿಚಾರಕ್ಕೆ ಮೂಗು ತೂರಿಸಕ್ಕೆ ಹೋಗಬೇಡಿ
ಈ ಕೇತುಗ್ರಸ್ತ ಚಂದ್ರ ಗ್ರಹಣ ಮುಖ್ಯವಾಗಿ ನಿಮಗೆ ಸಮಸ್ಯೆಯನ್ನು ತರುತ್ತದೆ. ನಿಮ್ಮ ಮಾತು ಎಲ್ಲರೂ ಕೇಳುತ್ತಾರೆ. ಎಲ್ಲರೂ ಸ್ನೇಹಿತರು ಎಂಬ ಧೋರಣೆಯಿಂದ ಎಲ್ಲ ವಿಚಾರಕ್ಕೂ ಮೂಗು ತೂರಿಸಲು ಹೋಗುವುದು ಒಳ್ಳೆಯದಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ, ಆ ನಂತರವೇ ಮುಂದಕ್ಕೆ ಹೆಜ್ಜೆ ಇಡಿ. ನಿಮ್ಮದಲ್ಲದ, ಬೇಡದ ವಿಚಾರಕ್ಕೆ ಮೂಗು ತೂರಿಸಬೇಡಿ.
ವೃಶ್ಚಿಕ: ಅನುಕೂಲಕರ ಸನ್ನಿವೇಶ ಸೃಷ್ಟಿ
ಸಾಡೇಸಾತ್ ನಿಮಗೆ ನಡೆಯುತ್ತಿದ್ದರೂ ಈ ಗ್ರಹಣದಿಂದ ಬಹಳ ಅನುಕೂಲಕರವಾದ ಸಮಯವನ್ನು ಕಾಣುತ್ತೀರಿ. ದುಡ್ಡು- ಕಾಸು ಕಾಣುವಂತೆ ಆಗುತ್ತದೆ. ಶುಭ ಸುದ್ದಿಯನ್ನು ಕೇಳುತ್ತೀರಿ. ಲಾಭದ ನಿರೀಕ್ಷೆಯಲ್ಲಿದ್ದರೆ ಅದು ಕೂಡ ಸಾಧ್ಯವಾಗುತ್ತದೆ. ಯಾವುದಾದರೂ ಸಾಲಕ್ಕೆ ಅರ್ಜಿ ಹಾಕಿಕೊಂಡು ಅದರ ನಿರೀಕ್ಷೆಯಲ್ಲಿದ್ದರೆ ಅದು ಕೂಡ ನಿಮ್ಮ ಕೈ ಸೇರಲಿದೆ.
ಧನು: ಧನ ನಷ್ಟ ಆಗುವ ಸಾಧ್ಯತೆಗಳಿವೆ
ನಿಮಗೆ ಎರಡನೇ ಸ್ಥಾನದಲ್ಲಿ ಗ್ರಹಣ ನಡೆಯುವುದರಿಂದ ಹಣಕಾಸಿನ ವಿಚಾರದಲ್ಲಿ ನಷ್ಟವಿದೆ. ಅದರಲ್ಲೂ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಬೇಕು ಅನ್ನೋ ಆಲೋಚನೆ ಇದ್ದರೆ ಅದನ್ನು ಕೈ ಬಿಡಿ. ಅಷ್ಟೇ ಇಲ್ಲ, ಯಾವುದೇ ರೀತಿಯ ರಿಸ್ಕ್ ಒಳಗೊಂಡ ಹೂಡಿಕೆಯನ್ನು ಈ ಸಂದರ್ಭದಲ್ಲಿ ಮಾಡಬೇಡಿ. ಹಾಗೊಂದು ವೇಳೆ ಮಾಡಿದರೆ ತೀರಾ ನಷ್ಟವನ್ನು ಅನುಭವಿಸುತ್ತೀರಿ, ಎಚ್ಚರ.
ಮಕರ: ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ
ನಿಮ್ಮ ರಾಶಿಯಲ್ಲೇ ಗ್ರಹಣ ನಡೆಯುವುದರಿಂದ ಗಾಯಗಳಾಗುವ ಸಾಧ್ಯತೆ ಇದೆ. ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆ ಇದೆ. ಈಜಲು ಹೋಗಬೇಡಿ. ಮರ ಹತ್ತಬೇಡಿ. ತೀರಾ ಅನಿವಾರ್ಯ ಅಲ್ಲದಿದ್ದರೆ ವಾಹನವನ್ನೇ ಚಾಲನೆ ಮಾಡಬೇಡಿ. ಇನ್ನು ಗಾಡಿ ಚಾಲನೆ ಮಾಡುವುದು ಅನಿವಾರ್ಯ ಎಂದಾದಲ್ಲಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಿ. ಗಾಯ, ಮೈ-ಕೈ ನೋವು ಕಾಣಿಸುತ್ತಿದೆ.
ಕುಂಭ: ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ನೀವು ಎಷ್ಟು ಸಾಧ್ಯವೋ ಅಷ್ಟು ಆರೋಗ್ಯದ ಬಗ್ಗೆ ಎಚ್ಚರವಾಗಿರಿ. ಎಲ್ಲೆಂದರಲ್ಲಿ ಊಟ ಮಾಡಬೇಡಿ, ನೀರು ಕುಡಿಯಬೇಡಿ. ಇನ್ನು ಎರಡ್ಮೂರು ತಿಂಗಳ ಕಾಲ ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ, ಈ ಗ್ರಹಣವು ನಿಮಗೆ ಅಶುಭ ಫಲವನ್ನು ನೀಡುತ್ತದೆ. ಅದರಲ್ಲೂ ಆರೋಗ್ಯ ಬಾಧೆಯನ್ನು ತರುವುದರಿಂದ ನಾಲಗೆ ಮೇಲೆ ಹತೋಟಿಯಿರಲಿ.
ಮೀನ: ಭೂಮಿ ಲಾಭ, ವಸ್ತು ಲಾಭ
ನಿಮಗೆ ಈ ಕೇತುಗ್ರಸ್ತ ಚಂದ್ರಗ್ರಹಣದಿಂದ ಬಹಳ ಶುಭ ಫಲಗಳಿವೆ. ವ್ಯಾಪಾರದಲ್ಲಿ ಲಾಭ, ಭೂಮಿ ಲಾಭ, ವಸ್ತು ಲಾಭ, ವ್ಯಕ್ತಿಗಳಿಂದ ಲಾಭ ಎಲ್ಲದರಿಂದ ಎಲ್ಲದರಲ್ಲಿಯೂ ಲಾಭ ಕಾಣುತ್ತಿದೆ. ಇನ್ನು ಇಷ್ಟು ಕಾಲ ಆರೋಗ್ಯ ಸಮಸ್ಯೆ ಇತ್ತು ಎಂದು ಕಂಗಾಲಾಗಿರುವವರಿಗೆ ಆ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ.