ಯುವತಿ ಚೆನ್ನಾಗಿದ್ದಾಳೆ ಎಂದು ಫೋಟೋ ಕ್ಲಿಕ್ಕಿಸಿ ಸೆಕ್ಯುರಿಟಿ ಗಾರ್ಡ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಬೆಂಗಳೂರಿನ ಬಾಗಲಕುಂಟೆ ಪೊಲೀಸರು ಒಡಿಶಾ ಮೂಲದ ಆರೋಪಿ ರಾಮಚಂದ್ರನನ್ನು ಬಂಧಿಸಿದ್ದಾರೆ. ಯುವತಿ ತನ್ನ ಸ್ನೇಹಿತೆಗಾಗಿ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಆರೋಪಿ ಮೊಬೈಲ್ ನಲ್ಲಿ ಫೋಟೋ ಕ್ಲಿಕ್ಕಿಸಿದ್ದಾನೆ.
ಮೊಬೈಲ್ ಫ್ಲಾಶ್ ಆಗಿದ್ದರಿಂದ ಫೋಟೋ ತೆಗೆದಿದ್ದು ಯುವತಿಗೆ ಗೊತ್ತಾಗಿದೆ.
ಯುವತಿ ಆರೋಪಿ ಸೆಕ್ಯುರಿಟಿ ಗಾರ್ಡ್ ಬಳಿ ತೆರಳಿ, ಮೊಬೈಲ್ ಕೊಡು ಎಂದು ಕೇಳಿದ್ದಾರೆ. ಆಗ ಆರೋಪಿ ರಾಮಚಂದ್ರ ಗಾಬರಿಯಿಂದ ಓಡಿ ಹೋಗಲು ಯತ್ನಿಸಿದ್ದಾನೆ. ಈ ವೇಳೆ ಸಾರ್ವಜನಿಕರು ಹಿಡಿದು ಆತನಿಗೆ ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ವಶಪಡಿಕೊಂಡಿದ್ದಾರೆ. ಬಳಿಕ ವಿಚಾರಣೆ ವೇಳೆ “ಯುವತಿ ಚೆನ್ನಾಗಿದ್ದಾಳೆ” ಅಂತ ಫೋಟೋ ತೆಗೆದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.