ಎನ್ ಸಿಎ ಮಾಡಿರುವ ಎಡವಟ್ಟಿನಿಂದ ಟೀಂ ಇಂಡಿಯಾದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರ ವೃತ್ತಿ ಬದುಕು ಅತಂತ್ರಕ್ಕೆ ಸಿಲುಕಿದೆ.
ಹೆಬ್ಬೆರಳಿನ ಗಾಯದ ಸಮಸ್ಯೆಯಿಂದ ತಂಡದಿಂದ ದೂರ ಉಳಿದಿದ್ದ ಸಹಾ ಅವರಿಗೆ ದಿಢೀರನೆ ಭುಜದ ಗಾಯ ಪತ್ತೆಯಾಗಿದೆ .
ಐಪಿಎಲ್ ವೇಳೆ ಹೆಬ್ಬೆರಳ ಗಾಯ ಮಾಡಿಕೊಂಡ ಸಹಾ ಆಫ್ಘಾನ್ ವಿರುದ್ಧ ನಡೆದ ಐತಿಹಾಸಿಕ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಇಂಗ್ಲೆಂಡ್ ಪ್ರವಾಸದ ವೇಳೆ ಸಹಾ ಫಿಟ್ ಆಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಭುಜದ ಗಾಯಕ್ಕೆ ತುತ್ತಾಗಿರುವ ಸಹಾ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ.
ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಸಹಾ ಅವರಿಗೆ ಭುಜದ ಸಮಸ್ಯೆ ಎದುರಾಗಿತ್ತು. ಆದರೂ ಅವರು ಅದನ್ನು ಲೆಕ್ಕಿಸದೆ ಐಪಿಎಲ್ ನಲ್ಲಿ ಆಡಿದ್ದರು. ಆದ್ದರಿಂದ ಸಮಸ್ಯೆ ಬಿಗುಡಾಯಿಸಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಎನ್ ಸಿಎ ಸರಿಯಾಗಿ ಮಾಹಿತಿ ನೀಡದೆ ಹೆಬ್ಬೆರಳಿನ ಗಾಯದ ಬಗ್ಗೆ ಮಾತ್ರ ವರದಿಯಲ್ಲಿ ತಿಳಿಸಿತ್ತು. ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ್ದ ಸಹಾಗೆ ಜಿಮ್ ನಲ್ಲಿ ಕಸರತ್ತು ಮಾಡುವಂತೆ ಫಿಸಿಯೋ ಸೂಚಿಸಿದ್ದರು. ಇದರಿಂದ ಗಾಯ ಹೆಚ್ಚಿದೆ. ಒಟ್ಟಿನಲ್ಲಿ ಪದೇ ಪದೇ ಸಹಾ ಗಾಯಗೊಳ್ಳುತ್ತಿದ್ದು ವೃತ್ತಿ ಬದುಕು ಅತಂತ್ರವಾಗಿದೆ.