ಮನುಷ್ಯನಾಗಿ ಹುಟ್ಟಿದ ಮಾತ್ರಕ್ಕೆ ಮನುಷ್ಯತ್ವ ಇರಲ್ಲ. ಮೂಕ ಪ್ರಾಣಿಗಳಲ್ಲಿ ಮನುಷ್ಯನಿಗೂ ಮಿಗಿಲಾದ ಮಾನವೀಯತೆ ಇರುತ್ತದೆ. ಇಲ್ಲೊಂದು ಶ್ವಾನ ಮನುಷ್ಯರಿಗೆ ಮನುಷ್ಯತ್ವದ ಪಾಠ ಮಾಡಿದೆ.
ಬೆಂಗಳೂರಿನ ಕುರುಬರಹಳ್ಳಿಯಲ್ಲಿ ಶ್ವಾನವೊಂದು ಬದುಕಿನ ಪ್ರೀತಿ ಪಾಠ ಮಾಡಿದೆ..!
ಆಗತಾನೆ ಹುಟ್ಟಿದ್ದ ನಾಯಿ ಮರಿಗೆ ಪ್ರಪಂಚದ ಅರಿವೇ ಇರಲಿಲ್ಲ. ಅಮ್ಮನನ್ನು ಕೂಗಿ ಕರೆಯುವ ಶಕ್ತಿಯೂ ಬಂದಿರಲಿಲ್ಲ. ಹಾಲು ಬೇಕೆಂದೆನಿಸಿದರೂ ಕುಡಿಸಲು ಅಮ್ಮ ಇಲ್ಲ. ಇಂಥಾ ಪುಟ್ಟ ನಾಯಿ ಮರಿಯನ್ನು ಮನುಷ್ಯನೆಂಬ ಪ್ರಾಣಿ ಚೀಲದಲ್ಲಿ ಕಟ್ಟಿ ಮೋರಿ ಬಳಿ ಎಸೆದು ಹೋಗಿದ್ದ…! ಆ ಮರಿ ಉಸಿರುಗಟ್ಟಿ ಸಾಯುವ ಸ್ಥಿತಿಯಲ್ಲಿರುವಾಗ ರೆಬಲ್ ಎಂಬ ಬ್ರೀಡ್ ನಾಯಿ ತನ್ನ ಮಾಲೀಕನೊಂದಿಗೆ ಬಂದಿದೆ.
ಈ ವೇಳೆ ಚೀಲದಲ್ಲಿದ್ದ ಬೀದಿ ನಾಯಿಮರಿ ಬಳಿ ಬಂದಿದ್ದಾನೆ ರೆಬಲ್..! ಅದನ್ನ ಕಂಡಾಗ ಪಾಪ ಆ ಮರಿಯನ್ನು ರೆಬಲ್ ಕಚ್ಚಿ ಕೊಲ್ತಾನೆ ಎಂದು ಭಾವಿಸಲಾಗಿತ್ತು. ರೆಬಲ್ ನಲ್ಲಿದ್ದ ಮಾತೃ ಹೃದಯ ಆ ಮರಿಯನ್ನು ಬದುಕುಳಿಸಿತು.
ರೆಬಲ್ ಚೀಲವನ್ನು ಬಾಯಲ್ಲಿ ಕಚ್ಚಿ ಮಾಲೀಕನಿಗೆ ತಂದು ಒಪ್ಪಿಸಿದ್ದಾನೆ. ಈಗ ಆ ಮರಿಯನ್ನು ಪರಮೇಶ್ ಎಂಬುವರು ಸಾಕಲು ಮುಂದಾಗಿದ್ದಾರೆ.
ಮೂಕ ಪ್ರಾಣಿಗಳಲ್ಲಿನ ಮಾನವೀಯತೆ ಮನುಷ್ಯನಲ್ಲಿ ಇಲ್ಲದಾಯಿತೇ?