ಆ ಪುಟ್ಟ ಹುಡುಗನ ಕಣ್ಣಲ್ಲಿ ದೊಡ್ಡ ಕನಸಿತ್ತು..! ಅವನನ್ನು ಎತ್ತರಕ್ಕೆ ಬೆಳೆಸೋ ಸಾಮರ್ಥ್ಯ ಅಪ್ಪ-ಅಮ್ಮನಲ್ಲೂ ಇತ್ತು..! ಅವನು ಏನನ್ನು ಓದ ಬಯಸುತ್ತಾನೋ ಅದನ್ನು ಓದಿಸೋ ಶಕ್ತಿ ಅವರಿಗಿತ್ತು..! ಸಿಕ್ಕಾಪಟ್ಟೆ ಶ್ರೀಮಂತಿಕೆ ಇಲ್ಲದಿದ್ದರೂ ಹೊಟ್ಟೆ-ಬಟ್ಟೆ, ಸಣ್ಣಮಟ್ಟಿನ ಐಷಾರಾಮಿ ಜೀವನಕ್ಕೇನೂ ಕೊರತೆ ಇರ್ಲಿಲ್ಲ..! ಆದರೆ ಎಲ್ಲಾ ಕೊಟ್ಟ ದೇವರು ಬದುಕನ್ನೇ ಕಸಿದುಕೊಂಡಿದ್ದ..! ಹುಟ್ಟುವಾಗ ಆರಾಮಾಗಿದ್ದ ಹುಡುಗ ಬೆಳೆಯುತ್ತಾ ಬೆಳೆಯುತ್ತಾ ನಡೆಯಲಾಗದಂತಾಯಿತು..! ಕರುಣೆ ಇಲ್ಲದ ಆ ದೇವರು ಒಂದೇ ಕಡೆ ಕೂರುವಂತೆ ಮಾಡಿದ..! ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ರೂ ಇದ್ದಕ್ಕಿಂದಂತೆ ವಕ್ಕರಿಸಿದ ಕಾಯಿಲೆ ಗುಣವಾಗಲೇ ಇಲ್ಲ..! ಏನೂ ಅರಿಯದ ಪುಟ್ಟ ಹುಡುಗ ಎಲ್ಲದಕ್ಕೂ ಅಪ್ಪ-ಅಮ್ಮನನ್ನೇ ಆಶ್ರಯಿಸುವಂತಾಯಿತು..! ಗುಣವಾಗದ ಕಾಯಿಲೆಯಿಂದ ಶಾಲೆಯನ್ನೂ ಅರ್ಧಕ್ಕೇ ಬಿಟ್ಟ..! ಶಾಲೆಗೆ ಹೋಗದೇ ಇದ್ದರೂ ಶಾಲೆಗೆ ಹೋಗುವ ಅದೆಷ್ಟೋ ಮಕ್ಕಳಿಗಿಂತ ಹೆಚ್ಚಿನ ವಿಷಯವನ್ನು ಬರೀ ಟಿವಿ ನೋಡುತ್ತಲೇ ಕಲಿತ..! ಕಲಿಯುವ ಹಂಬಲವಿದ್ದರೆ ಯಾವ ಸಮಸ್ಯೆಗಳೂ ಕಲಿಕೆಗೆ ಅಡ್ಡಿ ಆಗಲ್ಲ ಅನ್ನೋದಕ್ಕೆ ಈ ಹುಡುಗನೇ ಸಾಕ್ಷಿ..! ಇವನ ಲೈಫ್ ಸ್ಟೋರಿ ನೋವುಕೊಡುತ್ತೆ, ನೋವಿನ ಜೊತೆಗೆ ಸಮಸ್ಯೆಗಳನ್ನು ಮೆಟ್ಟಿನಿಂತು ಗುರಿ ಸಾಧಿಸಲು ಸ್ಪೂರ್ತಿಯನ್ನೂ ನೀಡುತ್ತೆ..! ಇದು ಬದುಕೆಂದರೇನೆಂದು ಅರ್ಥವಾಗುವ ಮೊದಲೇ ವಿಧಿವಶನಾದ ಹುಡುಗನ ರಿಯಲ್ ಸ್ಟೋರಿ..!
ಆ ಹುಡುಗನ ಹೆಸರು ರಾಮ್ಕುಮಾರ್. ಹೊರನಾಡು ಹತ್ತಿರದ ಬಸರಿಕಟ್ಟೆ (ಮಾಡದಮನೆ)ಯವನು. ಹುಟ್ಟುವಾಗ ಚೆನ್ನಾಗೇ ಇದ್ದ. ತನ್ನೂರಿನ ಖಾಸಗಿ ಶಾಲೆಯಲ್ಲಿ ಎಲ್ಕೆಜಿಯಿಂದ ನಾಲ್ಕನೇ ತರಗತಿವರೆಗೂ ಓದಿದ..! ಓದಿನಲ್ಲಿ, ಆಟದಲ್ಲಿಯೂ ಚುರುಕಾಗಿದ್ದ. ಆರಾಮಾಗಿ ಶಾಲೆಗೆ ಹೋಗಿ ಬರ್ತಾ ಇದ್ದ ಇವನಿಗೆ. ಇದ್ದಕ್ಕಿದ್ದಂತೆ ಕಾಲುನೋವು ಶುರುವಾಗುತ್ತೆ..! ಎಣ್ಣೆಹಚ್ಚಿ ಮಸಾಜ್ ಮಾಡಿದ್ರೂ.., ಮುಲಾಮ್ ಹಚ್ಚಿದ್ರೂ ನೋವು ಕಡಿಮೆ ಆಗಲ್ಲ..! ನೋವು ಜಾಸ್ತಿ ಆಗುತ್ತೆ..! ತಡಮಾಡದೇ ಆಸ್ಪತ್ರೆಗೂ ಸೇರಿಸ್ತಾರೆ..! ಶೃಂಗೇರಿ, ಶಿವಮೊಗ್ಗ, ಮಣಿಪಾಲ್, ಬೆಂಗಳೂರು ಅಂತ ಸುತ್ತಿದ್ರೂ… ಇವನ ಕಾಲುನೋವು ಕಡಿಮೆ ಆಗ್ಲೇ ಇಲ್ಲ..! ಬರ್ತಾ ಬರ್ತಾ ನಡೆಯಲೂ ಆಗದಂತಾಯಿತು..! ಇವನ ಈ ಕಾಯಿಲೆಗೆ ಸಂಬಂಧಿಸಿದ ರಿಪೋರ್ಟ್ ಅಮೇರಿಕಾದ ತನಕ ಹೋಗಿ ಬಂದರೂ..ಸಮಸ್ಯೆಗೆ ಪರಿಹಾರ ಮಾತ್ರ ಸಿಗಲೇ ಇಲ್ಲ..!
“ಇಂಥಾ ಕಾಯಿಲೆ ಅದೆಷ್ಟೋ ಜನರಿಗೆ ಬರುತ್ತೆ..! ಇದಕ್ಕೆ ಚಿಕಿತ್ಸೆ ಇಲ್ಲ.ದೇಹದ ಎಲ್ಲಾ ಭಾಗಗಳೂ ಕ್ರಮೇಣ ನಿಷ್ಕ್ರೀಯವಾಗ್ತಾ ಹೋಗುತ್ತೆ..” ಅನ್ನೋ ವಿಚಾರ ಡಾಕ್ಟರ್ರೊಬ್ಬರಿಂದ ತಿಳಿಯಿತು..! ಆದರೂ ಸಮಾಧಾನಕ್ಕಾಗಿ ಚಿಕಿತ್ಸೆ ಕೊಡಿಸುತ್ತಾ.. ಕಂಡಕಂಡ ದೇವರಿಗೆ ಹರಕೆ ಕಟ್ಟಿಕೊಳ್ಳುತ್ತಾ. ಅಪ್ಪ-ಅಮ್ಮ ಹುಡುಗನನ್ನು ನೋಡಿಕೊಳ್ತಾ ಇದ್ದಾರೆ.
2007ರಿಂದ ಸಮಸ್ಯೆ ಜೋರಾಗುತ್ತಾ ಹೋಗುತ್ತೆ. ಮನೆಯಲ್ಲೇ ಕೂತು ಟಿವಿ ನೋಡ್ತಾ ಕಾಲ ಕಳೆದ..! ಕೂತಲ್ಲೇ ಮನೆ, ವಿಮಾನ, ಬುಲ್ಡೋಜರ್, ಬಸ್, ಕಾರು ಮೊದಲಾದ ಮಾದರಿಗಳನ್ನು ತಯಾರಿಸಿದ..! ರಟ್ಟು, ಮತ್ತು ಬ್ಯಾಟರಿ, ಆಟದ ಕಾರಿನ ಸಣ್ಣ ಮೋಟರ್, ಶೆಲ್ಗಳನ್ನೇ ಬಳಸಿ ತಾನೇ ಹೊಸ ಹೊಸ ಆಟಿಕೆಗಳನ್ನೂ ಮಾಡಿದ್ದಾನೆ..! ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ…?! ಗಡಿಯಾರ ರಿಪೇರಿ ಮಾಡೋರೇ ಸರಿ ಆಗಲ್ಲ ಅಂತ ವಾಪಸ್ಸು ಕಳುಹಿಸಿದ್ದ ಗಡಿಯಾರವೊಂದನ್ನು ರಿಪೇರಿ ಮಾಡಿದ್ದಾನೆ..! ಮೊಬೈಲ್ ರಿಪೇರಿಯನ್ನೂ ಮಾಡಿದ್ದಾನೆ..! ಅಷ್ಟೇ ಅಲ್ಲ..ಬರೀ ಟಿವಿ ನೋಡ್ತಾನೇ ಟೆಕ್ನಾಲಜಿ ಬಗ್ಗೆ ಅಷ್ಟೋ ಇಷ್ಟೋ ತಿಳಿದುಕೊಂಡಿರೋದಲ್ಲದೇ ಇಂಗ್ಲಿಷ್, ಹಿಂದಿಯನ್ನೂ ಚೆನ್ನಾಗಿ ಮಾತನಾಡುತ್ತಿದ್ದ..! ತನ್ನ ತಮ್ಮನಿಗೆ ಗೊತ್ತಾಗದೇ ಇರೋದನ್ನು ಪ್ರೀತಿಯಿಂದ ಹೇಳಿಕೊಡ್ತಿದ್ದ. ಅವನಿಗೆ ಆಟ ಆಡೋಕೆ ಇರಲಿ ಅಂತ ಮನೇಲಿ ಕಂಪ್ಯೂಟರನ್ನು ಕೊಡಿಸಿದ್ದರು. ಕೈಗೆ ಕಂಪ್ಯೂಟರ್ ಸಿಕ್ಕ ಕೆಲವೇ ಕೆಲವು ದಿನಗಳಲ್ಲಿ ಅದರ ಬಗ್ಗೆ ಕಂಪ್ಯೂಟರ್ ಸೈನ್ಸ್ ವಿದ್ಯಾಥರ್ಿಗೇನೂ ಕಡಿಮೆ ಇಲ್ಲವೇನೋ ಅನ್ನುವಂತೆ ಯಾರ ಸಹಾಯವೂ ಇಲ್ಲದೇ ಒಂದಷ್ಟು ಜ್ಞಾನ ಸಂಪಾದಿಸಿದ್ದ..! ನಾಲ್ಕೈದು ದಿನಕ್ಕೇ ಅಷ್ಟೋ ಇಷ್ಟೋ ಫೋಟೋ ಎಡಿಟಿಂಗ್ ಕೂಡ ಮಾಡಬಲ್ಲವನಾಗಿದ್ದ..! ಮೊಬೈಲ್ ರಿಪೇರಿಯನ್ನೂ ಅಷ್ಟೋ ಇಷ್ಟೋ ಮಾಡ್ತಿದ್ದ..!
ದೇವರು ಮನೆಯಲ್ಲೇ ಕೂರುವಂತೆ ಮಾಡಿದ್ದರೂ ಇಷ್ಟೆಲ್ಲಾ ಕಲಿತಿರೋ ಇವನನ್ನು ನೋಡಿ ಅಪ್ಪ-ಅಮ್ಮ ಖಷಿಯಲ್ಲಿದ್ದರು. ಈಗ ದೇವರು ಆ ಖುಷಿಯನ್ನೂ ಕಿತ್ತು ಕೊಂಡಿದ್ದಾನೆ..!ದೇಹದ ಎಲ್ಲಾ ಅಂಗಾಗಂಗಳು ವೀಕ್ ಆಗ್ತಾ ಬಂದು ತನ್ನ 18ನೇ ವರ್ಷಕ್ಕೇ ಎಲ್ಲರನ್ನೂ ಬಿಟ್ಟು ದೂರಾಗಿ ಬಿಟ್ಟಿದ್ದಾನೆ..! ಇದೇ ತಿಂಗಳ 7ರಂದು ನಮ್ಮನ್ನೆಲ್ಲಾ ಅಗಲಿದ್ದಾನೆ..! ಅಗಲುವ ಮೊದಲು ನೂರೊಂದು ನೆನಪು ಮಾತ್ರ ನಮಗೆ ಬಿಟ್ಟು ಹೋಗಿದ್ದಾನೆ..! ಅವನಿಲ್ಲದ ದಿನಗಳನ್ನು ಕಲ್ಪಿಸಿಕೊಳ್ಳಲೂ ಆಗ್ತಾ ಇಲ್ಲ..!
ಅಂದಹಾಗೆ, ಈ ಪ್ರತಿಭಾವಂತ ಬೇರೆ ಯಾರೂ ಅಲ್ಲ ನನ್ನ ಮುದ್ದಿನ ತಮ್ಮ..! ಸಾಧಕರನ್ನು, ಪ್ರತಿಭಾವಂತರನ್ನು, ಒಳ್ಳೆಯವರನ್ನು ಪರಿಚಯಿಸಲು ಅವರ ಪರಿಚಯ ನಮಗೆ ಬೇಕೆಂದೇನೂ ಇಲ್ಲ. ಅವರ ಬಗ್ಗೆ ಗೊತ್ತಿದ್ದರೆ ಸಾಕು. ಆದರೆ ನನ್ನ ತಮ್ಮನ ಪ್ರತಿಭೆ ಬಗ್ಗೆ ,ಟ್ಯಾಲೆಂಟ್ ಬಗ್ಗೆ ಹೇಳೋಕೆ ನಾನು ತಡಮಾಡಿದೆ..! ನನಗೆ ಒಂದೇ ಒಂದು ಕೊರಗು ನನ್ನ ಲೈಫ್ನ ಕೊನೆಯವರೆಗೂ ಕಾಡೇ ಕಾಡುತ್ತೆ. ಅದೇನೆಂದರೆ ಯಾರ್ಯಾರೋ ಸಾಧಕರನ್ನು, ಪ್ರತಿಭಾವಂತರನ್ನು ಪರಿಚಯ ಮಾಡಿಕೊಡೋ ಸಣ್ಣ ಪ್ರಯತ್ನ ಮಾಡೋ ನಾನು, ನನ್ನ ತಮ್ಮನ ಬಗ್ಗೆ ಹೇಳೋಕೆ ಇಷ್ಟುದಿನ ತಗೊಂಡೆ..! ಹಳ್ಳಿಯ ಮನೆಯಲ್ಲೇ ಕೂತು ಟಿವಿ ನೋಡ್ತಾನೇ ಅಷ್ಟೆಲ್ಲಾ ಕಲಿತಿದ್ದು ಸಣ್ಣ ವಿಷಯವಂತೂ ಅಲ್ಲ..! 2016 ಯಾರ ಪಾಲಿಗೆ ಹೇಗಿದೆಯೋ ಗೊತ್ತಿಲ್ಲ ನನ್ನ ಪಾಲಿಗಂತೂ ನರಕ..! 7ರಂದು ತಮ್ಮ, 21 ಅಜ್ಜ ಇಹಲೋಕ ಯಾತ್ರೆ ಮುಗಿಸಿದ್ದಾರೆ..! ನನ್ನವರನ್ನು ಕಳೆದುಕೊಂಡ ದುಃಖದೊಂದಿಗೆ ಇಂತಿ ನಿಮ್ಮವ..
- ಶಶಿಧರ ಡಿ ಎಸ್ ದೋಣಿಹಕ್ಲು
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
114 ಸ್ವೀಪರ್ ಹುದ್ದೆಗೆ 19000 ಎಂಬಿಎ, ಇಂಜಿನಿಯರ್ ವಿದ್ಯಾರ್ಥಿಗಳಿಂದ ಅರ್ಜಿ..!
ಗೂಗಲ್ ಜೊತೆ ಕೇಂದ್ರ ಸರ್ಕಾರದ ಒಪ್ಪಂದ ಇಂದಿನಿಂದ ರೈಲು ನಿಲ್ದಾಣಗಳಲ್ಲಿ ಫ್ರೀ ವೈಫೈ..!
ಅಪ್ಪ ಕೂಲಿಯಾಳು, ಅಮ್ಮನಿಗೆ ಕಣ್ಣಿಲ್ಲ, ಕಿವಿ ಕೇಳದ ಮಗ ಮೂರು ಬಾರಿ ಐಎಎಸ್ ಪಾಸ್ ಮಾಡಿದ..!
ಕಣ್ಣಮುಂದೆಯೇ ಚಿನ್ನ ಕದ್ದೊಯ್ದ ಕಳ್ಳಿಯರು..! 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ನಾಜೂಕು ನಾರಿಯರು..!