ಕೊನೆಗೂ ಮಂಡ್ಯ ಚುನಾವಣಾ ಕಣದಲ್ಲಿ ಬಿರುಗಾಳಿ ಎದ್ದಿದೆ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸುವುದು ಖಚಿತವಾಗಿದೆ, ಸುಮಲತಾ ಅಂಬರೀಷ್ ಅವರು ಪಕ್ಷೇತರಾಗಿ ಸ್ಪರ್ದಿಸುವುದರ ಮೂಲಕ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದಾರೆ.
ಇದರ ಸಲುವಾಗಿ ಬೆಂಗಳೂರಿನ ಕಲಾವಿದರ ಸಂಘದಲ್ಲಿ ಸುದ್ದಿಗೋಷ್ಠಿಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಆಗಮಿಸಿದ ಸುಮಲತಾ ”ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ” ಎಂದು ಘೋಷಣೆಯನ್ನು ಮಾಡುವುದರ ಮೂಲಕ ಮಂಡ್ಯ ಚುನಾವಣಾ ಕಣಕ್ಕೆ ಕಿಚ್ಚನ್ನು ಹೊತ್ತಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸುಮಲತಾ ಅವರ ಪರವಾಗಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನನಗೆ ಇದೆ ಮೊದಲ ಚುನಾವಣೆಯಲ್ಲ ಇದಕ್ಕೂ ಮುನ್ನ ಅಂಬಿ ಅಪ್ಪಾಜಿಗಾಗಿ 1 MP 3 MLA ಚುನಾವಣೆಯನ್ನು ಮಾಡಿದ್ದೇನೆ ಇಂದು ಸುಮಲತಾ ಅಮ್ಮ ಅಂಬಿ ಅಪ್ಪಾಜಿಯ ಕನಸನ್ನು ಈಡೇರಿಸುವ ಸಲುವಾಗಿ ರಾಜಕೀಯಕ್ಕೆ ಬರುವ ನಿರ್ಧಾರವನ್ನು ಮಾಡಿದ್ದಾರೆ, ಅವರು ಏನೇ ನಿರ್ಧಾರ ತೆಗೆದುಕೊಂಡರೂ ನಾನು ಅವರ ಬೆನ್ನಹಿಂದೆಯೇ ಇರುತ್ತೇನೆ ಎನ್ನುವ ಮೂಲಕ ಅಧಿಕೃತವಾಗಿ ಮಂಡ್ಯ ಚುನಾವಣಾ ಕಣಕ್ಕೆ ಧುಮುಕಿದ್ದಾರೆ.
ಇದರ ಬೆನ್ನಲ್ಲೆ ನೀವೊಬ್ಬರೆ ಪ್ರಚಾರ ಮಾಡುತ್ತೀರ ಅಥವಾ ಬೇರೆ ಕಲಾವಿದರೂ ಸಹ ನಿಮ್ಮ ಜೊತೆ ಬರುತ್ತಾರಾ ಎಂಬ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ದಾಸ ನಾನು ನಮ್ಮ ಹೀರೊ (ಯಶ್) ಇಲ್ಲೇ ಇದ್ದೀವಲ್ಲಾ ಇನ್ನೇನು ಬೇಕು..?
ನಾವು ಕಲಾವಿದರಾಗಿ ಇಲ್ಲಿ ಬಂದಿಲ್ಲ ಮನೆಯ ಮಕ್ಕಳಾಗಿ ಇಲ್ಲಿಗೆ ಬಂದಿದ್ದೇವೆ ಅಲ್ಲದೆ ಒಂಟಿ ಎತ್ತು ಕಟ್ಟಕೊಂಡು ಗಾಡಿ ಎಳೆಯೊದಿಲ್ಲ ಜೋಡಿ ಎತ್ತು ಕಟ್ಟಿಕೊಂಡೆ ಗಾಡಿ ಎಳೀತೀವಿ ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿಯನ್ನ ಮೂಡಿಸಿದ್ದು ಮಾತ್ರವಲ್ಲದೆ ದರ್ಶನ್ ಮತ್ತು ಯಶ್ ಇಬ್ಬರೂ ಒಟ್ಟಿಗೇ ಪ್ರಚಾರದಲ್ಲೂ ಇರ್ತಾರೆ ಅನ್ನೋದನ್ನ ಸ್ಪಷ್ಟಪಡಿಸಿದರು.