ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನಟಿ ಸುಮಲತಾ ಅವರು ಸ್ಪರ್ಧೆ ಮಾಡುತ್ತಿರುವುದಕ್ಕೆ ಸಿನಿಮಾರಂಗ ಮತ್ತು ರಾಜಕೀಯ ವಲಯದಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಲತಾ ಅವರು ಇಷ್ಟು ಬೇಗ ರಾಜಕೀಯಕ್ಕೆ ಬರಬಾರದಿತ್ತು ಎಂದು ಕೆಲವರು ಹೇಳುತ್ತಿದ್ದರೇ, ಅಂಬಿ ಆದರ್ಶಗಳನ್ನ ಮುಂದುವರಿಸಲು ಸುಮಲತಾ ರಾಜಕೀಯ ಪ್ರವೇಶ ಸ್ವಾಗತರ್ಹ ಎನ್ನುತ್ತಿದ್ದಾರೆ. ಈ ನಡುವೆ ಹಲವು ಸಿನಿಮಾ ಸ್ಟಾರ್ ಗಳು ಸುಮಲತಾ ಅವರ ಬೆಂಬಲಕ್ಕೆ ನಿಂತಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.
ಸುಮಲತಾ ಅವರ ಈ ನಿರ್ಧಾರ ಮತ್ತು ಸಿನಿಮಾ ನಟರ ನಡೆಯನ್ನ ಸಾಮಾಜಿಕ ಹೋರಾಟಗಾರ ಮತ್ತು ಸಿನಿಮಾ ನಟ ಚೇತನ್ ಪ್ರಶ್ನಿಸಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಚೇತನ್, ಸುಮಲತಾ ಯಾವುದರ ಪರ ಎಂದು ಕೇಳಿದ್ದಾರೆ ”ಸುಮಲತಾ ಅವರ ಪರ ನಿಂತಿರುವ ಸಿನಿಮಾ ಸ್ಟಾರ್ ಗಳು ಮತ್ತು ಮಾಜಿ ಮುಖ್ಯಮಂತ್ರಿಯೊಬ್ಬರು ನಡೆ ಪ್ರಶ್ನಾರ್ಥಕವಾಗಿದೆ.
ಮಂಡ್ಯ ಅಭಿವೃದ್ದಿಗೆ ಏನೂ ಮಾಡದ ನಿಮ್ಮ ಈ ಹೆಜ್ಜೆ ಕುತೂಹಲ ಮೂಡಿಸಿದೆ” ಎಂದು ನಟ ಚೇತನ್ ಪರೋಕ್ಷವಾಗಿ ಸ್ಟಾರ್ ನಟರನ್ನ ಪ್ರಶ್ನಿಸಿದ್ದಾರೆ. ಹಾಗ್ನೋಡಿದ್ರೆ, ಸುಮಲತಾ ಅವರ ಜೊತೆಯಾಗಿ ಅವರ ಬೆಂಬಲಕ್ಕೆ ಬಹಿರಂಗವಾಗಿ ನಿಂತಿರುವುದು ನಟ ದರ್ಶನ್ ಮತ್ತು ಯಶ್. ಇವರ ಜೊತೆಗೆ ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಇನ್ನು ಕೆಲವರು. ಇವರಲ್ಲಿ ಯಾರೂ ಕೂಡ ಮಂಡ್ಯದ ಬೆಳವಣಿಗೆಯಲ್ಲಿ ತೊಡಗಿಸಿಕೊಂಡಿಲ್ಲ ಎಂದು ನಟ ಚೇತನ್ ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.
”ಸಾಮಾಜಿಕ ಸೇವೆ, ಭ್ರಷ್ಟಾಚಾರ ನಿರ್ಮೂಲನೆ ಅಥವಾ ಕೇವಲ ಸಿದ್ಧಾಂತಗಳು ಅವರ ಚುನಾವಣಾ ಸ್ಪರ್ಧೆಗೆ ಕಾರಣವೇ. ಹಾಗಿದ್ರೆ, ಸುಮಲತಾ ಅವರು ಯಾವುದರ ವಿರೋಧ ಮತ್ತು ಯಾವುದರ ಪರ ಎಂದು ಯಾರಿಗಾದರೂ ಗೊತ್ತಿದೆಯಾ” ಎಂದು ನಟ ಚೇತನ್ ಅಂಬರೀಶ್ ಪತ್ನಿಯನ್ನ ಪ್ರಶ್ನಿಸಿದ್ದಾರೆ.