ಮಂಡ್ಯ ಚುನಾವಣಾ ಅಖಾಡಕ್ಕೆ ಸ್ಟಾರ್ ನಟ ದರ್ಶನ್ ಮತ್ತು ಯಶ್ ಧುಮುಕಿರುವುದು ಮಂಡ್ಯ ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುವುದಾಗಿ ದರ್ಶನ್ ಮತ್ತು ಯಶ್ ಹೇಳಿದ್ದು, ಇದು ಜೆಡಿಎಸ್ ಬೆಂಬಲಿಗರಿಗೆ ನುಂಗಲಾರದ ತುತ್ತಾಗಿದೆ. ಸ್ಟಾರ್ ನಟರು ಮಂಡ್ಯಕ್ಕೆ ಎಂಟ್ರಿ ಕೊಟ್ಟಿರುವ ಹಿನ್ನೆಲೆ ಕೆ.ಆರ್ ಪೇಟೆ ಶಾಸಕ ನಾರಾಯಣ ಗೌಡ ”ಮರ್ಯಾದೆಯಾಗಿ ಮನೆಯಲ್ಲಿರಿ, ಇಲ್ಲವಾದಲ್ಲಿ ನಿಮ್ಮ ಆಸ್ತಿ ಪರಿಶೀಲನೆ ಮಾಡಬೇಕಾಗುತ್ತೆ” ಎಂದು ಎಚ್ಚರಿಕೆ ನೀಡಿದ್ದಾರೆ. ಜೆಡಿಎಸ್ ಶಾಸಕರ ಈ ಹೇಳಿಕೆ ಈಗ ಬಹುದೊಡ್ಡ ಚರ್ಚೆಗೆ ಕಾರಣವಾಗಿದೆ.
ಇದು ಸ್ಟಾರ್ ನಟರಿಗೆ ಎಚ್ಚರಿಕೆನಾ ಅಥವಾ ಬ್ಲಾಕ್ ಮೇಲ್ ಮಾಡುವ ತಂತ್ರನಾ ಎಂಬ ಅನುಮಾನ ಶುರುವಾಗಿದೆ. ಯಾಕಂದ್ರೆ, ‘ಸರ್ಕಾರ ನಮ್ದೆ ಇದೆ, ಸುಮ್ಮನಿದ್ರೆ ಒಳ್ಳೆಯದು’ ಎಂದು ಪರೋಕ್ಷವಾಗಿ ವಾರ್ನ್ ಮಾಡಿದ್ದಾರೆ.
ಶಾಸಕ ನಾರಾಯಣ ಗೌಡ
ನೀವು ಸಿನಿಮಾದವರು. ಚಿತ್ರರಂಗದ ಬಗ್ಗೆ ಮಾತಾನಾಡಿ. ನಿಮಗೆ ರಾಜಕೀಯದ ಬಗ್ಗೆ ಮಾತನಾಡುವ ಹಕ್ಕಿಲ್ಲ. ದೇವೇಗೌಡರ ಬಗ್ಗೆ ಅಥವಾ ಕುಮಾರಸ್ವಾಮಿ ಅವರ ಬಗ್ಗೆಯೂ ಮಾತನಾಡುವಂತಿಲ್ಲ. ನಮ್ಮ ಸಿನಿಮಾ ನೋಡಿ, ನಮಗೆ ಸಹಕಾರ ನೀಡಿ ಎಂದು ಕೇಳಿಕೊಳ್ಳಬೇಕು. ನಾವೆಲ್ಲ ಇರೋದ್ರಿಂದ ನೀವು ಇರೋದು” ಎಂದು ಕಿಡಿ ಕಾರಿದ್ದಾರೆ.
ನೀವು ಗೌರವದಿಂದ ಇದ್ದರೇ ಒಳಿತು. ನಾಳೆ ದಿನ ನೀವು ಮಾಡಿರುವ ಆಸ್ತಿ ಬಗ್ಗೆ ಪರಿಶೀಲನೆ ಮಾಡಬೇಕಾಗುತ್ತೆ. ಸರ್ಕಾರ ನಮ್ದೆ ಇದೆ. ಸೋ, ಸುಮ್ಮನೆ ಮನೆಯಲ್ಲಿದ್ರೆ ಒಳ್ಳೆಯದು” ಎಂದು ಹೆಸರು ಹೇಳದೇ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಶಾಸಕ ನಾರಾಯಣ ಗೌಡ ಅವರು ಹೇಳುವ ಪ್ರಕಾರ, ”ನಟ ದರ್ಶನ್ ಅವರು ಮಂಡ್ಯ ಜನರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಮಂಡ್ಯ ಜನರ ಬಗ್ಗೆ ಏಕವಚನದಲ್ಲಿ ನಿಂದಿಸಿದ್ದಾರೆ. ಇದು ಸಹಜವಾಗಿ ನಮ್ಮ ತಾಳ್ಮೆಯನ್ನ ಕೆರಳಿಸಿದೆ. ಹಾಗಾಗಿ, ನಾವು ಹಾಗೆ ಮಾತನಾಡಿದ್ದೇವೆ” ಎಂದು ಹೇಳಿದ್ದಾರೆ.