ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಇದಾಗಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ವಾರಣಾಸಿಯಿಂದ ಸ್ಪರ್ಧೆ ಮಾಡುವುದು ಖಚಿತವಾಗಿದೆ, ಕಳೆದ ಬಾರಿಯೂ ಸಹ ಮೋದಿ ವಾರಣಾಸಿಯಿಂದ ಸ್ಪರ್ಧೆ ಮಾಡಿ ಜಯಿಸಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.
ಆದರೆ ಇದೀಗ ಬದಲಾದ ಸನ್ನಿವೇಶದಲ್ಲಿ ವಾರಣಾಸಿಯ ಜೊತೆ ಜೊತೆಗೆ ನರೇಂದ್ರ ಮೋದಿಯವರು ಕರ್ನಾಟಕದಿಂದಲೂ ಸ್ಪರ್ಧೆ ಮಾಡುವುದಕ್ಕೆ ಮನಸ್ಸು ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು ಅದರಲ್ಲೂ ಬೆಂಗಳೂರಿನಿಂದಲೇ ಸರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಗೆ ಸ್ಪರ್ಧಿಸುತ್ತಾರೆ ಎಂಬ ವದಂತಿ ಹಬ್ಬಿದ್ದು ಮಾದ್ಯಮಗಳಲ್ಲಿ ಇದರ ಸಲುವಾಗಿ ಸುದ್ದಿಗಳು ಈಗಾಗಲೆ ಹರಿದಾಡುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಗುರುವಾರ ಬಿಡುಗಡೆಯಾದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಸಹ ಬಿಜೆಪಿ ಘೋಷಣೆ ಮಾಡಿಲ್ಲದೇ ಇರುವುದು ಇದೀಗ ಎಲ್ಲರ ಅನುಮಾನಕ್ಕೆ ಕಾರಣವಾಗಿದೆ.
ಈ ಹಿಂದೆ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕೇಂದ್ರ ಸಚಿವವರೂ ಆಗಿದ್ದ ಅನಂತ್ ಕುಮಾರ್ ಅವರ ನಿಧನದ ನಂತರ ಈ ಕ್ಷೇತ್ರದಿಂದ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು ಆದರೆ ಇದೀಗ ಮೋದಿ ಸ್ಪರ್ಧೆಯ ವಿಚಾರ ಹೊರಬಿದ್ದಿದ್ದು ಬೆಂಗಳೂರು ದಕ್ಷಿಣದಲ್ಲಿ ಮೋದಿ ಸ್ಪರ್ಧೆಯಾ.. ಅಥವಾ ತೇಜಸ್ವಿನಿ ಅನಂತಕುಮಾರ್ ಸ್ಪರ್ಧೆಯಾ ಎಂಬುದನ್ನು ಕಾದು ನೋಡಬೇಕು.