ಚಂದನವನದಲ್ಲಿ ಸರ್ಜಾ ಕುಟುಂಬದ ಕುಡಿ ಧ್ರುವ ಸರ್ಜಾ ಹಾಗೂ ಚಿರು ಸರ್ಜಾ ತಮ್ಮದೇ ವಿಭಿನ್ನ ಚಿತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ವಿಶೇಷವೆಂದರೆ, ಈ ಸಹೋದರರು ಅವಕಾಶ ಸಿಕ್ಕರೇ ಒಟ್ಟಿಗೆ ನಟಿಸುವುದಾಗಿ ಹೇಳಿಕೊಂಡಿದ್ದರು. ಆದರೆ, ಆ ಚಿತ್ರದಲ್ಲಿ ಒಬ್ಬರು ನಟರಾದರೆ, ಮತ್ತೊಬ್ಬರು ವಿಲನ್ ಆಗಿವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಹೌದು, ಈ ಅಣ್ತಮ್ಮಾಸ್ ಸದ್ಯ ಅವರವರದ್ದೇ ಸಿನಿಮಾಗಳ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅಭಿಮಾನಿಗಳು ಒಟ್ಟಿಗೆ ನಟಿಸಲಿ ಎಂದು ಕೇಳಿಕೊಂಡಿದ್ದರು. ಅದಕ್ಕೆ ಅವರಿಬ್ಬರೂ ಉತ್ತರಿಸಿದ್ದಾರೆ.
‘ನಾವಿಬ್ಬರೂ ನಟಿಸುವುದಾದರೆ, ಆ ಚಿತ್ರದಲ್ಲಿ ಒಬ್ಬರು ವಿಲನ್ ಮತ್ತೊಬ್ಬರು ನಾಯಕ’ ಎಂದಿದ್ದಾರೆ. ಆದರೆ, ಯಾರು ವಿಲನ್, ಯಾರು ನಾಯಕ ಆಗುತ್ತೀರಿ ಎಂದರೆ, ‘ಒಂದು ವೇಳೆ ಇಬ್ರೂ ಒಟ್ಟಿಗೇ ನಟಿಸಿದ್ರೆ ತಮ್ಮಾನೇ ಹೀರೋ, ನಾನು ವಿಲನ್’ ಎಂದು ಚಿರು ಸರ್ಜಾ ಉತ್ತರಿಸಿದ್ದಾರೆ.
‘ಚೆನ್ನಾಗಿರುವ ಸ್ಕ್ರಿಪ್ಟ್ ಬಂದರೆ ಒಟ್ಟಿಗೆ ನಟಿಸುತ್ತೇವೆ. ಮೊದಲು ಇಬ್ಬರಿಗೂ ಸ್ಕ್ರಿಪ್ಟ್ ಇಷ್ಟವಾಗಬೇಕು’ ಎಂದಿದ್ದಾರೆ ಚಿರಂಜೀವಿ. ಹಾಗಾದ್ರೆ ಈ ಚಿತ್ರದಲ್ಲಿ ಯಾರು ವಿಲನ್ ಆಗ್ತಾರೆ ಎನ್ನುವ ಮಾಧ್ಯಮದ ಪ್ರಶ್ನೆಗೆ ನಾನು.. ನಾನು ಎಂದು ಇಬ್ಬರೂ ಪೈಪೋಟಿಗೆ ಬಿದ್ದರು. ಕೊನೆಗೆ ಚಿರಂಜೀವಿ ಸರ್ಜಾ ನಾನೇ ವಿಲನ್ ಧ್ರುವ ಹೀರೊ ಆಗ್ತಾನೆ ಎಂದು ಮಾತಿಗೆ ಕೊನೆ ಹಾಡಿದರು.