ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಸುಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದ ದೋಸ್ತಿ ಅಭ್ಯರ್ಥಿ. ಅವರ ಎದುರು ಇರುವುದು ಮಂಡ್ಯದ ಗೌಡ್ತಿ ಸುಮಲತಾ ಅಂಬರೀಶ್. ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅಂಬರೀಶ್ ಮತ್ತು ನಿಖಿಲ್ ನಡುವಿನ ಬಿಗ್ ಫೈಟ್ ಮತದಾನಕ್ಕೂ ಮೊದಲೇ ಕೊನೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನಿಖಿಲ್ ಕುಮಾರಸ್ವಾಮಿ ಅವರು ಕಣದಿಂದ ಅನಿವಾರ್ಯವಾಗಿ ಹಿಂದೆ ಸರಿದರೂ ಅಚ್ಚರಿ ಇಲ್ಲ. ಅವರಾಗಿಯೇ ಹಿಂದೆ ಸರಿಯುವ ಮನಸ್ಸು ಮಾಡಿಲ್ಲ. ಅವರು ನಾಮಪತ್ರ ಸಲ್ಲಿಕೆ ವೇಳೆ ಮಾಡಿರುವ ಯಡವಟ್ಟು ಅವರನ್ನು ಕಣದಿಂದ ವಾಪಸ್ಸು ದಬ್ಬಬಹುದು.
ನಿಖಿಲ್ ಅವರು ಹಳೆಯ ಮಾದರಿಯಲ್ಲಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಕೆ ಅವಧಿ ಮುಗಿದ ಮೇಲೆ ಜಿಲ್ಲಾಧಿಕಾರಿ ಅವರು ನಿಖಿಲ್ ಅವರನ್ನು ಕರೆಸಿ, ಹೊಸ ಮಾದರಿಯಲ್ಲಿ ನಾಮಪತ್ರ ಸಲ್ಲಿಸಬೇಕು ಎಂದು ಹೊಸ ಮಾದರಿಯನ್ನು ನೀಡಿದರು. ನಿಖಿಲ್ ಅವಧಿ ಮುಗಿದ ಮೇಲೆ ಹೊಸ ಮಾದರಿಯಲ್ಲಿ ನಾಮಪತ್ರ ನೀಡಿದರು.
ಕಾನೂಬಾಹಿರವಾಗಿ ನಾಮಪತ್ರವನ್ನು ಅವಧಿ ಮುಗಿದ ಮೇಲೆ ಸಲ್ಲಿಸಲಾಗಿದೆ ಎಂದು ಸುಮಲತಾ ಬೆಂಬಲಿಗರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಇದರಿಂದ ನಿಖಿಲ್ ನಾಮಪತ್ರ ಅಸಿಂಧು ಆದರೂ ಆಗಬಹುದು. ಜಿಲ್ಲಾಧಿಕಾರಿಗಳ ವಿರುದ್ಧವೂ ಕ್ರಮ ಜರುಗುವ ಸಾಧ್ಯತೆ ಸಹ ಇದೆ ಎಂದು ತಿಳಿದುಬಂದಿದೆ.