ಖಾಸಗಿ ವಲಯದ ಎಲ್ಲ ಉದ್ಯೋಗಿಗಳಿಗೆ ಪಿಂಚಣಿ ಹೆಚ್ಚಳಕ್ಕೆ ದಾರಿ ಮಾಡಿಕೊಡುವ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ಸೋಮವಾರ ನೀಡಿದೆ.
ಕೇರಳ ಹೈಕೋರ್ಟ್ ತೀರ್ಪಿನ ವಿರುದ್ಧ ಉದ್ಯೋಗಿ ಭವಿಷ್ಯನಿಧಿ ಸಂಸ್ಥೆ (ಇಪಿಎಫ್‌ಒ) ಸಲ್ಲಿಸಿದ್ದ ವಿಶೇಷ ರಜಾಕಾಲದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ.
ಗರಿಷ್ಠ ಮಾಸಿಕ 15 ಸಾವಿರ ವೇತನಕ್ಕೆ ಮಿತಿಗೊಳಿಸಿ ಉದ್ಯೋಗಿ ದೇಣಿಗೆಯನ್ನು ಲೆಕ್ಕಾಚಾರ ಮಾಡುವ ಬದಲು ಎಲ್ಲ ನಿವೃತ್ತ ಉದ್ಯೋಗಿಗಳಿಗೆ ಅವರ ಪೂರ್ಣ ವೇತನದ ಆಧಾರದಲ್ಲಿ ಪಿಂಚಣಿ ನೀಡಬೇಕು ಎಂದು ಕೇರಳ ಹೈಕೋರ್ಟ್ ಇಪಿಎಫ್‌ಒಗೆ ನಿರ್ದೇಶನ ನೀಡಿತ್ತು.
ಇದರ ವಿರುದ್ಧ ಇಪಿಎಫ್‌ಒ ಕಚೇರಿ ಮೇಲ್ಮನವಿ ಸಲ್ಲಿಸಿತ್ತು. “ಈ ವಿಶೇಷ ರಜಾಕಾಲದ ಅರ್ಜಿಯಲ್ಲಿ ಯಾವುದೇ ಹುರುಳು ಇಲ್ಲ. ಆದ್ದರಿಂದ ವಜಾ ಮಾಡಲಾಗುತ್ತದೆ” ಎಂದು ಸುಪ್ರೀಂಕೋರ್ಟ್ ಹೇಳಿದೆ.
ಈ ತೀರ್ಪಿನಿಂದಾಗಿ ಪಿಂಚಣಿ ಪ್ರಮಾಣ ಗಣನೀಯವಾಗಿ ಹೆಚ್ಚಲಿದೆ. ಆದರೆ ಹೆಚ್ಚುವರಿ ದೇಣಿಗೆ ಇದೀಗ ಪಿಎಫ್ ಬದಲಾಗಿ ಇಪಿಎಸ್‌ಗೆ ಹೋಗುವುದರಿಂದ ಭವಿಷ್ಯನಿಧಿಯ ನಿಧಿ ಕಡಿಮೆಯಾಗಲಿದೆ. ಆದರೆ ಹೆಚ್ಚಳವಾಗುವ ಪಿಂಚಣಿಯಿಂದಾಗಿ ಉದ್ಯೋಗಿಗಳಿಗೆ ನಷ್ಟವಾಗುವ ಸಾಧ್ಯತೆ ಇಲ್ಲ.
ಕೇಂದ್ರ ಸರ್ಕಾರ 1995ರಲ್ಲಿ ಉದ್ಯೋಗಿ ಪಿಂಚಣಿ ಯೋಜನೆ ಆರಂಭಿಸಿತ್ತು. ಇದರ ಅನ್ವಯ ಉದ್ಯೋಗದಾತರು ಉದ್ಯೋಗಿ ವೇತನದ ಶೇಕಡ 8.33ನ್ನು ಪಿಂಚಣಿ ಯೋಜನೆಗೆ ದೇಣಿಗೆ ನೀಡಬೇಕು. ಆದರೆ ಇದನ್ನು ಗರಿಷ್ಠ ಮಾಸಿಕ 6,500 ರೂಪಾಯಿಯ ಶೇಕಡ 8.33ಕ್ಕೆ ಸೀಮಿತಗೊಳಿಸಲಾಗಿತ್ತು. ಆದರೆ ಉದ್ಯೋಗಿ ಹಾಗೂ ಉದ್ಯೋಗದಾತರ ಆಕ್ಷೇಪ ಇಲ್ಲದಿದ್ದರೆ ವಾಸ್ತವ ವೇತನಕ್ಕೆ ಅನುಗುಣವಾಗಿ ದೇಣಿಗೆ ನೀಡಲು 1996ರಲ್ಲಿ ಸರ್ಕಾರ ಆದೇಶ ನೀಡಿತ್ತು.
2014ರ ಸೆಪ್ಟೆಂಬರ್‌ನಲ್ಲಿ ಇಪಿಎಫ್‌ಒ, ಈ ದೇಣಿಗೆ ಪ್ರಮಾಣವನ್ನು ಗರಿಷ್ಠ 15 ಸಾವಿರ ವೇತನದ ಶೇಕಡ 8.33ಕ್ಕೆ ಹೆಚ್ಚಿಸಿತ್ತು. ಆದರೆ ಪೂರ್ಣ ವೇತನಕ್ಕೆ ಅನುಗುಣವಾಗಿ ಪಿಂಚಣಿ ಪಡೆಯುವ ಉದ್ಯೋಗಿಗಳಿಗೆ ಕೊನೆಯ ಐದು ವರ್ಷದ ಸರಾಸರಿ ಮಾಸಿಕ ವೇತನಕ್ಕೆ ಅನುಗುಣವಾಗಿ ಪಿಂಚಣಿ ಲೆಕ್ಕಾಚಾರ ಮಾಡಲಾಗುತ್ತಿತ್ತು. ಕೊನೆಯ ವರ್ಷದ ಸರಾಸರಿ ಮಾಸಿಕ ವೇತನವನ್ನು ಪರಿಗಣಿಸದಿರುವುದರಿಂದ ಉದ್ಯೋಗಿಗಳಿಗೆ ಕಡಿಮೆ ಪಿಂಚಣಿ ಸಿಗುತ್ತಿತ್ತು. ಇದನ್ನು ರದ್ದುಪಡಿಸಿ ಹಳೆಯ ಪದ್ಧತಿಯನ್ನೇ ಅನುಸರಿಸುವಂತೆ ಕೇರಳ ಹೈಕೋರ್ಟ್ ತೀರ್ಪು ನೀಡಿತ್ತು.