ನಾನು ಗೆದ್ದ ಮೇಲೂ ಬಿಜೆಪಿಗೆ ಹೋಗಲ್ಲ. ಸ್ವತಃ ಯಡಿಯೂರಪ್ಪನವರು ಕೂಡ ಸುಮಲತಾ ಅವರನ್ನು ಬಿಜೆಪಿ ಸೇರಿ ಅಂತ ಒತ್ತಾಯಿಸುವುದಿಲ್ಲ ಎಂದು ಹೇಳಿದ್ದಾರೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ತಿಳಿಸಿದರು.
ಶುಕ್ರವಾರ ಬೆಳಿಗ್ಗೆ ನಗರದ ಮಾರುಕಟ್ಟೆಯಲ್ಲಿರುವ ರಾಮ ಮಂದಿರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದರು. ಪ್ರಚಾರದ ವೇಳೆ ಮಾತನಾಡಿದ ಅವರು, ನಾನು ಬಿಜೆಪಿಗೆ ಹೋಗಬೇಕು ಅಂದ್ರೆ ಈಗಲೇ ಹೋಗುತ್ತಿದ್ದೆ. ಅಲ್ಲಿ ನನಗೆ ಬೇಕಾದಷ್ಟುಆಫರ್‌ಗಳು ಬಂದಿದ್ದವು. ಆದರೆ, ನಾನು ಅದೆಲ್ಲವನ್ನೂ ತಳ್ಳಿ ಹಾಕಿದ್ದೇನೆ.
ಮಂಡ್ಯ ಜನರ ಒತ್ತಾಯದಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ ಎಂದು ತಿಳಿಸಿದರು.ಮಾರುಕಟ್ಟೆಯಲ್ಲಿ ಪ್ರಚಾರದ ವೇಳೆ ಮಹಿಳೆಯರು ಸುಮಲತಾಗೆ 200 ರು. ಎರಡು ನೋಟುಗಳನ್ನು ನೀಡಿ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ನಂತರ ಐದು ರು.ಡಾಕ್ಟರ್ ಎಂದೇ ಫೇಮಸ್ ಆಗಿರುವ ಡಾ.ಶಂಕರೇಗೌಡ ನಿವಾಸಕ್ಕೆ ಮತ್ತು ಬಿಜೆಪಿ ಮುಖಂಡ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಬೆಂಬಲ ಕೋರಿದರು.
ತಗ್ಗಹಳ್ಳಿಯಲ್ಲಿ ಪ್ರಚಾರ ನಡೆಸುವಾಗ ಬೆಂಗಳೂರಿನ ಕೆಂಗೇರಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕ ಎಂದು ಹೇಳಿಕೊಂಡ ವ್ಯಕ್ತಿ, ನನಗೆ ದುರ್ಗಾಪರಮೇಶ್ವರಿ ಸುಮಲತಾಗೆ ತ್ರಿಶೂಲ ಕೊಟ್ಟು ಆಶೀರ್ವಾದ ಮಾಡಲು ಹೇಳಿದ್ದಾಳೆ. ಹೀಗಾಗಿ ನಾನು ದೇವರ ಆಜ್ಞೆ ಪಾಲಿಸುತ್ತಿದ್ದೇನೆ ಎಂದು ಹೇಳಿ ಸುಮಲತಾಗೆ ತ್ರಿಶೂಲವನ್ನು ನೀಡಿ ಆಶೀರ್ವಾದ ಮಾಡಿದರು.