ಕರ್ನಾಟಕದಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್, ಮಹಾರಾಷ್ಟ್ರದಲ್ಲಿ ಎನ್.ಸಿ.ಪಿ. ಜೊತೆ ಕೈಜೋಡಿಸಿದೆ. ರಾಜ್ಯದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ‘ದೋಸ್ತಿ’ಗಳಿಗೆ ಹೊಂದಾಣಿಕೆ ಕೊರತೆ ಕಂಡು ಬರುತ್ತಿರುವಂತೆಯೇ ಮಹಾರಾಷ್ಟ್ರದ ಅಹಮದ್ ನಗರ ಲೋಕಸಭಾ ಕ್ಷೇತ್ರದಲ್ಲಿ ಬಿಕ್ಕಟ್ಟು ಎದುರಾಗಿದೆ.
ಅಹಮದ್ ನಗರ ಲೋಕಸಭಾ ಕ್ಷೇತ್ರದಿಂದ ಮಹಾರಾಷ್ಟ್ರ ವಿಧಾನಸಭೆ ಪ್ರತಿಪಕ್ಷ ನಾಯಕ ಕಾಂಗ್ರೆಸ್ ನ ರಾಧಾಕೃಷ್ಣ ವಿಖೆ ಪಾಟೀಲ್ ಅವರ ಪುತ್ರ ಸುಜಯ್ ವಿಖೆ ಪಾಟೀಲ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಇಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಎನ್.ಸಿ.ಪಿ.ಯ ಸಂಗ್ರಾಮ್ ಜಗತಾಪ್ ಸ್ಪರ್ಧಿಸಿದ್ದಾರೆ.
ಪುತ್ರನ ಗೆಲುವಿಗಾಗಿ ಮೈತ್ರಿ ಧರ್ಮವನ್ನೇ ಮರೆತಿರುವ ರಾಧಾಕೃಷ್ಣ ವಿಖೆ ಪಾಟೀಲ್, ಕಾಂಗ್ರೆಸ್ ವರಿಷ್ಠರ ಎಚ್ಚರಿಕೆಯನ್ನೂ ಕಡೆಗಣಿಸಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ.