ಎಂದಿನಂತೆ ಅಂದು ಕೂಡ ನನಗೆ ಕುಂಭಕರ್ಣ ನಿದ್ರೆ ಹತ್ತಿತ್ತು. ಎಂತಹ ನಿದ್ರೆಯೆಂದರೆ ನನ್ನ ಕನಸಿನ ಸುಂದರಿ ಕಣ್ಣಿಗೆ ಕಾಣಿಸಿಕೊಳ್ಳುವಷ್ಟು. ಕನಸಿನ ಸುಂದರಿಯೆಂದರೆ ಸ್ವಲ್ಪ ಹುಶಾರಾಗಿ ಇರ್ಬೇಕಲ್ವಾ? ನಾನು ಕೂಡ ಹಾಗೆಯೇ ಹುಶಾರಾಗಿ ಕನಸು ಕಾಣ್ತಾ ಇದ್ದೆ. ಅಂದಹಾಗೆ ಕನಸಿನ ಬಗ್ಗೆ ಹೇಳೋದು ಬಿಟ್ಟು ಏನು ಪೀಠಿಕೆ ಹಾಕ್ತಾ ಇದೇನೆ ಅಂದ್ಕೊಂಡ್ರಾ? ಹೇಳ್ತೇನೆ ಕೇಳಿ…
ಅದೊಂದು ದಿನ ನಾನು ನನ್ನ ಕಾಲೇಜಿನಿಂದ ತರಗತಿಗಳನ್ನು ಮುಗಿಸಿಕೊಂಡು ಬರ್ತಾ ಇದ್ದೆ. ಅದೆಲ್ಲಿತ್ತೋ ಚುಮುಚುಮು ಮಳೆ, ತಕ್ಷಣ ಆರಂಭವಾಯಿತು. ನಾನು ಗಡಿಬಿಡಿಯಲ್ಲಿ ಛತ್ರಿ ಬಿಡಿಸಿಕೊಂಡು, ಮನೆಯೆಡೆಗೆ ಧಾವಿಸಿ ನಡೆಯುತ್ತಿದ್ದೆ. ಯಾರೋ ತಮ್ಮ ಮಧುರ ಕಂಠದಿಂದ ಹೆಲ್ಲೋ ಎಂದಂತೆ ಭಾಸವಾಯಿತು. ಜೇನಿನಲ್ಲಿ ಅದ್ದಿ ತೆಗೆದಂತಹ ಮಧುರ ಧ್ವನಿಯು ಒಂದು ಕ್ಷಣ ನನ್ನನ್ನು ಹಿಂದೆ ತಿರುಗುವಂತೆ ಮಾಡಿತ್ತು.
ಹಿಂದೆ ತಿರುಗಿ ನೋಡಿದರೆ ಒಬ್ಬಳು ಹುಡುಗಿ. ನೋಡುತ್ತಿದ್ದರೆ ನೋಡಲೇಬೇಕು ಎನ್ನುವಂತಹ ಸೌಂದರ್ಯ. ಅಪ್ಸರೆಗಿಂತ ಸ್ವಲ್ಪ ಕಡಿಮೆಯೆನಿಸಿದರೂ ಅಪ್ಸರೆಗೆ ಹೋಲಿಸಬಹುದು. ಬಿಳಿ ಚೂಡಿದಾರ್ ತೊಟ್ಟಿದ್ದ ಆಕೆ ನನ್ನ ಕಣ್ಣಿಗೆ ಧರೆಗಿಳಿದ ದೇವತೆಯೆಂದೆನಿಸಿದಳು. ಸ್ವಲ್ಪ ಮಳೆಯಲ್ಲಿ ನೆನೆದಿದ್ದರಿಂದ ಆಕೆಯ ಸೌಂದರ್ಯ ಇಮ್ಮಡಿಸಿದಂತೆ ಕಾಣಿಸುತ್ತಿತ್ತು. ಮನವು ಆ ಬ್ರಹ್ಮ ಅವಳನ್ನು ನನಗಾಗಿಯೇ ಸೃಷ್ಟಿಸಿದ್ದಾನೆ ಎಂದು ಕುಣಿಯುತ್ತಿತ್ತು. ನಾನು ಹೀಗೆ ಕಲ್ಪನೆಯಲ್ಲಿ ನಮ್ಮ ಮದುವೆಯವರೆಗೂ ಹೋಗಿದ್ದೆ. ಹಾಗೆ ಹೋದವನನ್ನು ಮತ್ತೆ ಈ ಲೋಕಕ್ಕೆ ಕರೆತಂದಿದ್ದು ಅವಳ ಆ ಮಧುರ ಧ್ವನಿಯೇ.
ನೀವು ಎಲ್ಲಿ ಹೋಗ್ತಾ ಇದೀರಾ? ನಂಗೆ ಅಲ್ಲಿ 4th ಕ್ರಾಸ್ ಹೋಗೋದಿದೆ. ಸ್ವಲ್ಪ ಅಲ್ಲಿ ತನಕ ನಿಮ್ಮ ಛತ್ರಿಯಲ್ಲಿ ಬಿಡ್ತೀರಾ? ಎಂದು ಕೇಳಿದ ಆ ಮುಗ್ಧ ಮನಸಿಗೆ ಇಲ್ಲವೆನ್ನಲಾಗಲಿಲ್ಲ. ನೀವು ಕೇಳಿದ್ರೆ ಈ ಜೀವಾನೆ ಕೊಡ್ತೀನಿ ಎನ್ನುವ ಮಾತು ಗಂಟಲಲ್ಲೇ ಉಳಿದು, ಸರಿ ಎನ್ನುವ ಉತ್ತರ ನನ್ನಿಂದ ಬಂದಿತ್ತು. ಚುಮುಚುಮು ಮಳೆ, ಪಕ್ಕದಲ್ಲಿ ಮೈ ಬೆಚ್ಚಗೆ ಮಾಡುವ ಹುಡುಗಿ, ಕ್ಷಣಮಾತ್ರದಲ್ಲಿ ನಾನೂ ಕವಿಯಾಗಿಬಿಟ್ಟಿದ್ದೆ. ದಾರಿಯನ್ನು ಇನ್ನಷ್ಟು ಸುಂದರವಾಗಿಸಲು, ಸರಳವಾಗಿ ಒಂದು ಪರಿಚಯ ಮಾಡಿಕೊಂಡೆ. ನಂತರ ತಿಳಿಯಿತು ಆಕೆಯು ನಮ್ಮ ಮನೆಯ ಪಕ್ಕದ ಮನೆಗೆ ಬಾಡಿಗೆಗೆ ಬಂದಿದ್ದಾರೆಂದು. ಓ ದೇವರೇ ಏನು ನಿನ್ನ ಲೀಲೆ, ಮನ ಬಯಸಿದ ಹುಡುಗಿಯನ್ನು ಪರಿಚಯ ಮಾಡಿಸಿದೆ. ಅಷ್ಟೇ ಅಲ್ಲದೆ ನಮ್ಮ ಪಕ್ಕದ ಮನೆಯೇ ಆಕೆಯದು. ನೀನೇ ನಮ್ಮ ಲವ್ ಸ್ಟೋರಿಗೆ ಸಾಕ್ಷಿ ಎಂದು ಮನದಲ್ಲೇ ಆ ದೇವರಿಗೆ ಧನ್ಯವಾದ ತಿಳಿಸಿದೆ.
ಆಕೆಯನ್ನು ಹುಶಾರಾಗಿ ಅವಳ ಮನೆಯವರೆಗೂ ಕರೆತಂದೆ. ಅಷ್ಟೇ ಮಧುರ ಧ್ವನಿಯಲ್ಲಿ ಧನ್ಯವಾದಗಳನ್ನು ತಿಳಿಸಿದಳು. ಹಾಗೆಯೇ ಕಾಫಿ ಕುಡಿಯಲು ಆಮಂತ್ರಿಸಿದಳು. ಇನ್ನೊಮ್ಮೆ ಬರುತ್ತೇನೆ ಎಂದು ನಾನೇ ನಮ್ಮ ಮುಂದಿನ ಭೇಟಿಗೆ ಮುನ್ನುಡಿ ಬರೆದಿದ್ದೆ.
ಏಯ್ ಎದ್ದೇಳೋ ಇನ್ನು ಎದ್ದಿಲ್ವಲ್ಲ ಕಾಲೇಜಿಗೆ ಹೋಗೋದಿಲ್ವಾ ಎಂಬ ಅಮ್ಮನ ಕಾಳಜಿ ಮಿಶ್ರಿತ ಬೈಗುಳಕ್ಕೆ, ಎಚ್ಚರಗೊಂಡ ನಾನು ಗಡಿಬಿಡಿಯಲ್ಲಿ ಕಾಲೇಜಿಗೆ ಹೊರಟೆ. ಹೊರಡುವಾಗ ಪಕ್ಕದ ಮನೆಯ ಕಡೆಗೆ ಅಸಹಜವಾಗಿ ನನ್ನ ಗಮನ ಹರಿಯಿತು. ಮನೆ ಖಾಲಿಯಿರುವುದನ್ನು ಗಮನಿಸಿ ಮುಖ ಸಪ್ಪಗೆ ಮಾಡಿಕೊಂಡು ಕಾಲೇಜಿಗೆ ಹೊರಟೆ. ಕಾಲೇಜಿನಲ್ಲೆಲ್ಲಾ ಬರಿ ಕನಸಿನದ್ದೇ ಯೋಚನೆ. ಹಾಗೂ ಹೀಗೂ ತರಗತಿಯನ್ನು ಮುಗಿಸಿಕೊಂಡು ಮನೆ ಕಡೆಗೆ ಅಪ್ರಯತ್ನವಾಗಿ ಸಾಗುತ್ತಿದ್ದೆ. ದಾರಿಯಲ್ಲಿ ಮಳೆ ಆರಂಭವಾಯಿತು. ನನಗೆ ನನ್ನ ಕನಸಿನದೇ ಗುಂಗು. ಆಕೆಯನ್ನೇ ನೆನೆಯುತ್ತಾ ಛತ್ರಿ ಬಿಡಿಸಿಕೊಂಡು ಸಾಗುತ್ತಿದ್ದೆ. ಆ ಕನಸಿನ ಮಾದರಿಯಲ್ಲೇ ಆಕೆ ಸಿಕ್ಕಳು. ಮನವು ಮಳೆಯಲಿ ಜೊತೆಯಲಿ ಹಾಡನ್ನು ಹಾಡುತ್ತಿತ್ತು. ಅವಳು ಮನೆತನಕ ಡ್ರಾಪ್ ಕೇಳಿದಳು. ಅದೇ ರೀತಿಯಲ್ಲಿ ಅವಳನ್ನು ಮನೆತನಕ ಬಿಟ್ಟು ಬಂದೆ. ಅಂದಿನ ಎಲ್ಲಾ ಕೆಲಸಗಳನ್ನು ಮುಗಿಸಿ ನಿದ್ರಾದೇವಿಯ ಪರವಶನಾಗಿದ್ದೆ.
ಕಾಲಿಂಗ್ ಬೆಲ್ ಸದ್ದಿಗೆ ಎಚ್ಚರಗೊಂಡ ನಾನು ಯಾರು ಬಂದಿರಬಹುದು ಎಂದುಕೊಳ್ಳುತ್ತ ನಿದ್ರೆಕಣ್ಣಲ್ಲೇ ಹೋಗಿ ಬಾಗಿಲು ತೆರೆದರೆ, ನನ್ನ ಮನದರಸಿಯೇ. ಹೃದಯವು ನಿಂತಲ್ಲೇ ಕುಣಿಯಲು ಆರಂಭಿಸಿತು. ಸಾವರಿಸಿಕೊಂಡು ಮಾತನಾಡಿಸಿದೆ. ಆಕೆಯು ನಮ್ಮ ಮನೆಯ ಆವರಣದಲ್ಲಿ ಇದ್ದ ಡಸ್ಟ್ ಬಿನ್ ಬಳಸಿಕೊಳ್ಳಲು ಅನುಮತಿ ಕೇಳಿ ಬಂದಿದ್ದಳು. ಮನದಲ್ಲಿ ಇದಕ್ಕೆಲ್ಲಾ ಅನುಮತಿ ಕೇಳ್ತೀರಲ್ಲಾ ನೀವು ನಮ್ಮ ಅಮ್ಮನ ಮುದ್ದಿನ ಸೊಸೆಯಾಗುವವರು, ನನ್ನ ಹೃದಯದ ಅಃತಪುರಕ್ಕೆ ರಾಣಿಯಾಗುವವರು, ನನ್ನ ಮಕ್ಕಳಿಗೆ ಪ್ರೀತಿಯ ಅಮ್ಮನಾಗುವವರು, ಈ ಮನೆಯೇ ನಿಮ್ಮದು ಎಂದು ಹೇಳಬೇಕೆನಿಸಿದರೂ ಆಕೆಯ ಮುಗ್ಧತೆಗೆ ಸೋತು ಎಲ್ಲವನ್ನೂ ಮರೆತು ಸರಿ ಬಳಸಿಕೊಳ್ಳಿ ಎಂದಷ್ಟೇ ಹೇಳಿದೆ.
ದಿನಗಳುರುಳಿದಂತೆ ಆಕೆ ನಮ್ಮ ಮನೆಗೆ ಬರುವುದು, ನಾನು ಆಕೆಯ ಮನೆಗೆ ಹೋಗುವುದು ಹೆಚ್ಚಿತು. ಕಾರಣವಿಲ್ಲದಿದ್ದರೂ ಕಾರಣ ಹುಡುಕಿಕೊಂಡು ಭೇಟಿಯಾಗುತ್ತಿದ್ದೆವು. ಒಂದು ದಿನ ನಿರ್ಧಾರ ಮಾಡಿಯೇ ಬಿಟ್ಟೆ. ಇಂದು ಹೇಗಾದರೂ ಮಾಡಿ ಆಕೆಗೆ ನನ್ನ ಪ್ರೀತಿಯನ್ನು ಹೇಳಲೇಬೇಕೆಂದು. ತಡಮಾಡದೆ ಆಕೆಗೂ ತಿಳಿಸಿಬಿಟ್ಟೆ ನಿಮ್ಮೊಡನೆ ಮಾತನಾಡಬೇಕೆಂದು. ಆಕೆಯೂ ಒಪ್ಪಿ ನಾನೂ ಕೂಡ ಎಂದು ಹೇಳಿ ನಾಚುತ್ತಾ ಓಡಿದಳು. ಆಕೆಯ ನಾಚಿಕೆಯ ಹಿಂದಿರುವ ತಾತ್ಪರ್ಯ ನನಗೆ ಅರ್ಥವಾಗಲೇ ಇಲ್ಲ. ಕೊನೆಗೂ ಅಂದುಕೊಂಡ ಸ್ಥಳದಲ್ಲಿ, ನಿಗದಿತ ಸಮಯಕ್ಕೆ ನಮ್ಮ ಭೇಟಿಯಾಯಿತು, ನಾನು ಹೇಳಬೇಕೆನ್ನುವಷ್ಟರಲ್ಲಿ ಆಕೆಯೇ ಮುಂದಾಗಿ ಐ ಲವ್ ಯೂ ಎಂದುಬಿಟ್ಟಳು. ನನಗಾದ ಸಂತೋಷಕ್ಕೆ ಅವಳನ್ನು ಗಟ್ಟಿಯಾಗಿ ತಬ್ಬಿಹಿಡಿದು ಗರಗರನೆ ತಿರುಗಿಸಿದೆ. ಅಷ್ಟರಲ್ಲಿ ಯಾರೋ ತಳ್ಳಿದ ಹಾಗೆ, ನಾನೇ ಪ್ರಪಾತಕ್ಕೆ ಬಿದ್ದ ಹಾಗೆ ಅನುಭವವಾಯಿತು. ಎಚ್ಚರಗೊಂಡು ನೋಡಿದರೆ ದಿಂಬಿನ ಸಮೇತ ನಾನು ಮಂಚದಿಂದ ಕೆಳಗೆ ಬಿದ್ದಿದ್ದೆ.
ಕನಸು ಕನಸಾಗಿಯೇ ಉಳಿಯಿತಲ್ಲ, ದೇವರೇ ಯಾಕೆ ಹೀಗೆ ಮಾಡಿದೆ ಎಂದು ದೇವರಿಗೆ ಹಿಡಿಶಾಪ ಹಾಕುವಷ್ಟರಲ್ಲಿ ಕಾಲಿಂಗ್ ಬೆಲ್ ಸದ್ದಾಯಿತು….
ಮುಂದಿನದು ನಿಮ್ಮ ಕಲ್ಪನೆ… ಕಲ್ಪನೆ ನಿಜವಾಗಲಿ…
ಸಾಯಿ ಪ್ರೀತಿ….✍?.