ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ, ಕಾಂಗ್ರೆಸ್ ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ರಮೇಶ್ ಜಾರಕಿಹೊಳಿ ರಾಜೀನಾಮೆ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಮೇಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಪಕ್ಷ ಸಚಿವರನ್ನಾಗಿ ಮಾಡಿತ್ತು, ಅವರು ಕೇಳಿದ್ದೆಲ್ಲವನ್ನು ಅವರಿಗೆ ಕೊಟ್ಟಿತ್ತು ಆದರೆ ಅವರು ಅದೆಲ್ಲವನ್ನು ಮರೆತು ಇಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ ಎನ್ನುತ್ತಿದ್ದಾರೆ,
ಕಾಂಗ್ರೆಸ್ ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣ ಎಲ್ಲಿದೆ ತಿಳಿಯುತ್ತಿಲ್ಲ, ರಮೇಶ್ ಜಾರಕಿಹೊಳಿ ಅವರ ಆಸೆಯನ್ನು ಆ ಭಗವಂತ ಆದಷ್ಟು ಬೇಗ ಪೂರೈಸಲಿ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಸಂಧಾನಕ್ಕೆ ಪ್ರಯತ್ನ ಮಾಡುತ್ತೀರಾ ಎಂದು ಕೇಳಿದ್ದಕ್ಕೆ, ರಮೇಶ್ ಜಾರಕಿಹೊಳಿ ಕೈಗೆ ಸಿಕ್ಕರಲ್ಲವೇ ಸಂಧಾನಕ್ಕೆ ಪ್ರಯತ್ನ ಮಾಡಲು ಸಾಧ್ಯ, ಅದಕ್ಕೆಲ್ಲ ಪಕ್ಷದಲ್ಲಿ ಬೇರೆ ನಾಯಕರಿದ್ದಾರೆ ಅವರು ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂದು ಉತ್ತರಿಸುವ ಮೂಲಕ ಸಂಧಾನದ ಬಗ್ಗೆ ಆಸಕ್ತಿಯಿಲ್ಲ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.