ಕನ್ನಡ ಸಿನಿಮಾಗಳನ್ನು ಹೇಗೆ ಕೊಲೆ ಮಾಡ್ಬೇಕು..? ಯಾವ ರೀತಿ ಕನ್ನಡ ಪ್ರೇಕ್ಷಕನಿಗೆ ಮೋಸ ಮಾಡ್ಬೇಕು..? ಕನ್ನಡ ನಿರ್ಮಾಪಕ ಹೇಗೆ ಕನ್ನಡ ಸಿನಿಮಾ ಮಾಡೋ ಆಸೇನೇ ಬಿಡಬೇಕು..? ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ.
ಮಲ್ಟಿಪ್ಲೆಕ್ಸ್ ಗಳಿಗೆ ಅದೇನೋ ಗೊತ್ತಿಲ್ಲ, ಕನ್ನಡ ಅಂದ್ರೆ ಅಲರ್ಜಿ..! ಕನ್ನಡ ಸಿನಿಮಾಗಳು ಅಂದ್ರೆ ಏನೋ ಒಂಥರಾ ಅಸಡ್ಡೆ. ಕನ್ನಡ ನೆಲದಲ್ಲೇ ತಮ್ಮ ಸಾಮ್ರಾಜ್ಯ ಸ್ಥಾಪಿಸಿಕೊಂಡು ಕನ್ನಡ ಸಿನಿಮಾಗಳ ಮಾರಣಹೋಮವನ್ನು ಸಾಕಷ್ಟು ಮಲ್ಟಿಪ್ಲೆಕ್ಸ್ ಗಳು ಹೇಗೆ ಮಾಡ್ತಿವೆ ಅನ್ನೋದು ನಿಮಗೆ ಗೊತ್ತಾದ್ರೆ ಖಂಡಿತ ಶಾಕ್ ಆಗ್ತೀರಿ…!
ಕಳೆದ ಶುಕ್ರವಾರ ಕನ್ನಡದ ಏಳು ಸಿನಿಮಾಗಳು ರಿಲೀಸ್ ಆಗಿತ್ತು. ಅವುಗಳಲ್ಲಿ ಆಕ್ಟರ್, ಭಲೇಜೋಡಿ, ಮಧುರ ಸ್ವಪ್ನ ಸಹ ಇವೆ. ಈ ಮೂರೂ ಸಿನಿಮಾಗಳು ಬೆಂಗಳೂರಿನ ಸಾಕಷ್ಟು ಮಲ್ಟಿಪ್ಲೆಕ್ಸ್ ಗಳಲ್ಲಿ ಅಲ್ಲೊಂದು ಇಲ್ಲೊಂದು ಶೋ ಪಡೆದುಕೊಳ್ಳೋದ್ರಲ್ಲಿ ಯಶಸ್ವಿಯಾಗಿವೆ. ಆದರೆ ಅವುಗಳನ್ನು ಈ ಪಿವಿಆರ್ ಹೇಗೆ ಕೊಲೆ ಮಾಡಿಬಿಡ್ತು.? ಅದೂ ಸೋಲ್ಡ್ ಔಟ್ ಟ್ರಿಕ್ ಬಳಸಿ..!! ಏನಿದು ಸೋಲ್ಡ್ ಔಟ್ ಟ್ರಿಕ್ ಅಂದ್ರಾ..? ಆಕ್ಟರ್ ಸಿನಿಮಾ ಇವತ್ತು ಸಂಜೆ 7.30ಕ್ಕೆ ಪಿವಿಆರ್ ನಲ್ಲಿ ಶೋ ಇದೆ ಅಂತ ಇಟ್ಕೊಳಿ, ಅದಕ್ಕೆ ಬುಕ್ ಮೈ ಶೋ ಮುಖಾಂತರ ಟಿಕೆಟ್ ಬುಕ್ ಮಾಡೋಕೆ ನೀವು ಪ್ರಯತ್ನಿಸಿದ್ರೆ ಅದು ಸೋಲ್ಡ್ ಔಟ್ ಅಂತ ತೋರಿಸುತ್ತೆ. ಸಿನಿಮಾ ನೋಡಬೇಕು ಅನ್ಕೊಂಡ ಪ್ರೇಕ್ಷಕ `ಸರಿ ಆಕ್ಟರ್ ಸೋಲ್ಡ್ ಆಗಿದೆ, ಬೇರೆ ಕನ್ನಡ ಸಿನಿಮಾ ನೋಡೋಣ’ ಅಂತ ಭಲೇಜೋಡಿಗೆ ಟಿಕೆಟ್ ಬುಕ್ ಮಾಡೋಕೆ ಪ್ರಯತ್ನಿಸಿದ್ರೆ ಅದೂ ಸಹ ಸೋಲ್ಡ್ ಔಟ್..! ಆದ್ರೆ ನೋವಾಗೋ ಸತ್ಯ ಏನು ಗೊತ್ತಾ..? ಬುಕ್ ಮೈ ಶೋನಲ್ಲಿ ಸೋಲ್ಡ್ ಔಟ್ ತೋರಿಸಿದ ಸಿನಿಮಾ ಹಾಲ್ ನಲ್ಲಿ 5 ಜನರೂ ಸಿನಿಮಾ ನೋಡೋಕೆ ಬಂದಿಲ್ಲ..! ಯಾಕಂದ್ರೆ ಯಾರಿಗೂ ಸಿನಿಮಾ ಬುಕ್ ಮಾಡೋಕೇ ಸಾಧ್ಯ ಆಗಿಲ್ಲ..! ಸೋಲ್ಡ್ ಔಟ್ ಸೋಲ್ಡ್ ಔಟ್ ಅಂತ ಬುಕ್ ಮೈ ಶೋನಲ್ಲಿ ತೋರಿಸಿ, ಕನ್ನಡಿಗರು ಸಿನಿಮಾಗೆ ಬಾರದ ಹಾಗೆ ಮಾಡಿ, ನಿರ್ಮಾಪಕನಿಗೆ ಕೇವಲ ಬಂದಿದ್ದ 5 ಜನರ ಲೆಕ್ಕ ಕೊಟ್ಟು, ನಿಮ್ಮ ಸಿನಿಮಾ ಚೆನ್ನಾಗಿ ಓಡ್ತಿಲ್ಲ ಅಂತ ಕಿತ್ತು ಬಿಸಾಕಿ ಅದೇ ಜಾಗಕ್ಕೆ ಹಿಂದಿ, ತೆಲುಗು, ತಮಿಳು ಸಿನಿಮಾ ಸ್ಥಾಪನೆ ಮಾಡ್ತಾರೆ..! ಯಾವ ಪಿವಿಆರ್ ನಲ್ಲಿ ಒಂದು ಕನ್ನಡ ಸಿನಿಮಾಗೆ ಒಬ್ಬ ಪ್ರೇಕ್ಷಕನೂ ಇರಲಿಲ್ವೋ, ಅದೇ ಜಾಗದಲ್ಲಿ ಅದೇ ಪಿವಿಆರ್ ನ ಮತ್ತೊಂದು ಸ್ಕ್ರೀನಿನಲ್ಲಿ ಹಿಂದಿ ಚಿತ್ರ ನೀರ್ಜಾ 300 ಸೀಟ್ ತುಂಬಿ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ..! ತುಂಬಾ ಬುದ್ದಿವಂತಿಕೆಯಿಂದ ಕನ್ನಡ ಸಿನಿಮಾಗಳನ್ನು, ಅದರಲ್ಲೂ ಹೊಸಬರ, ಸಣ್ಣ ನಿರ್ಮಾಪಕರ ಸಿನಿಮಾಗಳನ್ನು ಸಾಯಿಸ್ತಿದ್ದಾರೆ ಈ ಪಿವಿಆರ್ ನವರು..! ಅಂದ್ರೆ ಸಿನಿಮಾ ಪ್ರದರ್ಶನಕ್ಕೆ ೨೦ ಗಂಟೆ ಮುಂಚೆಯೇ ಬುಕ್ ಮೈ ಶೋನಲ್ಲಿ ಸೋಲ್ಡ್ ಔಟ್ ಅಂತ ತೋರಿಸಿ, ಪ್ರೇಕ್ಷಕ ಬಾರದ ಹಾಗೆ ಮಾಡಿ, ಸಿನಿಮಾಗೆ ಜನರೇ ಇಲ್ಲ ಅಂತ ಹೇಳಿ ಸಿನಿಮಾ ಪ್ರದರ್ಶನ ರದ್ದು ಮಾಡೋದು, ಸಿನಿಮಾಗಳನ್ನು ಕಿತ್ತು ಹಾಕೋದು ಮಾಡ್ತಿದೆ..!
ಕನ್ನಡ ಸಿನಿಮಾಗಳು ತೆರಿಗೆ ರಹಿತ. ಬೇರೆ ಭಾಷೆಯ ಸಿನಿಮಾಗಳಿಗಿಂತ ಕನ್ನಡ ಸಿನಿಮಾದ ಟಿಕೆಟ್ ಬೆಲೆ ಸ್ವಲ್ಪ ಕಮ್ಮೀನೇ ಇರುತ್ತೆ ಅನ್ನೋದು ನಿಜವಾದ್ರೂ ಇದೇ ಕನ್ನಡ ಸಿನಿಮಾಗಳಿಗೆ ಶಾಪವಾಗಿರೋದು ಸುಳ್ಳಲ್ಲ..! ಅದು ಹೇಗೆ ಅಂದ್ರಾ..? ಪಿವಿಆರ್ ನವರು ಕನ್ನಡ ಸಿನಿಮಾಗಳನ್ನು ಈ ರೀತಿ ಯೋಜನೆ ರೂಪಿಸಿ ಕೊಲೆ ಮಾಡ್ತಿರೋದೇ ಆ ಕಾರಣಕ್ಕೆ. ಕನ್ನಡ ಸಿನಿಮಾಗಳು ಎರಡು ಸ್ಕ್ರೀನಿನಲ್ಲಿ ಪ್ರದರ್ಶನವಾಗಿ ಮಾಡುವಷ್ಟು ಲಾಭವನ್ನು, ಅದಕ್ಕಿಂತ ಹೆಚ್ಚಿನ ಟಿಕೆಟ್ ಬೆಲೆಯ ಪರಭಾಷಾ ಸಿನಿಮಾಗಳ ಒಂದು ಪ್ರದರ್ಶನದಲ್ಲಿಯೇ ಪಡೆದುಬಿಡ್ತಾರೆ ಈ ಮಲ್ಟಿಪ್ಲೆಕ್ಸ್ ನವರು..! ಹಾಗಾಗಿ ಕನ್ನಡ ಸಿನಿಮಾಗಳನ್ನು ಸಾಯಿಸಿಬಿಟ್ರೆ ಅದೇ ಜಾಗದಲ್ಲಿ ಪರಭಾಷಾ ಸಿನಿಮಾಗಳು ಪ್ರದರ್ಶಿಸಿ ಲಾಭ ಮಾಡಿಕೊಳ್ಳೋ ತಂತ್ರ, ಕುತಂತ್ರ ಇದು..! ಈ ವಿಚಾರದಲ್ಲಿ ತಮಿಳುನಾಡು ಸರ್ಕಾರದ ನಿಲುವು ಪ್ರಶಂಸನೀಯ. ತಮಿಳುನಾಡಿನ ಯಾವುದೇ ಪಿವಿಆರ್ ಗೆ ಹೋದರೂ ನಿಮಗೆ ಯಾವುದೇ ಭಾಷೆಯ ಸಿನಿಮಾಗಳನ್ನೂ 120 ರೂಪಾಯಿಗಿಂತ ಹೆಚ್ಚಿನ ಬೆಲೆಗೆ ಮಾರುವಂತಿಲ್ಲ..! ಅದೊಂಥರಾ ಮ್ಯಾಕ್ಸಿಮಂ ಸೆಲ್ಲಿಂಗ್ ಪ್ರೈಸ್..! ಹಾಗಾಗಿ ಪಿವಿಆರ್ ನವರಿಗೂ ಯಾವ ಸಿನಿಮಾ ಓಡಿದ್ರೂ ತಲೆಬಿಸಿ ಇಲ್ಲ. ಯಾಕಂದ್ರೆ ಎಲ್ಲದರಲ್ಲೂ ಅವರಿಗೆ ಬರುವ ಲಾಭ ಒಂದೇ..! ಹಾಗಾಗಿ ಬೇರೆ ಭಾಷೆಗಳನ್ನು ಪ್ರಮೋಟ್ ಮಾಡೋ ರೀತಿಯಲ್ಲೇ ತಮಿಳು ಸಿನಿಮಾಗಳನ್ನೂ ಪ್ರಮೋಟ್ ಮಾಡ್ತಾರೆ. ತಮಿಳು ಸಿನಿಮಾಗಳು ಗೆಲ್ಲೋದರಲ್ಲಿ ಮಹತ್ವದ ಪಾತ್ರ ವಹಿಸ್ತಾರೆ..! ಇನ್ನೊಂದು ನಿಜಕ್ಕೂ ಆಶ್ಚರ್ಯಕರ ವಿಷಯ ಅಂದ್ರೆ, ತಮಿಳುನಾಡಿನ ಯಾವುದೇ ಪಿವಿಆರ್ ನಲ್ಲಿ ಮುಂದಿನ ಎರಡು ಸಾಲುಗಳಲ್ಲಿ ನೀವು ಯಾವುದೇ ಭಾಷೆಯ ಸಿನಿಮಾಗಳನ್ನು ಕೇವಲ ಹತ್ತು ರೂಪಾಯಿಗೆ ನೋಡಬಹುದು..! ನೀವು ಓದಿದ್ದು ಸರಿ ಇದೆ, ಕೇವಲ ಹತ್ತು ರೂಪಾಯಿಗೆ ಪಿವಿಆರ್ ನಲ್ಲಿ ಸಿನಿಮಾ ನೋಡಬಹುದು..! ಆ ಕಾರಣಕ್ಕೇ ತಮಿಳು ಸಿನಿಮಾ ಪ್ರೇಕ್ಷಕ ಹೆಚ್ಚೆಚ್ಚು ಸಿನಿಮಾ ನೋಡ್ತಾನೆ, ತಮಿಳು ಸಿನಿಮಾಗಳನ್ನು ಗೆಲ್ಲಿಸ್ತಾನೆ..! ಆದ್ರೆ ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ಬೆಲೆಗೆ ಒಂದು ಸಮಾನ ನೀತೀನೇ ಇಲ್ಲ. ಒಂದು ದಿನ 1000 ರೂಪಾಯಿ, ಮತ್ತೊಂದು ದಿನ 800 ರೂಪಾಯಿ, ಇನ್ನೊಂದು ದಿನ 200 ರೂಪಾಯಿ..! ಅವರ ಮನಸ್ಸಿಗೆ ಬಂದ ಹಾಗೆ ರೂಲ್ಸ್ ಮಾಡಿಕೊಂಡು ಪ್ರೇಕ್ಷಕನನ್ನು ಲೂಟಿ ಮಾಡ್ತಿದ್ದಾರೆ..! ಹಾಗಾಗಿ ಕರ್ನಾಟಕ ಸರ್ಕಾರ ಸಹ ಇಂಥಹ ಸಮಾನ ಟಿಕೆಟ್ ಬೆಲೆಯ ಕಾನೂನು ತಂದ್ರೆ ಕನ್ನಡ ಸಿನಿಮಾಗಳು ಯಾಕೆ ಓಡಲ್ಲ…? ಕನ್ನಡ ಸಿನಿಮಾಗಳನ್ನು ಯಾರೂ ಕೊಲೆ ಮಾಡೋದೂ ಇಲ್ಲ..!
ಇದೇ ಮಲ್ಟಿಪ್ಲೆಕ್ಸ್ ಗಳು ಕನ್ನಡ ಸಿನಿಮಾಗಳನ್ನು ಇನ್ನೂ ಹೇಗೇಗೆಲ್ಲಾ ಸಾಯಿಸ್ತಾರೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ. ಸಹಜವಾಗಿ ಯಾವುದೇ ಪರಭಾಷೆಯ ಸಿನಿಮಾಗಳು ರಿಲೀಸ್ ಆಗುತ್ತೆ ಅಂದ್ರೆ ಎಲ್ಲಾ ಕಡೆಯಿಂದ ಕನ್ನಡ ಸಿನಿಮಾಗಳನ್ನು ಅದೆಷ್ಟೇ ಚೆನ್ನಾಗಿ ಓಡ್ತಿದ್ರೂ ಕಿತ್ತು ಬಿಸಾಕೋದು ಸಾಮಾನ್ಯ.! ಆದ್ರೆ ಚೆನ್ನಾಗಿ ಓಡ್ತಿರೋ ಸಿನಿಮಾ ಹೇಗೆ ಕಿತ್ತಾಗೋದು..? ಅದಕ್ಕೂ ಇವರ ಬಳಿ ಐಡಿಯಾ ಇದೆ. ಇತ್ತೀಚೆಗೆ ಕನ್ನಡದ ಒಂದು ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ಪ್ರದರ್ಶನ ಕಾಣ್ತಿತ್ತು. ಆದ್ರೆ ಅದರ ಮುಂದಿನ ವಾರವೇ ಮತ್ತೊಂದು ದೊಡ್ಡ ಹಿಂದಿ ಸಿನಿಮಾ ರಿಲೀಸಿಗೆ ರೆಡಿ ಇತ್ತು. ಮಲ್ಟಿಪ್ಲೆಕ್ಸ್ ಗಳು ಸಾಮಾನ್ಯವಾಗಿ ಯಾವುದೇ ನಿರ್ಮಾಪಕ, ಪ್ರದರ್ಶಕನಿಗೆ ಹೇಳೋದಿಷ್ಟೆ, `40-50% ಸೀಟುಗಳು ತುಂಬಿಲ್ಲ ಅಂದ್ರೆ ನಾವು ಸಿನಿಮಾ ತೆಗೆದು ಬಿಡ್ತೀವಿ’ ಅಂತ..! ಹಾಗೆಯೇ ಆ ಕನ್ನಡ ನಿರ್ಮಾಪಕನಿಗೂ ಅದೇ ಮಾತು ಹೇಳಿದ್ರು. ತನ್ನ ಸಿನಿಮಾ ಆರಾಮಾಗಿ 70-80% ಸೀಟ್ ಫಿಲ್ಲಿಂಗ್ ಇದ್ದಿದ್ರಿಂದ ಆ ನಿರ್ಮಾಪಕ ತನ್ನ ಸಿನಿಮಾಗೇನೂ ಸಮಸ್ಯೆ ಇಲ್ಲ ಅಂತ ಅನ್ಕೊಂಡ್ರು..! ಆದ್ರೆ ಮಾರನೇ ದಿನದ ರಿಪೋರ್ಟಲ್ಲಿ ಅವರ ಸಿನಿಮಾ ಫಿಲ್ಲಿಂಗ್ 35-40% ಗೆ ಬಂದಿತ್ತು..! ಅದು ಹೇಗೆ ಅಂದ್ರಾ..? ಈ ಹಿಂದೆ 70-80% ಫಿಲ್ಲಿಂಗ್ ಇದ್ದಾಗ ಆ ನಿರ್ಮಾಪಕನಿಗೆ 150 ಸೀಟುಗಳು ಹಿಡಿಯೋ ಹಾಲ್ ಕೊಟ್ಟಿದ್ರು, ಯಾವಾಗ ಹಿಂದಿ ಸಿನಿಮಾಗೆ ಜಾಗ ಕೊಡಬೇಕು ಅಂತ ಡಿಸೈಡ್ ಮಾಡಿದ್ರೋ, ಆಗ ಆ ಕನ್ನಡ ಸಿನಿಮಾನ 300 ಸೀಟುಗಳಿರೋ ಹಾಲ್ ಗೆ ಸ್ಥಳಾಂತರಿಸ್ತಾರೆ..! ಮುಂಚೆ 150 ಸೀಟುಗಳಿರೋ ಹಾಲ್ ಗೆ 120 ಜನ ಬಂದ್ರೆ ಅದು 70-80% ಆಗ್ತಿತ್ತು, ಆದ್ರೆ 300 ಸೀಟಿನ ಹಾಲ್ ಗೂ ಅದೇ 120 ಜನ ಬಂದರೂ ಅದು 30-40% ದಾಟಲಿಲ್ಲ..! ಅಷ್ಟೇ, ಸಿನಿಮಾ ಮಲ್ಟಿಪ್ಲೆಕ್ಸಿಂದ ಔಟ್..! ಹೀಗೆ ತುಂಬಾ ಜಾಣತನದಿಂದ ಕನ್ನಡ ಸಿನಿಮಾಗಳನ್ನು ಕೊಲೆ ಮಾಡ್ತಿದ್ದಾರೆ ಇವರೆಲ್ಲಾ ಸೇರ್ಕೊಂಡು..!
ಕೋಟಿ ಕೋಟಿ ದುಡ್ಡು ಹಾಕಿ, ಒಬ್ಬ ನಿರ್ಮಾಪಕ ಸಿನಿಮಾ ಮಾಡಿ ಇಂಥಹ ಜಾಗದಲ್ಲಿ ಪ್ರದರ್ಶನ ಮಾಡಿದ್ರೆ, ಇವರೆಲ್ಲಾ ಸೇರಿ ಕನ್ನಡ ನಿರ್ಮಾಪಕ, ಸಿನಿಮಾ, ಕಲಾವಿದರು, ತಂತ್ರಜ್ನರನ್ನೆಲ್ಲಾ ತಮ್ಮ ಕಾರ್ಪೊರೇಟ್ ಮಾದರಿಯಲ್ಲಿ, ಕುತಂತ್ರ ಬುದ್ದಿಯಿಂದ ಲಾಭದ ಆಸೆಗೆ `ಕೊಲೆ’ ಮಾಡ್ತಿದ್ದಾರೆ..!ಇದೇ ವಿಚಾರದಲ್ಲಿ ಬುಕ್ ಮೈ ಶೋನವರು, ಇದಕ್ಕೂ ನಮಗೂ ಸಂಬಂಧವಿಲ್ಲ, ಪಿವಿಆರ್ ಅಥವಾ ಯಾವುದೇ ಮಲ್ಟಿಪ್ಲೆಕ್ಸಿನವರು ಕೊಡೋ ಫಿಲ್ಲಿಂಗ್ ಆಧಾರದ ಮೇಲೆ ನಮ್ಮ ಅಪ್ಲಿಕೇಶನ್ ಸೋಲ್ಡ್ ಔಟ್ ತೋರಿಸುತ್ತೆ ಅಂತ ಹೇಳ್ತಾರೆ..! ಪಿವಿಆರ್ ನವರು ಇದನ್ನು ಆರಾಮಾಗಿ ಬುಕ್ ಮೈ ಶೋ ಮೇಲೆ ಹಾಕ್ತಾರೆ..! ಬೆಂಗಳೂರಿನಂತಹ ನಗರಗಳಲ್ಲಿ ಪ್ರತಿ ಸಿನಿಮಾ ಶೋಗೆ ಶೇಕಡಾ 80ರಷ್ಟು ಟಿಕೆಟ್ ಗಳು ಬುಕ್ ಮೈ ಶೋನಲ್ಲಿ ಬುಕ್ ಆಗ್ತವೆ..! ಅದರಲ್ಲೇ ಸೋಲ್ಡ್ ಔಟ್ ಅಂತ ಯಾಮಾರಿಸಿ ಪ್ರೇಕ್ಷಕ ಕನ್ನಡ ಸಿನಿಮಾಗಳ ಕಡೆ ತಲೆ ಹಾಕದ ಹಾಗೆ ಮಾಡ್ತಿದ್ದಾರೆ. ಕನ್ನಡ ಸಿನಿಮಾಗಳಿಗೆ ಅವರಿಗೆ ಇಷ್ಟ ಬಂದ ಹಾಗೆ ಶೋ ಕೊಡೋದಲ್ಲದೇ, ಅವರಿಗೆ ಇಷ್ಟಬಂದಹಾಗೆ ಆಟ ಆಡಿಕೊಂಡು ಕನ್ನಡ ಸಿನಿಮಾಗಳನ್ನು ವಾರಕ್ಕೆ ಮುಂಚೆ ಎತ್ತಂಗಡಿ ಮಾಡ್ತಿದ್ದಾರೆ..! ಪಿವಿಆರ್ ಫೋರಂ ನಂತಹ ಜಾಗದಲ್ಲಿ ನಿಮಗೆ ಬೇಕು ಅಂದ್ರೂ ಒಂದೇ ಒಂದು ಕನ್ನಡ ಸಿನಿಮಾಗಳ ಪೋಸ್ಟರ್ ಸಹ ನೋಡೋಕೆ ಸಿಗಲ್ಲ..! ಅವರಿಗೆ ಒಟ್ನಲ್ಲಿ ಕನ್ನಡ ಸಿನಿಮಾಗಳಿಗೆ ಜನ ಬರಬಾರದು ಅನ್ನೋದಷ್ಟೇ ಉದ್ದೇಶ..!
ಮೊದಲೆಲ್ಲಾ ಸಿನಿಮಾ ಟಿಕೆಟ್ ಸೋಲ್ಡ್ ಔಟ್ ಅಂತ ಬಂದ್ರೆ ನಿರ್ಮಾಪಕ ಸಂಭ್ರಮಿಸೋನು, ಈಗ ಸೋಲ್ಡ್ ಔಟ್ ಅಂತ ಬಂದ್ರೆ ವಿಷ ಕುಡೀಬೇಕಾದ ಪರಿಸ್ಥಿತಿ ಬಂದಿದೆ..! ಸರ್ಕಾರ ಹಾಗೂ ಚೇಂಬರ್ ಈಗಲೂ ಇದರ ವಿರುದ್ಧ ಕ್ರಮ ತಗೊಂಡು ಶಾಶ್ವತ ಪರಿಹಾರ ಕಂಡುಕೊಳ್ಳಲಿಲ್ಲ ಅಂದ್ರೆ, ಕನ್ನಡ ಚಿತ್ರರಂಗವೇ ಮುಳುಗಿಹೋಗೋ ದಿನಗಳು ದೂರವಿಲ್ಲ..!
- ಕೀರ್ತಿ ಶಂಕರಘಟ್ಟ (ಕಿರಿಕ್ ಕೀರ್ತಿ)
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಸ್ಮೃತಿ ಇರಾನಿ ಭಾಷಣಕ್ಕೆ `ಸತ್ಯಮೇವ ಜಯತೇ’ ಎಂದು ಮೋದಿ ಟ್ವೀಟ್.. !
ಕನ್ನಡ ಸಿನಿಮಾ ಉದ್ದಾರ ಆಗಬೇಕಂದ್ರೆ…..!
ಈ ಫೋನ್ ಬುಕಿಂಗ್ ಮಾಡಿದರೆ 10 ವರುಷಗಳ ಬಳಿಕ ಡ್ರೋನ್ ಮೂಲಕ ಫೋನ್ ಡೆಲಿವರಿ ಅಂತೆ.!
ಮಂಗಳನಲ್ಲಿಗೆ ಮೂರೇ ದಿನಕ್ಕೆ ಹೋಗ್ಬಹುದು
ಬೆಂಗಳೂರಲ್ಲಿ ಕನ್ನಡ ಮಾತನಾಡೋರು 34% ಮಾತ್ರ..! ಕನ್ನಡ ಮಾಯವಾಗ್ತಿದೆ…ರಾಜಧಾನಿಯಲ್ಲಿ ಕನ್ನಡ ನಶಿಸಿ ಹೋಗ್ತಿದೆ..!
ತಣ್ಣಗಿದ್ದ ಬೆಂಗಳೂರು ಯಾಕೆ ಹೀಗೆ ಉರೀತಿದೆ..?! ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ಏರಿಕೆ..!






