ಏನಾದರಾಗಲಿ ಅವಳು ಕೊರಗಬಾರದು, ನಾನೀ ಸುಳ್ಳನ್ನು ಹೇಳುತ್ತಿರುವುದು ಅವಳ ಸಂತೋಷಕ್ಕೆ ಅಲ್ಲವೇ ಮೊದಲೇ ಬಹಳ ಮೃದು ಸ್ವಭಾವ ಅವಳದ್ದು ನಂತರ ಕೊರಗಿ ಕೊರಗಿ ಈಗ ಅವಳ ಉದರದಲ್ಲಿರುವ ಮಗುವನ್ನು ಕಳೆದುಕೊಳ್ಳಲಾಗುವುದಿಲ್ಲ ಅಲ್ಲವೇ ಜೀವು ಎನ್ನುತ್ತಾನೆ ಪ್ರತೀಕ್.
ನೀನು ಹೇಳೋದು ನಿಜ ಪ್ರತೂ ಆದರೆ ಅತ್ತಿಗೆಗೆ ಅದು ತಿಳಿದರೆ ನೀನೂ ಸುಳ್ಳು ಹೇಳಿದ್ದಿಯೆಂದು ನೊಂದುಕೊಳ್ಳುವುದಿಲ್ಲವೇ? ಪ್ರತೀಕನ ಮಾತಿಗೆ ಪ್ರತಿಯಾಗಿ ಉತ್ತರಿಸುತ್ತಾನೆ ಗೆಳೆಯ ಹಾಗೂ ಡಾಕ್ಟರ್ ಜೀವನ್.
ನೀನು ಸಹಾಯ ಮಾಡಿದರೆ ಎಲ್ಲವೂ ಸುಲಭ ಕಣೋ ಎಂದ ಪ್ರತೀಕ್ ಮಾತಿಗೆ ಜೀವನ್ ಏನೋ ನೀನು ನಾನು ಡಾಕ್ಟರ್ ಇಲ್ಲಿ, ಜ್ಯೋತಿಷ್ಯ ಹೇಳುವವನಲ್ಲ. ನನ್ನ ವೃತ್ತಿಗೆ ಮೋಸ ಮಾಡಿಕೊಳ್ಳಲು ನನಗಾಗುವುದಿಲ್ಲ, ಹೇಗಾದರೂ ಮಾಡಿ ನೀನೇ ಸಂಭಾಳಿಸಿಕೋ ಎನ್ನುತ್ತಾನೆ ಜೀವನ್.
ಹೌದಾ ಸರಿ ನಿಧಿ ಅತ್ತಿಗೆ ಬಳಿ ಹೇಳ್ತೀನಿ ಆಮೇಲೆ ಯಾವುದು ವೃತ್ತಿ ನಿಯಮ ಅಂತ ಅವರೇ ತಿಳಿಸುತ್ತಾರೆ ನಿನಗೆ ಎನ್ನುತ್ತಾ ತನ್ನ ಮೊಬೈಲ್ ಅನ್ನು ಹೊರತೆಗೆಯುತ್ತಾನೆ ಪ್ರತೀಕ್.
ಹೇ ಯಾಕೋ ನಿಧಿಗೆ ಕರೆ ಮಾಡೋದು ಇವಾಗ? ನಾವೇ ಮಾತನಾಡಿಕೊಳ್ಳೋಣ ಕಣೋ, ಆಮೇಲೆ ಅವಳು ರಾತ್ರಿಯಿಡೀ ಭಾಷಣ ಬಿಗೀತಾಳೆ. ಮೊದಲೇ ಕವಿತಾ ಅತ್ತಿಗೆ ಅಂದ್ರೆ ಅವಳಿಗೆ ನನಗಿಂತ ಹೆಚ್ಚು ಎನ್ನುತ್ತಾ ಪ್ರತೀಕ್ ಮೊಬೈಲ್ ಕಸಿದು ಪಕ್ಕದಲ್ಲಿ ಇಡುತ್ತಾನೆ ಜೀವನ್.
ಆಯ್ತು ಇವಾಗ ನೀನು ನಾನು ಹೇಳಿದ ಹಾಗೆ ಹೇಳ್ತೀಯ ಅಲ್ವಾ ಕವಿಗೆ? ಎನ್ನುತ್ತಾನೆ ಪ್ರತೀಕ್ ಕುತೂಹಲದಿಂದ.
ಮುಂದೇನು ಮಾಡೋದು ಮಗೂನ ಎಲ್ಲಿಂದ ತರೋದೋ? ನಿಂಗೇನಾದ್ರೂ ತಲೇಲಿ ಬುದ್ಧಿ ಇದೆಯಾ? ಅಷ್ಟಕ್ಕೂ ಅತ್ತಿಗೆಗೆ ಯಾಕೆ ಈ ಹುಚ್ಚು ಆಸೆ? ಎನ್ನುತ್ತಿದ್ದವನನ್ನು ಮಧ್ಯದಲ್ಲಿ ತಡೆದ ಪ್ರತೀಕ್ ನೋಡು ಜೀವು ಕವಿ ಬಗ್ಗೆ ಮಾತನಾಡಬೇಡ ಅವಳಾಸೆ ನೆರವೇರಿಸೋದು ನನ್ನ ಕರ್ತವ್ಯ. ಅವಳನ್ನು ಅಗ್ನಿಸಾಕ್ಷಿಯಾಗಿ ಕೈ ಹಿಡಿದವನು ನಾನು, ಅವಳಪ್ಪ ಅಮ್ಮನಿಗೆ ಅವಳ ಕಣ್ಣಲ್ಲಿ ನೀರು ತರಿಸುವುದಿಲ್ಲ ಎಂದು ಮಾತು ಕೊಟ್ಟಿದೇನೆ. ಅವಳಿಗೆ ಬೇಸರವಾಗಬಾರದು ಜೀವು ಎನ್ನುತ್ತಾನೆ.
ಸರೀನಪ್ಪ ಹಾಗೇ ಆಗಲಿ ಎನ್ನುತ್ತಾ ನರ್ಸ್ ಅವರನ್ನು ಕೂಗಿ ಕರೆದು, ಕವಿತಾ ಅವರನ್ನು ಕರೆದುಕೊಂಡು ಬನ್ನಿ ಎನ್ನುತ್ತಾನೆ ಡಾಕ್ಟರ್ ಜೀವನ್.
ಒಂದೆರಡು ನಿಮಿಷಗಳ ನಂತರ ನರ್ಸ್ ಜೊತೆಯಲ್ಲಿ ಕವಿತಾ ಜೀವನ್ ಹಾಗೂ ಪ್ರತೀಕ್ ಇದ್ದಲ್ಲಿಗೆ ಬರುತ್ತಾಳೆ, ಪ್ರತೀಕ್ ಅವಳನ್ನು ನೋಡುತ್ತಿದ್ದಂತೆಯೇ ಎಷ್ಟು ಸುಸ್ತಾಗಿದಾಳೆ ಪಾಪ ಎನ್ನುತ್ತಾ ಅವಳನ್ನು ಕೈಹಿಡಿದುಕೊಂಡು ಬರಲು ಅವಳತ್ತ ನಡೆಯುತ್ತಾನೆ.
ಪ್ರತೀಕ್ ಕವಿತಾ ಬಳಿ ಹೋಗಿ ಅವಳ ಕೈಹಿಡಿದುಕೊಂಡು ಬರುತ್ತಾ, ತುಂಬಾ ಸುಸ್ತಾಗುತ್ತಿದೆಯೇನೋ ಪುಟ್ಟಾ ಎನ್ನುತ್ತಿದ್ದರೆ, ಜೀವನ್ ಅವರತ್ತ ನೋಡುತ್ತಾ ಎಷ್ಟು ಚೆಂದದ ಜೋಡಿ ಇವರದು. ನನ್ನ ನಿಧಿ ಹಾಗೂ ನಾನು ಕೂಡ ಹೀಗೆ ಅಲ್ವಾ. ಮನವರಿತು ನಡೆವ ಸತಿಯವಳು. ದಿನದಿಂದ ದಿನಕ್ಕೆ ಅವಳ ಮೇಲೆ ಪ್ರೀತಿ ಉಕ್ಕಿ ಹರಿಯುತ್ತದೆ. ಮುಗ್ಧ ಹುಡುಗಿ ನನ್ನವಳು ಎಂದುಕೊಳ್ಳುತ್ತಾ ಕನಸಿನ ಲೋಕದಲ್ಲಿ ತೇಲಾಡುತ್ತಿರುತ್ತಾನೆ.
ಒಂದೆರಡು ಬಾರಿ ಜೀವನ್ ಜೀವನ್ ಎಂದು ಕರೆದ ಪ್ರತೀಕನಿಗೆ ಸಾಕಾಗಿ ಹೋಯಿತು. ಜೀವನ್ ತಲೆಗೆ ಕೈಯಿಂದ ಮೊಟಕಿ ಎಲ್ಲಿ ಕಳೆದುಹೋಗಿದೀರಾ ಸರ್ ಎನ್ನುತ್ತಾನೆ ಪ್ರತೀಕ್.
ಎಚ್ಚರಗೊಂಡ ಜೀವನ್ ಏನಾಗಿಲ್ಲ ಬಿಡು ಎನ್ನುತ್ತಾ ಕವಿತಾ ಅವರ ಕಡೆಗೆ ತಿರುಗಿ, ನಿಮಗೆ ಈ ಸಮಯದಲ್ಲಿ ವಿಶ್ರಾಂತಿಯ ಅಗತ್ಯವಿದೆ ಅತ್ತಿಗೆ, ಇಲ್ಲಿ ಮೆಡಿಸಿನ್ ಬರೆದಿರುತ್ತೇನೆ ತಪ್ಪದೇ ಸಮಯಕ್ಕೆ ಸರಿಯಾಗಿ ತಿನ್ನಿ. ಏನೇ ಸಮಸ್ಯೆ ಆದರೂ ಮುಚ್ಚುಮರೆಯಿಲ್ಲದೆ ನನ್ನ ನಂಬರಿಗೆ ಕರೆ ಮಾಡಿ ಎನ್ನುತ್ತಾನೆ ಜೀವನ್.
ಆಯ್ತು ಭಾವ ಹಾಗೆ ಮಾಡ್ತೀನಿ ಅಂದ ಹಾಗೆ ನನಗೆ ಅವಳಿಜವಳಿ ಮಕ್ಕಳೇ ಆಗೋದು ತಾನೆ ಎನ್ನುತ್ತಾಳೆ ಕವಿತಾ ಕುತೂಹಲದಿಂದ.
ಜೀವನ್ ಈಗ ಉಭಯಸಂಕಟಕ್ಕೆ ಒಳಪಡುತ್ತಾನೆ. ಸತ್ಯ ಹೇಳಿದರೆ ಅತ್ತಿಗೆಯ ಜೊತೆಗೆ ಏನೂ ಅರಿಯದ ಮುಗ್ಧ ಕಂದಮ್ಮನಿಗೂ ಸಮಸ್ಯೆ, ಸುಳ್ಳು ಹೇಳುವುದು ಅವನ ವೃತ್ತಿ ಜೀವನಕ್ಕೆ ವಿರುದ್ಧವಾದದ್ದು. ಏನು ಹೇಳುವುದೆಂದು ತಿಳಿಯದೆ ಸ್ವಲ್ಪ ತಲೆ ಉಪಯೋಗಿಸಿ, ಅತ್ತಿಗೆ ಪ್ರತೀಕ್ ಬಳಿ ನಾನೆಲ್ಲ ಹೇಳಿದೀನಿ ಅವನೇ ನಿಮಗೆ ಹೇಳ್ತಾನೆ ನನಗೀಗ ಉಳಿದ ರೋಗಿಗಳನ್ನು ನೋಡಲಿಕ್ಕಿದೆ. ಅತ್ತಿಗೆ ಏನೂ ಅಂದುಕೊಳ್ಳಬೇಡಿ ನಾನೀಗ ಹೊರಡಬೇಕು ಎನ್ನುತ್ತಾ ಹೊರಡುತ್ತಾನೆ ಜೀವನ್.
ಪ್ರತೀಕ್ ಮನಸ್ಸಲ್ಲೇ ಹಿಡಿಶಾಪ ಹಾಕುತ್ತಾನೆ ಜೀವನನಿಗೆ. ನಂತರ ಸ್ವಲ್ಪ ಯೋಚಿಸಿ ಅವನ ವೃತ್ತಿ ಧರ್ಮವನ್ನು ಬಿಡು ಹೇಳುವುದು ತಪ್ಪು. ಅವನ ಕೋನದಲ್ಲಿ ನಿಂತು ಯೋಚಿಸಿದರೆ ಅವನು ಬುದ್ಧಿವಂತ ಎನ್ನುತ್ತಾ ಕವಿತಾಳನ್ನು ಕರೆದುಕೊಂಡು ಹೊರಬರುತ್ತಾನೆ.
ಪ್ರತೂ ನಂಗೆ ಅವಳಿ ಜವಳಿ ಮಕ್ಕಳು ಆಗೋದು ತಾನೇ? ಜೀವನ್ ಏನಂದ್ರು ಎಂದು ಬಹಳ ಆಸೆಯಿಂದ ಕೇಳಿದ ಮಡದಿಗೆ ಸುಳ್ಳನಾಡುವ ಮನಸ್ಸಾಗಲಿಲ್ಲ ಪ್ರತೀಕ್ಗೆ.
ಸತ್ಯ ಹೇಳಿದರೆ ಕವಿತಾ ಹೊಟ್ಟೆಯಲ್ಲಿ ಈಗಿರುವ ಮಗುವನ್ನು ಕಳೆದುಕೊಳ್ಳುವ ಭಯ ಅವನಿಗೆ. ಸ್ವಲ್ಪ ತಡೆದು ಹೌದು ಕವಿ ನಿನಗೆ ಅವಳಿ ಜವಳಿ ಮಕ್ಕಳೇ ಆಗೋದಂತೆ. ಅದಕ್ಕೆ ನಿನ್ನ ಆರೋಗ್ಯ ತುಂಬಾ ಹುಷಾರಾಗಿ ನೋಡಿಕೊಳ್ಳಬೇಕು ಅಂತಿದ್ದ. ಇನ್ಮೇಲೆ ನೀನು ನಾನು ಹೇಳಿದ್ದೆಲ್ಲಾ ತಿನ್ಬೇಕು. ಇಲ್ಲ ಅಂದರೆ ನಮ್ಮ ಮಕ್ಕಳಿಗೇನೆ ತೊಂದರೆ ಅಲ್ವಾ ಎಂದು ಕೇಳುತ್ತಾನೆ ಪ್ರತೀಕ್.
ಹೌದು ಪ್ರತೂ ನೀವು ಹೇಳೋದು ನಿಜ, ನಾನು ಹಾಗೇ ಮಾಡ್ತೀನಿ ಎನ್ನುತ್ತಾ ಮನೆಕಡೆ ಹೊರಡುತ್ತಾಳೆ ಕವಿತಾ ಪ್ರತೀಕನ ಜೊತೆಗೆ.
ಮನೆಗೆ ಬಂದ ನಂತರವೂ ಪ್ರತೀಕನ ಮನಸ್ಸಲ್ಲಿ ಚಿಂತೆ, ಸುಳ್ಳು ಹೇಳೋದೇನೋ ಹೇಳಿಬಿಟ್ಟೆ. ಈಗ ಮಗುವನ್ನು ತರುವುದೆಲ್ಲಿಂದ? ಕಳೆದ ವರ್ಷವಷ್ಟೇ ಕವಿತಾಳ ಹೃದಯ ಆಪರೇಷನ್ ಆಗಿದೆ. ಡಾಕ್ಟರ್ ಬೇರೆ ಸಂತೋಷದಿಂದ ನೋಡಿಕೊಳ್ಳಿ ಅಂದಿದಾರೆ. ಇವಳಿಗೋ ಅವಳಿ ಜವಳಿ ಎಂದರೆ ಪಂಚಪ್ರಾಣ. ಹೀಗೆ ಯೋಚನಾಲಹರಿಯಲ್ಲಿ ಮುಳುಗಿರುವಾಗಲೇ ಅವನಿಗೊಂದು ಉಪಾಯ ಹೊಳೆಯಿತು. ತಕ್ಷಣವೇ ಕಾರ್ಯಪ್ರವೃತ್ತನಾಗುತ್ತಾನೆ. ಕವಿಗೆ ಈಗ ಎರಡು ತಿಂಗಳು ತುಂಬಿ ಮೂರಕ್ಕೆ ಬಿದ್ದಿದೆ ಅಂದರೆ ಇನ್ನು ಏಳು ತಿಂಗಳ ಒಳಗೆ ಇನ್ನೊಂದು ಮಗುವಿನ ವ್ಯವಸ್ಥೆ ಮಾಡಬೇಕು. ಸುತ್ತಮುತ್ತಲಿನ ಅನಾಥಾಶ್ರಮದಲ್ಲಿ ಎಲ್ಲ ಕಡೆಗೆ ಹೋಗಿ ಕವಿ ಹೆರಿಗೆಯ ಸಮಯದಲ್ಲಿ ಯಾವುದಾದರೂ ಒಂದು ಮಗು ಸಿಕ್ಕರೆ ತನ್ನ ನಂಬರಿಗೆ ಕರೆ ಮಾಡುವಂತೆ ತಿಳಿಸಿ ಬರುತ್ತಾನೆ.
ಅನಾಥಾಶ್ರಮದಲ್ಲಿ ಮಗು ಸಿಗದಿದ್ದರೆ ಎಂಬ ಚಿಂತೆಯೂ ಅವನನ್ನು ಬಾಧಿಸತೊಡಗಿತು. ಸರಿ ಜೀವನ್ ಹೇಗಿದ್ದರೂ ಡಾಕ್ಟರ್, ಅವನಿಗೆ ಜಿಲ್ಲೆಯ ಉಳಿದ ಎಲ್ಲಾ ಆಸ್ಪತ್ರೆಗಳ ಡಾಕ್ಟರ್ ತಿಳಿದಿರುತ್ತದೆ. ಅವನ ಸಹಾಯ ತೆಗೆದುಕೊಳ್ಳೋಣವೆಂದು ಜೀವನ್ಗೆ ಕರೆ ಮಾಡಲು ಯೋಚಿಸುತ್ತಾನೆ. ತಕ್ಷಣ ಅವನಿಗೆ ನೆನಪಾಗುತ್ತದೆ ತಾನು ಮನೆಯಲ್ಲಿ ಇದ್ದೇನೆಂದು. ಸರಿಯೆನ್ನುತ್ತಾ ಜೀವನ್ ಮೊಬೈಲ್ಗೆ ಮೆಸೇಜ್ ಮಾಡಿ ವಿಷಯ ತಿಳಿಸುತ್ತಾನೆ. ಜೀವನ್ ಕೂಡ ಸರಿಯೆಂದು ತನ್ನ ಒಪ್ಪಿಗೆ ತಿಳಿಸುತ್ತಾನೆ.
ಕವಿತಾಳು ತನ್ನಾಸೆ ಈಡೇರುತ್ತದೆಯೆಂಬ ಖುಷಿಯಲ್ಲಿಯೇ ದಿನಗಳನ್ನು ಕಳೆಯುತ್ತಿರುತ್ತಾಳೆ. ದಿನಗಳು ಉರುಳಿದಂತೆ ಪ್ರತೀಕನಿಗೆ ಚಿಂತೆ ಬಾಧಿಸತೊಡಗಿತ್ತು. ಕವಿತಾಳು ಗಮನಿಸಿದರೂ ತನ್ನ ಆರೋಗ್ಯದ ಕಾಳಜಿಯಿಂದಾಗಿ ಪ್ರತೀಕನು ಹೀಗಿದ್ದಾನೆ ಎಂದುಕೊಳ್ಳುತ್ತಾಳೆ.
ಕವಿತಾಳಿಗೆ ಏಳು ತಿಂಗಳಾಗಿರುತ್ತದೆ. ಈ ನಡುವೆ ಪ್ರತೀಕ್ ತಂದೆ ತಾಯಿಯರು ಕವಿತಾ ತಂದೆ ತಾಯಿಯರು ಬಂದು ಸೀಮಂತ ಕಾರ್ಯಕ್ರಮ ಮುಗಿಸಿ ಕವಿತಾ ಬಯಕೆಗಳನ್ನು ತೀರಿಸಿ ಹೋಗಿರುತ್ತಾರೆ. ಮನಸ್ಸಿನ ನೆಮ್ಮದಿಗಾಗಿ ಹಾಗೂ ಮಕ್ಕಳ ಆರೋಗ್ಯದ ದೃಷ್ಟಿಯಿಂದಾಗಿ ಅವಳು ಭಗವದ್ಗೀತೆ, ರಾಮಾಯಣ, ಮಹಾಭಾರತ ಹೀಗೆ ಹತ್ತು ಹಲವು ಗ್ರಂಥಗಳನ್ನು ಪಠಿಸಲು ಆರಂಭಿಸುತ್ತಾಳೆ. ಪ್ರತೀಕ್ ದಿನವೂ ಕವಿತಾಳ ಪಕ್ಕ ಕುಳಿತುಕೊಂಡು ಕೇಳಿಸಿಕೊಳ್ಳುತ್ತಿರುತ್ತಾನೆ. ಒಂದೊಮ್ಮೆ ಕವಿತಾ ಭಗವದ್ಗೀತೆಯ ಈ ಸಮಯ ಕಳೆದು ಹೋಗುತ್ತದೆ ಎಂದು ಓದುತ್ತಿರುತ್ತಾಳೆ. ಅದರ ಸಾರಾಂಶವನ್ನು ತದೇಕಚಿತ್ತನಾಗಿ ಕೇಳಿಸಿಕೊಂಡ ಪ್ರತೀಕನಿಗೆ ತನ್ನ ಚಿಂತೆಗಳೂ ಹೀಗೆಯೇ ಕರಗಬಹುದೆಂದು ಅನಿಸುತ್ತದೆ. ಗ್ರಂಥಗಳ ಸಾರದಂತೆಯೇ ಪ್ರತೀಕ್ ತನ್ನ ಬದುಕಿನ ಕ್ಷಣಗಳನ್ನು ಆನಂದವಾಗಿ ಕಳೆಯಲು ನಿರ್ಧರಿಸುತ್ತಾನೆ.
ಕವಿತಾಳು ತನ್ನ ಪತಿಯಲ್ಲಿನ ಬದಲಾವಣೆಗಳನ್ನು ಗಮನಿಸುತ್ತಿರುತ್ತಾಳೆ. ಪ್ರತೀಕ್ ಖುಷಿಯಲ್ಲಿರುವುದು ಅವಳಿಗೆ ಆನೆ ಬಲ ಬಂದಂತಿರುತ್ತದೆ. ಕವಿತಾಳಿಗೆ ಎಂಟು ತಿಂಗಳು ತುಂಬಿರುವುದರಿಂದ ಪ್ರತೀಕನಿಗೆ ಮನದ ಮೂಲೆಯಲ್ಲಿ ಚಿಂತೆ ಕಾಡಿದರೂ, ನಾವೊಂದು ಕೆಲಸವನ್ನು ಮಾಡಬೇಕೆಂದು ಗಟ್ಟಿಯಾಗಿ ನಿರ್ಧರಿಸಿರುವಾಗ ಇಡೀ ಪ್ರಪಂಚವೇ ನಮ್ಮೊಂದಿಗೆ ನಿಲ್ಲುತ್ತದೆ ಎಂಬ ಆಶಾಭಾವನೆಯಿಂದ ಸ್ವಲ್ಪ ಸಮಾಧಾನದಿಂದಲೇ ಇರುತ್ತಾನೆ.
ಈ ನಡುವೆಯೇ ಎಲ್ಲಾ ಅನಾಥಾಶ್ರಮ, ಆಸ್ಪತ್ರೆ ಪ್ರತಿಯೊಂದರ ಜೊತೆಯಲ್ಲಿ ನಿರಂತರ ಒಡನಾಟವನ್ನಿಟ್ಟುಕೊಂಡಿರುತ್ತಾನೆ ಪ್ರತೀಕ್. ಕಾಲಕಾಲಕ್ಕೆ ಕವಿತಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬರುತ್ತಿರುತ್ತಾನೆ ಪ್ರತೀಕ್. ಸಂತೋಷದ ದಿನಗಳು ಬಹಳ ಬೇಗನೆ ಕಳೆಯುತ್ತವೆ ಅದರಂತೆಯೇ ಕವಿತಾಳ ಹೆರಿಗೆಗೆ ಇನ್ನೊಂದು ವಾರವೇ ಬಾಕಿಯಿರುತ್ತದೆ. ಪ್ರತೀಕನಿಗೆ ಮಗು ಸಿಕ್ಕರೆ ಕೊಡುತ್ತೇವೆಂದು ಹೇಳಿದ ಪ್ರತಿಯೊಬ್ಬರೂ ಮಗು ಸಿಗಲಿಲ್ಲ ಎನ್ನುವ ಉತ್ತರ ಹೇಳುವವರೆ… ನಿರಾಶನಾಗಿ ತಲೆ ಮೇಲೆ ಕೈ ಹೊತ್ತು ಕುಳಿತ ಪ್ರತೀಕ್. ಕವಿತಾಳು ಪ್ರತೀಕನ ಬಳಿ ಬಂದು ಏನಾಯ್ತು, ಯಾಕೆ ಹೀಗೆ ಕುಳಿತಿದ್ದೀರಾ? ಎಂದು ಪ್ರೀತಿಯಿಂದ ಕೇಳುವಾಗ ಪ್ರತೀಕನಿಗೆ ನಡೆದ ಘಟನೆಗಳನ್ನೆಲ್ಲಾ ಹೇಳಬೇಕೆಂಬ ಭಾವ. ತಡೆಯದೇ ಸತ್ಯವನ್ನು ಅರುಹಿದರೆ ಇನ್ನಾವ ಅನಾಹುತ ಕಾದಿದೆಯೋ ಎಂದು ತನ್ನನ್ನು ತಾನು ಸಮಾಧಾನಿಸಿಕೊಳ್ಳುತ್ತಾನೆ. ಮನದ ನೋವು ತಡೆಯಲಾಗದೆ ಕಣ್ಣಬಿಂದು ನೆಲವನ್ನು ಸ್ಪರ್ಶಿಸುತ್ತಿರುತ್ತವೆ. ಪ್ರತೀಕನು ತಡೆಯುವ ಯಾವುದೇ ಪ್ರಯತ್ನವನ್ನು ಮಾಡಲಿಲ್ಲ. ಕವಿತಾಳೇ ಪತಿಯ ಕಣ್ಣೀರನ್ನು ಒರೆಸಿ ನನಗೇನೂ ಆಗಲ್ಲರೀ ನೀವು ಅಳಬೇಡಿ ಎನ್ನುವ ಹೊತ್ತಿಗೆ ಪ್ರತೀಕ್ ಬಿಕ್ಕಿ ಬಿಕ್ಕಿ ಅಳಲಾರಂಭಿಸುತ್ತಾನೆ. ಗಂಡನ ಕಣ್ಣೀರು ನೋಡಲಾಗದೇ ಕವಿತಾಳು ಕಣ್ಣೀರಾಗುತ್ತಾಳೆ. ಸ್ವಲ್ಪ ಸಮಾಧಾನಗೊಂಡ ಪ್ರತೀಕನು ಕವಿತಾಳ ಕಣ್ಣೀರನ್ನು ಒರೆಸಿ ಅವಳಿಗೆ ಕೊಡಬೇಕಿದ್ದ ಹಣ್ಣುಗಳನ್ನು ನೀಡಿ ಮಲಗಲು ಹೇಳುತ್ತಾನೆ.
ಬಹಳ ಕಾದಿದ್ದ ಆ ದಿನ ಬಂದೇ ಬಿಟ್ಟಿತ್ತು. ಕವಿತಾಳಿಗೆ ನೋವು ಆರಂಭವಾಗುತ್ತದೆ. ಪ್ರತೀಕನು ಗಡಿಬಿಡಿಯಲ್ಲಿ ಆಸ್ಪತ್ರೆಗೆ ಸೇರಿಸುತ್ತಾನೆ. ಜೀವನ್ ಮತ್ತು ನಿಧಿ ಕೂಡ ಆಸ್ಪತ್ರೆಗೆ ಹಾಜರಾಗುತ್ತಾರೆ. ಪ್ರತೀಕ್ ಅವನ ತಂದೆ ತಾಯಿಯರಿಗೆ ಕವಿತಾಳ ತಂದೆ ತಾಯಿಯರಿಗೆ ವಿಷಯ ತಿಳಿಸುತ್ತಾನೆ. ಎಲ್ಲರೂ ಬಂದು ಸೇರುತ್ತಾರೆ. ಪ್ರತೀಕನು ತನಗೆ ಪರಿಚಯವಾಗಿದ್ದ ಪ್ರತಿಯೊಂದು ಆಸ್ಪತ್ರೆ, ಅನಾಥಾಶ್ರಮಕ್ಕೆ ಕರೆ ಮಾಡಿ ವಿಚಾರಿಸುತ್ತಾನೆ. ಎಲ್ಲರೂ ಇಲ್ಲವೆಂದೇ ಉತ್ತರ ನೀಡಿದಾಗ ಪ್ರತೀಕನಿಗೆ ದಿಗಿಲಾಗುತ್ತದೆ. ಏನು ಹೇಳೋದು ಕವಿಗೆ ಎನ್ನುವ ಪ್ರಶ್ನೆಗೆ ಅವನ ಬಳಿ ಉತ್ತರವೇ ಇರಲಿಲ್ಲ. ಗ್ರಂಥಗಳ ಸಾರವು ಸುಳ್ಳಾ? ಅಥವಾ ಬಯಸಿದ್ದು ನೀಡುವಲ್ಲಿ ನಾನೇನಾದರೂ ಎಡವಿದೆನಾ? ಕವಿಯ ಭಾವನೆಗಳಿಗೆ ಬೆಲೆಯೇ ಇಲ್ಲವಾ… ಹೀಗೆ ಹತ್ತು ಹಲವು ಭಾವಗಳು ಪ್ರತೀಕನ ಮುಂದೆ ನುಸುಳಿ ಹೋಗುತ್ತದೆ.
ಯಾವೊಂದು ದಾರಿ ಕಾಣದೇ ಪ್ರತೀಕನು ಜೀವನನ ಕೊಠಡಿಯ ಬಳಿ ಬಂದು ಜೀವನನ ಜೊತೆ ಕುಳಿತು ಗಟ್ಟಿಯಾಗಿ ಅಳಲಾರಂಭಿಸುತ್ತಾನೆ. ಜೀವನನಿಗೆ ತನ್ನ ಗೆಳೆಯನನ್ನು ಸಮಾಧಾನಿಸುವ ಪರಿ ತಿಳಿಯಲಿಲ್ಲ. ಪ್ರತೂ ಏನೂ ಆಗಲ್ವೋ ಸಮಾಧಾನ ಮಾಡಿಕೊ, ಇನ್ನೂ ಕಾಲ ಮಿಂಚಿಲ್ಲ. ಏನಾದರೂ ಒಂದು ರೀತಿಯ ಸಹಾಯ ದೊರೆಯಬಹುದು ಬೇಸರಮಾಡಿಕೊಳ್ಳಬೇಡ ಎಂದು ಸಮಾಧಾನಿಸುತ್ತಾನೆ. ಇನ್ನೂ ಏನಾಗ್ಬೇಕು ಜೀವು ನೀನೇ ಹೇಳು ಕವಿ ಹೃದ್ರೋಗಿ, ಅವಳಿಗೋ ಅವಳಿ ಜವಳಿಯ ಮೇಲೆ ಹುಚ್ಚು ಪ್ರೇಮ. ನಿನಗೆ ಗೊತ್ತಿದೆಯಾ? ಅವಳು ಹುಟ್ಟಿದ್ದು ಅವಳಿ ಜವಳಿಯಾಗಿ. ಹುಟ್ಟಿದ ಒಂದರೆಘಳಿಗೆಯಲ್ಲೇ ಕವಿಯ ಜೊತೆ ಹುಟ್ಟಿದ್ದ ಮಗು ಅಸುನೀಗಿತ್ತು. ಆ ವಿಷಯ ಅವಳಿಗೆ ತಿಳಿದ ದಿನದಿಂದ ಅವಳಿಗೆ ಅವಳ ಮಕ್ಕಳ ಮೂಲಕ ಅವಳ ಬಾಲ್ಯ ನೋಡುವ ಆಸೆ. ಆದ್ದರಿಂದ ಅವಳ ಆಸೆ ಈಡೇರಿಸಬೇಕಾಗಿರುವುದು ನನಗೆ ಜೀವನದಲ್ಲಿ ಬಹಳ ಮುಖ್ಯವಾದದ್ದು. ಹೇಗಾದರೂ ಮಾಡಿ ಸಹಾಯ ಮಾಡೋ ಎಂದು ಗೋಗರೆಯುತ್ತಾನೆ.
ಅಷ್ಟರಲ್ಲಿ ಜೀವನ್ ಕೊಠಡಿಯ ಬಾಗಿಲು ಬಡಿದ ಸದ್ದಾಗುತ್ತದೆ. ಜೀವನ್ ಪ್ರತೀಕ್ಗೆ ಮುಖ ಒರೆಸಿಕೊಳ್ಳಲು ಹೇಳಿ ಬಾಗಿಲು ತೆರೆಯುತ್ತಾನೆ. ಒಳಗೆ ಬಂದ ನರ್ಸ್ ಸರ್ ನೀವು ಬೆಳಗ್ಗೆ ಆಪರೇಷನ್ ಮಾಡಿದ ಪೇಷೆಂಟ್ ಉಳೀಲಿಲ್ಲ ಸರ್. ಮಗೂ ಆರಾಮವಾಗಿದೆ ಸರ್ ಎನ್ನುತ್ತಾಳೆ. ಓಹ್ ಹೌದಾ ಸರಿ ನಾನೀಗ ಬರ್ತೀನಿ ಮಗೂನ ಹುಷಾರಾಗಿ ನೋಡಿಕೊಳ್ಳಿ ಎಂದು ಅವಳಿಗೆ ಹೇಳಿ ಕಳುಹಿಸುತ್ತಾನೆ ಜೀವನ್.
ನರ್ಸ್ ಹೊರಹೋದ ಬಳಿಕ ಜೀವನ್, ಪ್ರತೀಕ್ ಕಡೆಗೆ ತಿರುಗಿ ಪ್ರತೂ ಅಂತೂ ದೇವರು ಕಣ್ಣು ಬಿಟ್ಟ ಕಣೋ ಎನ್ನುತ್ತಾ ಅವನನ್ನು ಹೋಗಿ ತಬ್ಬಿಕೊಳ್ಳುತ್ತಾನೆ.
ಏನಾಯ್ತೋ ಅಂತಾದ್ದು ಎಂದವನು ಕೇಳಿದಾಗ, ನರ್ಸ್ ಹೇಳಿದಳಲ್ವಾ ಆ ಪೇಷೆಂಟ್ಗೆ ಯಾರೂ ಇರಲಿಲ್ಲ ಕಣೋ, ಗಂಡ ಇತ್ತೀಚೆಗೆ ಯಾವುದೋ ಅಪಘಾತದಲ್ಲಿ ಮರಣಿಸಿದ್ದಾನೆ. ಈಗ ಆ ಮಗುವಿಗೆ ಯಾರಿಲ್ಲ. ನೀನು ಈಗ ಕಾನೂನಿನ ಪ್ರಕಾರ ಮಗುವನ್ನು ದತ್ತು ತೆಗೆದುಕೊಳ್ಳುವ ವ್ಯವಸ್ಥೆ ಮಾಡಿಕೋ ಉಳಿದದ್ದು ನಾನು ನೋಡಿಕೊಳ್ಳುತ್ತೇನೆ ಎನ್ನುತ್ತಾ ಹೊರಡುತ್ತಾನೆ.
ಇತ್ತ ಪ್ರತೀಕ್ ತನಗೆ ತಿಳಿದ ವಕೀಲರಿಗೆ ವಿಷಯ ವಿವರಿಸಿ ಆದಷ್ಟು ಬೇಗ ದತ್ತು ಪ್ರಕ್ರಿಯೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿ ಕವಿತಾಳ ಆಪರೇಷನ್ ಕೋಣೆಯ ಬಳಿ ಹೋಗಿ ನಿರಾಳನಾಗಿ ನಿಲ್ಲುತ್ತಾನೆ. ಮನದಲ್ಲೇ ಕೋಟಿ ದೇವರುಗಳಿಗೆ ಅವನ ಚಿಂತೆ ನಿವಾರಿಸಿದ ಕವಿತಾ ಓದುತ್ತಿದ್ದ ಗ್ರಂಥಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಾನೆ ಜೀವನ್.
ಆಪರೇಷನ್ ಮುಗಿಸಿ ಬಂದ ಡಾಕ್ಟರ್, ಸರ್ ಕಂಗ್ರಾಜುಲೇಷನ್ಸ್ ನಿಮಗೆ ಹೆಣ್ಣು ಮಗು ಆಗಿದೆ ಎನ್ನುವಷ್ಟರಲ್ಲಿ ನಡುವೆಯೇ ಬಂದ ಜೀವನ್ ಕ್ಷಮಿಸಿ ಒಂದಲ್ಲ ಎರಡು ಹೆಣ್ಣು ಮಕ್ಕಳು ಎಂದು ಗೆಳೆಯನನ್ನು ನೋಡಿ ನಗುತ್ತಾನೆ.
ಸಾಯಿ ಪ್ರೀತಿ…..