IPL 2019 ರಲ್ಲಿ ಮುಂಬೈ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 1 ರನ್ ಅಂತರದಲ್ಲಿ ಮಣಿಸಿ IPL ಕಪ್ ಅನ್ನು ಮುಡಿಗೇರಿಸಿದ್ದು ಇದೀಗ ಇತಿಹಾಸ ಆದರೆ ಇದೇ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಶೇನ್ ವ್ಯಾಟ್ಸನ್ ಪಂದ್ಯದ ಮೂರನೇ ಓವರ್ ನಿಂದ ಹಿಡಿದು ಅಂತಿಮ ಓವರ್ ವರೆಗೂ ರಕ್ತ ಹರಿಸಿದ್ದರು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.
ಪಂದ್ಯದಲ್ಲಿ ಚೆನ್ನೈ ಪರ 59 ಎಸೆತಗಳಲ್ಲಿ 80 ರನ್‌ಗಳನ್ನು ಸಿಡಿಸಿ ತಂಡವನ್ನು ಇನ್ನೇನು ಜಯದ ದಡ ಮುಟ್ಟಿಸುವ ಸನಿಹ ತಗೆದುಕೊಂಡು ಹೋಗಿದ್ದ ಶೇನ್ ವ್ಯಾಟ್ಸನ್ ಬ್ಯಾಟಿಂಗ್ ಮಾಡುವ ಸಂಧರ್ಭದಲ್ಲಿ ಅವರ ಮಂಡಿ ಹರಿದು ರಕ್ತ ಸುರಿಯುತ್ತಿದ್ದರೂ ಅದರ ಬಗ್ಗೆ ಸ್ವಲ್ಪವೂ ಲೆಕ್ಕಿಸದೆ ತಂಡಕ್ಕೆ ಜಯ ತಂದುಕೊಡಲು ಎಲ್ಲವನ್ನು ಪಣಕ್ಕಿಟ್ಟು ಹೋರಾಟವನ್ನು ನಡೆಸಿದ್ದರು ಎಂಬ ಸಂಗತಿಯನ್ನು ಸಹ ಆಟಗಾರ ಹರ್ಭಜನ್ ಸಿಂಗ್ ಬಹಿರಂಗ ಪಡಿಸಿದ್ದಾರೆ.
ಸೂಪರ್ ಕಿಂಗ್ಸ್ ಪರ ಆರಂಭದಿಂದಲೂ ಏಕಾಂಗಿ ಹೋರಾಟ ನಡೆಸಿದ ವ್ಯಾಟ್ಸನ್, ಕೊನೆಯ ಓವರ್‌ನಲ್ಲಿ 2 ರನ್‌ಗಳನ್ನು ಕದಿಯುವ ಪ್ರಯತ್ನದಲ್ಲಿ ರನ್‌ಔಟ್ ಆದರು ಬಹುಶಃ ಮಂಡಿ ಹರಿದು ರಕ್ತ ಸುರಿಯುತ್ತಿದ್ದರಿಂದ 2ನೇ ರನ್ ವೇಗವಾಗಿ ಪೂರೈಸಲು ವ್ಯಾಟ್ಸನ್ ಅವರಿಂದ ಸಾಧ್ಯವಾಗಲಿಲ್ಲ ಎಂದನಿಸುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ ಅಭಿಮಾನಿಗಳು.
ಈ ವಿಚಾರವಾಗಿ ಇನ್‌ಸ್ಟಾಗ್ರಾಮ್ ನಲ್ಲಿ ಫೋಟೊ ಪ್ರಕಟಿಸಿರುವ ಹರ್ಭಜನ್ ಸಿಂಗ್.. “ತಂಡಕ್ಕಾಗಿ ಬೆವರಿನ ಜೊತೆಗೆ ರಕ್ತವನ್ನು ಹರಿಸಿದ್ದೀರಿ ಶೇನ್ ವ್ಯಾಟ್ಸನ್ ಇದಕ್ಕೆ ನನ್ನ ನಮನ,” ಎಂದು ಬರೆದಿದ್ದಾರೆ.
ಇನಿಂಗ್ಸ್‌ನ ಮೂರನೇ ಓವರ್ ಹೊತ್ತಿಗೆ ಗಾಯಗೊಂಡು ರಕ್ತ ಹರಿಯಲು ಶುರುವಾದರೂ ಅದನ್ನು ಎಲ್ಲಿಯೂ ಹೇಳಿಕೊಳ್ಳದ ವ್ಯಾಟ್ಸನ್ ಆಟ ಮುಂದುವರಿಸಿದ್ದರು, ಪಂದ್ಯ ಮುಗಿದ ಬಳಿಕ ಅವರ ಗಾಯಕ್ಕೆ ಆರು ಹೊಲಿಗೆ ಹಾಕಲಾಗಿದೆ ಎಂದು ಇದೇ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ಬಹಿರಂಗ ಪಡಿಸಿದ್ದಾರೆ.
ಹರ್ಭಜನ್ ಸಿಂಗ್ ಪ್ರಕಟಿಸಿರುವ ಈ ಫೋಟೊದಲ್ಲಿ ವ್ಯಾಟ್ಸನ್ ಅವರ ಎಡ ಮಂಡಿಯ ಭಾಗದಲ್ಲಿ ರಕ್ತದ ಕಲೆ ಎದ್ದು ಕಾಣುತ್ತಿರುವುದನ್ನು ನಾವಿಲ್ಲಿ ಗಮನಿಸಬಹುದಾಗಿದೆ.