ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎನ್ನುವ ಪೋಸ್ಟರ್ ಗಳು , ಜಾಹಿರಾತುಗಳು ಎಲ್ಲೆಲ್ಲೂ ಕಣ್ಣಿಗೆ ಬೀಳುತ್ತವೆ. ಮದ್ಯಪಾನ ಒಳ್ಳೆಯದಲ್ಲ ಎಂಬ ಮಾತುಗಳು ಬರೀ ಭಾಷಣಕ್ಕೆ ಸೀಮಿತವಾಗಿವೆಯೇ ವಿನಃ ಎಣ್ಣೆ ಹೊಡಿಯೋರ ಸಂಖ್ಯೆಯೂ ಹೆಚ್ಚುತ್ತಿದೆ. ಎಣ್ಣೆ ಹೊಡೆಯೋರು ಎಣ್ಣೆ ಪ್ರಮಾಣವನ್ನೂ ಹೆಚ್ಚಿಸಿಕೊಂಡಿದ್ದಾರೆ.
ಕೆನಡಾದ ಟೊರೆಂಟೋದಲ್ಲಿರುವ ಸೆಂಟರ್ ಫಾರ್ ಅಡಿಕ್ಷನ್ ಆ್ಯಂಡ್ ಮೆಂಟಲ್ ಹೆಲ್ತ್ ಹಾಗೂ ಜರ್ಮನಿಯ ಟೆಕ್ನಿಶೆ ಯುನಿವರ್ಸಿಟಿ ಡ್ರೆಸ್‌ಡೆನ್ ನಡೆಸಿದಂತಹ ಒಂದು ಅಧ್ಯಯನದಲ್ಲಿ ಈ ಎಣ್ಣೆ ಗುಟ್ಟು ರಟ್ಟಾಗಿದೆ.
ಕಳೆದ 30 ವರ್ಷಗಳ ಹಿಂದೆ ಜಗತ್ತಿನಲ್ಲಿ ಎಷ್ಟು ಜನ ಕುಡಿಯುತ್ತಿದ್ದರೋ ಅದಕ್ಕಿಂತ ಶೇ. 70 ರಷ್ಟು ಮಂದಿ ಕುಡಿಯುವವರು ಹೆಚ್ಚಿದ್ದಾರೆ. ಅದಲ್ಲದೆ ವ್ಯಕ್ತಿಗತವಾಗಿಯೂ ಕುಡಿತದ ಪ್ರಮಾಣ ಹೆಚ್ಚಿದೆ. ಒಬ್ಬ ವ್ಯಕ್ತಿ ಮೊದಲಿಗಿಂತ ಈಗ ಶೇ .70 ರಷ್ಟು ಹೆಚ್ಚು ಕುಡಿಯುತ್ತಿದ್ದಾರೆ ಎಂದು ಅಧ್ಯಯನ ಹೇಳುತ್ತಿದೆ.
1990ರಲ್ಲಿ ಜಗತ್ತಿನ 189 ದೇಶಗಳಲ್ಲಿ ಜನರು ಸರಾಸರಿ ಎಷ್ಟುಕುಡಿಯುತ್ತಿದ್ದರು ಮತ್ತು 2017ರಲ್ಲಿ ಎಷ್ಟುಕುಡಿಯುತ್ತಿದ್ದಾರೆ ಎಂಬುದನ್ನು ಲೆಕ್ಕಹಾಕಿ ಅಧ್ಯಯನ ನಡೆಸಲಾಗಿದೆ. ಜನರು ಈಗ ಮೊದಲಿಗಿಂತ ಶೇ.70ರಷ್ಟುಜಾಸ್ತಿ ಮದ್ಯ ಸೇವನೆ ಮಾಡುತ್ತಿದ್ದಾರೆಂದು ಆ ಅಧ್ಯಯನದಿಂದ ಧೃಡಪಟ್ಟಿದೆ. ಈ ಟ್ರೆಂಡ್ 2030ರವರೆಗೂ ಮುಂದುವರೆಯಲಿದೆ ಎಂದೂ ತಿಳಿದುಬಂದಿದ್ದು, ಅಪಾಯಕಾರಿ ಬೆಳವಣಿಗೆ ಇದಾಗಿದೆ.
ಒಂದು ಸಿಟಿಂಗ್‌ನಲ್ಲಿ 60 ಗ್ರಾಮ್‌ಗಿಂತ ಹೆಚ್ಚು ಪ್ಯೂರ್ ಆಲ್ಕೋಹಾಲ್ ಸೇವನೆ ಮಾಡುವವರು ಮಹಾ ಕುಡುಕರು ಎಂದು ಅಧ್ಯಯನ ಮಾನದಂಡವನ್ನು ನೀಡಿದೆ! ಹೀಗೆ ಎಣ್ಣೆ ಬೇಡ ಬೇಡ ಎಂದರೂ ಕುಡುಕರು ಹೆಚ್ಚಾಗುತ್ತಲೇ ಇದ್ದಾರೆ.