ಲೋಕಸಭಾ ಚುನಾವಣೆ ಮತ ಎಣಿಕೆ ಮುನ್ನಾ ದಿನವೇ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಅವರು ಗೆದ್ದ ರೀತಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ!
ಬರೀ ಕಾರ್ಯಕರ್ತರು, ಬೆಂಬಲಿಗರಷ್ಟೇ ಅಲ್ಲ. ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್, ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಅವರೂ ಕೂಡಾ ಅಷ್ಟೇ ಉತ್ಸುಕರಾಗಿದ್ದಾರೆ. ಮುಖಂಡರು ಸಂಭ್ರಮಾಚರಣೆಗೆ ಬೆಂಬಲಿಗರನ್ನು ಆಹ್ವಾನಿಸಿರುವ ಪೋಸ್ಟ್ ಕಾರ್ಡ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.
ಗೌರಿ ಶಂಕರ್ ಅವರು ತುಮಕೂರಿನ ಜಯನಗರ ಬಡಾವಣೆಯಲ್ಲಿರುವ ಅವರ ಗೃಹ ಕಚೇರಿಯಲ್ಲಿ ಗುರುವಾರ ದೇವೇಗೌಡರ ಗೆಲುವಿನ ಸಂಭ್ರಮಾಚರಣೆ ಮತ್ತು 87ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನೆ ಹಮ್ಮಿಕೊಂಡಿದ್ದು, ಸಿದ್ಧತೆಗಳು ಬುಧವಾರ ಭರದಿಂದ ನಡೆದಿದ್ದವು.ಸಚಿವ ಶ್ರೀನಿವಾಸ್ ಅವರು ಗುಬ್ಬಿಯಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ಸ್ವಗೃಹದಲ್ಲಿ ಸಂಭ್ರಮಾಚರಣೆಗೆ ಬೆಂಬಲಿಗರನ್ನು ಆಹ್ವಾನಿಸಿದ್ದಾರೆ.