ಲೋಕಸಭಾ ಚುನಾವಣಾ ಮತ ಎಣಿಕೆ ಆರಂಭದಲ್ಲಿ ಕರ್ನಾಟಕದಲ್ಲಿ ನಿರೀಕ್ಷೆಯಂತೆ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯದ ಬಿಜೆಪಿ ಶಾಸಕರಿಗೆ ಮೇ 25ರೊಳಗೆ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ.
ರಾಜ್ಯದ ಬಿಜೆಪಿ ಶಾಸಕರನ್ನು ಅಮಿತ್ ಶಾ ರಾಜಧಾನಿಗೆ ಆಹ್ವಾನಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ಚುನಾವಣಾ ಫಲಿತಾಂಶವೂ ರಾಜ್ಯ ರಾಜಕಾರಣದ ಮೇಲೂ ಪ್ರಭಾವ ಬೀರುವ ದಟ್ಟ ಸಾಧ್ಯತೆ ಹಿನ್ನೆಲೆಯಲ್ಲಿ ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಆಸಕ್ತಿ ಮೂಡಿಸಿದೆ.
ರಾಜ್ಯದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿವುದರಿಂದ ಅಮಿತೋತ್ಸಾಹದಲ್ಲಿರುವ ಅಮಿತ್ ಶಾ ಪಕ್ಷದ ಶಾಸಕರನ್ನು ದೆಹಲಿಗೆ ಆಹ್ವಾನಿಸಿ ಮುಂದಿನ ಕಾರ್ಯತಂತ್ರದ ಬಗ್ಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ.ಇಂದು ಸಂಜೆ ಅಧಿಕೃತ ಫಲಿತಾಂಶ ಪ್ರಕಟವಾದ ನಂತರ ರಾಜ್ಯದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದಲ್ಲಿ ಆಗುವ ಬೆಳವಣಿಗಳನ್ನು ಗಮನಿಸಿ ಮುಂದಿನ ಹೆಜ್ಜೆ ಇಡಲು ಅಮಿತ್ ಶಾ ಹೊಸ ಕಾರ್ಯತಂತ್ರ ರೂಪಿಸಿದ್ದಾರೆ.