ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷವನ್ನು ಧೂಳೀಪಟ ಮಾಡಿರುವ ವೈಎಸ್‍ಆರ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಜಗನ್ ಮೋಹನ್ ರೆಡ್ಡಿ ಇಂದು ಸರ್ವಾನು ಮತದಿಂದ ಆಯ್ಕೆಯಾಗಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದ ಪಕ್ಷದ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ವೈಎಸ್‍ಆರ್‍ಸಿ ನೂತನ ಶಾಸಕರು ಜಗನ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಒಕ್ಕೊರಲಿನಿಂದ ಆಯ್ಕೆ ಮಾಡಿದ್ದಾರೆ.
45ನಿಮಿಷಗಳ ಕಾಲ ನಡೆದ ಈ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಮಾತನಾಡಿ ಜಗನ್ ನೂತನ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು. ಮತದಾರರು ನಮ್ಮ ಮೇಲೆ ನಂಬಿಕೆ ಮತ್ತು ವಿಶ್ವಾಸವಿರಿಸಿ 2019ರ ವಿಧಾನಸಭಾ ಚುನಾವಣೆಯಲ್ಲಿ ಆಶೀರ್ವಾದಿಸಿದ್ದಾರೆ. 2024ರಲ್ಲೂ ನಾವು ಮತ್ತೆ ಅಧಿಕಾರಕ್ಕೆ ಬರಲು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಶಾಸಕರಿಗೆ ಸಲಹೆ ಮಾಡಿದರು.
ಒಂದೇ ವರ್ಷದಲ್ಲಿ ನಾನು ಅತ್ಯುತ್ತಮ ಮುಖ್ಯಮಂತ್ರಿ ಎಂಬುದನ್ನು ಸಾಬೀತು ಮಾಡಲು ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲ ನನಗೆ ಅಗತ್ಯ ಎಂದು ಜಗನ್ ಇದೇ ಸಂದರ್ಭದಲ್ಲಿ ಹೇಳಿದರು. ಇಂದು ಸಂಜೆ ಶಾಸಕರು ರಾಜ್ಯಪಾಲ ಇ.ವಿ.ಎಲ್.ನರಸಿಂಹನ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸಲಿದೆ.
ಮೇ 30ರಂದು ಜಗನ್ ವಿಜಯವಾಡದ ಇಂದಿರಾ ಗಾಂಧಿ ಮುನಿಸಿಪಲ್ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಆಂಧ್ರಪ್ರದೇಶದ 175 ಸದಸ್ಯ ಬಲದ ವಿಧಾನಸಭೆಗೆ ಏ. 11ರಂದು ನಡೆದ ಚುನಾವಣೆಯಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‍ಆರ್‍ಸಿ ಪಕ್ಷ 151 ಸ್ಥಾನಗಳೊಂದಿಗೆ ಪ್ರಚಂಡ ಬಹುಮತ ಗಳಿಸಿತು.