ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಆತ್ಮಾವಲೋಕನದಲ್ಲಿ ತೊಡಗಿರುವ ಕಾಂಗ್ರೆಸ್‍ನಲ್ಲೀಗ ನಾಯಕರು ಬಾಯಿಗೆ ಬಂದಂತೆ ಹೇಳಿಕೆ ನೀಡಿ ಪಕ್ಷಕ್ಕೆ ಇರಿಸುಮುರಿಸು ಮಾಡುತ್ತಿರುವ ಪ್ರಕರಣಗಳದ್ದೇ ತಲೆನೋವಾಗಿದೆ.
ಈ ಸಂದರ್ಭದಲ್ಲಿ ಪಕ್ಷದ ನಾಯಕರು, ಪ್ರತಿನಿಧಿ ಮತ್ತು ವಕ್ತಾರರು ಯಾವುದೇ ರೀತಿಯ ಬಹಿರಂಗ ಹೇಳಿಕೆಗಳನ್ನು ನೀಡದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಒಂದು ತಿಂಗಳ ಕಾಲ ಸುದ್ದಿವಾಹಿನಿಗಳ ಜತೆ ಚರ್ಚೆ, ಮಾತುಕತೆ ಅಥವಾ ಮುಕ್ತ ಬಹಿರಂಗ ಹೇಳಿಕೆಗಳನ್ನು ನೀಡದಂತೆ ಪಕ್ಷದ ವಕ್ತಾರರು ಮತ್ತು ಇತರ ಪ್ರತಿನಿಧಿಗಳಿಗೆ ಕಟ್ಟಪ್ಪಣೆ ಮಾಡಿದೆಯಲ್ಲದೆ ಅವರನ್ನು ವಾರ್ತಾವಾಹಿನಿಗಳಲ್ಲಿ ಸಂವಾದಕ್ಕೆ ಕಳುಹಿಸದಿರಲು ನಿರ್ಧರಿಸಿದೆ.
ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳನ್ನು ತಮ್ಮ ಕಾರ್ಯಕ್ರಮಗಳಲ್ಲಿ ನಿಯೋಜಿಸದಂತೆ ಎಲ್ಲಾ ಸುದ್ದಿ ಮಾಧ್ಯಮಗಳಿಗೆ, ಸಂಪಾದಕರು ಮನವಿ ಮಾಡುತ್ತೇವೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೆವಾಲಾ ತಿಳಿಸಿದ್ದಾರೆ.