ಪದೇ ಪದೇ ವಿಚಾರಣೆಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಹಾಗೂ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರನ್ನು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಸಂಜೆವರೆಗೂ ಪೊಲೀಸ್ ವಶಕ್ಕೆ ನೀಡಿದೆ.
ರೈತರ ಪರ ಹೋರಾಟ ನಡೆಸಿದ ಪ್ರಕರಣವೊಂದರಲ್ಲಿ ನ್ಯಾಯಾಲಯದಿಂದ ಸಮನ್ಸ್ ಜಾರಿಯಾದರೂ ರೇಣುಕಾಚಾರ್ಯ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.
ಹೀಗಾಗಿ ಇಂದು ವಿಚಾರಣೆಗೆ ಹಾಜರಾಗಬೇಕೆಂದು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ರಾಮಚಂದ್ರ ಉದ್ದಾರ್ ಅವರು ಸಂಜೆ 5 ಗಂಟೆವರೆಗೆ ಪೊಲೀಸರ ವಶದಲ್ಲಿರುವಂತೆ ಆದೇಶ ನೀಡಿದರು.
ಇಂದು ಬೆಳಗ್ಗೆ ತಮ್ಮ ವಕೀಲರೊಂದಿಗೆ ನ್ಯಾಯಾಲಯಕ್ಕೆ ಆಗಮಿಸಿದ ರೇಣುಕಾಚಾರ್ಯ ಅವರನ್ನು ನ್ಯಾಯಾಧೀಶರು ಪೊಲೀಸರ ವಶಕ್ಕೆ ನೀಡಿ ಸಂಜೆ 5 ಗಂಟೆವರೆಗೂ ಇಲ್ಲಿಯೇ ಇರುವಂತೆ ಸೂಚಿಸಿದರು.