ವಿಶ್ವಕಪ್ ಹಬ್ಬ ಶುರುವಾಗಿದೆ. ನಾಳೆ ಭಾರತ ತನ್ನ ಮೊದಲ ಪಂದ್ಯವನ್ನು ಆಡುತ್ತಿದೆ. ದಕ್ಷಿಣ ಆಫ್ರಿಕಾ ಭಾರತದ ವಿರುದ್ಧ ಸೆಣೆಸುತ್ತಿದೆ.
ಈಗಾಗಲೇ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶದ ವಿರುದ್ಧ ಸೋತಿರುವ ದಕ್ಷಿಣ ಆಫ್ರಿಕಾಗೆ ಗೆಲ್ಲಲೇ ಬೇಕಾದ ಪಂದ್ಯ. ಭಾರತಕ್ಕೆ ಅಂಥಾ ಒತ್ತಡ ಇಲ್ಲ. ಆದರೆ ಗೆಲುವಿನ ಶುಭಾರಂಭ ಮಾಡಬೇಕಿದೆ.
ವಿರಾಟ್ ಕೊಹ್ಲಿ ನೇತತ್ವದ ತಂಡದಲ್ಲಿ ನಾಯಕ ವಿರಾಟ್ ಸೇರಿದಂತೆ, ರೋಹಿತ್ ಶರ್ಮಾ, ಶಿಖರ್ ಧವನ್, ಕನ್ನಡಿಗ ರಾಹುಲ್ , ಮಹೇಂದ್ರ ಸಿಂಗ್ ಧೋನಿ, ಹಾರ್ದಿಕ್ ಪಾಂಡ್ಯ, ಬುಮ್ರಾ, ಕುಲ್ದೀಪ್ ಯಾದವ್, ಶಮಿ, ಭುವನೇಶ್ವರ್ ಕುಮಾರ್ ಹೀಗೆ ಘಟಾನುಘಟಿ ಸ್ಟಾರ್ ಆಟಗಾರರಿದ್ದಾರೆ.
ಸೌತ್ ಆಫ್ರಿಕಾದಲ್ಲಿ ನಾಯಕ ಡುಪ್ಲೆಸಿಸ್, ಹಶಿಮ್ ಆಮ್ಲಾ,ಡಿಕಾಕ್ ಡುಮಿನಿ , ತಾಹಿರ್ , ರಬಡಾ ಅಂತಾ ಘಟಾಟನುಘಟಿಗಳಿದ್ದಾರೆ. ಹೀಗಾಗಿ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಬಹುದಾಗಿದೆ.
ಈ ನಡುವೆ ಭಾರತಕ್ಕೆ ಗುಡ್ ನ್ಯೂಸ್ ಸಿಕ್ಕಿದ್ದು, ದಕ್ಷಿಣ ಆಫ್ರಿಕಾಕ್ಕೆ ಅದು ಬ್ಯಾಡ್ ನ್ಯೂಸ್.
ಹೌದು, ಹರಿಣಗಳ ಪಡೆಯ ವೇಗಿ ಡೇಲ್ ಸ್ಟೇನ್ ಗಾಯಗೊಂಡಿದ್ದು ಗೊತ್ತೇ ಇದೆ. ಟೂರ್ನಿಯಲ್ಲಿ ಕಳೆದ ಎರಡು ಪಂದ್ಯಗಳಿಗೂ ಅಲಭ್ಯರಾಗಿದ್ದ ಅವರು ಈಗ ಸಂಪೂರ್ಣವಾಗಿ ಟೂರ್ನಿಯಿಂದ ಹೊರ ನಡೆದಿದ್ದಾರೆ. ಹೀಗಾಗಿ ಭಾರತದ ವಿರುದ್ಧ ಅವರು ಆಡುತ್ತಿಲ್ಲ.
ಸ್ಟೇನ್ ಭುಜದ ಸಮಸ್ಯೆಯಿಂದ ಬಳಲುತ್ತಿದ್ದಾರೆ.2016ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕವೂ ಬಿಡದೇ ಗಾಯದ ಸಮಸ್ಯೆ ಅವರನ್ನು ಕಾಡುತ್ತಿದೆ.