ಆರೋಗ್ಯದ ದೃಷ್ಟಿಯಿಂದ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಹೆಚ್.ವಿಶ್ವನಾಥ್ ಅವರು ನಿರ್ಧಾರ ಕೈಗೊಂಡಿರಬಹುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎರಡು ಬಾರಿ ಮುಂದಾಗಿದ್ದರು. ಆರೋಗ್ಯ ಸಮಸ್ಯೆಯಿದೆ. ಪಕ್ಷ ಸಂಘಟನೆಗೂ ಕಷ್ಟವಾಗಲಿದೆ. ಹೀಗಾಗಿ ಇಂತಹ ತೀರ್ಮಾನ ಮಾಡಿರಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜಕಾರಣದಲ್ಲಿ ವಿಶ್ವನಾಥ್ ಅವರು ಸಾಕಷ್ಟು ಅನುಭವ ಇರುವಂತಹವರು ಅವರಿಗೆ ಸ್ವಲ್ಪ ಆರೋಗ್ಯದ ಸಮಸ್ಯೆ ಇರುವುದರಿಂದ ಅನೇಕ ಬಾರಿ ಚರ್ಚೆ ಮಾಡಿದ್ದಾರೆ ಎಂದರು.ನಾವು ಕೂಡ ಅವರನ್ನು ಪಕ್ಷದ ಸಂಘಟನೆಯ ದೃಷ್ಟಿಯಿಂದ ರಾಜೀನಾಮೆ ಕೊಡದಂತೆ ಮನವೊಲಿಸುತ್ತೇವೆ.
ಒಬ್ಬ ಹಿಂದುಳಿದ ನಾಯಕರಾಗಿದ್ದು, ಅಂತಹ ನಾಯಕರು ರಾಜೀನಾಮೆ ಕೊಡದಂತೆ ನಾನೇ ಒತ್ತಾಯ ಮಾಡುತ್ತೇನೆ ಎಂದರು. ಸಿಎಂ ಗ್ರಾಮ ವಾಸ್ತವ್ಯದಿಂದ ಸ್ಥಳೀಯ ಸಮಸ್ಯೆಗಳು ಈಡೇರಲಿದೆ.
ಈ ಹಿಂದೆ ಅವರಿಗೆ ಗ್ರಾಮ ವಾಸ್ತವ್ಯ ಸಾಕಷ್ಟು ಹೆಸರು ತಂದು ಕೊಟ್ಟಿತ್ತು. ನಾನು ಸಹ ಕುಮಾರಸ್ವಾಮಿ ಅವರೊಂದಿಗೆ ಏಳು ಗ್ರಾಮಗಳಲ್ಲಿ ವಾಸ್ತವ್ಯ ಹೂಡಿದ್ದೆ ಎಂದು ಸ್ಮರಿಸಿದರು. ಮಡಿಕೇರಿಯಿಂದ ಗ್ರಾಮ ವಾಸ್ತವ್ಯ ಆರಂಭಿಸುವ ಮಾಹಿತಿ ಇದೆ. ಅಲ್ಲಿಂದಲ್ಲೇ ಶುರುವಾದರೆ ಅಲ್ಲಿನ ಜನರಿಗೆ ಧೈರ್ಯ ಬರುತ್ತದೆ.
ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು. ಮಂಡ್ಯ ಜಿಲ್ಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸಹ ಗ್ರಾಮ ವಾಸ್ತವ್ಯಕ್ಕೆ ಸಾಥ್ ನೀಡಲಿದ್ದಾರೆ ಎಂದರು.
ಆಪರೇಷನ್ ಮಾಡಲ್ಲ:ನಾವು ಆಪರೇಷನ್ ಮಾಡಲ್ಲ, ಅದರ ಅವಶ್ಯಕತೆಯೂ ನಮಗಿಲ್ಲ, 38-80ಕ್ಕೂ ಹೆಚ್ಚು ಶಾಸಕರಿರುವ ನಮ್ಮ ಮೈತ್ರಿಯಲ್ಲಿ ಭಿನ್ನಾಭಿಪ್ರಾಯ ಇರುವಾಗ 104 ಶಾಸಕರಿರುವ ಅವರಲ್ಲಿ ಭಿನ್ನಾಭಿಪ್ರಾಯ ಇರುವುದಿಲ್ಲವೇ ಎಂದು ಪ್ರಶ್ನಿಸಿದರು.
ನಮಗೂ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ. ಆದರೆ ನಾವು ಆಪರೇಷನ್ ಮಾಡುವ ಹಂತಕ್ಕೆ ಹೋಗುವುದಿಲ್ಲ. ಯಾವ ಸಮಯದಲ್ಲಿ ಕ್ಲೈಮ್ಯಾಕ್ಸ್ ಆಗಬೇಕೋ ಆಗುತ್ತದೆ ಎಂದು ಪರೋಕ್ಷವಾಗಿ ವಾರ್‍ನಿಂಗ್ ನೀಡಿದರು.