ದಶಕದ ನಂತರ ಕನ್ನಡಿಗ ಕೆ.ಎಲ್.ರಾಹುಲ್ ವಿಶ್ವಕಪ್ ಅಂಗಳಕ್ಕೆ ಇಳಿಯುವ ಮೂಲಕ ಗಮನ ಸೆಳೆದಿದ್ದಾರೆ.
2007ರ ವಿಶ್ವಕಪ್‍ನಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದ ರಾಹುಲ್ ದ್ರಾವಿಡ್ ಗಮನ ಸೆಳೆದಿದ್ದರೂ, ಲೀಗ್ ನಲ್ಲೇ ಹೊರ ಬಿದ್ದು ನಿರಾಸೆ ಮೂಡಿಸಿದ್ದರು.
2011ರಲ್ಲಿ ಭಾರತದಲ್ಲೇ ನಡೆದ ವಿಶ್ವಕಪ್‍ನಲ್ಲಿ ಮಹೇಂದ್ರಸಿಂಗ್ ಧೋನಿ ಸಾರಥ್ಯದ ಟೀಂ ಇಂಡಿಯಾ ಚಾಂಪಿಯನ್ಸ್ ಆದರೂ ಕೂಡ ಆ ವರ್ಷ ಕನ್ನಡಿಗರೇ ಆಯ್ಕೆಯಾಗಿರಲಿಲ್ಲ.
2015ರಲ್ಲಿ ಆಯ್ಕೆ ಮಂಡಳಿಯಲ್ಲಿ ಕನ್ನಡಿಗ ರೋಜರ್‍ಬಿನ್ನಿ ಇದ್ದರಿಂದ ಸಹಜವಾಗಿಯೇ ಕನ್ನಡಿಗರಿಗೆ ಆದ್ಯತೆ ಸಿಗುತ್ತದೆ ಎಂಬ ಮಾತು ನಿಜವಾಯಿತಾದರೂ ಆಡುವ 15ರ ಬಳಗದಲ್ಲಿ ಸ್ಥಾನ ಪಡೆದಿದ್ದ ರಾಬಿನ್ ಉತ್ತಪ್ಪ , ಸ್ಟುವರ್ಟ್ ಬಿನ್ನಿ, ವಿನಯ್‍ಕುಮಾರ್ ಆಡುವ 11ರಲ್ಲಿ ಆಯ್ಕೆಯಾಗದಿರುವುದರಿಂದ ಕನ್ನಡಿಗರಲ್ಲಿ ನಿರಾಸೆ ಮೂಡಿತ್ತು.
ಈ ಬಾರಿಯ ವಿಶ್ವಕಪ್‍ನಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಆಯ್ಕೆಯಾಗಿದ್ದು, ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಶತಕ ಸಿಡಿಸುವ ಮೂಲಕ ಭಾರತ ತಂಡದಲ್ಲಿ ನಂಬರ್ 4ರ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದ ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಪಂದ್ಯದಲ್ಲೇ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವ ಮೂಲಕ ದಶಕಗಳಿಂದ ವಿಶ್ವಕಪ್‍ನಲ್ಲಿ ಕನ್ನಡಿಗರಿಲ್ಲ ಎಂಬ ಕೊರತೆಯನ್ನು ನೀಗಿಸಿದ್ದಾರೆ.