ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಮನೆಗೆ ಬೆಂಕಿ ಬಿದ್ದು ಕೋಲಾರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಟಿ.ಎಸ್. ನಾಗಪ್ರಕಾಶ್ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಬೆಳಗಿನ ಜಾವ ನಡೆದಿದೆ.
ಬಂಗಾರಪೇಟೆ ಪಟ್ಟಣದ ಬಜಾರ್ ರಸ್ತೆಯಲ್ಲಿರುವ ನಾಗಪ್ರಕಾಶ್ (58) ಅವರ ಮನೆಯಲ್ಲಿ ಇಂದು ಮುಂಜಾನೆ 5 ಗಂಟೆ ಸಂದರ್ಭದಲ್ಲಿ ಹೊಗೆಯಾಡುತ್ತಿರುವುದನ್ನು ಕಂಡ ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯರು ಮನೆ ಬಾಗಿಲನ್ನು ಒಡೆದು ಒಳ ಪ್ರವೇಶಿಸಿ ನೋಡಿದಾಗ ಎಲ್ಲರೂ ಅಸ್ವಸ್ಥರಾಗಿದ್ದರು. ತಕ್ಷಣ ನಾಗಭೂಷಣ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಆದರೆ ಅವರು ಆಗಾಗಲೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಖಚಿತವಾಗಿದೆ.
ಇನ್ನು ಅವರ ಪತ್ನಿ ಶೋಭಾ ಅವರ ಮಗ ಸ್ವರೂಪ್ ಹಾಗೂ ಅವರ ತಂದೆ ಸತ್ಯನಾರಾಯಣ ಅವರನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿ ಕೆಲವೆಡೆ ಬೆಂಕಿಯನ್ನು ನಂದಿಸಿದ್ದಾರೆ. ರಾತ್ರಿ ಮೊಬೈಲ್ ಚಾರ್ಜಿಂಗ್‍ಗೆ ಹಾಕಿ ಮಲಗಿದ್ದರು. ಈ ಸಂದರ್ಭದಲ್ಲಿ ಅದು ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.ನಾಗಪ್ರಕಾಶ್ ಅವರ ದೇಹದ ಕೆಲ ಭಾಗಗಳಿಗೆ ಬೆಂಕಿ ಹೊತ್ತಿಕೊಂಡಿದ್ದು ,ಮಲಗಿದ್ದಾಗ ಉಸಿರಾಟಕ್ಕೆ ತೊಂದರೆಯಾಗಿ ಮೇಲೇಳಲು ಸಾಧ್ಯವಾಗದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಹಿರಿಯಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು , ತನಿಖೆ ಆರಂಭಗೊಂಡಿದ್ದು , ಬಂಗಾರಪೇಟೆ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.