ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ರಾಜ್ಯ ಕಾಂಗ್ರೆಸ್ ಸಮಿತಿಗೆ ಮೇಜರ್ ಸರ್ಜರಿ ಮಾಡಲು ವರಿಷ್ಠರು ಮುಂದಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರನ್ನು ಹೊರತುಪಡಿಸಿ ಪದಾಧಿಕಾರಿಗಳ ಸಮಿತಿಯನ್ನು ವಿಸರ್ಜಿಸಲಾಗಿದ್ದು, ಈ ಮೂಲಕ ಪಕ್ಷ ಸಂಘಟನೆಗೆ ಕ್ರಮಕೈಗೊಳ್ಳಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿಯಾಗಿರುವ ಕೆ.ಸಿ. ವೇಣುಗೋಪಾಲ್ ಪದಾಧಿಕಾರಿಗಳ ಸಮಿತಿಯನ್ನು ವಿಸರ್ಜಿಸಿದ್ದಾರೆ. ಇದರ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿದ್ದಾರೆ ಎಂದು ಹೇಳಲಾಗಿದೆ.
ಎರಡು ದಿನ ದೆಹಲಿಯಲ್ಲಿದ್ದ ಸಿದ್ದರಾಮಯ್ಯ ಪಕ್ಷದಲ್ಲಿ ಮತ್ತಷ್ಟು ಹಿಡಿತ ಸಾಧಿಸಲು ಮುಂದಾಗಿದ್ದಾರೆ. ಈ ಹಿಂದೆ ಕೆಪಿಸಿಸಿಗೆ ನೇಮಕವಾಗಿದ್ದ 19 ಉಪಾಧ್ಯಕ್ಷರು, 90 ಪ್ರಧಾನ ಕಾರ್ಯದರ್ಶಿಗಳು ಹಾಗೂ 181 ಕಾರ್ಯದರ್ಶಿಗಳನ್ನು ಕೈಬಿಡಲಾಗಿದ್ದು, ಹೊಸ ಸಮಿತಿಯಲ್ಲಿ ಸಿದ್ದರಾಮಯ್ಯ ಬೆಂಬಲಿಗರಿಗೆ ಸ್ಥಾನ ಸಿಗುವ ಸಾಧ್ಯತೆಯಿದೆ.
ದೆಹಲಿಯಲ್ಲಿ ಕಾಂಗ್ರೆಸ್ ನಾಯಕರಾದ ಎ.ಕೆ. ಆಂಟನಿ ಮತ್ತು ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿರುವ ಸಿದ್ದರಾಮಯ್ಯ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರೊಂದಿಗೆ ರಾಜ್ಯದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಿದ್ಧರಾಮಯ್ಯ ದೆಹಲಿಯಲ್ಲಿರುವಾಗಲೇ ರೋಷನ್ ಬೇಗ್ ಸಸ್ಪೆಂಡ್ ಮಾಡಿ, ಕಾಂಗ್ರೆಸ್ ಸಮಿತಿ ವಿಸರ್ಜಿಸಲಾಗಿದ್ದು ಸಿದ್ದರಾಮಯ್ಯ ಈ ವಿಚಾರದಲ್ಲಿ ಮೇಲುಗೈ ಸಾಧಿಸಿದ್ದಾರೆ ಎಂದು ಹೇಳಲಾಗಿದೆ.