ಎಷ್ಟೇ ಸೂಪರ್ ಹಿಟ್ ಸಿನಿಮಾಗಳು ಬರಲಿ. ಬಂದ ಸಿನಿಮಾಗಳೆಲ್ಲಾ ಶಾಶ್ವತವಾಗಿ ಮನದಲ್ಲಿ ಉಳಿದುಕೊಳ್ಳಲ್ಲ. ಕೆಲವು ಚಿರವಾಗಿ ಭಾವನೆಗಳ ಜೊತೆ ಬೆರೆತು ಹೋಗುತ್ತವೆ ಅಂತಾ ಸಿನಿಮಾಗಳಲ್ಲಿ ಸೂರ್ಯವಂಶ ಸಿನಿಮಾ ಕೂಡ ಒಂದು. ಈ ಸಿನಿಮಾಕ್ಕೆ ಈಗ 20 ವರ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ದೇಶಕ ಎಸ್.ನಾರಾಯಣ್ ಒಂದು ವಿಷಯವನ್ನು ಹಂಚಿಕೊಂಡಿದ್ದಾರೆ. ಆ ಸಿನಿಮಾದಲ್ಲಿ ನಟಿಸಲು ಮೊದಲು ರವಿಚಂದ್ರನ್ ಅವರು ಮುಂದಾಗಿದ್ದರಂತೆ..!
ಸೂರ್ಯವಂಶ’ ಚಿತ್ರವನ್ನು ರವಿಚಂದ್ರನ್ ಅವರು ಮಾಡಬೇಕಿತ್ತು ತಮಿಳು ಸಿನಿಮಾದ ರಿಮೇಕ್ ಇದಾಗಿದ್ದು, ರವಿಚಂದ್ರನ್ ತಮ್ಮ ಈಶ್ವರಿ ಪಿಚ್ಚರ್ಸ್ ನಲ್ಲಿ ನಿರ್ಮಾಣ ಮಾಡುವ ಪ್ಲಾನ್ ಮಾಡಿದ್ದರು. ಎಸ್ ನಾರಾಯಣ್ ಅವರೇ ಚಿತ್ರದ ನಿರ್ದೇಶನ ಮಾಡಬೇಕಿತ್ತು. ಆದರೆ, ರಿಮೇಕ್ ರೈಟ್ಸ್ ತೆಗೆದುಕೊಳ್ಳುವುದು ತಡವಾಗಿದ್ದರಿಂದ ಸಿನಿಮಾ ರವಿಚಂದ್ರನ್ ಅವರ ಕೈ ತಪ್ಪಿತಂತೆ..!
ರವಿಚಂದ್ರನ್ ರಿಮೇಕ್ ಹಕ್ಕು ಪಡೆಯುವ ಮೊದಲೇ ಈಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಆಗ ರಿಮೇಕ್ ರೈಟ್ಸ್ ಪಡೆದುಕೊಂಡರು. ಈ ಸಿನಿಮಾ ಅವರ ನಿರ್ಮಾಣದ ಮೊದಲ ಚಿತ್ರವಾಯಿತು. ರವಿಚಂದ್ರನ್ ಜೊತೆಗೆ ಆ ಸಿನಿಮಾವನ್ನು ನಿರ್ದೇಶನ ಮಾಡಲಿದ್ದ ಎಸ್ ನಾರಾಯಣ್ ಅವರಿಗೇ ಡೈರೆಕ್ಷನ್ ಮಾಡುವಂತೆ ಹೇಳಿದ್ರಂತೆ.
ಸೂರ್ಯವಂಶ’ ತಮಿಳು ಸಿನಿಮಾ. ಅದನ್ನು ತೆಲುಗು, ಹಿಂದಿ ಹಾಗೂ ಕನ್ನಡದಲ್ಲಿ ರಿಮೇಕ್ ಮಾಡಲಾಯಿತು. ತಮಿಳು ಹಾಡುಗಳನ್ನೇ ಹಿಂದಿ ಮತ್ತು ತೆಲುಗುನಲ್ಲಿಯೂ ಬಳಸಿಕೊಳ್ಳಲಾಯಿತು. ಆದರೆ, ಕನ್ನಡದಲ್ಲಿ ಮಾತ್ರ ಹೊಸ ಹಾಡುಗಳನ್ನು ಮಾಡಲಾಯಿತು. ‘ಜನುಮದ ಜೋಡಿ’ ಬಳಿಕ ವಿ ಮನೋಹರ್ ಕೆರಿಯರ್ ನಲ್ಲಿ ಈ ಚಿತ್ರ ದೊಡ್ಡ ಹಿಟ್ ಆಯ್ತು.
ಇನ್ನು ವಿಶೇಷ ಅಂದರೆ ‘ಸೂರ್ಯವಂಶ’ ಬಿಡುಗಡೆಯ ವೇಳೆಗೆ ಎಸ್ ನಾರಾಯಣ್ ರಾಜ್ ಕುಮಾರ್ ರಿಗೆ ‘ಶಬ್ಧವೇದಿ’ ಸಿನಿಮಾ ಮಾಡುತ್ತಿದ್ದರು. ಆಗ ಪತ್ರಿಕೆಯೊಂದರಲ್ಲಿ ಬಂದ ‘ಸೂರ್ಯವಂಶ’ ಫೋಟೋ ನೋಡಿದ ರಾಜ್ಕುಮಾರ್ ಅವರು ವಿಷ್ಣುವರ್ಧನ್ ಮೀಸೆಯನ್ನು ಬಹಳ ಇಷ್ಟ ಪಟ್ಟರಂತೆ. ಫೋನ್ ಕೂಡ ಮಾಡಿ ಮಾತಾಡಿದ್ದರಂತೆ.. ಈ ಎಲ್ಲಾ ವಿಷಯವನ್ನು ನಾರಾಯಣ್ ಹಂಚಿಕೊಂಡಿದ್ದಾರೆ.